ಕನ್ನಡಕ್ಕೆ ಈಗಾಗಲೇ ಎಲ್ಲಾ ಭಾಷೆಯ ನಟಿಮಣಿಗಳು ಬಂದು ಹೋಗಿದ್ದಾರೆ. ಕೆಲವರು ಇಲ್ಲಿ ಗಟ್ಟಿ ನೆಲೆ ಕಂಡುಕೊಂಡಿದ್ದಾರೆ. ಇನ್ನು ಕೆಲವರು ಆ ಪ್ರಯತ್ನದಲ್ಲಿದ್ದಾರೆ. ಈಗ ಆ ಸಾಲಿಗೆ ಗುಜರಾತಿ ಬೆಡಗಿ ಪೂರ್ವಿ ಅಂಥದ್ದೊಂದು ಪ್ರಯತ್ನದಲ್ಲಿದ್ದಾರೆ. ಅಂದಹಾಗೆ, ಈ ಪೂರ್ವಿ, “ಪ್ರೀತಿ ಕಿತಾಬು’ ಚಿತ್ರಕ್ಕೆ ಎರಡನೇ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ದುನಿಯಾ ರಶ್ಮಿ ಆ ಚಿತ್ರದ ನಾಯಕಿ ಎಂಬುದು ಎಲ್ಲರಿಗೂ ಗೊತ್ತು. ಅವರ ಜತೆಯಲ್ಲಿ ಪೂರ್ವಿ ಕೂಡ ಎರಡನೇ ನಾಯಕಿ. ಸದ್ಯಕ್ಕೆ ಕನ್ನಡದಲ್ಲೇ ಗಟ್ಟಿನೆಲೆ ಕಂಡುಕೊಳ್ಳುವ ಉತ್ಸಾಹದಲ್ಲಿದ್ದಾರೆ. ಅದಕ್ಕೆ ಕಾರಣ, ಅವರ ಚೊಚ್ಚಲ ಚಿತ್ರ “ಪ್ರೀತಿ ಕಿತಾಬು’ ಮೇಲಿರುವ ವಿಶ್ವಾಸವಂತೆ.
ವಿಠಲ್‌ಭಟ್ ಅವರ ಮೊದಲ ನಿರ್ದೇಶನದ ಈ ಚಿತ್ರ ಪೂರ್ವಿಗೂ ಕನ್ನಡದಲ್ಲಿ ಮೊದಲ ಪ್ರಯತ್ನ. ಮಾಡೆಲಿಂಗ್ ಕ್ಷೇತ್ರದಲ್ಲಿ ಒಂದಿಷ್ಟು ಅನುಭವ ಪಡೆದುಕೊಂಡಿದ್ದ ಪೂರ್ವಿ, ಆ ಕ್ಷೇತ್ರದಲ್ಲಿ ಕ್ಯಾಟ್‌ವಾಕ್ ಮಾಡಿ ತಕ್ಕಮಟ್ಟಿಗೆ ಸುದ್ದಿಯಾದವರು. ಕ್ಯಾಟ್‌ವಾಕ್ ಮಾಡುತ್ತಲೇ ಅಲ್ಲಿಂದ ನೇರವಾಗಿ ಸಿನಿಮಾರಂಗಕ್ಕೂ ಎಂಟ್ರಿ ಕೊಟ್ಟವರು. ಗುಜರಾತ್ ಮೂಲದ ಹುಡುಗಿಯಾಗಿದ್ದರಿಂದ ಪೂರ್ವಿಗೆ ಕನ್ನಡ ಭಾಷೆ ಅಷ್ಟಕ್ಕಷ್ಟೇ. ಆದರೆ, “ಪ್ರೀತಿ ಕಿತಾಬು’ ಚಿತ್ರಕ್ಕೆ ಎರಡನೇ ನಾಯಕಿಯಾಗಿ ಆಯ್ಕೆಯಾದ ಮೇಲೆ, ಚಿತ್ರೀಕರಣ ಮುಗಿಯೋ ಹೊತ್ತಿಗೆ ಕನ್ನಡ ಭಾಷೆಯನ್ನು ಸುಲಲಿತವಾಗಿ ಕಲಿತರು. ಅಲ್ಲಿಗೆ ಕನ್ನಡದಲ್ಲೇ ಉಳಿದು ಬೆಳೆಯುವಾಸೆಯನ್ನೂ ಇಟ್ಟುಕೊಂಡರು.
ಚಿತ್ರದಲ್ಲಿ ಪೂರ್ವಿ ನಾಯಕನ ಸೋದರತ್ತೆ ಮಗಳಾಗಿ ಮತ್ತು ನಾಯಕಿ ದುನಿಯಾ ರಶ್ಮಿಗೆ ಬಾಲ್ಯ ಸ್ನೇಹಿತೆಯಾಗಿ ಕಾಣಿಸಿಕೊಂಡಿದ್ದಾರೆ. ಪೂರ್ವಿ ನಿರ್ವಹಿಸಿರುವ ನಿಷಾ ಎಂಬ ಪಾತ್ರ “ಪ್ರೀತಿ ಕಿತಾಬು’ ಚಿತ್ರದ ಹೈಲೈಟ್ ಎಂಬುದು ನಿರ್ದೇಶಕ ವಿಠಲ್‌ಭಟ್ ಮಾತು. ಚಿತ್ರದ ಆ ಪಾತ್ರಕ್ಕೆ ಪೂರ್ವಿ ಅವರು ಸಾಕಷ್ಟು ತರಬೇತಿ ಪಡೆದುಕೊಂಡಿರುವುದು ವಿಶೇಷ. ನಿರ್ದೇಶಕ ವಿಠಲ್ ಭಟ್ ಸುಮಾರು ಒಂದು ತಿಂಗಳ ಕಾಲ ಅಭಿನಯ ತರಬೇತಿ ನೀಡುವ ಮೂಲಕ ಪೂರ್ವಿ ಅವರನ್ನು ಕ್ಯಾಮೆರಾ ಮುಂದೆ ತಂದು ನಿಲ್ಲಿಸಿದ್ದಾರೆ. ಅಂತೂ ಇಂತೂ ಗುಜರಾತಿ ಹುಡುಗಿಯೊಬ್ಬಳು ಕನ್ನಡ ಚಿತ್ರದಲ್ಲಿ ನಟಿಸುವುದರ ಜತೆಯಲ್ಲಿ ಕನ್ನಡವನ್ನು ಸ್ಪಷ್ಟವಾಗಿ ಮಾತಾಡುವುದು, ಓದುವುದು ಮತ್ತು ಬರೆಯುವುದನ್ನೂ ಕಲಿತಿದ್ದಾರೆ ಎಂಬುದೇ “ಪ್ರೀತಿ ಕಿತಾಬು’ ಚಿತ್ರದ ಹೆಗ್ಗಳಿಕೆ.
ಅಂದಹಾಗೆ, ನೆಹಾಲ್ ಚಿತ್ರದ ನಾಯಕರಾಗಿದ್ದು, ಶಮಂತ್ ಕೆ.ರಾವ್ ಚಿತ್ರವನ್ನು ನಿರ್ಮಿಸಿದ್ದಾರೆ. ವಿ.ಮನೋಹರ್ ಸಂಗೀತ ಹಾಗು ಸಾಹಿತ್ಯವಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಫೆಬ್ರವರಿ 26ಕ್ಕೆ “ಕಿತಾಬು’ ತೆರೆಗೆ ಬರಲಿದೆ.
-ಉದಯವಾಣಿ