ಕರ್ನಾಟಕ

2ನೇ ಹಂತದ ನಾಮಪತ್ರ ಸಲ್ಲಿಕೆಗೆ ನೂಕುನುಗ್ಗಲು : ಹಳ್ಳಿಗಳಲ್ಲಿ ಶಕ್ತಿಪ್ರದರ್ಶನ

Pinterest LinkedIn Tumblr

electionಬೆಂಗಳೂರು, ಫೆ.8-ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯ್ತಿ ಚುನಾವಣೆ ಕಾವು ಏರತೊಡಗಿದೆ.  ಎರಡನೆ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಸಲು ಅಂತಿಮ ದಿನವಾದ  ಇಂದು,  ತಮ್ಮ ಅಪಾರ ಬೆಂಬಲಿಗರೊಂದಿಗೆ ಶಕ್ತಿ ಪ್ರದರ್ಶನದ ಮೂಲಕ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ಇಂದು ಮಧ್ಯಾಹ್ನ ಮೂರು ಗಂಟೆಗೆ ನಾಮ ಪತ್ರ ಸಲ್ಲಿಸಲು ಕೊನೆ ಕ್ಷಣವಾದ್ದರಿಂದ ಹಲವು ಕಡೆಗಳಲ್ಲಿ ಮೂರು ಗಂಟೆಯೊಳಗೆ ಬಂದ ಅಭ್ಯರ್ಥಿಗಳಿಗೆ ಟೋಕನ್ ವಿತರಿಸಿದ ಚುನಾವಣಾ ಅಧಿಕಾರಿಗಳು, ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಂದುವರೆಸಿದ್ದರು.  ಬಹುತೇಕ ಕಡೆಗಳಲ್ಲಿ ಕಡೆಯ ಕ್ಷಣದವರೆಗೂ ಚುನಾವಣಾಧಿಕಾರಿಗಳ ಕಚೇರಿಗಳು ಕಿಕ್ಕಿರಿದು ತುಂಬಿದ್ದವು.

ಅಮವಾಸ್ಯೆ ದಿನವಾದ್ದರಿಂದ ಹಲವು ಕಡೆ  ದೇಗುಲಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ತಮ್ಮ ಕುಟುಂಬದವರೊಂದಿಗೆ ಆಗಮಿಸಿ ನಾಮ ಪತ್ರ ಸಲ್ಲಿಸಿದ್ದು ವಿಶೇಷವಾಗಿತ್ತು.

ಎರಡನೆ ಹಂತದ 15 ಜಿಲ್ಲೆಗಳಲ್ಲಿ  ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದ್ದರಿಂದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಚುನಾವಣಾ ಅಧಿಕಾರಿಗಳ ಕಚೇರಿಗಳ ಮುಂದೆ ನೂಕು ನುಗ್ಗಲು ಉಂಟಾಗಿತ್ತು.
ಜಿಲ್ಲಾ ,ತಾಲ್ಲೂಕು ಪಂಚಾಯ್ತಿ ಚುನಾವಣೆಗೆ ಅಭ್ಯರ್ಥಿಗಳು ಕೊನೆ ಘಳಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಾಮಪತ್ರ ಸಲ್ಲಿಸಿದರು. ಟಿಕೆಟ್ ಖಚಿತವಾಗದ, ಬಿ ಫಾರಂ ಸಿಗದವರು ಕೊನೆ ಕ್ಷಣದವರೆಗೂ ಪರದಾಡಿ, ಸ್ವತಂತ್ರವಾಗಿ ಉಮೇದುವಾರಿಕೆ ಸಲ್ಲಿಸಿದ್ದಾರೆ.

ಎರಡನೆ ಹಂತದ 15 ಜಿಲ್ಲೆಗಳಲ್ಲಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಇಂದು ಮುಕ್ತಾಯಗೊಂಡಿದೆ. ನಾಳೆ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಫೆ.11ರವರೆಗೂ ಉಮೇದುವಾರಿಕೆ ಹಿಂದಕ್ಕೆ ಪಡೆಯಲು ಅವಕಾಶವಿದೆ.
ಮೊದಲ ಹಂತದ 15 ಜಿಲ್ಲೆಗಳಲ್ಲಿ ಪ್ರಚಾರ ಭರಾಟೆ ಜೋರಾಗಿದ್ದು, ತಾರಕಕ್ಕೇರಿದೆ. ಎರಡನೆ ಹಂತದಲ್ಲೂ ಈಗಾಗಲೆ ಪ್ರಚಾರ ಶುರುವಾಗಿದೆ. ಎರಡೂ ಹಂತಗಳಲ್ಲೂ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳ ಅಭ್ಯರ್ಥಿಗಳ ಪರವಾಗಿ ಪ್ರಚಾರದ ಆರ್ಭಟ ನಡೆಯುತ್ತಿದೆ.

