‘ಯು ದಿ ಎಂಡ್ ಎ’– ಹಾಗೆಂದರೇನು ಎಂಬ ಪ್ರಶ್ನೆಗೆ ನಿರ್ದೇಶಕ ಕಂ ನಾಯಕ ನಟ ನಾಗ್ ನೇರವಾದ ಉತ್ತರ ಕೊಡಲಿಲ್ಲ. ಎಷ್ಟೆಲ್ಲ ವಿವರ ಕೊಟ್ಟರೂ ಕೊನೆಗೆ ತಿಳಿದಿದ್ದು ಇದು ಉಪೇಂದ್ರ ಅವರ ‘ಎ’ ಚಿತ್ರದ ಮುಂದುವರಿದ ಭಾಗ ಎಂಬುದಷ್ಟೇ!
ಮೂರು ವರ್ಷಗಳ ಹಿಂದೆ ಮುಹೂರ್ತ ನೆರವೇರಿಸಿಕೊಂಡಿದ್ದ ‘ಯು ದಿ ಎಂಡ್ ಎ’ ಅಂತೂ ಇಂತೂ ಈ ಶುಕ್ರವಾರ (ಫೆ. 19) ತೆರೆ ಕಾಣುತ್ತಿದೆ. ಬಹುದಿನಗಳ ಬಳಿಕ ಸುದ್ದಿಮಿತ್ರರಿಗೆ ಮುಖಾಮುಖಿಯಾದ ನಿರ್ದೇಶಕ ನಾಗ್ ಅವರಲ್ಲಿ ಸಿನಿಮಾ ಗೆಲ್ಲುವ ಭರವಸೆಯಿದೆ. ಹೊಸ ಬಗೆಯ ಚಿತ್ರಗಳು ಜನರನ್ನು ಸೆಳೆಯುತ್ತಿರುವ ಈ ಸಮಯದಲ್ಲಿ ತಮ್ಮ ಸಿನಿಮಾ ಕೂಡ ಆ ಸಾಲಿಗೆ ಸೇರುತ್ತದೆ ಎಂಬ ವಿಶ್ವಾಸದಲ್ಲಿ ಅವರಿದ್ದಾರೆ.
ಉಪೇಂದ್ರ ಅವರ ಅಭಿಮಾನಿಯಾಗಿರುವ ನಾಗ್, ಉಪ್ಪಿ ಚಿತ್ರಗಳಿಂದ ಸಾಕಷ್ಟು ಪ್ರಭಾವಿತರಾಗಿದ್ದಾರೆ. ಅದು ಸಿನಿಮಾದ ಪೋಸ್ಟರ್‌ಗಳಲ್ಲೂ ಕಾಣಿಸುತ್ತದೆ. ‘ಒಂದೊಂದು ದೃಶ್ಯವನ್ನು ಚಿತ್ರಿಸುವ ಮುನ್ನ ಸಾಕಷ್ಟು ಯೋಚಿಸಿದ್ದೇನೆ. ಅದನ್ನೆಲ್ಲ ನಾನು ಹೇಳುವುದಿಲ್ಲ. ನನ್ನ ಸಿನಿಮಾ ನೋಡಿದರೆ ಗೊತ್ತಾಗುತ್ತದೆ’ ಎಂದು ನಾಗ್ ಹೇಳಿಕೊಂಡರು. ಅವರ ಚಿತ್ರದ ಮುಕ್ಕಾಲು ಭಾಗ ಬೆಂಗಳೂರಿನಲ್ಲಿ, ಉಳಿದಿದ್ದನ್ನು ಗೋವಾದಲ್ಲಿ ಚಿತ್ರಿಸಲಾಗಿದೆ. ಮನಾಲಿಯ ಸೊಬಗನ್ನು ಒಂದು ಹಾಡಿನ ಮೂಲಕ ಸೆರೆಹಿಡಿಯಲಾಗಿದೆ ಎಂಬ ವಿವರ ನೀಡಿದರು.
ಇಬ್ಬರು ನಾಯಕಿಯರು ‘…ಎಂಡ್’ನಲ್ಲಿದ್ದಾರೆ. ಆ ಪೈಕಿ ಕುಮದಾಗೆ ಮೂರು ಶೇಡ್‌ಗಳ ಪಾತ್ರ ಸಿಕ್ಕಿದೆ. ‘ವಾಸ್ತವಕ್ಕೆ ಹತ್ತಿರವಾದ ಘಟನೆಗಳನ್ನು ಕುತೂಹಲ ಮೂಡಿಸುವಂತೆ ಹೆಣೆದ ನಾಗ್ ಅನುಭವಿ ನಿರ್ದೇಶಕರಂತೆ ಕಾಣುತ್ತಾರೆ’ ಎಂದು ಕುಮದಾ ಹೊಗಳಿದರು. ವೈದ್ಯೆ ಪಾತ್ರದಲ್ಲಿ ಕಾಣಿಸಿಕೊಂಡಿರುವ ಯಶಸ್ವಿನಿ ತಮ್ಮಲ್ಲಿನ ಅಭಿನಯ ಪ್ರತಿಭೆಯನ್ನು ಗುರುತಿಸಿದ್ದು ನಾಗ್ ಎಂದು ಕೃತಜ್ಞತೆ ಸಲ್ಲಿಸಿದರು.
ನಾಗ್ ಅವರ ಬಹುದಿನಗಳ ಕನಸನ್ನು ನನಸು ಮಾಡಲು ಬಂಡವಾಳ ಹಾಕಿರುವ ಪಾರ್ವತಿ, ‘ಸಿನಿಮಾ ಎಲ್ಲರಿಗೂ ಇಷ್ಟವಾಗುವ ಹಾಗೆ ಮೂಡಿಬಂದಿದೆ’ ಎಂದು ಹೊಗಳಿದರು. ಕಾರ್ಯಕಾರಿ ನಿರ್ಮಾಪಕ ಶ್ರೀಕಾಂತ್ ಮಾತನಾಡಿ, ಹೊಸತನದ ಹುಡುಕಾಟ ನಡೆಸುವ ನಾಗ್ ಅವರ ಯೋಜನೆಯನ್ನು ಸಾಕಾರಗೊಳಿಸಲು ಆರೇಳು ಜನರು ಹಣಕಾಸಿನ ನೆರವು ಕೊಟ್ಟಿರುವುದನ್ನು ಸ್ಮರಿಸಿದರು.
ಆರು ಹಾಡುಗಳಿಗೆ ಸಂಗೀತ ನೀಡಿರುವ ಮನುಶ್ರೀ, ಕಲಾವಿದ ಯಶ್‌ಪಾಲ್, ಸಂಕಲನಕಾರ ಅಕ್ಷಯ್ ಇತರರು ಮಾತನಾಡಿದರು. ಆರ್ಯ ಮೌರ್ಯ ವಿತರಣಾ ಸಂಸ್ಥೆ ಮೂಲಕ ರಾಜ್ಯದ ಐವತ್ತು ಚಿತ್ರಮಂದಿರಗಳಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ.