ರಾಷ್ಟ್ರೀಯ

ಹಲ್ಲು ಮತ್ತು ವಸಡು ಚಿಕಿತ್ಸೆಗೆ – ಲೇಸರ್‌

Pinterest LinkedIn Tumblr

ph3ದಂತ ವೈದ್ಯಕೀಯ ಚಿಕಿತ್ಸೆಯು ದಿನದಿಂದ ದಿನಕ್ಕೆ ಹೊಸತನವನ್ನು ಪಡೆದುಕೊಳ್ಳುತ್ತಿದೆ. ಇತ್ತೀಚಿನ ದಂತ ವೈದ್ಯಕೀಯದಲ್ಲಿನ ಸಂಶೋಧನೆಗಳು ಜನರಿಗೆ ನವೀನ ರೀತಿಯ ಚಿಕಿತ್ಸೆಯನ್ನು ನೀಡುವಲ್ಲಿ, ಬೇರೆ ವೈದ್ಯಕೀಯ ಸಂಶೋಧನೆಗಳಂತೆ ಮುಂಚೂಣಿಯಲ್ಲಿವೆ.

ಹಲ್ಲಿನ ಚಿಕಿತ್ಸೆಗೆ, ವಸಡಿನ, ಬಾಯಿಯ ಚಿಕಿತ್ಸೆಗೆ ಜನರು ಹೆದರುವ ಕಾರಣ ನೋವು. ನೋವು ರಹಿತ ಹಲ್ಲಿನ ಚಿಕಿತ್ಸೆಯು ಈಗ ಸಿಗುತ್ತಾದರೂ ಜನರು ಹಲ್ಲಿನ/ಬಾಯಿಯ ಚಿಕಿತ್ಸೆಗೆ ಮುಂದೆ ಬರುವುದಿಲ್ಲ. ಇದಲ್ಲದೇ, ರಕ್ತವನ್ನು ನೋಡಿ ಹೆದರಿಕೆ, ಹಲ್ಲು ಹುಳುಕು ತೆಗೆಯುವಾಗ ಆಗುವ ಶಬ್ದಕ್ಕೆ ಹೆದರಿಕೆಗಳಿಂದಾಗಿ ಜನರು ದಂತ ಚಿಕಿತ್ಸೆಯಿಂದ ಅಗತ್ಯವಿದ್ದರೂ ದೂರವಿರುತ್ತಾರೆ. ಇನ್ನು ಕೆಲವು ವಸಡು ಶಸ್ತ್ರ ಚಿಕಿತ್ಸೆಯ ನಂತರ ಹಾಕುವ ಹೊಲಿಗೆಗೂ ಜನರು ಬೇಡವೆನ್ನುತ್ತಾರೆ. ಇಂತಹ ಕೆಲವು ಜನರ ಭಯವನ್ನು ನವೀನ ಚಿಕಿತ್ಸೆಯ ರೀತಿಯಿಂದ ದೂರ ಮಾಡಲು ಸಾಧ್ಯವಾದರೆ, ಎಷ್ಟು ಉತ್ತಮ ಅಲ್ಲವೆ? ಹಾಗಾದರೆ ಇಂತಹ ಒಂದು ಚಿಕಿತ್ಸೆ ಸಾಧ್ಯವೆ? ಹೌದು ಸಾಧ್ಯವೆನ್ನಬಹುದು. ಇಂತಹ ಒಂದು ಚಿಕಿತ್ಸೆ ಲೇಸರ್‌. ಹಲ್ಲಿನ ಮತ್ತು ವಸಡಿನ ಕೆಲವು ಚಿಕಿತ್ಸೆಗಳಿಗೆ ಪರಿಣಾಮಕಾರಿಯಾಗಿ ಉಪಯೋಗವಾಗಬಲ್ಲ ನವೀನ ಚಿಕಿತ್ಸೆ.

