ದ.ಆಫ್ರಿಕ 2ನೆ ಇನಿಂಗ್ಸ್‌ನಲ್ಲಿ 143 ರನ್‌ಗೆ ಆಲೌಟ್ *ಅಶ್ವಿನ್ 5-61
ಹೊಸದಿಲ್ಲಿ, ಡಿ.7: ಯುವ ನಾಯಕ ವಿರಾಟ್ ಕೊಹ್ಲಿಗೆ ತವರಿನಲ್ಲಿ ಕ್ಲೀನ್ ಸ್ವೀಪ್ ಕನಸು ನನಸಾಗಿದೆ. ದಕ್ಷಿಣ ಆಫ್ರಿಕ ವಿರುದ್ಧ ಇಲ್ಲಿ ನಡೆದ ನಾಲ್ಕನೆ ಟೆಸ್ಟ್‌ನಲ್ಲಿ ಭಾರತ 337 ರನ್‌ಗಳ ಭರ್ಜರಿ ಜಯ ಗಳಿಸಿದ್ದು, ನಾಲ್ಕು ಟೆಸ್ಟ್‌ಗಳ ಸರಣಿಯನ್ನು 3-0 ಅಂತರದಲ್ಲಿ ವಶಪಡಿಸಿಕೊಂಡಿದೆ.
ಇಲ್ಲಿನ ಫಿರೋಝ್ ಶಾ ಕೋಟ್ಲಾ ಸ್ಟೇಡಿಯಂನಲ್ಲಿ ಟೆಸ್ಟ್‌ನ ಐದನೆ ಹಾಗೂ ಅಂತಿಮ ದಿನವಾಗಿರುವ ಸೋಮವಾರ ಗೆಲುವಿಗೆ 481 ರನ್‌ಗಳ ಸವಾಲನ್ನು ಪಡೆದ ದಕ್ಷಿಣ ಆಫ್ರಿಕ ಎರಡನೆ ಇನಿಂಗ್ಸ್‌ನಲ್ಲಿ ಓವರೊಂದಕ್ಕೆ ಒಂದು ರನ್ ಗಳಿಸಿ ಡ್ರಾಗೊಳಿಸಲು ಹೋರಾಟ ನಡೆಸಿದ್ದರೂ, ಭಾರತದ ಬೌಲರ್‌ಗಳು ಇದಕ್ಕೆ ಅವಕಾಶ ಕೊಡಲಿಲ್ಲ. ಆಫ್ರಿಕ 143.1 ಓವರ್‌ಗಳಲ್ಲಿ 143 ರನ್‌ಗಳಿಗೆ ಆಲೌಟಾಯಿತು.
ಟೆಸ್ಟ್ ರ್ಯಾಂಕಿಂಗ್‌ನಲ್ಲಿ ವಿಶ್ವದ ನಂ.1 ತಂಡ ದಕ್ಷಿಣ ಆಫ್ರಿಕ ಹೀನಾಯ ಸೋಲಿನೊಂದಿಗೆ ಮುಖಭಂಗ ಅನುಭವಿಸಿದೆ.
ಸ್ಪಿನ್ನರ್‌ಗಳಾದ ರವಿಚಂದ್ರನ್ ಅಶ್ವಿನ್(5-61), ರವೀಂದ್ರ ಜಡೇಜ(2-26) ಮತ್ತು ವೇಗಿ ಉಮೇಶ್ ಯಾದವ್(3-9) ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ದಕ್ಷಿಣ ಆಫ್ರಿಕ ತಂಡದ ಎಬಿಡಿವಿಲಿಯರ್ಸ್(43) ತಂಡದ ಪರ ಗರಿಷ್ಠ ಸ್ಕೋರ್ ದಾಖಲಿಸಿದರು. ನಾಯಕ ಹಾಶಿಮ್ ಅಮ್ಲ(25), ಡೇನ್ ವಿಲಾಸ್(13), ತಾಂಬಾ ಬಾವುಮಾ (34) ಮತ್ತು ಎಫ್‌ಡು ಪ್ಲೆಸಿಸ್(10) ಎರಡಂಕೆಯ ಕೊಡುಗೆ ನೀಡಿದರು.
