ಮನೋರಂಜನೆ

ಬಾಲ ಕಾರ್ಮಿಕರ ಕುರಿತು ಮಕ್ಕಳ ಸಿನಿಮಾ

Pinterest LinkedIn Tumblr

Keerthi-Gobba_(104)ಕನ್ನಡದಲ್ಲಿ ಮಕ್ಕಳ ಚಿತ್ರಗಳಿಗೇನೂ ಕೊರತೆ ಇಲ್ಲ. ಸದ್ದಿಲ್ಲದೆಯೇ ಶುರುವಾಗಿ, ಗೊತ್ತಾಗದೆ ಬಿಡುಗಡೆಯಾಗಿರುವ ಅನೇಕ ಮಕ್ಕಳ ಚಿತ್ರಗಳು ಇಲ್ಲಿವೆ. ಈಗ ಇಲ್ಲೊಂದು ಮಕ್ಕಳ ಸಿನಿಮಾ ಫೆಬ್ರವರಿ 5ರಂದು ಬಿಡುಗಡೆಗೆ ರೆಡಿಯಾಗಿದೆ. ಹೆಸರು “ಕೀರ್ತಿಗೊಬ್ಬ’. ಮಹೇಶ್‌ ಚಿನ್ಮಯಿ ನಿರ್ದೇಶಕರು. ಸಿ.ಟಿ.ತಿಪ್ಪೇಸ್ವಾಮಿ ಹಾಗು ಮಹೇಶ್ವರಪ್ಪ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಈಗಾಗಲೇ 60 ದಿನಗಳ ಕಾಲ ಚಿತ್ರೀಕರಣಗೊಂಡು ಈಗ ಪ್ರೇಕ್ಷಕರ ಮುಂದೆ ಚಿತ್ರವನ್ನು ತರಲು ಸಜ್ಜಾಗಿದೆ ಚಿತ್ರತಂಡ.

ನಿರ್ದೇಶಕ ಮಹೇಶ್‌ ಚಿನ್ಮಯಿ ಅವರಿಗೆ ಇದು ಎರಡನೇ ಚಿತ್ರ. ಅವರಿಲ್ಲಿ ಬಾಲಕಾರ್ಮಿಕ ಪದ್ಧತಿ ಹಾಗು ಮಾರಕ ಎನಿಸಿರುವ ಪ್ಲಾಸ್ಟಿಕ್‌ ಬಳಕೆ ಕುರಿತು ಇಲ್ಲಿ ಹೇಳಹೊರಟಿದ್ದಾರಂತೆ. ಮನೆಗೊಬ್ಬ ಕೀರ್ತಿ ತರುವಂತಹ ಮಗನಿದ್ದರೆ, ಸಮಾಜ ಮತ್ತು ಆ ಸುತ್ತಮುತ್ತಲಿನ ವಾತಾವರಣ ಎಷ್ಟು ಚೆನ್ನಾಗಿರುತ್ತೆ ಎಂಬುದು “ಕೀರ್ತಿಗೊಬ್ಬ’ ಚಿತ್ರದ ಒನ್‌ಲೈನ್‌ ಅಂತೆ. ಹೊಸದುರ್ಗ ಸೇರಿದಂತೆ ಹಲವು ಊರುಗಳಲ್ಲಿ ಚಿತ್ರವನ್ನು ಚಿತ್ರೀಕರಿಸಲಾಗಿದೆ. ಇನ್ನು, ಒಂದೂವರೆ ವರ್ಷದ ಹಿಂದೆ ಚಿತ್ರವನ್ನು ಶುರುಮಾಡಿದ್ದ ನಿರ್ದೇಶಕರು, ಈಗ ಚಿತ್ರ ಬಿಡುಗಡೆಗೆ ಅಣಿಯಾಗಿದ್ದಾರೆ. ಮಕ್ಕಳ ಚಿತ್ರವಾದ್ದರಿಂದ ಸಣ್ಣ ಮಟ್ಟದಲ್ಲೇ ರಿಲೀಸ್‌ ಮಾಡುವುದಾಗಿ ಹೇಳುತ್ತಾರೆ ಮಹೇಶ್‌ ಚಿನ್ಮಯಿ.