ಲೇಸರ್‌ ಚಿಕಿತ್ಸೆಯ ಉಪಯೋಗಗಳೇನು? ಸಾಮಾನ್ಯ ಚಿಕಿತ್ಸೆಯಿಂದ ಆಗುವ ಕೆಲವು ಪರಿಣಾಮಗಳನ್ನು ಲೇಸರ್‌ ಚಿಕಿತ್ಸೆಯಿಂದ ಹೇಗೆ ನಿವಾರಿಸಬಹುದು?

ಮೊತ್ತ ಮೊದಲನೆಯದಾಗಿ, ಅರಿವಳಿಕೆ (ಅನಸ್ತೇಶಿಯಾ) ಆವಶ್ಯಕತೆ ಇಲ್ಲದಿರುವುದು. ಹಲ್ಲಿನ/ವಸಡಿನ ಹಲವು ಚಿಕಿತ್ಸೆಗಳಿಗೆ ಅರಿವಳಿಕೆಯು ಅಗತ್ಯ. ಲೇಸರ್‌ ಉಪಯೋಗದಿಂದ ಈ ಅರಿವಳಿಕೆಯು ಅಗತ್ಯವಿರಲಾರದು/ ಅಥವಾ ಕಡಿಮೆ ಅಗತ್ಯ ಬೀಳಬಹುದು. ಲೇಸರನ್ನು ದಂತ ಚಿಕಿತ್ಸೆಗೆ ಉಪಯೋಗಿಸುವಾಗ, ಲೇಸರ್‌ ಕಿರಣಗಳು, ಆ ಭಾಗದ ನರಗಳ/ನರತಂತುಗಳ ಉತ್ತೇಜಕ ಶಕ್ತಿಯನ್ನು ತಾತ್ಕಾಲಿಕವಾಗಿ ಕಡಿಮೆ ಮಾಡುವುದರಿಂದ, ಹಲ್ಲು ಕೊರೆಯುವಾಗ/ಶಸ್ತ್ರ ಚಿಕಿತ್ಸೆ ಲೇಸರ್‌ನಿಂದ ಮಾಡುತ್ತಿರುವಾಗ, ನೋವು ಗೊತ್ತಾಗದು. ಇದೊಂದು ಬಹೂಪಯೋಗ. ಇದರಿಂದಾಗಿ ಚುಚ್ಚು ಮದ್ದಿನ ಸೂಜಿಯ ಭಯವಿರುವವರಿಗೂ ಒಳ್ಳೆಯದು. ಅರಿವಳಿಕೆಯ ಅಗತ್ಯವಿಲ್ಲದಿರುವುದರಿಂದ ಸೂಜಿಯ ಆವಶ್ಯಕತೆಯೂ ಇರುವುದಿಲ್ಲ ಅಲ್ಲವೇ?

ಎರಡನೆಯದಾಗಿ, ರಕ್ತ ರಹಿತ /
ಕಡಿಮೆ ರಕ್ತಸ್ರಾವ –
ಚಿಕಿತ್ಸಾನಂತರ ವಸಡಿನ ಶಸ್ತ್ರ ಚಿಕಿತ್ಸೆ ಆಗಿರುವವರಲ್ಲಿ , ವಸಡಿನಿಂದ ರಕ್ತ ಒಸರುವುದು ಸಾಮಾನ್ಯ. ಇದರಿಂದ ಯಾವ ಹಾನಿಯೂ ಇಲ್ಲ. ಆದರೆ ಕೆಲವು ರೋಗಿಗಳು, ರಕ್ತ ನೋಡಿ ಹೆದರುವುದು, ತಲೆಸುತ್ತಿ ಬೀಳವುದೂ ಉಂಟು. ಇದು ಕೇವಲ ಭಯದಿಂದ ಆಗುವುದು ಎಂದು ತಿಳಿಯಬೇಕು. ಇದಲ್ಲದೇ ಕೆಲವು ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುವವರು ಮತ್ತು ರಕ್ತದೊತ್ತಡದಿಂದ ಬಳಲುವವರು ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟದಂತಿರಲು, ಅಥವಾ ರಕ್ತವು ಯಾವಾಗಲೂ ದ್ರವ ರೂಪದಲ್ಲಿರಲು ಮಾತ್ರೆ ತೆಗೆದುಕೊಳ್ಳುವರು. ಇಂತಹವರಿಗೆ ವಸಡು ಚಿಕಿತ್ಸೆಯ ಸಮಯದಲ್ಲಿ ರಕ್ತ ಸ್ರಾವ ಹೆಚ್ಚಾಗಬಹುದು. ಮೇಲೆ ಹೇಳಿದ ಎರಡು ತರಹದ ರೋಗಿಗಳಿಗೆ ಅಂದರೆ, ರಕ್ತ ನೋಡಿ ಹೆದರುವವರಿಗೂ/ಹೃದಯ ಸಂಬಂಧಿ ಕಾಯಿಲೆ ಇರುವವರಿಗೂ, ಲೇಸರ್‌ ಚಿಕಿತ್ಸೆ ಒಂದು ಉತ್ತಮ ಚಿಕಿತ್ಸೆಯೆಂದು ಹೇಳಬಹುದು. ಲೇಸರ್‌ ಕಿರಣಗಳು, ಶಸ್ತ್ರ ಚಿಕಿತ್ಸೆಯ ಭಾಗದ ರಕ್ತನಾಳಗಳನ್ನು ಸಂಕುಚಿಸುತ್ತದೆ. (ತಾತ್ಕಾಲಿಕವಾಗಿ) ಮತ್ತು ರಕ್ತಸ್ರಾವವಾಗದ ಹಾಗೆ ನೋಡಿಕೊಳ್ಳುತ್ತದೆ.

ಮೂರನೆಯ ಉಪಯೋಗ,
ಶಸ್ತ್ರ ಚಿಕಿತ್ಸೆಯ ಗಾಯ ಬೇಗ
ಗುಣವಾಗುವುದು.
ಲೇಸರ್‌ ಕಿರಣಗಳು, ನಮ್ಮ ರಕ್ತಕಣಗಳಿಂದ ಹೊರಬರುವ ಬೆಳವಣಿಗೆಗೆ ಉಪಯೋಗವಾಗಬಲ್ಲ ಮತ್ತು ಗಾಯ ಗುಣವಾಗಲು ಸಹಾಯಕವಾಗಬಲ್ಲ ಅಂಶಗಳನ್ನು ಹೊರಗೆಡಹಲು ಸಹಾಯ ಮಾಡುತ್ತದೆ. ಈ ಅಂಶಗಳು ಸಾಮಾನ್ಯ ಶಸ್ತ್ರ ಚಿಕಿತ್ಸೆಯಿಂದಲೂ ಕಾಣಸಿಗುವುದಾದರೂ, ಲೇಸರ್‌ ಉಪಯೋಗದಿಂದ, ಈ ಅಂಶಗಳು ದುಪ್ಪಟ್ಟು ಹೊರಗೆ ಬಂದು, ಶಸ್ತ್ರ ಚಿಕಿತ್ಸೆಯ ಗಾಯ ಶೀಘ್ರ ಗುಣವಾಗುವುದಲ್ಲದೇ, ಮತ್ತೆ ವಸಡು ಪುನಃ ಮೊದಲಿನ ರೂಪ, ಶಕ್ತಿ ಪಡೆದು ಕೊಳ್ಳಲು ಸಹಾಯಕವಾಗುತ್ತದೆ. ಇದು ಲೇಸರ್‌ ಚಿಕಿತ್ಸೆಯ ವೈಶಿಷ್ಟ Â. ಇಂತಹ ಲೇಸರ್‌ ಶಕ್ತಿಯನ್ನು ಪಡೆಯಲು ಲೇಸರ್‌ನ್ನು ಅತ್ಯಂತ ಕಡಿಮೆ ಪ್ರಭಾವದ್ದಾಗಿ ಉಪಯೋಗಿಸುತ್ತಾರೆ (ಕಡಿಮೆ ಪ್ರಭಾವದ ಲೇಸರ್‌ ಚಿಕಿತ್ಸೆ