ಭಾರತದ ಅಜಿಂಕ್ಯ ರಹಾನೆ ಪಂದ್ಯಶ್ರೇಷ್ಠ ಮತ್ತು ಆರ್.ಅಶ್ವಿನ್ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಫಲ ನೀಡದ ಹೋರಾಟ: ನಾಲ್ಕನೆ ದಿನದಾಟದಂತ್ಯಕ್ಕೆ 72 ಓವರ್‌ಗಳಲ್ಲಿ 2 ವಿಕೆಟ್ ನಷ್ಟದಲ್ಲಿ 72 ರನ್ ಗಳಿಸಿದ್ದ ದಕ್ಷಿಣ ಆಫ್ರಿಕ ತಂಡ ಮತ್ತೆ ಆಮೆ ನಡಿಗೆಯ ಬ್ಯಾಟಿಂಗ್‌ಗೆ ಒತ್ತು ನೀಡಿತ್ತು. ಅಮ್ಲ 23 ರನ್ ಮತ್ತು ಎಬಿಡಿವಿಲಿಯರ್ಸ್ 11 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದರು.ಅಮ್ಲ ಮತ್ತು ಎಬಿಡಿವಿಲಿಯರ್ಸ್ ಸ್ಕೋರ್‌ನ್ನು 84.5 ಓವರ್‌ಗಳಲ್ಲಿ 76ಕ್ಕೆ ತಲುಪಿಸಿದ್ದರು.
ಗೆಲ್ಲುವ ಅವಕಾಶ ಇಲ್ಲದಿದ್ದರೂ ಡ್ರಾಗೊಳಿಸುವ ಹೋರಾಟದಲ್ಲಿದ್ದ ನಾಯಕ ಅಮ್ಲ ಅವರಿಗೆ ಪೆವಿಲಿಯನ್ ಹಾದಿ ತೋರಿಸುವ ಮೂಲಕ ರವೀಂದ್ರ ಜಡೇಜ ಅವರು ಭಾರತಕ್ಕೆ ಅಂತಿಮ ದಿನ ಮೊದಲ ಯಶಸ್ಸು ತಂದುಕೊಟ್ಟರು. ಅಮ್ಲ ನಾಲ್ಕನೆ ದಿನ 23 ರನ್‌ಗಳಿಗೆ 207 ಎಸೆತಗಳನ್ನು ಎದುರಿಸಿದ್ದರು. ಇಂದು ಈ ಮೊತ್ತಕ್ಕೆ 2 ರನ್ ಸೇರಿಸಲು 37 ಎಸೆತಗಳನ್ನು ನಿಭಾಯಿಸಿದರು. 288 ನಿಮಿಷಗಳ ಕಾಲ ಕ್ರೀಸ್‌ನಲ್ಲಿದ್ದರೂ ಅಮ್ಲ 25 (244ಎ, 3ಬೌ)ರನ್ ಗಳಿಸಿದರು. ಅಮ್ಲ ನಿರ್ಗಮನದ ಬಳಿಕ ಭಾರತಕ್ಕೆ ಗೆಲುವು ಖಚಿತವಾಗಿತ್ತು. ಎಫ್‌ಡು ಪ್ಲೆಸಿಸ್ 117 ನಿಮಿಷಗಳ ಕಾಲ ಬ್ಯಾಟಿಂಗ್ ನಡೆಸಿದರು. 97 ಎಸೆತಗಳಲ್ಲಿ 1 ಬೌಂಡರಿ ಸಹಾಯದಿಂದ 10 ರನ್ ಗಳಿಸಿದರು. ಅವರನ್ನು ಜಡೇಜ ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು.
ಜೆಪಿ ಡುಮಿನಿ 16 ನಿಮಿಷಗಳ ಕಾಲ ಕ್ರೀಸ್‌ನಲ್ಲಿದ್ದರು. 12 ಎಸೆತಗಳನ್ನು ಎದುರಿಸಿದ್ದ ಅವರು ಖಾತೆ ತೆರೆಯುವ ಮೊದಲೇ ಅಶ್ವಿನ್‌ರ ಎಲ್‌ಬಿಡಬ್ಲು ಬಲೆಗೆ ಬಿದ್ದರು. ವಿಕೆಟ್ ಕೀಪರ್ ವಿಲಾಸ್ 13 ರನ್(57ನಿ, 50ಎ, 2ಬೌ) ಗಳಿಸಿದರು. 140ನೆ ಓವರ್‌ನ ಮೊದಲ ಎಸೆತದಲ್ಲಿ ಡಿವಿಲಿಯರ್ಸ್‌ಗೆ ಅಶ್ವಿನ್ ಪೆವಿಲಿಯನ್ ಹಾದಿ ತೋರಿಸಿದರು. 345 ನಿಮಿಷಗಳ ಕಾಲ ಕ್ರೀಸ್‌ನಲ್ಲಿದ್ದ ಡಿವಿಲಿಯರ್ಸ್ 297 ಎಸೆತಗಳನ್ನು ಎದುರಿಸಿದರು. 6 ಬೌಂಡರಿಗಳ ಸಹಾಯದಿಂದ 43 ರನ್ ಗಳಿಸಿ ವರು ಅರ್ಧಶತಕ ದಾಖಲಿಸುವಲ್ಲಿ ಎಡವಿದರು.
