ಕರ್ನಾಟಕ

ಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಹೈಕಮಾಂಡ್ ಮೇಲೆ ಕಾಂಗ್ರೆಸಿಗರು ತೀವ್ರ ಒತ್ತಡ

Pinterest LinkedIn Tumblr

cmಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಹೈಕಮಾಂಡ್ ಮಟ್ಟದಲ್ಲಿ ಮೂಲಕಾಂಗ್ರೆಸಿಗರು ತೀವ್ರ ಒತ್ತಡ ಹೇರುತ್ತಿದ್ದು, ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ. ರಾಜ್ಯ ಸರ್ಕಾರಕ್ಕೆ ಎರಡುವರ್ಷ 8 ತಿಂಗಳು ತುಂಬಿದೆ. ಜತೆಗೆ ಜಿಪಂ- ತಾಪಂ ಚುನಾವಣೆಗಳು ಮುಗಿದಿವೆ. ಹೀಗಾಗಿ ರಾಜ್ಯ ನಾಯಕತ್ವದಲ್ಲಿ ಪ್ರಮುಖ ಬದಲಾವಣೆಯಾಗಬೇಕು. ತಾಪಂ-ಜಿಪಂ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಜನ ನಿರೀಕ್ಷಿತ ಮಟ್ಟದಲ್ಲಿ ಮತ ನೀಡಿಲ್ಲ. ಸರ್ಕಾರವಿದ್ದಾಗ್ಗಿಯೂ ಕಾಂಗ್ರೆಸ್ 15 ಜಿಪಂ ಗೆಲ್ಲಲಿಲ್ಲ. ತಾಪಂಗಳ ಸಂಖ್ಯೆಯೂ 70 ದಾಟಿಲ್ಲ. ಇದು ಕರ್ನಾಟಕದಲ್ಲಿ ಕಾಂಗ್ರೆಸ್‌ನ ಮತಬ್ಯಾಂಕನ್ನು ಪುನರ್ ಪರಿಶೀಲನೆಗೊಳಪಡಿಸುವ ಅನಿವಾರ್ಯತೆಯನ್ನು ಬಿಂಬಿಸಿದೆ.

ಹೀಗಾಗಿ ಕೂಡಲೇ ನಾಯಕತ್ವ ಬದಲಾವಣೆ ಮಾಡಲೇಬೇಕೆಂದು ಮೂಲ ಕಾಂಗ್ರೆಸಿಗರು ದೆಹಲಿಯ ಮಟ್ಟದಲ್ಲಿ ಲಾಬಿ ಆರಂಭಿಸಿದ್ದಾರೆ. ಮೂಲ ಕಾಂಗ್ರೆಸಿಗರ ಒತ್ತಡಕ್ಕೆ ಮಣಿದು ಹೈಕಮಾಂಡ್ ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕರೆಸಿಕೊಂಡು ವಿವರಣೆ ಪಡೆದಿದೆ.

ಮೇಲ್ನೋಟಕ್ಕೆ ಎಲ್ಲವೂ ಸರಿಯಿಂದ್ದಂತೆ ಕಂಡರೂ ಕಾಂಗ್ರೆಸ್‌ನ ಒಳ ವಲಯದಲ್ಲಿ ಅಸಮಾಧಾನದ ಬೇಗುದಿ ಕುದಿಯುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಕಾಂಗ್ರೆಸಿಗರಲ್ಲಿ ಮೊದಲಿದ್ದ ಪ್ರೀತಿ ಕ್ಷೀಣಿಸಿದ್ದು, ಈಗ ನಾಯಕತ್ವ ಬದಲಾವಣೆಯಾಗಬೇಕೆಂಬ ದನಿ ಎದ್ದಿದೆ. ಮುಖ್ಯಮಂತ್ರಿಯವರು ಸ್ವಜನಪಕ್ಷಪಾತ, ಸ್ವಾರ್ಥರಾಜಕಾರಣಕ್ಕೆ ಅಂಟಿಕೊಂಡಿದ್ದು, ರಾಜ್ಯದ ಹಿತಾಸಕ್ತಿಯನ್ನು ಕಡೆಗಣಿಸುತ್ತಿದ್ದಾರೆ. ತಮ್ಮದೇ ಶೈಲಿಯಲ್ಲಿ ಆಡಳಿತ ನಡೆಸುವ ಮೂಲಕ ಪಕ್ಷದ ನಿಷ್ಠಾವಂತರನ್ನು ಕಡೆಗಣಿಸಿದ್ದಾರೆ ಎಂಬ ಕೂಗುಗಳು ಹೈಕಮಾಂಡ್ ಮಟ್ಟದಲ್ಲಿ ವ್ಯಾಪಕವಾಗಿ ಹೊಗೆಯಾಡುತ್ತಿದೆ. ಈವರೆಗೂ ರಾಜ್ಯದಿಂದ ಎಐಸಿಸಿಯನ್ನು ಪ್ರತಿನಿಧಿಸುವ ಕೆಲ ನಾಯಕರು ಸಿದ್ದರಾಮಯ್ಯ ಅವರ ಬೆಂಬಲಕ್ಕೆ ನಿಂತಿದ್ದರು. ಆದರೆ, ಇತ್ತೀಚಿನ ಬೆಳವಣಿಗೆಗಳಲ್ಲಿ ಆಪ್ತ ಬಣದ ನಾಯಕರೇ ಶತ್ರುಗಳಾಗಿದ್ದು, ಸಿದ್ದರಾಮಯ್ಯ ಅವರ ಪರಿಸ್ಥಿತಿ ಒಂಟಿ ನಾಯಕನಂತಾಗಿದೆ.

