ಇತ್ತೀಚೆಗಂತೂ ಕನ್ನಡದಲ್ಲಿ ಸಾಕಷ್ಟು ಹೊಸ ಪ್ರಯೋಗಗಳು ನಡೆಯುತ್ತಿವೆ. ಅದರಲ್ಲೂ ಹೊಸಬರೇ ಅಂಥದ್ದೊಂದು ಪ್ರಯೋಗಕ್ಕಿಳಿಯುತ್ತಿದ್ದಾರೆ ಎಂಬುದು ವಿಶೇಷ. ಆ ಸಾಲಿಗೆ ಮತ್ತೂಂದು ಹೊಸತನ ಇರುವ ಚಿತ್ರವೊಂದು ಫೆ.26 ಕ್ಕೆ ತೆರೆಗೆ ಬರುತ್ತಿದೆ. ಅದು “400′. ಇದು ಒಪೆರ ಡ್ರೀಮ್ ಮೂವೀಸ್ ಬ್ಯಾನರ್‌ನಲ್ಲಿ ತಯಾರಾಗಿರುವ ಮೂರನೇ ಕನ್ನಡ ಚಿತ್ರ. ಈ ಚಿತ್ರಕ್ಕೆಕ ಪ್ರಕಾಶ್ ಕಾಬೆಟ್ಟು ನಾಯಕ ನಟರಾಗಿ ಕಾಣಿಸಿಕೊಂಡಿದ್ದಾರೆ. ಇವರಿಗಿದು ಮೂರನೇ ಚಿತ್ರ. ಈ ಹಿಂದೆ ಕನ್ನಡದ “ಭವ’ ಹಾಗು ತುಳುವಿನ “ಪಕ್ಕಿಲು ಮೂಜಿ’ ಚಿತ್ರದಲ್ಲಿ ನಟಿಸಿದ್ದಾರೆ.
ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ. ದ್ವೀಪವೊಂದರ ಬಾಗಿಲಿನಿಂದ ಹಾದು ಹೋಗುವ ಯಾವುದೇ ವ್ಯಕ್ತಿಗಳು ಮತ್ತು ಪ್ರಾಣಿಗಳು ನಿಗೂಢವಾಗಿ ಕಣ್ಮರೆಯಾಗುವ ಕಥಾಹಂದರ ಚಿತ್ರದ ಹೈಲೈಟ್. ಈ ಚಿತ್ರದ ಮತ್ತೂಂದು ವಿಶೇಷವೆಂದರೆ, ಇಲ್ಲಿ ಗ್ರಾಫಿಕ್ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಲಾಗಿದೆ.
ಅಂತೆಯೇ 400 ವರ್ಷಗಳ ಹಿಂದಿನ ಒಂದು ಕಾಲ್ಪನಿಕ ಗ್ರಾಮದಲ್ಲಿ ಕುಷ್ಠರೋಗದಿಂದ ಬಳಲುತ್ತಿರುವವರನ್ನು ಬಡವ ಶ್ರೀಮಂತರೆಂಬ ಭೇದಭಾವವಿಲ್ಲದೆ ದ್ವೀಪವೊಂದಕ್ಕೆ ಅಟ್ಟಿಸಲಾಗುತ್ತಿತ್ತು. ನಂತರ ಪ್ರಸ್ತುತ ಅದೇ ಪರಿಸರದಲ್ಲಿ ವಜ್ರದ ಹರಳುಗಳು ಕೂಡಾ ಧಾರಾಳವಾಗಿ ಕಂಡು ಬರುವುದರಿಂದ ಜನರು ಅಲ್ಲಿಗೆ ಮುಗಿಬೀಳುತ್ತಾರೆ. ಈ ಕಥೆಯ ಸುತ್ತಮುತ್ತ ಕಥಾನಾಯಕನ ಜೊತೆ ವೈದ್ಯ, ಪತ್ರಕರ್ತೆ, ಮಾಟಗಾತಿ ಮುಂತಾದವರು ಕಾಣಿಸಿಕೊಳ್ಳುತ್ತಾರೆ. ಅವರೆಲ್ಲರದ್ದೂ ವಿಭಿನ್ನ ಪಾತ್ರಗಳು. ಅವೆಲ್ಲದ್ದರಿಂದ ಏನೆಲ್ಲಾ ಘಟನೆಗಳು ನಡೆಯುತ್ತವೆ ಅನ್ನೋದು ಚಿತ್ರದ ಸಸ್ಪೆನ್ಸ್.
ಈ ಚಿತ್ರದಲ್ಲಿ ಸಸ್ಪೆನ್ಸ್ ಜತೆಯಲ್ಲಿ ಒಂದಷ್ಟು ಹಾಸ್ಯದ ಹೊನಲೂ ತುಂಬಿಕೊಂಡಿದ್ದು, ಒಂದೊಳ್ಳೆಯ ಮನರಂಜನೆಯ ಸಿನಿಮಾ ಇದಾಗಲಿದೆ ಎಂಬುದು ಚಿತ್ರತಂಡದ ಮಾತು. ಚಿತ್ರದಲ್ಲಿ ರಶ್ಮಿ ನಾಯಕಿಯಾಗಿದ್ದಾರೆ. ಉಳಿದಂತೆ ರಾಘವೇಂದ್ರ ರೈ, ಜಯಪ್ರಕಾಶ ಮಾವಿನಕುಳಿ, ಲಕ್ಷ್ಮಿಸ್ವರಾಜ್ಯ, ಸಂದೀಪ್ ಕುಮಾರ್ ಮುಂತಾದವರು ಅಭಿನಯಿಸಿದ್ದಾರೆ. ಸುನಾದ್ ಗೌತಮ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಕಿಶನ್ ನಾಯ್ಕ ಕ್ಯಾಮೆರಾ ಹಿಡಿದರೆ, ವೀಡಾ ಮೆಂಡೋನ್ಸ್ ಕತ್ತರಿ ಪ್ರಯೋಗಿಸಿದ್ದಾರೆ.
-ಉದಯವಾಣಿ