ಇನ್ನು, ನಿರ್ಮಾಪಕ ಸಿ.ಟಿ.ತಿಪ್ಪೇಸ್ವಾಮಿ ಅವರಿಗೆ ಇದು ಮೊದಲ ನಿರ್ಮಾಣದ ಚಿತ್ರ. ಅವರೇ ಚಿತ್ರಕ್ಕೆ ಕಥೆ ಬರೆದಿದ್ದಾರಂತೆ. ರಾಜ್ಯದಲ್ಲಿ ಬಾಲಕಾರ್ಮಿಕ ಪದ್ಧತಿ ಈಗಲೂ ಜೀವಂತವಾಗಿದೆ. ಅದರಲ್ಲು ಸಾಕಷ್ಟು ಪ್ಲಾಸ್ಟಿಕ್‌ ಬಳಕೆಯಿಂದಾಗಿ ವಾತಾವರಣ ಕಲುಷಿತಗೊಂಡಿರುವುದುಂಟಂತೆ. ಚಿತ್ರದ ಬಾಲನಟ ಅದನ್ನು ಹೇಗೆ ಹೋಗಲಾಡಿಸುತ್ತಾನೆ ಅನ್ನೋದು ಚಿತ್ರದ ಹೈಲೈಟ್‌ ಎನ್ನುವ ನಿರ್ಮಾಪಕರು, ಚಿತ್ರ ಬಿಡುಗಡೆ ಮಾಡುವುದಕ್ಕೆ ಚಿತ್ರಮಂದಿರ ಸಿಗುತ್ತಿಲ್ಲ. ಸಣ್ಣ ಚಿತ್ರಮಂದಿರವಾದರೂ ಸರಿ, ಬಿಡುಗಡೆ ಮಾಡುವ ಮೂಲಕ ಒಂದೊಳ್ಳೆಯ ಸಂದೇಶ ಇರುವ ಚಿತ್ರವನ್ನು ಜನರಿಗೆ ತಲುಪಿಸಬೇಕು ಎಂಬ ಉದ್ದೇಶವಿದೆ ಎನ್ನುತ್ತಾರೆ ಅವರು.

ಬಾಲನಟ ತೇಜಸ್‌ಕುಮಾರ್‌ಗೆ ಇದು ಐದನೇ ಚಿತ್ರವಂತೆ. ಒಂದೆರೆಡು ಮಕ್ಕಳ ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ತೇಜಸ್‌ಕುಮಾರ್‌ಗೆ “ಕೀರ್ತಿಗೊಬ್ಬ’ ಚಿತ್ರದಲ್ಲಿ ಒಳ್ಳೆಯ ಪಾತ್ರ ಸಿಕ್ಕಿದೆಯಂತೆ. ಚಿತ್ರೀಕರಣದಲ್ಲಿ ಎಂಜಾಯ್‌ ಮಾಡಿಕೊಂಡೇ ಕೆಲಸ ಮಾಡಿದ್ದೇನೆ. ಇದು ಎಲ್ಲಾ ವರ್ಗಕ್ಕೂ ಇಷ್ಟವಾಗುವ ಚಿತ್ರ ಅಂತ ಹೇಳಿಕೊಂಡ ತೇಜಸ್‌.

ಈ ಹಿಂದೆ “ಗುಂಡ್ರಗೋವಿ’ ಚಿತ್ರಕ್ಕೆ ಸಂಗೀತ ನೀಡಿದ್ದ ಮಹಾರಾಜ್‌, “ಕೀರ್ತಿಗೊಬ್ಬ’ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರಂತೆ. ಮಕ್ಕಳ ಸಿನಿಮಾಗೆ ಸಂಗೀತ ನೀಡಿರುವುದು ಅವರಿಗೆ ಖುಷಿ ಕೊಟ್ಟಿದೆಯಂತೆ. ಮಕ್ಕಳಿಗೂ ಮತ್ತು ದೊಡ್ಡವರಿಗೂ ಇಷ್ಟವಾಗುವ ಹಾಡುಗಳು ಇಲ್ಲಿವೆ ಅನ್ನುತ್ತಾರೆ ಮಹಾರಾಜ್‌. ಶ್ಯಾಮ್‌ ಹಾಗು ಮಹೇಶ್ವರಪ್ಪ ಅವರಿಗೂ ಈ ಸಿನಿಮಾ ಬಗ್ಗೆ ವಿಶ್ವಾಸವಿದೆಯಂತೆ.
-ಉದಯವಾಣಿ

Write A Comment