ಅಬಾಟ್(0), ಪೀಟ್(1) ಮತ್ತು ಮಾರ್ನೆ ಮೊರ್ಕೆಲ್(2) ಔಟಾಗುವುದರೊಂದಿಗೆ ದಕ್ಷಿಣ ಆಫ್ರಿಕದ ಎರಡನೆ ಇನಿಂಗ್ಸ್ ಕೊನೆಗೊಂಡಿತು.
ದಕ್ಷಿಣ ಆಫ್ರಿಕ 143ಕ್ಕೆ ಆಲೌಟಾಗುವುದರೊಂದಿಗೆ ಸರಣಿಯಲ್ಲಿ ಮತ್ತೊಮ್ಮೆ ಕನಿಷ್ಠ ಮೊತ್ತ ದಾಖಲಿಸಿತು. ದಿಲ್ಲಿ ಟೆಸ್ಟ್‌ನಲ್ಲಿ ಆಫ್ರಿಕದ ಬ್ಯಾಟ್ಸ್‌ಮನ್‌ಗಳ ನಿಧಾನಗತಿಯ ಬ್ಯಾಟಿಂಗ್ ಹಿನ್ನೆಲೆಯಲ್ಲಿ ಪಂದ್ಯ ಡ್ರಾಗೊಳ್ಳುವ ಸಾಧ್ಯತೆ ಕಂಡು ಬಂದಿತ್ತು.ಚಾ ವಿರಾಮದ ಹೊತ್ತಿಗೆ 138 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 136 ರನ್ ಗಳಿಸಿದ್ದ ದಕ್ಷಿಣ ಆಫ್ರಿಕ ತಂಡ ಮುಂದೆ 27 ಎಸೆತಗಳನ್ನು ಎದುರಿಸುವಷ್ಟರಲ್ಲಿ ಆಲೌಟಾಯಿತು.
ರವಿಚಂದ್ರನ್ ಅಶ್ವಿನ್ ಸರಣಿಯಲ್ಲಿ 31 ವಿಕೆಟ್ ಉಡಾಯಿಸಿ ಐದನೆ ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿ ಗಿಟ್ಟಿಸಿಕೊಂಡರು.
ಸ್ಕೋರ್ ಪಟ್ಟಿ
ಭಾರತ ಮೊದಲ ಇನಿಂಗ್ಸ್ 334
ದಕ್ಷಿಣ ಆಫ್ರಿಕ ಮೊದಲ ಇನಿಂಗ್ಸ್ 121
ಭಾರತ ಎರಡನೆ ಇನಿಂಗ್ಸ್ 100.1 ಓವರ್‌ಗಳಲ್ಲಿ 5ವಿಕೆಟ್‌ಗೆ 267 ಡಿಕ್ಲೇರ್
ದಕ್ಷಿಣ ಆಫ್ರಿಕ ಎರಡನೆ ಇನಿಂಗ್ಸ್ 143.1 ಓವರ್‌ಗಳಲ್ಲಿ ಆಲೌಟ್ 143
ಡಿ.ಎಲ್ಗರ್ ಸಿ ರಹಾನೆ ಬಿ ಅಶ್ವಿನ್04
ಟಿ.ಬವುಮಾ ಬಿ ಅಶ್ವಿನ್34
ಹಾಶಿಮ್ ಅಮ್ಲ ಬಿ ಜಡೇಜ25
ಎಬಿಡಿವಿಲಿಯರ್ಸ್ ಸಿ ಜಡೇಜ ಬಿ ಅಶ್ವಿನ್43
ಎಫ್‌ಡು ಪ್ಲೆಸಿಸ್ ಎಲ್‌ಬಿಡಬ್ಲು ಬಿ ಜಡೇಜ10
ಜೆಪಿ ಡುಮಿನಿ ಎಲ್‌ಬಿಡಬ್ಲು ಬಿ ಅಶ್ವಿನ್00
ಡಿಜೆ ವಿಲಾಸ್ ಬಿ ಯಾದವ್ 13
ಕೈಲ್ ಅಬಾಟ್ ಬಿ ಯಾದವ್00
ಡಿಎಲ್ ಪೀಟ್ ಸಿ ಸಹಾ ಬಿ ಯಾದವ್01
ಎಂ.ಮೊರ್ಕೆಲ್ ಬಿ ಅಶ್ವಿನ್ 02
ಇಮ್ರಾನ್ ತಾಹಿರ್ ಔಟಾಗದೆ00
ಇತರ11
ವಿಕೆಟ್ ಪತನ: 1-5, 2-49,3-76, 4-111, 5-112, 6-136, 7-136, 8-140, 9-143, 10-143.
