ಮನೋರಂಜನೆ

ಟೆಸ್ಟ್ ಸರಣಿ: ಹೊಸ ದಾಖಲೆ ಬರೆದ ಅಶ್ವಿನ್

Pinterest LinkedIn Tumblr

ash-3

ಹೊಸದಿಲ್ಲಿ, ಡಿ.8: ದಕ್ಷಿಣ ಆಫ್ರಿಕ ವಿರುದ್ಧ ಸೋಮವಾರ ಇಲ್ಲಿ ಕೊನೆಗೊಂಡ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಒಟ್ಟು 31 ವಿಕೆಟ್‌ಗಳನ್ನು ಕಬಳಿಸಿರುವ ಭಾರತದ ಆಫ್ ಸ್ಪಿನ್ನರ್ ಆರ್.ಅಶ್ವಿನ್ ತನ್ನ ಹಿಂದಿನ ದಾಖಲೆಯನ್ನು ಮುರಿದರು.

ಅಶ್ವಿನ್ ಮೊಹಾಲಿ, ನಾಗ್ಪುರ ಹಾಗೂ ದಿಲ್ಲಿಯಲ್ಲಿ ನಡೆದಿರುವ ಟೆಸ್ಟ್ ಪಂದ್ಯಗಳಲ್ಲಿ 11.12ರ ಸರಾಸರಿಯಲ್ಲಿ ಒಟ್ಟು 31 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಈ ಸಾಧನೆಗಾಗಿ ಐದನೆ ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದರು.

ಅಶ್ವಿನ್ ಸ್ವದೇಶದಲ್ಲಿ ನಡೆದ ಈ ಹಿಂದಿನ ಟೆಸ್ಟ್ ಸರಣಿಯಲ್ಲಿ 29 ವಿಕೆಟ್‌ಗಳನ್ನು ಪಡೆದಿದ್ದರು. 2013ರಲ್ಲಿ ಆಸ್ಟ್ರೇಲಿಯ ವಿರುದ್ಧದ ಸ್ವದೇಶಿ ಸರಣಿಯಲ್ಲಿ ಅಶ್ವಿನ್ ಈ ಸಾಧನೆ ಮಾಡಿದ್ದರು. ಆ ಸರಣಿಯಲ್ಲಿ ಭಾರತ 4-0 ಅಂತರದಿಂದ ವೈಟ್‌ವಾಶ್ ಸಾಧಿಸಿತ್ತು.

ಇದೀಗ ಅಶ್ವಿನ್ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅತ್ಯಂತ ಯಶಸ್ವಿ ಬೌಲರ್ ಆಗಿ ಮೂಡಿ ಬಂದಿದ್ದಾರೆ. 2004-05ರ ಆವೃತ್ತಿಯ ಬಾರ್ಡರ್-ಗಾವಸ್ಕರ್ ಟ್ರೋಫಿಯಲ್ಲಿ 27 ವಿಕೆಟ್‌ಗಳನ್ನು ಉಡಾಯಿಸಿದ್ದ ಅನಿಲ್ ಕುಂಬ್ಳೆ ದಾಖಲೆಯನ್ನು ಅಶ್ವಿನ್ ಮುರಿದರು.

ಅಶ್ವಿನ್ ಮೊಹಾಲಿಯಲ್ಲಿ 8 ವಿಕೆಟ್‌ಗಳನ್ನು ಕಬಳಿಸುವ ಮೂಲಕ ವೇಗವಾಗಿ 150 ವಿಕೆಟ್ ಪೂರೈಸಿದ ಭಾರತದ ಮೊದಲ ಬೌಲರ್ ಎಂಬ ಕೀರ್ತಿಗೆ ಭಾಜನರಾಗಿದ್ದರು. ನಾಗ್ಪುರದಲ್ಲಿ ನಡೆದ 3ನೆ ಪಂದ್ಯದಲ್ಲಿ 98 ರನ್‌ಗೆ 12 ವಿಕೆಟ್ ಕಬಳಿಸಿದ್ದ ಅಶ್ವಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಎರಡನೆ ಬಾರಿ ಜೀವನಶ್ರೇಷ್ಠ ಬೌಲಿಂಗ್ ಮಾಡಿದ್ದರು.

ಸ್ಪಿನ್ನರ್‌ಗಳ ಸ್ವರ್ಗ ಫಿರೋಝ್ ಷಾ ಕೋಟ್ಲಾ ಸ್ಟೇಡಿಯಂನಲ್ಲಿ ಸ್ಪಿನ್ ಜಾದೂ ಮುಂದುವರಿಸಿದ ಅಶ್ವಿನ್ ಎರಡನೆ ಇನಿಂಗ್ಸ್‌ನಲ್ಲಿ 49.1 ಓವರ್‌ಗಳಲ್ಲಿ 26 ಮೇಡನ್ ಸಹಿತ 61 ರನ್‌ಗೆ 5 ವಿಕೆಟ್‌ಗಳನ್ನು ಕಬಳಿಸಿ ಭಾರತಕ್ಕೆ ಭರ್ಜರಿ ಗೆಲುವು ತಂದುಕೊಟ್ಟರು. ಮೊಹಾಲಿ ಹಾಗೂ ನಾಗ್ಪುರದಲ್ಲಿ ಅತ್ಯುತ್ತಮ ಬೌಲಿಂಗ್ ನಡೆಸಿದ ಅಶ್ವಿನ್ ಅವರು ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ಸತತ ಸರಣಿ ಜಯಿಸಲು ಕಾರಣರಾದರು. ವಿದೇಶದಲ್ಲಿ ಸತತ 9 ಸರಣಿ ಗೆಲುವಿನಿಂದ ಬೀಗುತ್ತಿದ್ದ ಆಫ್ರಿಕ ತಂಡಕ್ಕೆ ಶಾಕ್ ನೀಡಿದರು.

Write A Comment