ಸಧ್ಯಕ್ಕೆ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳ ಪೈಕಿ ಆಸ್ಕರ್ ಫರ್ನಾಂಡೀಸ್ ಹೊರತುಪಡಿಸಿ ಉಳಿದ ಯಾವ ನಾಯಕರೂ ಸಿದ್ದು ಬೆಂಬಲಕ್ಕಿಲ್ಲ. ಮುಖ್ಯಮಂತ್ರಿ ಸ್ಥಾನವನ್ನು ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡ ಮಲ್ಲಿಕಾರ್ಜುನಖರ್ಗೆ ಅವರು ಅವಕಾಶ ಸಿಕ್ಕಾಗಲೆಲ್ಲಾ ಸಿದ್ದರಾಮಯ್ಯ ಅವರ ಕಾಲೆಳೆಯುವ ಪ್ರಯತ್ನ ಮಾಡುತ್ತಲೇ ಇದ್ದಾರೆ. ದೆಹಲಿ ಮಟ್ಟದಲ್ಲೂ ಪ್ರಭಾವ ಕಳೆದುಕೊಂಡಿರುವ ಸಿದ್ದರಾಮಯ್ಯ ಅವರಿಗೆ ರಾಜ್ಯದಲ್ಲೂ ಅಂತಹ ಬೆಂಬಲ ಇಲ್ಲವಾಗಿದೆ. ಆರಂಭದಲ್ಲಿ ಸಿದ್ದರಾಮಯ್ಯ ಅವರಿಗಾಗಿಯೇ ಬದುಕುತ್ತಿರುವಂತೆ ನಡೆದುಕೊಳ್ಳುತ್ತಿದ್ದ ಕಾಂಗ್ರೆಸಿಗರು ಈಗ ನಿಧಾನವಾಗಿ ಅವರಿಂದ ದೂರ ಸರಿಯುತ್ತಿದ್ದಾರೆ.

ಮತ್ತೊಂದೆಡೆ ಗೃಹ ಸಚಿವರಾದ ನಂತರ ಸಿದ್ದು ಬಣದ ಜತೆ ಗುರುತಿಸಿಕೊಂಡಿರುವ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರನ್ನು ಬದಲಾವಣೆ ಮಾಡಬೇಕು ಎಂದು ಹೈಕಮಾಂಡ್ ಮೇಲೆ ಒತ್ತಡ ಹೇರಲಾಗುತ್ತಿದೆ. ಈಗಾಗಲೇ ಪರಮೇಶ್ವರ್ ಅವರು ಅಧ್ಯಕ್ಷರಾಗಿ 5 ವರ್ಷ ಅವಧಿ ಪೂರ್ಣಗೊಳಿಸಿದ್ದಾರೆ. ತಾಪಂ-ಜಿಪಂ , ವಿಧಾನಸಭೆ ಉಪ ಚುನಾವಣೆಗಳವರೆಗೂ ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರೆಯುವುದಾಗಿ ಅವರು ಮನವಿ ಮಾಡಿಕೊಂಡಿದ್ದರು. ಹೀಗಾಗಿ ಅವರನ್ನು ಮುಂದುವರೆಸಲಾಗಿತ್ತು. ಸಧ್ಯದ ಪರಿಸ್ಥಿತಿಯಲ್ಲಿ ಎಲ್ಲಾ ಚುನಾವಣೆಗಳು ಮುಗಿದಿದ್ದು, ಮುಂದಿನ 2 ವರ್ಷ 4 ತಿಂಗಳಲ್ಲಿ ಎದುರಾಗುವ ಮಹಾಸಮರಕ್ಕೆ ಪಕ್ಷವನ್ನು ಸಜ್ಜುಗೊಳಿಸಬೇಕಿದೆ.

