ಬೆಂಗಳೂರು, ಫೆ.12-ವೀರ ಯೋಧ ಹನುಮಂತಪ್ಪ ಕೊಪ್ಪದ ಅವರ ಪಾರ್ಥಿವ ಶರೀರದ ಮುಂದೆ ರೋದಿಸುತ್ತಿದ್ದ ಪತ್ನಿ ಮಾದೇವಿ, ಏನೂ ಅರಿಯದೆ ಪಿಳಿ ಪಿಳಿ ಕಣ್ಣು ಬಿಟ್ಟು ನೋಡುತ್ತಿದ್ದ ಮಗು ನೇತ್ರಾವತಿಯನ್ನು ನೋಡುತ್ತಿದ್ದವರ ಕಣ್ಣಾಲಿಗಳಲ್ಲಿ ನೀರು ಹರಿಯುತ್ತಿತ್ತು. ತನ್ನ ಗಂಡ ಬಾರದೂರಿಗೆ ಪಯಣ ಬೆಳೆಸಿದ್ದಾನೆಂಬ ಅರಿವು ಆತನ ಪತ್ನಿಗಿತ್ತು. ದುಃಖ ಉಮ್ಮಳಿಸಿ ಬರುತ್ತಿತ್ತು. ತನ್ನ ಸೀರೆಯ ಸೆರಗನ್ನು ತಲೆಯ ಮೇಲೆ ಹೊತ್ತು ಗೋಳಿಡುತ್ತಿದ್ದಳು. ಆದರೆ ಈ ಎಳೆಯ ಮಗುವಿಗೆ ಏನೊಂದೂ ತಿಳಿಯದೇ ಅಚ್ಚರಿಯಿಂದ ನೋಡುತ್ತಿತ್ತು. ತನ್ನಪ್ಪನನ್ನ ಹೀಗೇಕೆ ಮಲಗಿಸಿದ್ದಾರೆ, ಏನು ಮಾಡುತ್ತಿದ್ದಾರೆ , ಎಲ್ಲರೂ ಏಕೆ ಅಳುತ್ತಿದ್ದಾರೆ ಎಂದು ಕೂಸು ಕುತೂಹಲದಿಂದ ನೋಡುತ್ತಿತ್ತು. ಅಲ್ಲಿ ನೆರೆದಿದ್ದವರೆಲ್ಲರೂ ಈ ಕಂದಮ್ಮನ ಬಗ್ಗೆ ಮರುಕ ಪಡುತ್ತಿದ್ದರು.
ಮಗು ಹುಟ್ಟಿ ಒಂದೂವರೆ ವರ್ಷವಾಗಿಲ್ಲ. ಅಪ್ಪ ಈ ರೀತಿ ವೀರ ಮರಣವನ್ನಪ್ಪಿದ್ದಾನೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದರು. ತಾಯಿ – ಮಗುವಿನ ಪರಿಸ್ಥಿತಿಯನ್ನು ನೆನೆದು ಮಮ್ಮಲ ಮರುಗುತ್ತಿದ್ದರು.
ಮಗನನ್ನು ಕಳೆದುಕೊಂಡ ಬಸವ್ವನ ಗೋಳು ಮುಗಿಲು ಮುಟ್ಟಿತ್ತು. ಮೊಮ್ಮಗಳನ್ನು ಕಂಡು ಮತ್ತಷ್ಟು ದುಃಖ ಉಮ್ಮಳಿಸಿ ಬರುತ್ತಿತ್ತು. ಬೆಟ್ಟದೂರು ಜನರು ಸಮಾಧಾನಪಡಿಸಲು ಯತ್ನಿಸಿದಷ್ಟೂ ಅವರ ದುಃಖ ಇಮ್ಮಡಿಯಾಗುತ್ತಿತ್ತು. ಪುತ್ರ ಶೋಕಂ ನಿರಂತರಂ ಎಂಬುದು ಇದಕ್ಕೇ ಇರಬೇಕು.
ಯಾರು ಏನೇ ಹೇಳಿದರೂ ಮಗನನ್ನು ಕಳೆದುಕೊಂಡ ತಾಯಿಯ ದುಃಖ, ಆ ತಾಯಿಗೇ ಗೊತ್ತು. ಆದರೂ ಇಷ್ಟು ದೊಡ್ಡ ಪ್ರಮಾಣದ ಅಂತ್ಯ ಸಂಸ್ಕಾರ, ಗೌರವ ನನ್ನ ಮಗನಿಗೆ ಸಿಕ್ಕಿದೆ. ದೇಶಕ್ಕಾಗಿ ನನ್ನ ಮಗ ಪ್ರಾರ್ಣಾಪಣೆ ಮಾಡಿದ್ದಾನೆ ಎಂಬ ಹೆಮ್ಮೆಯೂ ಇದೆ ಎಂದು ಆ ತಾಯಿ ಹೇಳಿದರೂ,ಎದೆಯಾಳದ ನೋವು ಸಹಿಸಲು ಅಸಾಧ್ಯವಾದುದು. ಯಾವ ತಾಯಿಗೂ, ಯಾವ ಪತ್ನಿಗೂ, ಯಾವ ಮಗುವಿಗೂ ಇಂಥ ಪರಿಸ್ಥಿತಿ ಬರಬಾರದು.