ನಮ್ಮ ಸಾಮಾಜಿಕ ಸಮಸ್ಯೆಗಳಿಗೆ ಪ್ರಜಾಪ್ರಭುತ್ವವಾಗಲೀ, ಕಮ್ಯುನಿಸಮ್ಮಾಗಲೀ, ಫ್ಯಾಸಿಸಮ್ಮಾಗಲೀ ಅಥವಾ ಇನ್ನಾವುದೇ ಇಸಂಗಳಾಗಲೀ ಪರಿಹಾರವಲ್ಲ. 10 ಸಾವಿರ ವರ್ಷಗಳಲ್ಲಿ ಈ ಇಸಂಗಳನ್ನಿಟ್ಟುಕೊಂಡು ಸಾಕಷ್ಟು ಪ್ರಯೋಗ ಮಾಡಿದ್ದಾಗಿದೆ. ಆ ಪ್ರಯೋಗ ಇನ್ನೂ ನಡೆಯುತ್ತಿದೆ. ನಮ್ಮ ಸಮಾಜವೇ “ಕಾಮಗಾರಿ ಪ್ರಗತಿಯಲ್ಲಿದೆ’ ಬೋರ್ಡ್ ನಡಿಯಿದೆ. ಹಾಗಾಗಿ ನಮ್ಮೆಲ್ಲಾ ಸಮಸ್ಯೆಗಳಿಗೆ ಯಾವುದಾದರೂ ಒಂದು ರಾಜಕೀಯ ಸಿದ್ಧಾಂತದಲ್ಲಿ ಪರಿಹಾರವಿದೆ ಎಂದು ಒಪ್ಪಲು ನಾನು ಸಿದ್ಧನಿಲ್ಲ.
ಅಭಿವ್ಯಕ್ತಿ ಸ್ವಾತಂತ್ರ್ಯವೆಂಬುದು ಪ್ರೀತಿಯಂತಲ್ಲ. ಪ್ರೀತಿಯಲ್ಲಿ ಯಾವತ್ತೂ ನೀವು ಕ್ಷಮೆ ಕೇಳಬೇಕಿಲ್ಲ. ಆದರೆ, ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ಕ್ಷಮೆ ಕೇಳಲು ಯಾವಾಗಲೂ ಸಿದ್ಧರಿರಬೇಕು. ಅಷ್ಟೇ ಅಲ್ಲ, ಅದಕ್ಕೂ ಮುನ್ನ ಎಷ್ಟು ಸಾಧ್ಯವೋ ಅಷ್ಟು ಸ್ಪಷ್ಟನೆ ನೀಡಲು ತಯಾರಿರಬೇಕು. ಹಾಗೆಯೇ ನೀವು ನಿಜವಾಗಿಯೂ ಕ್ಷಮೆ ಕೇಳುತ್ತಿದ್ದೀರಿ ಎಂದು ಬೇರೆಯವರಿಗೆ ನಂಬಿಕೆಯೂ ಬರಬೇಕು.
ನಾನೇಕೆ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಹೇಳುತ್ತಿದ್ದೇನೆ? ಒಬ್ಬ ಸಿನಿಮಾ ನಿರ್ಮಾತೃವಾಗಿ ಹಾಗೂ ಮುಕ್ತ ಚಿಂತಕನಾಗಿ ನನಗೆ ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದಿದೆ ಅನ್ನಿಸುತ್ತಿದೆಯೇ? ಅಥವಾ ಇತ್ತೀಚಿನ ಯಾವುದಾದರೂ ಘಟನೆಗಳು ನನ್ನ ಧ್ವನಿ ಕಿತ್ತುಕೊಳ್ಳಲು ಯತ್ನಿಸಿವೆಯೇ? ರಾಜಕೀಯ ಮತ್ತು ಧರ್ಮಗಳು ನನ್ನ ಮೇಲೆ ಸವಾರಿ ನಡೆಸುತ್ತಿವೆಯೇ? ನಿಜ ಹೇಳಬೇಕೆಂದರೆ ಹಾಗೇನೂ ಇಲ್ಲ. ಇದು ಪರಂಪರಾಗತವಾಗಿ ನನ್ನ ಪೂರ್ವಜರಿಂದ ನನಗೆ ಬಂದ ಕಳಕಳಿ ರೂಪದ ಬಳುವಳಿ. ಅದನ್ನಷ್ಟೇ ನಾನು ವ್ಯಕ್ತಪಡಿಸುತ್ತಿದ್ದೇನೆ.
