ಟೊರೊಂಟೊ: ಗಾಜಿನ ಸಣ್ಣ ತುಂಡುಗಳ ಮೇಲೆ ಅತ್ಯಂತ ತೆಳುವಾದ ಬೆಳ್ಳಿಯಂತಹ ಲೋಹದ ಲೇಪ ಹಾಕಿದರೆ ಸಾಕು, ಅದು ಟಿವಿಯ ದೊಡ್ಡ ಪರದೆಯಾಗಿ ಕೆಲಸಮಾಡಲಿದೆ. ಅಂದರೆ ನಿಮ್ಮ ಮನೆಯ ಗಾಜಿನ ಕಿಟಕಿ ದೊಡ್ಡ ಟಿವಿ ಪರದೆಯಾಗಿ ಕೆಲಸ ಮಾಡಲಿದೆ!
ಹೌದು, ಕಿಟಕಿ ಗಾಜು ಮತ್ತು ಇತರ ಗಾಜಿನ ವಸ್ತುಗಳು ಬೃಹತ್ ಥರ್ಮೊಸ್ಟಾರ್ಟ್ ಅಥವಾ ಟಿವಿ ಬಿಗ್ ಸ್ಕ್ರೀನ್ನಂತೆ ಕಾರ್ಯ ನಿರ್ವಹಿಸಬಲ್ಲವು ಎಂಬುದು ಹೊಸ ಸಂಶೋಧನೆಯಿಂದ ಇದೀಗ ಬೆಳಕಿಗೆ ಬಂದಿದೆ.
ತೆಳುವಾದ, ವೆಚ್ಚರಹಿತವಾದ, ಪಾರದರ್ಶಕ ವಸ್ತುಗಳನ್ನು ಬಳಸಿ ಪ್ರದರ್ಶನ ತಂತ್ರಜ್ಞಾನ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ವಿವಿಧ ವಸ್ತುಗಳ ಬಳಕೆ ವಿಚಾರವಾಗಿ ವಿಜ್ಞಾನಿಗಳು ನಿರಂತರ ಸಂಶೋಧನೆ ನಡೆಸುತ್ತಿದ್ದಾರೆ ಎಂದು ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಹಾಗೂ ಸಂಶೋಧನಾ ತಂಡದ ನೇತೃತ್ವ ವಹಿಸಿರುವ ಕೆನ್ನೆತ್ ಚವು ಹೇಳಿದ್ದಾರೆ.
ಕಿಟಕಿ ಗಾಜುಗಳಲ್ಲಿ ಇಲೆಕ್ಟ್ರಾನಿಕ್ ಸಾಮರ್ಥ್ಯನ್ನು ಸಂಯೋಜನೆಗೊಳಿಸುವ ಸಾಧ್ಯತೆ ಈ ಸಂಶೋಧನೆಯ ಅತ್ಯಂತ ಪ್ರಮುಖ ಪರಿಣಾಮವಾಗಲಿದೆ ಎಂದು ಅವರು ನುಡಿದರು.
ತಮ್ಮ ಸಂಶೋಧನೆಯನ್ನು ಗಾಜಿನ ಕಿಟಕಿಗಳ ಮೇಲೆ ಪ್ರಯೋಗಿಸುವ ನಿಟ್ಟಿನಲ್ಲಿ ಸಂಶೋಧಕರು ತಮ್ಮ ಪ್ರಯತ್ನ ಮುಂದುವರೆಸಲಿದ್ದಾರೆ ಎಂದು ಅವರು ಹೇಳಿದರು.