ಬೆಂಗಳೂರು: ಗನ್, ಬಾಂಬ್ ಹಿಡಿದು ಬರುವ ಉಗ್ರರಿಗಿಂತ ಸ್ಥಳೀಯ ಸಾಹಿತಿ ಹಾಗೂ ವಿಚಾರ ವಂತರ ಭಯೋತ್ಪಾದನೆ ಇತ್ತೀಚೆಗೆ ಹೆಚ್ಚು ಆತಂಕ ಮೂಡಿಸುತ್ತಿದೆ ಎಂದು ಹಿರಿಯ ಸಾಹಿತಿ ಪ್ರೊ. ಕಮಲಾ ಹಂಪನಾ ಬೇಸರ ವ್ಯಕ್ತಪಡಿಸಿದ್ದಾರೆ.
ವಿಕ್ರಂ ಪ್ರಕಾಶನ ಸಂಸ್ಥೆ ಪ್ರಕಾಶಿಸಿರುವ ಪತ್ರಕರ್ತೆ ಡಾ. ಸಂಧ್ಯಾ ಪೈ ಅವರ ಏಳು ಕೃತಿಗಳನ್ನು ಭಾನುವಾರ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು. ಬರಹಗಾರರಲ್ಲಿ ಗುಂಪುಗಳು ಸೃಷ್ಟಿಯಾಗುತ್ತಿವೆ. ಟಿಪ್ಪು ಪರವೇ ಅಥವಾ ವಿರೋಧವೇ ಎಂಬುದರಿಂದ ಹಿಡಿದು ಪ್ರತಿಯೊಂದಕ್ಕೂ ಗುಂಪು ಹುಟ್ಟಿಕೊಂಡಿವೆ. ಹಿರಿಯ ಸಾಹಿತಿಗಳೆ ಅಸಹಿಷ್ಣುತೆಗೆ ಕಾರಣರಾಗುತ್ತಿದ್ದಾರೆ. ನಾಮ್ಮದೆ ಸತ್ಯ ಎಂದು ಅತಿಯಾಗಿಸುವುದೆ ಭಯೋತ್ಪಾದನೆ ಆಗುತ್ತದೆ. ಸತ್ಯವಾದರೂ ಅದನ್ನು ಪ್ರಿಯವಾಗಿ ಹೇಳಬೇಕು ಎಂಬುದು ಬರವಣಿಗೆಯ ಆಶಯ ಆಗಬೇಕು ಎಂದರು.
‘ಪ್ರಿಯ ಓದುಗರೇ’ ಮೂಲಕ ಉತ್ತಮ ಓದುಗ ವೃಂದವನ್ನು ಸಂಧ್ಯಾ ಪೈ ಸೃಷ್ಟಿಸಿಕೊಂಡಿದ್ದಾರೆ. ಯಾರನ್ನೂ ನೋಯಿಸದೆ ಉತ್ತಮ ವಿಚಾರಗಳನ್ನು ಸಂವಹನ ಮಾಡಬಹುದು ಎಂಬುದನ್ನು ತೋರಿಸಿದ್ದಾರೆ. ಮಕ್ಕಳ ಮನಸಿನಲ್ಲಿ ಕಲ್ಮಶ ಮೂಡಿಸದ ಬರಹ ಕೊಡುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.
ನಮ್ಮ ಕಷ್ಟ ಸುಖಗಳಿಗೆ ಮನಸ್ಸೇ ಕಾರಣ. ಇಂದ್ರೀಯ ಹೇಳಿದಂತೆ ಕೇಳುವ ಬದಲು ಮನಸು ಹೇಳಿದಂತೆ ಇಂದ್ರೀಯಗಳನ್ನು ನಿಗ್ರಹಿಸಬೇಕು. ಆಗ ಸಮಾಜಕ್ಕೆ ಉತ್ತಮವಾದುದನ್ನು ನೀಡಲು ಸಾಧ್ಯ ಎಂದು ಹಿರಿಯ ವಿದ್ವಾಂಸ ಡಾ. ಪಾವಗಡ ಪ್ರಕಾಶ್ ರಾವ್ ಹೇಳಿದರು.