ಇಷ್ಟಕ್ಕೂ ಕಮಲ್ ಹಾಸನ್‌ನ ಪ್ರಾಬ್ಲಿಂ ಏನು? ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದಿದೆ ಎಂಬ ರೀತಿಯಲ್ಲಿ ಇವನೇಕೆ ವರ್ತಿಸುತ್ತಿದ್ದಾನೆ?- ಹಾಗಂತ ನೀವು ಕೇಳಬಹುದು.
ಅಮೆರಿಕದಲ್ಲಿ ಸ್ವಾತಂತ್ರ್ಯ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಯಥೇತ್ಛವಾಗಿದೆ. ಅಲ್ಲಿ ನೀವು ಏನು ಬೇಕಾದರೂ ಹೇಳಬಹುದು ಅಥವಾ ಯಾರಿಗೆ ಬೇಕಾದರೂ ಬೈಯಬಹುದು. ಹಾಗಾದರೆ ಅದು ನಿಜವಾದ ಅಭಿವ್ಯಕ್ತಿ ಸ್ವಾತಂತ್ರ್ಯವೇ? ಅಥವಾ ಅಷ್ಟು ಸ್ವಾತಂತ್ರ್ಯ ಇದ್ದರೆ ಸಾಕೆ? ಲಂಡನ್ನಿನ ಹೈಡ್
ಪಾರ್ಕ್‌ನಲ್ಲಿ ಶತಮಾನಗಳ ಹಿಂದೆ ಇಂತಹುದೇ ಸ್ವಾತಂತ್ರ್ಯವಿತ್ತು.
ಅದಕ್ಕೆ “ಸೋಪ್ ಬಾಕ್ಸ್ ಒರೇಟರಿ’ ಅನ್ನುತ್ತಿದ್ದರು. ಅಲ್ಲಿ ನಿಂತು ಏನು ಬೇಕಾದರೂ ಮಾತನಾಡಬಹುದಿತ್ತು. ನಿಧಾನವಾಗಿ ಜಗತ್ತಿನಾದ್ಯಂತ ಇಂತಹ ಸ್ವಾತಂತ್ರ್ಯವನ್ನು ರಾಜಕೀಯವಾಗಿ ಹತ್ತಿಕ್ಕುತ್ತ ಬರಲಾಯಿತು.
