ಮುಂಬೈ

ಏಸು ಕ್ರಿಸ್ತ ತಮಿಳ್ ಹಿಂದು; ಹಿಮಾಲಯದಲ್ಲಿ ಕೊನೆಗಾಲ ಕಳೆದಿದ್ದರಂತೆ !

Pinterest LinkedIn Tumblr

Jesus Christ-700ಮುಂಬಯಿ : ವಿನಾಯಕ ದಾಮೋದರ (ವೀರ) ಸಾವರ್ಕರ್‌ ಇವರ ಹಿರಿಯ ಸಹೋದರ ಗಣೇಶ್‌ ದಾಮೋದರ (ಬಾಬಾರಾವ್‌) ಸಾವರ್ಕರ್‌ ಇವರು ‘ಜೀಸಸ್‌ ಕ್ರೈಸ್ಟ್‌’ ಎಂಬ ತಮ್ಮ ಪುಸ್ತಕದಲ್ಲಿ ಏಸು ಕ್ರಿಸ್ತರು ತಮಿಳ ಹಿಂದುವಾಗಿ ಜನಿಸಿದ್ದರು ಎಂದು ಹೇಳಿಕೊಂಡಿದ್ದಾರೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ಥಾಪಕರಲ್ಲಿ ಒಬ್ಬರಾಗಿರುವ ಇವರು 1946ರಲ್ಲಿ ಬರೆದಿದ್ದ ಈ ಮರಾಠಿ ಪುಸ್ತಕವನ್ನು ಮುಂಬಯಿ ಬಲಪಂಥೀಯ ಟ್ರಸ್ಟ್‌ ಇದೀಗ ಪುನರ್‌ ಮುದ್ರಿಸಿದೆ.

“ಕ್ರಿಸ್ತ ಪರಿಯ’ ಎಂಬ ಶೀರ್ಷಿಕೆಯ ಈ ಪುಸ್ತಕದಲ್ಲಿ ಏಸು ಕ್ರಿಸ್ತರು ಹುಟ್ಟಿನಿಂದ ಓರ್ವ ವಿಶ್ವಕರ್ಮ ಬ್ರಾಹ್ಮಣನಾಗಿದ್ದು ಕ್ರೈಸ್ತ ಮತವು ಹಿಂದೂ ಧರ್ಮದ ಒಂದು ಪಂಗಡವಾಗಿದೆ ಎಂದು ಹೇಳಲಾಗಿದೆ.

ಸ್ವಾತಂತ್ರ್ಯವೀರ ಸಾವರ್ಕರ್‌ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ಈ ಮರಾಠಿ ಪುಸ್ತಕವನ್ನು ಇದೇ ಫೆಬ್ರವರಿ 26ರಂದು ಬಿಡುಗಡೆ ಮಾಡಲಿದೆ.

ಕ್ರಿಸ್ತನು ಹುಟ್ಟಿದ ಸ್ಥಳ ಯಾವುದೆಂಬುದನ್ನು ಈ ಪುಸ್ತಕದಲ್ಲಿ ಎಲ್ಲಿಯೂ ಹೇಳಲಾಗಿಲ್ಲ. ಆದರೆ ಈಗಿನ ಪ್ಯಾಲೇಸ್ತೀನ್‌ ಮತ್ತು ಅರಬ್‌ ಭೂಪ್ರದೇಶಗಳು ಹಿಂದೂ ಭೂಮಿಯಾಗಿದ್ದು ಏಸು ಕ್ರಿಸ್ತರು ಭಾರತಕ್ಕೆ ಬಂದಿದ್ದರು ಎಂದು ಪುಸ್ತಕ ಹೇಳುತ್ತದೆ.

ಮಿಡ್‌ ಡೇ ವರದಿ ಮಾಡಿರುವ ಪ್ರಕಾರ ಈ ಪುಸ್ತಕವು ಈ ಕೆಳಗಿನ ಕುತೂಹಲಕಾರಿ ಅಂಶಗಳನ್ನು ಹೊರಗೆಡಹುತ್ತದೆ :

* ಏಸು ಕ್ರಿಸ್ತರು ಓರ್ವ ತಮಿಳ ಹಿಂದು

* ಏಸು ಕ್ರಿಸ್ತರ ನಿಜ ನಾಮ ಕೇಶವ ಕೃಷ್ಣ

* ಆತನ ಮಾತೃ ಭಾಷೆ ತಮಿಳು

* ಏಸು ಕ್ರಿಸ್ತರ ಮೈಬಣ್ಣ ಕಪ್ಪು

* ಏಸು ಕ್ರಿಸ್ತರ ಜನೇಯು (ಜನಿವಾರ ಧಾರಣೆ) ಆತನ 12ರ ಹರೆಯದಲ್ಲಿ ನಡೆದಿದೆ – ಬ್ರಾಹ್ಮಣ ಸಂಪ್ರದಾಯದ ಪ್ರಕಾರ.