ಬೌಲಿಂಗ್ ವಿವರ
ಇಶಾಂತ್ ಶರ್ಮ20.0-12-23-0
ಆರ್.ಅಶ್ವಿನ್49.1-26-61-5
ಆರ್.ಜಡೇಜ46.0-33-26-2
ಉಮೇಶ್ ಯಾದವ್21.0-16-09-3
ಎಸ್.ಧವನ್03.0-01-09-0
ಮುರಳಿ ವಿಜಯ್02.0-00-02-0
ವಿರಾಟ್ ಕೊಹ್ಲಿ 01.0-01-00-0
ಚೇತೇಶ್ವರ ಪೂಜಾರ01.0-00-02-0
ಪಂದ್ಯಶ್ರೇಷ್ಠ: ಅಜಿಂಕ್ಯ ರಹಾನೆ
ಸರಣಿಶ್ರೇಷ್ಠ : ರವಿಚಂದ್ರನ್ ಅಶ್ವಿನ್.
,,,,,,,,,,
ನಂಬರ್ಸ್ ಗೇಮ್
*337: ದಕ್ಷಿಣ ಆಫ್ರಿಕ ವಿರುದ್ಧ ಬಾರತ 337 ರನ್‌ಗಳ ಜಯ ಗಳಿಸಿರುವುದು ಭಾರತಕ್ಕೆ ಟೆಸ್ಟ್ ಇತಿಹಾಸದಲ್ಲಿ ದೊಡ್ಡ ಜಯ. 2008-09ರಲ್ಲಿ ಮೆಲ್ಬೋರ್ನ್‌ನಲ್ಲಿ ಭಾರತ ಆಸ್ಟ್ರೇಲಿಯ ವಿರುದ್ಧ 320 ರನ್‌ಗಳ ಜಯ ಗಳಿಸಿತ್ತು.
*2006: ದಕ್ಷಿಣ ಆಫ್ರಿಕ 2006ರಲ್ಲಿ ಟೆಸ್ಟ್ ಸರಣಿಯಲ್ಲಿ 3ಕ್ಕಿಂತ ಹೆಚ್ಚು ಟೆಸ್ಟ್‌ಗಳಲ್ಲಿ ಸೋಲು ಅನುಭವಿಸಿತ್ತು. ಆ ಬಳಿಕ ಇದೀಗ ಭಾರತ ವಿರುದ್ಧ 3 ಟೆಸ್ಟ್‌ಗಳನ್ನು ಕಳೆದುಕೊಂಡಿದೆ.
*5: ರವಿಚಂದ್ರನ್ ಅಶ್ವಿನ್ 5ನೆ ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.
*143.1: ದಕ್ಷಿಣ ಆಫ್ರಿಕ ತಂಡ 143.1 ಓವರ್‌ಗಳ ಕಾಲ ಬ್ಯಾಟಿಂಗ್ ನಡೆಸಿರುವುದು ಏಷ್ಯದಲ್ಲಿ ತಂಡವೊಂದು ನಿರ್ಮಿಸಿರುವ ದಾಖಲೆ.
*31: ಅಶ್ವಿನ್ ಸರಣಿಯಲ್ಲಿ 31 ವಿಕೆಟ್ ಸಂಪಾದಿಸಿದ್ದಾರೆ.
*7: ಅಶ್ವಿನ್ 7ನೆ ಬಾರಿ 5 ವಿಕೆಟ್‌ಗಳ ಗೊಂಚಲು ಪಡೆದಿದ್ದಾರೆ.