ಸದ್ಯದ ಸ್ಥಿತಿಯಲ್ಲಿ ಕಾಂಗ್ರೆಸ್‌ನಿಂದ ದಲಿತರು, ಅಲ್ಪಸಂಖ್ಯಾತರು ದೂರ ಸರಿದಿದ್ದಾರೆ. ಯಾವ ಜಾತಿಯ ಮತಗಳೂ ಕಾಂಗ್ರೆಸ್‌ಗೆ ಖಚಿತ ಎಂಬ ವಾತಾವರಣ ಇಲ್ಲ. ಇತ್ತ ಸರ್ಕಾರದ ಆಡಳಿತವೂ ಪರಿಣಾಮಕಾರಿಯಾಗಿಲ್ಲದೆ ನೀರಸ ಎನಿಸಿದೆ. 2018ರಲ್ಲಿ ಜನರ ವಿಶ್ವಾಸ ಗಳಿಸಬೇಕಾದರೆ ಸರ್ಕಾರ ಮತ್ತು ಪಕ್ಷಕ್ಕೆ ಹೊಸ ರೂಪ ಕೊಡಬೇಕಾದ ಅನಿವಾರ್ಯತೆ ಇದೆ ಎಂದು ಹಿರಿಯ ಕಾಂಗ್ರೆಸಿಗರು ಹೈಕಮಾಂಡ್ ಮುಂದೆ ಅಂಕಿ-ಅಂಶಗಳ ಸಹಿತ ವಿವರಣೆ ನೀಡಿದ್ದಾರೆ. ಕಾಂಗ್ರೆಸ್‌ಗೆ ಕರ್ನಾಟಕ ಭದ್ರ ನೆಲೆಯಾಗಿತ್ತು. ಎಂಥಹ ರಾಜಕೀಯ ಸ್ಥಿತ್ಯಂತ್ರದಲ್ಲೂ ಕಾಂಗ್ರೆಸ್‌ನ ವೋಟ್ ಶೇರಿಂಗ್ ಕಡಿಮೆಯಾಗಿರಲಿಲ್ಲ. ಇತ್ತೀಚೆಗೆ ಅದು ನಿಧಾನವಾಗಿ ಕುಸಿಯುತ್ತಿದೆ. ಬಿಜೆಪಿ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳುತ್ತಿದೆ. ಕರಾವಳಿಯಲ್ಲಿ ಕಾಂಗ್ರೆಸ್ ಸಂಪೂರ್ಣ ನಿರ್ನಾಮ ಹಂತದಲ್ಲಿದ್ದು, ಉತ್ತರ ಕರ್ನಾಟಕ ಭಾಗದಲ್ಲೂ ಸಂಕಷ್ಟದ ಸ್ಥಿತಿಯಲ್ಲಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರ ಕರ್ಮಭೂಮಿಯಾಗಿರುವ ಮಧ್ಯ ಕರ್ನಾಟಕ ಮತ್ತು ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಬಲ ವೃದ್ಧಿಸಿಕೊಂಡಿಲ್ಲ. ಇದೇ ರೀತಿ ಮುಂದುವರೆದರೆ ಮುಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುವ ಅರ್ಹತೆಯನ್ನ್ನೂ ಕಳೆದುಕೊಳ್ಳಬೇಕಾಗುತ್ತದೆ ಎಂದು ಹಿರಿಯ ನಾಯಕರು ಎಚ್ಚರಿಸಿದ್ದಾರೆ.

ಒಂದೆಡೆ ಮೂಲಕಾಂಗ್ರೆಸಿಗರ ದೂರುಗಳು, ಮತ್ತೊಂದೆಡೆ ಸಿದ್ದರಾಮಯ್ಯ ಅವರ ಸಮರ್ಥನೆಗಳು ಹೈಕಮಾಂಡ್ ಮಟ್ಟದಲ್ಲಿ ಭಾರೀ ಸಂಚಲನ ಮೂಡಿಸಿದೆ. ಮೇಲ್ನೊಟಕ್ಕೆ ಯಾವುದೇ ಗುಟ್ಟು ಬಿಟ್ಟುಕೊಡದೇ ಇದ್ದರೂ ನಾಯಕತ್ವ ಬದಲಾವಣೆಗೆ ಗಂಭೀರ ಚಿಂತನೆ ನಡೆದಿರುವುದು ಸತ್ಯ ಎಂದು ಹೇಳಲಾಗುತ್ತಿದೆ. ಸಧ್ಯಕ್ಕೆ ಯಾವುದೇ ಕಾರಣಗಳು ಇಲ್ಲದೇ ಇರುವುದರಿಂದ ಸೂಕ್ತ ಸಮಯ, ಸಂದರ್ಭದಲ್ಲಿ ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದು ಕುತೂಹಲಕಾರಿಯಾಗಿದೆ.

Write A Comment