ಭಾರತೀಯ ಕೃತಿಕಾರ ನಿರಹಂಕಾರಿ ಆಗಿರುತ್ತಾನೆ. ಅದೇ ಪಾಶ್ಚಾತ್ಯದಲ್ಲಿ ಲೇಖಕನ ಹೆಸರೇ ದೊಡ್ಡದಿದ್ದು, ಕೃತಿ ಹೆಸರು ಚಿಕ್ಕದಾಗಿರುತ್ತದೆ. ನಮ್ಮಲ್ಲಿ ಇದಕ್ಕೆ ತದ್ವಿರುದ್ಧ. ಹಾಗೆಯೇ ಸಂಧ್ಯಾ ಪೈ ಕೂಡ ತಮ್ಮ ಬರವಣಿಗೆ ತಮ್ಮ ಹಕ್ಕಲ್ಲ, ತಾನು ನೆಪ ಮಾತ್ರ ಎಂದು ಹೇಳಿಕೊಂಡಿದ್ದಾರೆ. ಇದು ಬರಹಗಾರರ ಹೃದಯ ವೈಶಾಲ್ಯತೆ ತೋರಿಸುತ್ತದೆ ಎಂದರು.
ಕತ್ತಿ, ಮಚ್ಚಿನ ಚಿತ್ರಗಳು ಸಾಕು: ಉತ್ತಮ ಸಂದೇಶ ನೀಡುವ, ಚಿತ್ರಕತೆ ಯೋಗ್ಯ ಕೃತಿಗಳು ಕನ್ನಡದಲ್ಲಿವೆ. ಅವುಗಳನ್ನು ಚಿತ್ರ ಮಾಡಬೇಕೆಂದು ಚಿತ್ರ ನಿರ್ದೇಶಕ ಡಾ. ರಾಜೇಂದ್ರ ಸಿಂಗ್ ಬಾಬು ಹೇಳಿದರು.
ಬಾಹುಬಲಿ ಚಿತ್ರದ ಯಶಸ್ಸಿಗೆ
ತಂತ್ರಜ್ಞಾನವಷ್ಟೆ ಕಾರಣ, ಅದರಲ್ಲಿ ಕತೆ ಇರಲಿಲ್ಲ. ಪೂರಕ ತಂತ್ರಜ್ಞಾನ ಬಳಸುವತ್ತ ಚಿತ್ರೋದ್ಯಮ ಗಮನವಹಿಸಬೇಕು ಹಾಗೂ ಸಾಹಿತ್ಯದ ಓದನ್ನು ರೂಢಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ‘ಪ್ರಿಯ ಓದುಗರೇ..’ ಸರಣಿಯ ನಾಲ್ಕು ಪುಸ್ತಕ ಹಾಗೂ ಮಕ್ಕಳ ಕತೆಗಳ ಸಂಕಲನವಾದ ಕಲ್ಲು ಸಕ್ಕರೆಯ ಮೂರು ಪುಸ್ತಕಗಳು ಲೋಕಾರ್ಪಣೆಯಾದವು.
ಓದುಗರನ್ನು ಬದಲಾಯಿಸಬಹುದು
‘ಪ್ರಿಯ ಓದುಗರೆ’ ಅಂಕಣದ ಮೂಲಕ ವೈಚಾರಿಕ ವಿಷಯಗಳನ್ನು ಸಂಪಾದಕೀಯದಲ್ಲಿ ಬರೆಯಲು ಮುಂದಾದಾಗ ಕೆಲವರು ಹೆದರಿಸಿದ್ದರು. ಆದರೆ, ಹಠ ಹಿಡಿದು ಬರೆಯಲು ಆರಂಭಿಸಿದೆ. ಓದುಗರಿಂದ ಉತ್ತಮ ಸ್ಪಂದನೆ ಸಿಕ್ಕಿತು. ಅವರು ತೆರೆದ ಮನಸಿನಿಂದ ಎಲ್ಲವನ್ನೂ ಓದುವುದು ತಿಳಿಯಿತು ಎಂದು ಲೇಖಕಿ ಡಾ. ಸಂಧ್ಯಾ ಪೈ ಹೇಳಿದರು. ಕತೆ ಹಾಗೂ ಒಳ್ಳೆಯ ವಿಚಾರಗಳ ಮೂಲಕ ಮಕ್ಕಳು, ಯುವಕರನ್ನು ತಿದ್ದಬಹುದು. ಮಾಧ್ಯಮದಲ್ಲಿನ ನನ್ನ ಅನುಭವವೇ ಇದನ್ನು ಪುಷ್ಟೀಕರಿಸುತ್ತದೆ. ಇದರಿಂದ ಸಾರ್ಥಕತೆ ದೊರೆಯುತ್ತದೆ ಎಂದರು.