ಹೊಸದಿಲ್ಲಿ : “ಜನರು ದೇಶದ ವಿರುದ್ಧ ಮಾತನಾಡುವುದನ್ನು ಮತ್ತು ದೇಶದ ಹೆಸರು ಹಾಳು ಮಾಡುವುದನ್ನು ತಡೆಯಲು ದೇಶದ್ರೋಹದ ಕಾನೂನು ಅತೀ ಅಗತ್ಯ” ಎಂದು ಭಾರತದ ಮಾಜಿ ಸಾಲಿಸಿಟರ್ ಜನರಲ್ ಎನ್ ಸಂತೋಷ್ ಹೆಗ್ಡೆ ಅಭಿಪ್ರಾಯಪಟ್ಟಿದ್ದಾರೆ.
“ದೇಶದ ಸಂಸತ್ತಿನ ಮೇಲೆ ದಾಳಿ ನಡೆಸಿದ ಅಪರಾಧಕ್ಕಾಗಿ ನೇಣಿಗೆ ಹಾಕಲ್ಪಟ್ಟ ಅಫ್ಜಲ್ ಗುರುವಿನ ಪ್ರಕರಣವನ್ನು ನ್ಯಾಯಾಂಗದಿಂದ ನಡೆದಿರುವ ಕೊಲೆ ಎಂದು ಹೇಳಿ ದೇಶ ವಿರೋಧಿ ಘೋಷಣೆಗಳನ್ನು ಕೂಗುವುದು ಖಂಡಿತವಾಗಿಯೂ ದೇಶದ್ರೋಹ ಎನಿಸುತ್ತದೆ’ ಎಂಬುದಾಗಿ ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಾಧೀಶ ಸಂತೋಷ್ ಹೆಗ್ಡೆ ಹೇಳಿದರು.
“ದೇಶದ್ರೋಹದ ಕಾನೂನಿನಲ್ಲಿ ನನಗೆ ನಂಬಿಕೆ ಇದೆ. ಏಕೆಂದರೆ ನಾನೊಬ್ಬ ದೇಶಪ್ರೇಮಿ. ನಿಜವಾದ ದೇಶಪ್ರೇಮಿಗಳು ಎಂದೂ ದೇಶದ ವಿರುದ್ಧ ಘೋಷಣೆ ಕೂಗುವುದಿಲ್ಲ; ದೇಶದ ಹೆಸರನ್ನು ಹಾಳು ಮಾಡುವುದಿಲ್ಲ; ಸಂವಿಧಾನದತ್ತವಾಗಿರುವ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಹಲವಾರು ಮಾನದಂಡಗಳಿವೆ’ ಎಂದು ಹೆಗ್ಡೆ ಹೇಳಿದರು.
“ಈ ದೇಶದಲ್ಲಿ ಕೆಲವರು ಬೇರೆಯೇ ದೇಶಕ್ಕೆ ನಿಷ್ಠೆ ಹೊಂದಿದವರಿದ್ದಾರೆ ಮತ್ತು ದೇಶ ವಿರೋಧಿ ಗುಂಪುಗಳಿಗೆ ನಿಷ್ಠರಾಗಿರುವವರಿದ್ದಾರೆ; ಅವರು ವಿಭಿನ್ನವಾಗಿ ಚಿಂತಿಸುತ್ತಾರೆ. ದೇಶದಲ್ಲಿ ಪ್ರಜಾಸತ್ತೆ ಉಳಿಯಬೇಕಾದರೆ ದೇಶದ ವಿರುದ್ಧ ಮಾತನಾಡುವವರ ವಿರುದ್ಧ ಕಾನೂನು ರೀತ್ಯಾ ನಿರ್ಬಂಧಗಳು ಇರುವುದು ಅತೀ ಅಗತ್ಯ’ ಎಂದು ನಿವೃತ್ತ ಜಸ್ಟಿಸ್ ಹೆಗ್ಡೆ ಹೇಳಿದರು.
“ಬೇರೆ ಎಲ್ಲ ವಿಷಯಗಳನ್ನು ಮರೆತು ಬಿಡಿ; ನೀವು ಸರಕಾರವನ್ನು ಟೀಕಿಸುವರಿ; ಜನರನ್ನು ಟೀಕಿಸುವಿರಿ; ವ್ಯವಸ್ಥೆಯನ್ನು ಟೀಕಿಸುವಿರಿ; ಆದರೆ ದೇಶಪ್ರೇಮವನ್ನು ನೀವು ಟೀಕಿಸಕೂಡದು’ ಎಂದು ಹೆಗ್ಡೆ ನುಡಿದರು.
“ಕ್ರಿಯೆಯಲ್ಲಿ ವ್ಯಕ್ತವಾದ ಹೊರತು ಕೇವಲ ದೇಶ ವಿರೋಧಿ ಮಾತುಗಳು ದೇಶದ್ರೋಹ ಎನಿಸಲಾರವು’ ಎಂದು ಈ ಹಿಂದೆ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ತಾನು ಒಪ್ಪುವುದಿಲ್ಲ ಎಂದು ಹೆಗ್ಡೆ ಹೇಳಿದರು.
-ಉದಯವಾಣಿ