ನಾಲ್ಕನೆಯ ಉಪಯೋಗ, ಹೊಲಿಗೆ/
ಕಟ್ಟಿನ ಆವಶ್ಯಕತೆ ಇಲ್ಲದಿರುವುದು.
ಲೇಸರ್‌ ಚಿಕಿತ್ಸೆಯಿಂದ ಮಾಡಿದ ವಸಡು ಶಸ್ತ್ರಚಿಕಿತ್ಸೆಗಳಿಗೆ ಹೊಲಿಗೆಯ/ಕಟ್ಟಿನ ಆವಶ್ಯಕತೆಯಿರುವುದಿಲ್ಲ. ಇದು ಎಲ್ಲ ತರಹದ ವಸಡು ಶಸ್ತ್ರ ಚಿಕಿತ್ಸೆಗಳಿಗೆ ಅನ್ವಯವಲ್ಲದಿದ್ದರೂ, ಕೆಲವು ವಸಡು ಶಸ್ತ್ರ ಚಿಕಿತ್ಸೆಗೆ ಲೇಸರ್‌ ಮುಖೇನ ಶಸ್ತ್ರ ಚಿಕಿತ್ಸೆ ಮಾಡುವುದರಿಂದ ಕಟ್ಟಿನ ಅಗತ್ಯ ಬೀಳುವುದಿಲ್ಲ. ಹೀಗೆ ಹೊಲಿಗೆ ಬೇಡವಾಗುವುದರಿಂದ, ಪುನಃ ರೋಗಿಯು ಆಸ್ಪತ್ರೆಗೆ ಭೇಟಿಕೊಡುವುದು ಅಗತ್ಯವಿರುವುದಿಲ್ಲ.

ಐದನೆಯ ಉಪಯೋಗ,
ನೋವಿನ ಮಾತ್ರೆ ಬೇಡ
ಸಾಮಾನ್ಯವಾಗಿ ವಸಡು ಶಸ್ತ್ರ ಚಿಕಿತ್ಸೆಯ ನಂತರ, ನೋವು ಸಾಮಾನ್ಯ. ಇದು ತಡೆದುಕೊಳ್ಳುವಷ್ಟು ಇರುವುದಾದರೂ, ಕೆಲವೊಮ್ಮೆ ನೋವು ನಿವಾರಕ ಮಾತ್ರೆಯ ಆವಶ್ಯಕತೆ ಇರುತ್ತದೆ. ಲೇಸರ್‌ ಚಿಕಿತ್ಸೆಗೆ ಒಳಗಾದವರಿಗೆ ಈ ಮಾತ್ರೆಗಳ ಆವಶ್ಯಕತೆ ಬೀಳಲಾರದು, ಮತ್ತು ಕೆಲವೊಮ್ಮೆ ಬೇಕಾದರೂ ಕಡಿಮೆ ಪ್ರಮಾಣದಲ್ಲಿ ಬೇಕಾಗಬಹುದು. ಇದರಿಂದಾಗಿ ಮಾತ್ರೆಗೆ ಕೊಡುವ ಹಣವೂ ತಪ್ಪಿತು ಮತ್ತು ಮಾತ್ರೆ ನುಂಗುವ ಕೆಲಸವೂ ಇರಲಾರದು. ಇದರಿಂದಾಗಿ ಕೆಲವು ರೋಗಿಗಳಿಗಂತೂ ಖುಷಿಯಾಗಬಹುದು. ಇವೆಲ್ಲ ಲೇಸರ್‌ ಚಿಕಿತ್ಸೆಯ ಉಪಯೋಗಗಳು. ಇನ್ನು ಲೇಸರ್‌ನಿಂದ ಯಾವ ಯಾವ ತರಹದ ವಸಡಿನ ಶಸ್ತ್ರಚಿಕಿತ್ಸೆ ಮಾಡಬಹುದೆಂದು ತಿಳಿಯೋಣ.

