ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಚಿತ್ರಗಳಲ್ಲಿ ವಿದೇಶಿ ಬೆಡಗಿಯರು ಸೊಂಟ ತಿರುಗಿಸಿ, ಪಡ್ಡೆಗಳಿಗೆ ಕಿಕ್ ಕೊಟ್ಟಿದ್ದಾರೆ. ಈಗ ಆ ಸಾಲಿಗೆ ಇಸ್ರೇಲ್ ಬೆಡಗಿಯೊಬ್ಬಳು ಹೊಸ ಸೇರ್ಪಡೆ. ಹೌದು, ಹೊಸಬರೇ ಸೇರಿ ಮಾಡಿರುವ “ಲೈಫು ಸೂಪರ್’ ಚಿತ್ರದಲ್ಲಿ ಇಸ್ರೇಲ್‌ನ ಸೂಪಿ ಸೈಯದ್ ಐಟಂ ಸಾಂಗ್‌ವೊಂದಕ್ಕೆ ಕಲರ್‌ಫುಲ್ ಸ್ಟೆಪ್ ಹಾಕಿದ್ದಾರೆ. ವಿನೋದ್‌ಕುಮಾರ್ ಈ ಚಿತ್ರದ ನಿರ್ದೇಶಕರು. ಇವರಿಗಿದು ಮೊದಲ ಚಿತ್ರ. ನಿರ್ಮಾಪಕ ವಿ.ಸಿ.ತಿಮ್ಮಾರೆಡ್ಡಿ ಅವರಿಗೂ ಚೊಚ್ಚಲ ನಿರ್ಮಾಣದ ಚಿತ್ರವಿದು.
ಅಷ್ಟೇ ಅಲ್ಲ, ಚಿತ್ರದಲ್ಲಿ ಹೀರೋ ಆಗಿ ನಟಿಸಿರುವ ಲಿಖೀತ್‌ಸೂರ್ಯ, ನಿರಂತ್, ನಾಯಕಿಯರಾದ ಮೇಘನಾ ಅಪ್ಪಯ್ಯ, ಅನುಪುವ್ವಮ್ಮ ಇವರಿಗೂ ಇದು ಮೊದಲ ಸಿನಿಮಾ. ಈ ಚಿತ್ರದ ಐಟಂ ಸಾಂಗ್‌ಗೆ ಇಸ್ರೇಲ್‌ನ ಸೂಪಿಸೈಯದ್ ಅವರಿಂದ ಹೆಜ್ಜೆ ಹಾಕಿಸಿದ್ದಾರೆ ನಿರ್ದೇಶಕರು. ಇದೇ ಮೊದಲ ಸಲ ಕನ್ನಡ ಚಿತ್ರದಲ್ಲಿ ಐಟಂ ಸಾಂಗ್‌ಗೆ ಹೆಜ್ಜೆ ಹಾಕಿರುವ ಸೂಪಿ ಸೈಯದ್‌ಗೆ ಚಿತ್ರರಂಗ ಹೊಸದೇನಲ್ಲ. ಈಗಾಗಲೇ ತೆಲುಗಿನ ಕೆಲವು ಚಿತ್ರಗಳಲ್ಲೂ ಸೂಪಿಸೈಯದ್ ಐಟಂ ಹಾಡುಗಳಿಗೆ ಸೊಂಟ ಬಳುಕಿಸಿದ್ದಾರೆ. ಅಂದಹಾಗೆ, ಕಂಠೀರವ ಸ್ಟುಡಿಯೋದಲ್ಲಿ ಹಾಕಲಾಗಿದ್ದ ಮೂರು ಸೆಟ್‌ಗಳಲ್ಲಿ ಮೂರು ದಿನಗಳ ಕಾಲ ಸೂಪಿ ಸೈಯದ್ ಐಟಂ ಸಾಂಗ್‌ಗೆ ಕುಣಿದು ಕುಪ್ಪಳಿಸಿದ್ದಾರೆ.
ಚೇತನ್‌ದುರ್ಗ ಬರೆದ “ಲೈಫು ಸೂಪರ್…’ ಎಂಬ ಟೈಟಲ್ ಟ್ರ್ಯಾಕ್‌ಗೆ ಸೂಪಿ ಸೈಯದ್ ಜತೆಯಲ್ಲಿ ನಾಯಕ ಲಿಖಿತ್‌ಸೂರ್ಯ ಕೂಡ ಸ್ಟೆಪ್ ಹಾಕಿದ್ದಾರೆ. ಈ ಹಾಡನ್ನು ತೆಲುಗಿನ “ಗಬ್ಬರ್‌ಸಿಂಗ್’ ಮತ್ತು “ಪವರ್’ ಸೇರಿದಂತೆ ದೊಡ್ಡ ಸ್ಟಾರ್ ಚಿತ್ರಗಳಿಗೆ ನೃತ್ಯ ಸಂಯೋಜಿಸಿರುವ ಗಣೇಶ್‌ಸ್ವಾಮಿ ಸಂಯೋಜಿಸಿದ್ದಾರೆ. ಉಳಿದಂತೆ ನೃತ್ಯ ನಿರ್ದೇಶಕ ಕಲೈ ಕೂಡ “ಬಿಲ್ಲು ಆಮೇಲೆ ನೋಡೋಣ ಕೊಟುºಡು ಬೀರು..’ ಸೇರಿದಂತೆ ಎರಡು ಹಾಡುಗಳಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ.