ಸ್ವಾತಂತ್ರ್ಯದ ಮೇಲೆ ನಿಗಾ ಬೇಕು
ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಪ್ರಜಾಪ್ರಭುತ್ವವೇ ಮೂಲಾಧಾರ ಎಂದು ಎಲ್ಲರೂ ಹೇಳುತ್ತಾರೆ. ನನ್ನ ಪ್ರಕಾರ ಪ್ರಜಾಪ್ರಭುತ್ವವೆಂಬುದು ಅತ್ಯುತ್ತಮ ರಾಜಕೀಯ ವ್ಯವಸ್ಥೆಯೇನೂ ಅಲ್ಲ. ಹೀಗೆ ಹೇಳಿದರೆ ಬಹಳ ಜನರ ಮುಖ ಕೆಂಪಗಾಗುತ್ತದೆ. ನನ್ನ ರಾಜಕೀಯ ನಿಲುವು ಕೂಡ “ಕೆಂಪು’ ಎಂದು ಜನ ಅಂದುಕೊಂಡಿದ್ದಾರೆ. ಅದು ನಿಜವಲ್ಲ. ನನಗೆ ಯಾವುದೇ ಒಂದು ರಾಜಕೀಯ ಸಿದ್ಧಾಂತದಲ್ಲಿ ನಂಬಿಕೆಯಿಲ್ಲ. ಹೇಗೆ ಯಾವ ಧರ್ಮಕ್ಕೂ ನಾನು ನಿಷ್ಠನಲ್ಲವೋ ಹಾಗೆಯೇ ಯಾವುದೇ ರಾಜಕೀಯ ನಿಲುವಿಗೂ ನಿಷ್ಠನಲ್ಲ. ಆಹಾರ ಸರಪಳಿಯಲ್ಲಿ ಎತ್ತರದ ಸ್ಥಾನದಲ್ಲಿರಲು ಹೇಗೆ ನಾವು ಸಸ್ಯಾಹಾರ ಮತ್ತು ಮಾಂಸಾಹಾರ ಎರಡನ್ನೂ ಸೇವಿಸಬೇಕೋ ಹಾಗೇ ಇದೂ ಕೂಡ. ನನಗೆ ಧರ್ಮ ಇಲ್ಲದಿದ್ದರೂ ಯಾವುದಾದರೂ ಧರ್ಮದಲ್ಲಿ ಒಳ್ಳೆಯ ಸಂಗತಿಯಿದ್ದರೆ ಅದನ್ನು ನಾಚಿಕೆಯಿಲ್ಲದೆ ಸ್ವೀಕರಿಸುತ್ತೇನೆ.
ನನ್ನ ಪ್ರಕಾರ ನಮ್ಮ ಸಾಮಾಜಿಕ ಸಮಸ್ಯೆಗಳಿಗೆ ಪ್ರಜಾಪ್ರಭುತ್ವವಾಗಲೀ, ಕಮ್ಯುನಿಸಮ್ಮಾಗಲೀ, ಫ್ಯಾಸಿಸಮ್ಮಾಗಲೀ ಅಥವಾ ಇನ್ನಾವುದೇ ಇಸಂಗಳಾಗಲೀ ಅಂತಿಮ ಪರಿಹಾರವಲ್ಲ. 10 ಸಾವಿರ ವರ್ಷಗಳಲ್ಲಿ ಈ ಇಸಂಗಳನ್ನಿಟ್ಟುಕೊಂಡು ಸಾಕಷ್ಟು ಪ್ರಯೋಗ ಮಾಡಿದ್ದಾಗಿದೆ. ಆ ಪ್ರಯೋಗ ಇನ್ನೂ ನಡೆಯುತ್ತಲೇ ಇದೆ. ನಮ್ಮ ಸಮಾಜವೇ “ಕಾಮಗಾರಿ ಪ್ರಗತಿಯಲ್ಲಿದೆ’ ಬೋರ್ಡ್‌ನಡಿಯಿದೆ.
ಕೆಲ ವಿಜ್ಞಾನಿಗಳ ಪ್ರಕಾರ ಮನುಷ್ಯನ ಮನಸ್ಸು ಕೂಡ ನಿರ್ಮಾಣದ ಹಂತದಲ್ಲೇ ಇದೆ. ಹಾಗಾಗಿ ನಮ್ಮೆಲ್ಲಾ ಸಮಸ್ಯೆಗಳಿಗೆ ಯಾವುದಾದರೂ ಒಂದು ರಾಜಕೀಯ ಸಿದ್ಧಾಂತದಲ್ಲಿ ಪರಿಹಾರವಿದೆ ಎಂದು ಒಪ್ಪಲು ನಾನು ಸಿದ್ಧನಿಲ್ಲ. ಅಷ್ಟಾಗಿಯೂ ಪ್ರಜಾಪ್ರಭುತ್ವದಲ್ಲಿ ಮಾತ್ರ ಅಭಿವ್ಯಕ್ತಿ ಸ್ವಾತಂತ್ರ್ಯವಿರಲು ಸಾಧ್ಯ ಎಂದು ನನಗೆ ಒತ್ತಿ ಒತ್ತಿ ಹೇಳಿದವರಿದ್ದಾರೆ. ಬ್ಯಾಂಕ್ ಲಾಕರಿನಲ್ಲಿಟ್ಟರೆ ಹಣ ಸೇಫಾಗಿರಬಹುದು, ಆದರೆ ಸ್ವಾತಂತ್ರ್ಯ ಹಾಗಲ್ಲ. ಅದನ್ನು ರಕ್ಷಿಸಬೇಕೆಂದರೆ ನಿರಂತರವಾಗಿ ಅದರ ಮೇಲೆ ನಿಗಾ ಇಡಬೇಕು.