ಅಂದದ ನಗುವು, ಎಲ್ಲರನ್ನೂ ಆಕರ್ಷಿಸುತ್ತದೆ. ಈ ಅಂದದ ನಗುವಿಗೆ ಮುತ್ತಿನಂತಹ ಹಲ್ಲುಗಳು ಮತ್ತು ಅದರ ಸುತ್ತ ಇರುವ ವಸಡು ಆರೋಗ್ಯವಾಗಿರುವುದು, ಬಣ್ಣ ಗುಲಾಬಿ, ನಸು ಗುಲಾಬಿಯ ಬಣ್ಣ ಇರುವುದು ಮುಖ್ಯ. ಆದರೆ ಕೆಲವೊಮ್ಮೆ, ನಿಮ್ಮ ವಸಡಿನ ಬಣ್ಣ ಕಂದು ಬಣ್ಣದ್ದಾಗಿ ಅಥವಾ ಕಪ್ಪಾಗಿ ಮುಖದ ಬಣ್ಣಕ್ಕೆ ಹೋಲಿಕೆಯಾಗದೇ ಇರುವುದಿದೆ. ಇದರಿಂದ ನಗುವಾಗ “”ಅರ್ಧ ನಗು” ಕೊಡುವವರು ಅಥವಾ ಕೈಯನ್ನು ಅಡ್ಡವಿಟ್ಟು ನಗುವವರು ಬಹಳ, ಇದರಿಂದ ಅಂದದ ಮುಖದ ಚಂದದ ಸೌಂದರ್ಯವು ಹಾಳಾಗುವುದು. ಈ ವಸಡಿನ ಬಣ್ಣವನ್ನು ಶಸ್ತ್ರ ಚಿಕಿತ್ಸೆಯ ಮೂಲಕ ಬದಲಾಯಿಸಬಹುದು. ಇಂತಹ ಶಸ್ತ್ರಚಿಕಿತ್ಸೆಯನ್ನು ಡಿಪಿಗ್‌ಮೆಂಟ್‌ಮೇಂಟೇಶನ್‌ ಎನ್ನುತ್ತಾರೆ. ನಮ್ಮ ವಸಡಿನ ಇಂತಹ ಬಣ್ಣಕ್ಕೆ ಕಾರಣ ನಮ್ಮ ಚರ್ಮದ/ವಸಡಿನ ಹೊರಕವಚವಾದ ಎಪಿತೀಲಿಯಮ್‌ನಲ್ಲಿರುವ ಮೆಲಾನಿನ್‌ ಅಂಶ. ಈ ವಸಡಿನ ಹೊರಕವಚದ ಮೆಲಾನಿನ್‌ ತೆಗೆಯುವುದರಿಂದ ವಸಡಿನ ಬಣ್ಣ ಗುಲಾಬಿ/ನಸು ಗುಲಾಬಿಗೆ ಬರುವುದು. ಇಂತಹ ಚಿಕಿತ್ಸೆಯನ್ನು ಶಸ್ತ್ರಚಿಕಿತ್ಸೆಗೆ ಉಪಯೋಗಿಸುವ ಬ್ಲೇಡಿನಿಂದ, ಕ್ರಯೋಸರ್ಜರಿ, ಎಲೆಕ್ಟ್ರೋಸರ್ಜರಿಗಳಿಂದ ಮಾಡಬಹುದು. ಆದರೆ, ಲೇಸರ್‌ ಚಿಕಿತ್ಸೆಯಿಂದ ಇದನ್ನು ಮಾಡುವುದರಿಂದ, ರೋಗಿಗಳಿಗೆ, ಈ ಚಿಕಿತ್ಸೆಯ ಅನಂತರ, ರಕ್ತಸ್ರಾವವಿಲ್ಲದೇ, ನೋವಿಲ್ಲದೇ ಇರುವುದರಿಂದ ಈ ಎಲ್ಲ ಚಿಕಿತ್ಸೆಗಳಲ್ಲಿ ಲೇಸರ್‌ ಚಿಕಿತ್ಸೆ ಉತ್ತಮವೆನ್ನಬಹುದು. ಇಂತಹ ಚಿಕಿತ್ಸೆಯಿಂದ ಮತ್ತೆ ಪುನಃ ಸ್ವಲ್ಪ ಸ್ವಲ್ಪ ಕಂದು/ಕಪ್ಪು ಬಣ್ಣ ಅಲ್ಲಲ್ಲಿ ಕಾಣಬಂದರೂ, ಮತ್ತೆ ಪುನಃ ಅಲ್ಲಲ್ಲಿ ಲೇಸರ್‌ ಚಿಕಿತ್ಸೆ ಮಾಡುವುದರಿಂದ, ಇದನ್ನು ಕೂಡ ತೆಗೆಯಬಹುದು. ನೀವು ನಗುವಾಗ ನಿಮ್ಮ ವಸಡು ಸಾಮಾನ್ಯಕ್ಕಿಂತ ಹೆಚ್ಚು ಕಾಣುತ್ತಿದೆಯೇ ಈ ನಗವನ್ನು “”ವಸಡು ನಗು’ ಎಂದು ಹೇಳುತ್ತೇವೆ ಈ ವಸಡು ನಗುವಿಗೆ/ವಸಡು ಹೆಚ್ಚು ಕಾಣಲು ಬೇರೆ ಬೇರೆ ಕಾರಣಗಳಿರುತ್ತವೆ. ಅದರಲ್ಲಿ ಒಂದು ಸಾಮಾನ್ಯವಾದ ಕಾರಣ, ವಸಡು ಹಲ್ಲಿನ ಹೊರಕವಚವಾದ ಎನಾಮೆಲ್‌/ಈ ಭಾಗವನ್ನು ಆವರಿಸಿರುವುದು. ಹೀಗೆ ಹೆಚ್ಚುವರಿಯಾಗಿ ಕಾಣುವ ವಸಡನ್ನು, ಲೇಸರ್‌ ಚಿಕಿತ್ಸೆಯಿಂದ ತೆಗೆದು, ಹಲ್ಲು ಸಂಪೂರ್ಣವಾಗಿ ಕಾಣುವ ಹಾಗೆ ಮಾಡಬಹುದು, ನಗುವ ಚಂದವನ್ನು ಹೆಚ್ಚಿಸಬಹುದು.