ನಿರ್ದೇಶಕ ವಿನೋದ್‌ಕುಮಾರ್ ಹೇಳುವಂತೆ, ಇದು ಪಕ್ಕಾ ಪೊಲಿಟಿಕಲ್ ಥ್ರಿಲ್ಲರ್ ಅಂತೆ. ಪತ್ರಿಕೆಯಲ್ಲಿ ಬಂದ ಒಂದು ವರದಿ ಇಟ್ಟುಕೊಂಡು ಈ ಚಿತ್ರದ ಕಥೆ ಹೆಣೆದು, ಅದಕ್ಕೊಂದು ರೂಪ ಕೊಟ್ಟಿದ್ದಾರಂತೆ ನಿರ್ದೇಶಕ ವಿನೋದ್‌ಕುಮಾರ್. 2013 ರಲ್ಲಿ ನಡೆದ ಎಲೆಕ್ಷನ್ ಚಿತ್ರದ ಕಥಾವಸ್ತು ಅನ್ನುವ ಅವರು, “ಬಳ್ಳಾರಿಯಿಂದ ಬೆಂಗಳೂರಿಗೆ ಸಾಗುವ ಗಣಿದಣಿಗಳ ಬ್ಲಾಕ್‌ಮನಿ ಸುತ್ತ ಚಿತ್ರ ನಡೆಯುತ್ತೆ. ಬ್ಲಾಕ್‌ಮನಿ ಬರುತ್ತಿರುವ ವಿಷಯ ಇಬ್ಬರು ಹುಡುಗರಿಗೆ ತಿಳಿದು, ಆ ಹಣವನ್ನು ಹೇಗಾದರೂ ಮಾಡಿ ಪಡೆಯಬೇಕು ಅಂತ ಸ್ಕೆಚ್ ಹಾಕ್ತಾರೆ. ಅವರಿಗೆ ಆ ಹಣ ಸಿಗುತ್ತಾ ಇಲ್ಲವಾ ಅನ್ನೋದೇ ಚಿತ್ರದ ಕಥಾಹಂದರ’ಎಂಬುದು ನಿರ್ದೇಶಕರ ಮಾತು.
ಇನ್ನು, ಕೆಲ ಸಿನಿಮಾಗಳಲ್ಲಿ ನಿರ್ದೇಶನದ ವಿಭಾಗದಲ್ಲಿ ಕೆಲಸ ಮಾಡುತ್ತಲೇ ಕಥೆ ಬರೆದುಕೊಂಡಿದ್ದ ಲಿಖೀತ್‌ಸೂರ್ಯ ನಿರ್ದೇಶಕರಾಗಬೇಕು ಅಂದುಕೊಂಡಿದ್ದವರು. ಆದರೆ, ಅವರೇ ಈ ಚಿತ್ರದ ಹೀರೋ ಆಗಿದ್ದಾರೆ. ಬ್ಲಾಕ್‌ಮನಿಗೆ ಸ್ಕೆಚ್ ಹಾಕೋದೇ ಚಿತ್ರದ ಹೈಲೈಟ್ ಅನ್ನುವ ಲಿಖೀತ್‌ಸೂರ್ಯಗೆ ಅವರ “ಲೈಫ್’ ಮೇಲೆ ಸಾಕಷ್ಟು ವಿಶ್ವಾಸವಿದೆಯಂತೆ. ಇನ್ನು, ಕ್ಯಾಮೆರಾಮೆನ್ ಸುಜಯ್‌ಕುಮಾರ್‌ಗೆ ಇದು ಮೊದಲ ಚಿತ್ರ. ಜ್ಯೂಡ ಸ್ಯಾಂಡಿ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ರಂಗಾಯಣ ರಘು, ಅಚ್ಯುತ್‌ಕುಮಾರ್, ರಾಕ್‌ಲೈನ್ ಸುಧಾಕರ್, ವಿಜಯ್ ಚೆಂಡೂರ್, ಬಳ್ಳಾರಿ ಮಂಜು, ಸಂಗೀತ, ಅರುಣ ಬಾಲರಾಜ್ ಇತರರು ನಟಿಸಿದ್ದಾರೆ. ಈ ವಾರ ಆಡಿಯೋ ರಿಲೀಸ್ ಆಗುತ್ತಿದ್ದು, ಮಾರ್ಚ್‌ನಲ್ಲಿ ಎಲ್ಲವೂ ಅನ್ಕೊಂಡಂಗಾದ್ರೆ ಲೈಫು ಸೂಪರ್ ತೆರೆಗೆ ಬರಲಿದೆ.
-ಉದಯವಾಣಿ