ಮನೋರಂಜನೆ

ಐಸಿಸಿ ಟೆಸ್ಟ್ ರ್ಯಾಂಕಿಂಗ್: ಭಾರತ ದ್ವಿತೀಯ ಸ್ಥಾನಕ್ಕೆ ಭಡ್ತಿ

Pinterest LinkedIn Tumblr

ko

ದುಬೈ, ಡಿ.8: ದಕ್ಷಿಣ ಆಫ್ರಿಕ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು 3-0 ಅಂತರದಿಂದ ಜಯಿಸಿ ಕ್ಲೀನ್‌ಸ್ವೀಪ್ ಸಾಧಿಸಿರುವ ಭಾರತ ಸೋಮವಾರ ಬಿಡುಗಡೆಯಾಗಿರುವ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೆ ಲಗ್ಗೆ ಇಟ್ಟಿದೆ.

ಸೋಮವಾರ ಹೊಸದಿಲ್ಲಿಯಲ್ಲಿ ಕೊನೆಗೊಂಡಿರುವ ನಾಲ್ಕನೆ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪಡೆ ದಕ್ಷಿಣ ಆಫ್ರಿಕವನ್ನು 337 ರನ್‌ಗಳ ಅಂತರದಿಂದ ಮಣಿಸಿತು. ಈ ಮೂಲಕ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು 3-0 ಅಂತರದಿಂದ ಜಯಿಸಿತು. ಸರಣಿ ಗೆಲುವಿನೊಂದಿಗೆ 10 ಅಂಕವನ್ನು ಗಳಿಸಿರುವ ಭಾರತ ಒಟ್ಟು 110 ಅಂಕಗಳನ್ನು ಗಳಿಸಿ 2ನೆ ಸ್ಥಾನಕ್ಕೇರಿದೆ. ಆಸ್ಟ್ರೇಲಿಯ ಹಾಗೂ ಪಾಕಿಸ್ತಾನ ತಂಡಗಳು ಕ್ರಮವಾಗಿ ಮೂರನೆ ಹಾಗೂ ನಾಲ್ಕನೆ ಸ್ಥಾನಕ್ಕೆ ಇಳಿದಿವೆ.

ಭಾರತದ ವಿರುದ್ಧ ಸರಣಿಯನ್ನು ಹೀನಾಯವಾಗಿ ಸೋತ ಹೊರತಾಗಿಯೂ ಹಾಶಿಮ್ ಅಮ್ಲ ಪಡೆ ನಂ.1 ಸ್ಥಾನ ಕಾಯ್ದುಕೊಂಡಿದೆ. ಭಾರತ ಎಪ್ರಿಲ್-1ಕ್ಕಿಂತ ಮೊದಲು ಯಾವುದೇ ಟೆಸ್ಟ್ ಪಂದ್ಯಗಳನ್ನು ಆಡುವುದಿಲ್ಲ. ಈ ಹಿನ್ನೆಲೆಯಲ್ಲಿ ರ್ಯಾಂಕಿಂಗ್‌ನಲ್ಲಿ ಬದಲಾವಣೆಯಾಗುವ ಸಾಧ್ಯತೆಯಿದೆ. ಈ ನಡುವೆ ಆಸ್ಟ್ರೇಲಿಯ ಡಿ.10 ರಿಂದ ವೆಸ್ಟ್‌ಇಂಡೀಸ್ ವಿರುದ್ಧ ಟೆಸ್ಟ್ ಸರಣಿಯನ್ನು, ನ್ಯೂಝಿಲೆಂಡ್ ತಂಡ ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಯನ್ನು ಆಡಲಿವೆೆ.

ಇಂಗ್ಲೆಂಡ್ ತಂಡ ದಕ್ಷಿಣ ಆಫ್ರಿಕ ಪ್ರವಾಸಕೈಗೊಂಡು ಡಿ.26 ರಿಂದ 4 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ದಕ್ಷಿಣ ಆಫ್ರಿಕ ವರ್ಷವನ್ನು ನಂ.1 ಸ್ಥಾನದೊಂದಿಗೆ ಕೊನೆಗೊಳಿಸಬೇಕಾದರೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು ಕನಿಷ್ಠ ಡ್ರಾ ಗೊಳಿಸಬೇಕಾಗುತ್ತದೆ.

Write A Comment