ಕೆಲವೊಮ್ಮೆ ಬೇರೆ ರೋಗಗಳಿಗೆ, ಮೂಛೆì ಕಾಯಿಲೆ, ರಕ್ತದೊತ್ತಡಗಳಿಗೆ ತೆಗೆದುಕೊಳ್ಳುವ ಔಷಧಿಗಳಿಂದ ಕೂಡ, ವಸಡು ಊದಿಕೊಂಡು ಹಲ್ಲನ್ನು ಆವರಿಸಿರುತ್ತದೆ. ಇದರಿಂದ ತಿನ್ನಲೂ, ಹಲ್ಲುಜ್ಜಲೂ ಕಷ್ಟವಾಗಬಹುದು. ವಸಡು ಗಾತ್ರದಲ್ಲಿ ದೊಡ್ಡದಾಗುವುದು ಮೂಛೆì ರೋಗಕ್ಕೆ/ ರಕ್ತದೊತ್ತಡಕ್ಕೆ ತೆಗೆದುಕೊಳ್ಳುವ ಮಾತ್ರೆಗಳ ಅಡ್ಡ ಪರಿಣಾಮ. ಇಂತಹ ಊದಿಕೊಂಡಿರುವ ವಸಡನ್ನು ಲೇಸರಿನಿಂದ ತೆಗೆಯಬಹುದು.