* ಏಸು ಕ್ರಿಸ್ತರ ಕುಟುಂಬದವರು ಭಾರತೀಯ ಸಂಪ್ರದಾಯದ ಪ್ರಕಾರ ಬಟ್ಟೆ  ತೊಡುತ್ತಿದ್ದರು.

* ಕ್ರೈಸ್ತ ಮತವು ಪ್ರತ್ಯೇಕ ಧರ್ಮವಾಗಿರಲಿಲ್ಲ – ಅದು ಏಸು ಕ್ರಿಸ್ತರಿಂದ ಪರಿಚಯಿಸಲ್ಪಟ್ಟ  ಹಿಂದು ಧರ್ಮದ ಒಂದು ಸಂಪ್ರದಾಯವೇ ಆಗಿತ್ತು.

* ಯೋಗ ಮತ್ತು ಆಧ್ಯಾತ್ಮಿಕ ವಿಜ್ಞಾನವನ್ನು ಅರಿತಿದ್ದ ಎಸ್ಸೆನೀಸ್‌ ಧರ್ಮ ಸಂಪ್ರದಾಯದ ಜನರು ಶಿಲುಬೇಗೇರಿಸಲ್ಪಟ್ಟಿದ್ದ ಏಸು ಕ್ರಿಸ್ತರಿಗೆ ಗಿಡ ಮೂಲಿಕೆಗಳಿಂದ ಚಿಕಿತ್ಸೆ ನೀಡಿ ಆತನನ್ನು ರಕ್ಷಿಸಿದ್ದಾರೆ. ಇದರಿಂದಾಗಿ ಕ್ರಿಸ್ತನ ಪುನರುತ್ಥಾನವಾಗಿದೆ.

* ಏಸು ಕ್ರಿಸ್ತರು ತಮ್ಮ ಜೀವನದ ಕೊನೆಗಾಲವನ್ನು ಹಿಮಾಲಯದಲ್ಲಿ ಕಳೆದಿದ್ದಾರೆ.

* ಶಿಲುಬೆಗೇರಿದ ಅನಂತರದಲ್ಲಿ ಮತ್ತೆ ಆರೋಗ್ಯವನ್ನು ಮರಳಿ ಪಡೆದ ಏಸುಕ್ರಿಸ್ತರು ಹಿಮಾಲಯದ ತಪ್ಪಲಲ್ಲಿ ಮಠ ಸ್ಥಾಪಿಸಿದ್ದಾರೆ – ಬಹುಷಃ ಅದು ಕಾಶ್ಮೀರದಲ್ಲೇ ಇದ್ದಿರಬಹುದು; ಏಸು ಕ್ರಿಸ್ತರು ಅಲ್ಲಿ ಮೂರು ವರ್ಷ ಕಾಲ ಭಗವಾನ್‌ ಶಿವನನ್ನು ಆರಾಧಿಸಿದ್ದಾರೆ ಮತ್ತು ಶಿವ ದರ್ಶನವನ್ನು ಪಡೆದುಕೊಂಡಿದ್ದಾರೆ.

* ಏಸು ಕ್ರಿಸ್ತರು ತಮ್ಮ 49ನೇ ವಯಸ್ಸಿನಲ್ಲಿ ದೇಹ ತ್ಯಾಗ ಮಾಡಲು ನಿರ್ಧರಿಸಿದ್ದಾರೆ. ಯೋಗಾಸನದಲ್ಲಿ ಕುಳಿತುಕೊಂಡು ಧ್ಯಾನಸ್ಥರಾದ ಏಸು ಕ್ರಿಸ್ತರು ಆಳವಾದ ಸಮಾಧಿಗೆ ತಲುಪಿದ್ದಾರೆ.

* ಅರೇಬಿಯವು ಹಿಂದೂ ಭೂಮಿಯಾಗಿದ್ದು ಯಹೂದ್ಯರು ಹಿಂದುಗಳೇ ಆಗಿದ್ದಾರೆ.

* ಅರೆಬಿಕ್‌ನಲ್ಲಿ ಅನೇಕಾನೇಕ ಸಂಸ್ಕೃತ ಮತ್ತು ತಮಿಳು ಶಬ್ದಗಳಿವೆ.

* ಪ್ಯಾಲೇಸ್ತೀನ್‌ನ ಅರೆಬಿಕ್‌ ಭಾಷೆಯು ತಮಿಳು ಭಾಷೆಯ ಒಂದು ಸ್ವರೂಪವೇ ಆಗಿದೆ.

-ಉದಯವಾಣಿ

Write A Comment