ಕರ್ನಾಟಕ

ಈಗ ಗಾಂಧೀಜಿ ವಿರುದ್ಧವೂ ಭಗವಾನ್‌ ಗುಡುಗು

Pinterest LinkedIn Tumblr

K-S-Bhagwanಬೆಂಗಳೂರು: ಬ್ರಿಟಿಷರ ವಿರುದ್ಧ ಹೋರಾಡಿ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧೀಜಿ, ಬ್ರಿಟಿಷರ ಆಡಳಿತಕ್ಕಿಂತಲೂ ಭಯಂಕರವಾದ ಬ್ರಾಹ್ಮಣಶಾಹಿಯಿಂದ ಶೂದ್ರರ ರಕ್ಷಣೆ ಮಾಡಲು ಪ್ರಯತ್ನಿಸಲಿಲ್ಲ ಎಂದು ವಿವಾದಾತ್ಮಕ ಹೇಳಿಕೆಗಳಿಗೆ ಖ್ಯಾತರಾದ ವಿಚಾರವಾದಿ ಕೆ.ಎಸ್‌.ಭಗವಾನ್‌ ಹೇಳಿದ್ದಾರೆ.

ಮಹಾತ್ಮ ಜ್ಯೋತಿ ಬಾ ಪುಲೆಯವರ 189ನೇ ಜಯಂತಿ ಅಂಗವಾಗಿ ದಲಿತ ಸಂಘರ್ಷ ಸಮಿತಿ (ಸಮತಾವಾದ) ಶನಿವಾರ ಸೆಂಟ್ರಲ್‌ ಕಾಲೇಜು ಆವರಣದ ಸೆನೆಟ್‌ ಸಭಾಂಗಣದಲ್ಲಿ ಆಯೋಜಿಸಿದ್ದ ಜ್ಞಾನ ಪ್ರಸಾರ ಐಕ್ಯತಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಬ್ರಿಟಿಷರ ಆಡಳಿತಕ್ಕಿಂತ ಬ್ರಾಹ್ಮಣಶಾಹಿ ಗುಲಾಮಗಿರಿ ಭಯಂಕರ. ಸಾಮಾಜಿಕ ಪರಿವರ್ತನಾ ಹರಿಕಾರ ಜ್ಯೋತಿ ಬಾ ಪುಲೆ, ಪೆರಿಯಾರ್‌, ನಾರಾಯಣಗುರು ಮತ್ತು ಡಾ.ಬಿ.ಆರ್‌.ಅಬೇಡ್ಕರ್‌ ಅವರು ಶೂದ್ರರನ್ನು ಬ್ರಾಹ್ಮಣಶಾಹಿಯ ಕಪಿಮುಷ್ಟಿಯಿಂದ ಬಿಡಿಸಿ ಆಧುನಿಕ ಭಾರತ ನಿರ್ಮಾಣ ಮಾಡಿದರು. ಆದರೆ, ಗಾಂಧೀಜಿ ಬ್ರಿಟಿಷರ ವಿರುದ್ಧ ಹೋರಾಡಿದರಾದರೂ ಬ್ರಾಹ್ಮಣಶಾಹಿಯಿಂದ ಶೂದ್ರರನ್ನು ಬಿಡಿಸಲು ಪ್ರಯತ್ನಿಸಲಿಲ್ಲ ಎಂದರು.

ಬ್ರಾಹ್ಮಣರನ್ನು ಹೊರತುಪಡಿಸಿ ಮಿಕ್ಕವರೆಲ್ಲರೂ ಶೂದ್ರರೆ. ಶೂದ್ರ ಎಂದರೆ ಗುಲಾಮರು ಅಥವಾ ದಾಸಿಯ ಮಗ ಎಂಬ ಅರ್ಥಗಳಿವೆ. ಶೂದ್ರರು ಇರುವುದೇ ಬ್ರಾಹ್ಮಣರ ಸೇವೆಗಾಗಿ ಎಂದು ಮನುಸ್ಮತಿ ಹೇಳುತ್ತದೆ. ಹೀಗಾಗಿಯೇ ಮನುಸ್ಮತಿಯನ್ನು ಅಂಬೇಡ್ಕರ್‌, ಪುಲೆ, ಪೆರಿಯಾರ್‌, ನಾರಾಯಣಗುರು ಎಂದೋ ತಿರಸ್ಕರಿಸಿ ಹೊರಬಂದರು. ಆದರೆ, ಇಂದಿನ ಜನರು ಅದನ್ನು ಇನ್ನೂ ತಮ್ಮ ಮನಸ್ಸಿನಿಂದ ಹೊರಹಾಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

1500 ವರ್ಷಗಳ ಕಾಲ ಬೌದ್ಧಧರ್ಮವೇ ದೇಶದ ಧರ್ಮವಾಗಿತ್ತು. ಇದಕ್ಕೆ ಸಾಕಷ್ಟು ಆಧಾರಗಳಿವೆ. ಭಾರತದ ಮೂರನೇ ಎರಡರಷ್ಟು ಜನ ಬೌದ್ಧರಾಗಿದ್ದರು ಎಂದು ಸ್ವಾಮಿ ವಿವೇಕಾನಂದರೇ ಹೇಳಿದ್ದಾರೆ. ಅಂತಹ ಧರ್ಮವನ್ನು ಇಂದು ಎಲ್ಲರೂ ನಮ್ಮದಲ್ಲ ಎಂದು ಮರೆಯುತ್ತಿದ್ದಾರೆ. ಯಾವ ಧರ್ಮ ತಮ್ಮನ್ನು ಗುಲಾಮರೆಂದು ಕರೆಯಿತೋ ಅಂತಹ ಧರ್ಮವನ್ನು ಒಪ್ಪಿದ್ದಾರೆ ಎಂದು ಹೇಳಿದರು.