ಇನ್ನು ಕೆಲವರಲ್ಲಿ ಎದುರಿನ ಹಲ್ಲಿನ ಮಧ್ಯೆ ಕಂಡಿ ಅಥವಾ ಎಡೆ/ಜಾಗವಿರುತ್ತದೆ. ಈ ಕಂಡಿ ಅಥವಾ ಎಡೆ ಕ್ರಮೇಣ ಹೆಚ್ಚಾಗುತ್ತಾ ಹೋಗುತ್ತದೆ. ಮತ್ತೆ ಕೆಲವರಲ್ಲಿ, ಈ ಎದುರಿನ ಹಲ್ಲಿನ ಮೇಲೆ ಯಾವಾಗಲೂ ದಂತಪಾಚಿಯಿರುವುದರಿಂದ, ಸದಾ ವಸಡಿನ ರೋಗವಿರುತ್ತದೆ. ಈ ಅಂತರ ಎರಡುಹಲ್ಲಿನ ಮಧ್ಯೆ ಕಂಡಿಗೆ/ಜಾಗಕ್ಕೆ ಒಂದು ಕಾರಣ, ನಮ್ಮ ತುಟಿಯ ಬುಡದಿಂದ ವಸಡಿನ ಮೇಲಿರುವ ಚರ್ಮದ/ಮಾಂಸದ ಪದರಗಳ ಗುಚ್ಚ (ಫ್ರೀನಮ್‌) ಈ ಮಾಂಸದ/ಚರ್ಮದ ಪದರ/ಗುತ್ಛ ವಸಡಿನ ತುದಿಯಲ್ಲಿ ತುಂಬಾ ಮೇಲಿನಿಂದ ಅಂಟಿಕೊಂಡಿರುವುದೇ, ಈ ಹಲ್ಲಿನ ಮಧ್ಯೆ ಇರುವ ಕಂಡಿಗೆ/ಜಾಗಕ್ಕೆ ಕಾರಣ. ಸಾಮಾನ್ಯವಾಗಿ, ಈ ಮಾಂಸದ ಪದರವನ್ನು ತೆಗೆಯಲು, ಶಸ್ತ್ರಚಿಕಿತ್ಸೆಗೆ ಉಪಯೋಗಿಸುವ ಬ್ಲೇಡನ್ನು ಉಪಯೋಗಿಸಿ ಅದರ ಅಂಟಿಕೊಂಡಿರುವ ಭಾಗವನ್ನು ಕೆಳಗಿನ ವಸಡಿನಿಂದ ಬೇರ್ಪಡಿಸಿ ಮೇಲೆ ಮಾಡುತ್ತಾರೆ. ಅಥವಾ ಈ ಫ್ರೀನಮ್‌ನ್ನು ಸಂಪೂರ್ಣವಾಗಿ ತೆಗೆಯುತ್ತಾರೆ. ಈ ಎಲ್ಲಾ ಚಿಕಿತ್ಸೆಗೆ ಅರಿವಳಿಕೆ ಅತ್ಯಗತ್ಯ ಮತ್ತು ಶಸ್ತ್ರಚಿಕಿತ್ಸೆಯ ನಂತರ, ಹೊಲಿಗೆಯ/ಕಟ್ಟಿನ ಅಗತ್ಯಕೂಡ ಇದೆ ಆದರೆ ಇದನ್ನು ತೆಗೆಯಲು ಅಥವಾ ಅದನು ಸ್ವಲ್ಪ ಮೇಲೆ/ ಕೆಳಗೆ ಮಾಡಿ ಕಟ್ಟ ಬೇಕಾದಲ್ಲಿ, ಲೇಸರ್‌ ಉಪಯೋಗಿಸಿದರೆ, ಹೊಲಿಗೆಯ ಆವಶ್ಯಕತೆಯಿರುವುದಿಲ್ಲ, ರಕ್ತ ಸ್ರಾವವಿರುವುದಿಲ್ಲ, ಎಲ್ಲದಕ್ಕಿಂತಲೂ ಹೆಚ್ಚಾಗಿ ನೋವು ಇರಲಾರದು.