ನಾನು ಅಂತಹದ್ದೊಂದು ದೊಡ್ಡ ವಿಚಕ್ಷಣ ಸಮುದಾಯದಿಂದ ಬಂದವನು. ನಮ್ಮ ದೇಶ ಸೂಕ್ತವಾದ ರಾಜಕೀಯ ವ್ಯವಸ್ಥೆಯೊಂದನ್ನು ಸದಾ ಹುಡುಕುತ್ತಿದೆ. ಆದ್ದರಿಂದಲೇ ಸೆನ್ಸಾರ್ ಮಂಡಳಿಗೆ ಹೊಸ ರೂಪ ನೀಡುವ ಸಮಿತಿಗೆ ನನ್ನನ್ನು ಸದಸ್ಯನನ್ನಾಗಿ ಮಾಡಿದ್ದಾರೆ.
ರೂಪಾಂತರದ ಅವಸ್ಥೆಯಲ್ಲಿ ಜಗತ್ತು
ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಾವು ಬೇಕಾಬಿಟ್ಟಿಯಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಹಾಗೆಯೇ ಪ್ರಜಾಪ್ರಭುತ್ವವೆಂದರೆ ಅದರ ಪ್ಯಾಕೇಜಿನಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ತನ್ನಿಂತಾನೇ ಸೇರಿಬಿಡುವುದಿಲ್ಲ. ಹಿಟ್ಲರ್ ಅಧಿಕಾರಕ್ಕೆ ಬಂದಿದ್ದು ಕೂಡ ಪ್ರಜಾಪ್ರಭುತ್ವವನ್ನು ಬಳಸಿಕೊಂಡೇ. “ಓಹ್, ಆಗ ಜಗತ್ತು ಬಹಳ ಮುಗ್ಧವಾಗಿತ್ತು. ಈಗ ಅಂತಹ ದುಸ್ಸಾಹಸ ಸಾಧ್ಯವಿಲ್ಲ’ ಎಂದು ನೀವು ಹೇಳಬಹುದು. ಇತಿಹಾಸದಲ್ಲಿ ಸ್ವಲ್ಪ ಮುಂದೆ ಬಂದು ನೋಡೋಣ.
ನಮ್ಮ ದೇಶದಲ್ಲಿ ರಾಜಾರೋಷವಾಗಿ ಜಗತ್ತಿನ ಕಣ್ಣೆದುರೇ ತುರ್ತುಸ್ಥಿತಿ ಜಾರಿಗೊಳಿಸಿ ಜನರ ಧ್ವನಿಯನ್ನು ಅಡಗಿಸಲಿಲ್ಲವೇ? ಅಷ್ಟಾಗಿಯೂ, ಪ್ರಜಾಪ್ರಭುತ್ವವನ್ನು ಹತ್ತಿಕ್ಕುವ ಸಾಕಷ್ಟು ಪ್ರಯತ್ನಗಳ ನಡುವೆಯೇ ಅದನ್ನು ಇನ್ನೂ ಭದ್ರವಾಗಿರಿಸಿಕೊಂಡಿರುವ ನಮ್ಮ ದೇಶದ ಬಗ್ಗೆ ನನಗೆ ಹೆಮ್ಮೆಯಿದೆ. ಬ್ರಿಟನ್ ಅಥವಾ ಅಮೆರಿಕಕ್ಕೆ ಹೋಲಿಸಿದರೆ ನಮ್ಮದು ಶತಮಾನಗಳಷ್ಟು ಕಿರಿಯ ಪ್ರಜಾಪ್ರಭುತ್ವ. ಆದರೂ, ಅಮೆರಿಕದಲ್ಲಿ ಜಾರಿಗೆ ಬರುವುದಕ್ಕೂ 15 ವರ್ಷ ಮೊದಲೇ ನಮ್ಮಲ್ಲಿ ಎಲ್ಲರಿಗೂ ಮತದಾನದ ಹಕ್ಕು ಬಂತು. ವಾಸ್ತವವಾಗಿ ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಒಟ್ಟಾರೆ ಸ್ವಾತಂತ್ರ್ಯವನ್ನು ನಮಗೆಲ್ಲ ನೀಡಿದ್ದು ಪ್ರಜಾಪ್ರಭುತ್ವವಲ್ಲ.
ಬದಲಿಗೆ, ಅಭಿವ್ಯಕ್ತಿ ಸ್ವಾತಂತ್ರ್ಯದಿಂದಾಗಿ ಪ್ರಜಾಪ್ರಭುತ್ವ ರೂಪುಗೊಂಡಿತು. ಈಗ ನಮ್ಮ ದೇಶವಷ್ಟೇ ಅಲ್ಲ, ಇಡೀ ಜಗತ್ತು ರೂಪಾಂತರದ ಅವಸ್ಥೆಯಲ್ಲಿದೆ. ಜಗತ್ತಿಗೆ ಹೊಸ ಹೊಸ ಸವಾಲುಗಳು ಎದುರಾಗುತ್ತಿವೆ. ಅವು ಹೊಸ ಅವಕಾಶಗಳನ್ನು ಸೃಷ್ಟಿಸುತ್ತವೆ. ನನ್ನ ಜೀವಿತಾವಧಿಯಲ್ಲೇ ಬೇರೆ ಬೇರೆ ದೇಶಗಳ ನಡುವಿನ ಗಡಿಗಳು ನಿಧಾನವಾಗಿ ಅಳಿಸುವುದನ್ನು ನಾನು ನೋಡಿಯೇನು. ಆಗ ಎಲ್ಲರೂ ತಮ್ಮ ದೇಶದ ಪ್ರಜೆಗಳಾಗಿರುವುದರ ಬದಲು ಜಗತ್ತಿನ ಪ್ರಜೆಯಾಗುತ್ತಾರೆ. ಅದು ಆಗುವುದಕ್ಕೂ ಮೊದಲು ಅದೆಷ್ಟೋ ಕೂಗುಗಳು ಏಳಬೇಕು.
ಅಹಿಂಸೆ ಅತಿದೊಡ್ಡ ಶೌರ್ಯ
ನಾನು ಹೈಸ್ಕೂಲ್‌ಗೇ ಓದು ಬಿಟ್ಟವನು. ಆದರೂ ಮಹಾನ್ ವ್ಯಕ್ತಿಗಳ ವಲಯದಲ್ಲಿ ಓಡಾಡುತ್ತೇನೆ ಎಂದು ಮೊದಲೆಲ್ಲ ಹೆಮ್ಮೆಯಿಂದ ಬೀಗುತ್ತಿದ್ದೆ. ಕ್ರಮೇಣ ನನಗೆ ಓದಿನ ಮಹತ್ವ ಹಾಗೂ ಶಿಕ್ಷಣಸಂಸ್ಥೆಗಳ ಮಹತ್ವ ತಿಳಿಯತೊಡಗಿತು. ಈ ಶಿಕ್ಷಣ ಸಂಸ್ಥೆಗಳೂ ನಿರಂತರವಾಗಿ ಸುಧಾರಣೆಯಾಗುತ್ತಲೇ ಇರಬೇಕಾಗುತ್ತದೆ. ವೈಜ್ಞಾನಿಕ ಪದ್ಧತಿಯಲ್ಲಿ ಸರಿಯಾದ ಶಿಕ್ಷಣ ಪಡೆದು ಮೇಲೆ ಬಂದವರನ್ನು ನೋಡಿದಾಗಲೆಲ್ಲ ನನಗೆ ಹೊಟ್ಟೆ ಕಿಚ್ಚು.
ನಾನು ಮತ್ತೆ ಫಿಲಂ ಸ್ಕೂಲ್‌ಗೆ ಹೋಗುವ ಕನಸು ಕಾಣುತ್ತಿದ್ದೇನೆ ಎಂದು ಹೇಳಿದರೆ ಇವನು ಅತಿ ಆಡ್ತಾನೆ ಎಂದು ಜನರು ಆಡಿಕೊಳ್ಳುವುದಿದೆ. ಆದರಿದು ನೂರಕ್ಕೆ ನೂರು ನಿಜ. ಕಾಲ ಹಾಗೂ ಅನುಭವವೇ ತಲೆಯ ಮೇಲೆ ಮೊಟಕಿ ನನಗಿದನ್ನು ಕಲಿಸಿದೆ. ಚಿತ್ರರಂಗದಲ್ಲಿ ಕಳೆದ ಇಷ್ಟು ಕಾಲದಲ್ಲಿ ನಾನು ಒಂದಷ್ಟು ಸಣ್ಣಪುಟ್ಟ ಟ್ರಿಕ್‌ಗಳನ್ನಷ್ಟೇ ಕಲಿತಿದ್ದೇನೆ. ಆದರೆ, 25 ವರ್ಷದಲ್ಲಿ ನಾನು ಕಲಿತಿದ್ದನ್ನು ಫಿಲಂಸ್ಕೂಲ್‌ನಲ್ಲಿ ಐದಾರು ವರ್ಷದಲ್ಲಿ ಕಲಿಯಬಹುದಿತ್ತು. ಒಂದೇ ವ್ಯತ್ಯಾಸ ಏನೆಂದರೆ, ನಟನೆ ಕಲಿಯಲು ಹಣ ಖರ್ಚು ಮಾಡುವ ಅಗತ್ಯ ನನಗೆ ಬೀಳಲಿಲ್ಲ ಎಂಬುದೊಂದು ಫಾಯಿದೆ.
ಸಿನಿಮಾ ಕ್ಷೇತ್ರವೂ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಭಾರತ ದೊಡ್ಡದೊಂದು ಜಿಗಿತಕ್ಕೆ ಸಿದ್ಧವಾಗಿ ನಿಂತಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಭಾರತ ಈಗ ಪ್ರಬಲ ಸ್ಪರ್ಧಿ. 120 ಜನರ ದೇಸೀ ಮಾರುಕಟ್ಟೆಯ ಮೇಲಷ್ಟೇ ನಾವು ನಿಯಂತ್ರಣ ಸಾಧಿಸಿದರೆ ಸಾಲದು. ಜಾಗತಿಕ ನೀತಿಗಳನ್ನು ನಾವೇ ನಿರ್ಧರಿಸುವಂತಾಗಬೇಕು. ಇದನ್ನು ಈಗಾಗಲೇ ಮಾಡಿದ ಅನುಭವ ನಮಗಿದೆ. ನಾಗರಿಕ ಅಸಹಕಾರ ಎಂಬ ಐಡಿಯಾವನ್ನು ಜಗತ್ತಿಗೆ ಕಲಿಸಿದ್ದು ನಾವೇ. ಹೆನ್ರಿ ಡೇವಿಡ್ ಇದಕ್ಕೊಂದು ಥಿಯರಿ ಬರೆದಿರ ಬಹುದು, ಆದರೆ ಅದಕ್ಕೂ ಮುನ್ನ ಪ್ರಾಕ್ಟಿಕಲ್ಲಾಗಿ ಇದನ್ನು ಮಾಡಿದ್ದು ಭಾರತೀಯರು. ಆ ಹೆಗ್ಗಳಿಕೆ ಚಕ್ರವರ್ತಿ ರಾಜಗೋಪಾಲಾಚಾರಿ ಹಾಗೂ ಗಾಂಧೀಜಿಗೆ ಸಲ್ಲಬೇಕು. ಮಾರ್ಟಿನ್ ಲೂಥರ್ ಕಿಂಗ್ ಹಾಗೂ ನೆಲ್ಸನ್ ಮಂಡೇಲಾರಂಥವರಿಗೆ ಭಾರತದ ಹೋರಾಟ ಸ್ಫೂರ್ತಿಯಾಯಿತು.
ಈ ಎಲ್ಲ ನಾಯಕರೇ ನಾನಿಂದು ಯಾವುದೇ ಭಯವಿಲ್ಲದೆ, ಆದರೆ ಜವಾಬ್ದಾರಿಯುತವಾಗಿ, ಮಾತನಾಡಲು ಸಾಧ್ಯವಾಗುವಂತೆ ಮಾಡಿದ್ದಾರೆ. ಹಿಂಸೆಗಿಳಿಯದರೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೆದ್ದು ಅವರು ತೋರಿಸಿದ್ದಾರೆ.
ಹಿಂಸೆಯನ್ನು ಅಹಿಂಸೆಯಿಂದ ಎದುರಿಸಲು ಬಹಳ ಧೈರ್ಯ ಬೇಕು. ಅಹಿಂಸೆ ಅತಿದೊಡ್ಡ ಶೌರ್ಯ ಎಂದು ಗಾಂಧೀಜಿ ಹೇಳಿದ್ದು ಸುಮ್ಮನೇ ಅಲ್ಲ. ಬಹುಶಃ ಈ ಕಾರಣಕ್ಕೇ ಅಹಿಂಸೆಯ ಹರಿಕಾರನಾದ ಜೈನರ 24ನೇ ತೀರ್ಥಂಕರನನ್ನು ಮಹಾವೀರ ಎಂದು ಕರೆದಿರುವುದು.
ಕೇವಲ ಸಸ್ಯಾಹಾರಿಯಾದರೆ ಅಹಿಂಸೆ ಸಿದ್ಧಿಸುವುದಿಲ್ಲ. ಸಸ್ಯಾಹಾರಿ ಯಾಗಿದ್ದುಕೊಂಡು ಜನರನ್ನು ಅಮಾನವೀಯವಾಗಿ ನೋಡಿದರೆ ಏನು ಬಂತು? ಸದ್ಯಕ್ಕೆ ನಾವೆಲ್ಲ ಇಂತಹ ವಿಷಯಗಳ ಬಗ್ಗೆ ಎಚ್ಚರಿಕೆಯಿಂದ ಇರೋಣ. ಯಾವುದೇ ಸರ್ಕಾರ ಅಥವಾ ಧರ್ಮ ನಮ್ಮ ಮನಸ್ಸನ್ನು ಸಮಾಜದ ಬಗ್ಗೆ ಸಂಕುಚಿತವಾಗಿ ಯೋಚಿಸಲು ಪ್ರಚೋದಿಸುತ್ತದೆ ಎಂದಾದರೆ ಅದರ ಬಗ್ಗೆ ಹುಷಾರು.
ಕಮಲ್ ಹಾಸನ್
ಖ್ಯಾತ ಬಹುಭಾಷಾ ಚಿತ್ರನಟ
-ಉದಯವಾಣಿ