ರಾಜಕೀಯ ಪಕ್ಷಗಳ ನಾಯಕರು, ಮುಖಂಡರು ತಮ್ಮ ತಮ್ಮ ಪಕ್ಷಗಳ ಸಾಧನೆ ಹೇಳಿ ಮತ ಯಾಚಿಸುವುದರ ಜತೆಗೆ ಎದುರಾಳಿ ಅಭ್ಯರ್ಥಿಗಳ ಪಕ್ಷಗಳ ಮೇಲೆ ವಾಗ್ದಾಳಿ ಮಾಡುತ್ತಿದ್ದಾರೆ. ಗ್ರಾಮೀಣ ಭಾಗದ ಎಲ್ಲೆಡೆ ಮೈಕಾಸುರನ ಹಾವಳಿಯದ್ದೇ ಕಾರುಬಾರು. ಪ್ರಚಾರ ಹಾಗೂ ಮತಯಾಚನೆ ರಂಗೇರತೊಡಗಿದೆ. ಪ್ರಚಾರದ ವೇಳೆ ಕರಪತ್ರ ನೀಡಿ ಮತದಾರರನ್ನು ಆಕರ್ಷಿಸಲಾಗುತ್ತಿದೆ. ಒಂದೆಡೆ ಪ್ರಚಾರದ ಮೂಲಕ ಮತ ಯಾಚಿಸುತ್ತಿದ್ದರೆ, ಮತ್ತೊಂದೆಡೆ ಭೂರಿ ಭೋಜನ, ಮದ್ಯದ ಸಮಾರಾಧನೆ, ನಾನಾ ರೀತಿಯ ಉಡುಗೊರೆಗಳ ಆಮಿಷವೊಡ್ಡುವ ಮೂಲಕ ಮತದಾರರ ಮನಗೆಲ್ಲುವ ಪ್ರಯತ್ನ ಮಾಡಲಾಗುತ್ತಿದೆ.  ಅಲ್ಲದೆ, ಸಾಮಾಜಿಕ ಜಾಲ ತಾಣಗಳನ್ನು ಕೂಡ ಪ್ರಚಾರಕ್ಕೆ ಬಳಸಿಕೊಳ್ಳಲಾಗಿದೆ. ಮೊದಲ ಹಂತದ ಚುನಾವಣೆ ನಡೆಯುವ ಕಡೆಗಳಲ್ಲಿ ಪ್ರಚಾರ ಮಾತ್ರ ನಡೆಯುತ್ತಿದ್ದರೆ, ಎರಡನೆ ಹಂತದ ಚುನಾವಣೆ ನಡೆಯುವ ಕಡೆಗಳಲ್ಲಿ ಬಂಡಾಯಗಾರರ ಮನವೊಲಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ.

ಪ್ರಬಲವಾಗಿರುವ ಸ್ವತಂತ್ರ ಅಭ್ಯರ್ಥಿಗಳು ಹಾಗೂ ವಿವಿಧ ಪಕ್ಷಗಳ ಮುಖಂಡರಿಗೆ ಗೆಲ್ಲಲೇ ಬೇಕೆಂದಿರುವ ಅಭ್ಯರ್ಥಿಗಳು ಗಾಳ ಹಾಕಿ ಬೆಂಬಲ ಪಡೆಯುವ ಯತ್ನ ಮಾಡುತ್ತಿದ್ದಾರೆ. ಒಟ್ಟಾರೆ ಗ್ರಾಮೀಣ ಭಾಗದಲ್ಲಿ ಪಂಚಾಯ್ತಿ ಚುನಾವಣೆ ಕಳೆಗಟ್ಟಿದ್ದು, ಮತದಾರರ ಓಲೈಕೆ ನಾನಾ ರೀತಿಯಲ್ಲಿ ನಿರಂತರವಾಗಿ ನಡೆಯುತ್ತಿದೆ.

Write A Comment