ನಿಮ್ಮ ಹಲ್ಲು ಸೆಟ್ಟು ಬಿದ್ದು ತುಂಡಾಗಿದೆಯೇ? ನಿಮ್ಮ ದಂತವೈದ್ಯರು ಸುತ್ತಲಿರುವ ವಸಡನ್ನು ಮತ್ತು ಸ್ವಲ್ಪ ಎಲುಬನ್ನು ತೆಗೆಯಲು ಸೂಚಿಸಿದ್ದರೆ, ಇದನ್ನು ಕೂಡ ಲೇಸರ್‌ನಿಂದ ಶೀಘ್ರವಾಗಿ ತೆಗೆದು, ಎಷ್ಟು ಬೇಕು ಅಷ್ಟೇ ಹಲ್ಲನ್ನು ಕಾಣುವ ಹಾಗೆ ಮಾಡಿ, ಈ ತೋರುವ ಹಲ್ಲಿನ ಭಾಗದ ಆಧಾರದೊಂದಿಗೆ ಹಲ್ಲನ್ನು ಕಟ್ಟಬಹುದು. ಹಲ್ಲಿಗೆ ಕ್ಯಾಪ್‌ ಕೊಡಬಹುದು ಕೂಡ. ಮೇಲೆ ಹೇಳಿದ ಎಲ್ಲ ವಸಡು ಶಸ್ತ್ರಚಿಕಿತ್ಸೆಗಳಲ್ಲದೇ ಹುಳುಕು ಹಿಡಿದ ಹಲ್ಲಿನ, ಹುಳುಕನ್ನು ತೆಗೆಯುವುದು, ಹಲ್ಲನ್ನು ಬಿಳಿಯಾಗಿಸುವುದು, ಹಲ್ಲು ಹುಳುಕು ಸಣ್ಣ ಪ್ರಮಾಣದಲ್ಲಿರುವಾಗಲೇ ಇದನ್ನು ಕಂಡು ಹಿಡಿಯುವುದು, ಹಲ್ಲಿನ ಬೇರಿನ ಚಿಕಿತ್ಸೆ ಮಾಡುವಾಗ , ಬ್ಯಾಕ್ಟೀರಿಯಾಗಳನ್ನು/ಕೀವು ಬರುವ ಬೇರಿಗೆ ಚಿಕಿತ್ಸೆ ನೀಡುವಲ್ಲಿ, ಇದಲ್ಲದೇ ವಸಡು ರೋಗಗಳಿಂದ ಎಲುಬು ನಾಶವಾದಾಗ ಅದನ್ನು ಮತ್ತೆ ಪುನಃ ಮೊದಲಿನ ಹಾಗೇ ಎಲುಬು ಬೆಳವಣಿಗೆಯಲ್ಲಿ ಉಪಯೋಗಿಸುವುದು. ಇವೆಲ್ಲವೂ ಲೇಸರ್‌ನಿಂದ ಸಾಧ್ಯವಾಗುತ್ತದೆ.

ಎಲ್ಲಾ ವೈದ್ಯಕೀಯ ಸ್ಪೆಶಾಲಿಟಿಗಳಲ್ಲಿ ಲೇಸರ್‌ ಉಪಯೋಗ ಮೊದಲಿಗಿಂತ ಹೆಚ್ಚಾಗಿದೆ. ಲೇಸರ್‌ ಉಪಕರಣಗಳು ಸ್ವಲ್ಪ ದುಬಾರಿಯಾಗಿರುವುದರಿಂದ, ಅದರ ಮುಖೇನ ಮಾಡುವ ಚಿಕಿತ್ಸೆ ಸ್ವಲ್ಪ ದುಬಾರಿಯಾದರೂ, ಇದರ ಹತ್ತು ಹಲವು ಪ್ರಯೋಜನಗಳಿಂದ ಇದರ ಉಪಯೋಗ ಪಡೆದುಕೊಳ್ಳುವವರೂ, ಹೆಚ್ಚಾಗಿದ್ದಾರೆ.

ಡಾ| ಜಿ. ಸುಬ್ರಾಯ ಭಟ್‌,
ಅಸಿಸ್ಟಂಟ್‌ ಡೀನ್‌, ಪ್ರೊಫೆಸರ್‌,
ದಂತ ಚಿಕಿತ್ಸಾ ವಿಭಾಗ,
ಎಂಸಿಒಡಿಎಸ್‌, ಮಣಿಪಾಲ.

-ಉದಯವಾಣಿ

Write A Comment