ಸಂವಿಧಾನದಲ್ಲಿ ಶೂದ್ರಪದ ಬೇಡ:
ಶೂದ್ರ ಎಂದರೆ ಗುಲಾಮ, ದಾಸಿಯ ಮಗ ಎಂಬ ಅರ್ಥಗಳಿರುವುದರಿಂದ ಈ ಪದವನ್ನು ಸಂವಿಧಾನದಲ್ಲಿ ಸೇರಿಸಿರುವುದು ಸರಿಯಲ್ಲ. ಈ ಪದ ತೆಗೆದುಹಾಕಬೇಕೆಂದು ಪೆರಿಯಾರ್‌ ಹಿಂದೆಯೇ ಒತ್ತಾಯಿಸಿದ್ದರು. ಅವರ ಸಾವಿನ ಬಳಿಕ ಈ ಒತ್ತಾಯ ಗೌಣವಾಯಿತು. ಈ ಬಗ್ಗೆ ಮತ್ತೆ ಹೋರಾಟಗಳು ಆರಂಭವಾಗಬೇಕು ಸಲಹೆ ನೀಡಿದರು.

ಉರಿಲಿಂಗ ಪೆದ್ದಿಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಮಾತನಾಡಿ, ಇಂದು ದೇಶಪ್ರೇಮದ ಬಗ್ಗೆ ಮಾತನಾಡುತ್ತಿರುವವರ್ಯಾರೂ ಗಡಿ ಕಾಯ್ದವರಲ್ಲ, ದೇಶಕ್ಕಾಗಿ ಪ್ರಾಣ ಕೊಟ್ಟ ಕುಟುಂಬದವರೂ ಅಲ್ಲ ಎಂದರು.

ಕಾರ್ಯಕ್ರಮದಲ್ಲಿ ದಸಂಸ(ಸಮತಾವಾದ) ರಾಜ್ಯಾಧ್ಯಕ್ಷ ಎಚ್‌.ಮಾರಪ್ಪ, ದಸಂಸ ರಾಜ್ಯ ಗೌರವಾಧ್ಯಕ್ಷ ಕೆ.ತಮ್ಮಯ್ಯ, ಜಾನಪದ ಗಾಯಕ ಡಾ.ಬಾನಂದೂರು ಕೆಂಪಯ್ಯ ಮತ್ತಿತರರು ಉಪಸ್ಥಿತರಿದ್ದರು.

ಗುಡಿ, ಚರ್ಚು, ಮಸೀದಿ
ನಾಶವಾಗಬೇಕು: ಚಂಪಾ
ನೂರು ದೇವರನು ನೂಕಾಚೆ ದೂರಗುಡಿ, ಚರ್ಚು, ಮಸೀದಿಗಳನ್ನು ಬಿಟ್ಟು ಹೊರಬನ್ನಿಎಂದು ರಾಷ್ಟ್ರಕವಿ ಕುವೆಂಪು ಅವರು ಹೇಳಿದ್ದು ಪೂರ್ಣಕ್ರಾಂತಿಯಲ್ಲ, ಅರ್ಧಕ್ರಾಂತಿ. ನಾನಿದನ್ನು ಒಪ್ಪುವುದಿಲ್ಲ ಎಂದು ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಹೇಳಿದರು.

ಇವ್ಯಾವುವೂ ನಮಗೆ ಬೇಕಾಗಿಯೇ ಇಲ್ಲ. ಪೂರ್ಣ ಕ್ರಾಂತಿಯಾಗಬೇಕಾದರೆ ಅವುಗಳು ಸಂಪೂರ್ಣ ನಾಶವಾಗಬೇಕು. ಅವು ನಾಶವಾಗದಿದ್ದರೆ, ಇವುಗಳನ್ನು ಬಿಟ್ಟು ಹೊರಬಂದವರು ಮತ್ತೆ ವಾಪಸ್‌ ಹೋಗಿ ಅಲ್ಲಿಯೇ ಸೇರಿಕೊಳ್ಳುತ್ತಾರೆ. ಬ್ರಾಹ್ಮಣಶಾಹಿತ್ವ ಎಂಬುದು ಹಗಲು- ರಾತ್ರಿ ಕೆಟ್ಟದ್ದನ್ನೇ ಯೋಚಿಸುವಂತಹದ್ದು, ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ಹೀಗಾಗಿ ಅದನ್ನು ಅದರ ಪಾಡಿಗೆ ಬಿಟ್ಟು ಶೂದ್ರರು ಅಂಬೇಡ್ಕರ್‌, ಬುದ್ಧ, ಬಸವರ ಹಾದಿಯಲ್ಲಿ ಸಾಗಬೇಕು ಎಂದು ಸಲಹೆ ನೀಡಿದರು.
-ಉದಯವಾಣಿ

Write A Comment