ಮನೋರಂಜನೆ

ರಥಾವರ: ಚೆಂದದ ಕತೆಯೊಳಗೇ ಉಂಟು ಹೊಂದದ ರಾಗಮಾಲಿಕೆ

Pinterest LinkedIn Tumblr

Rathavara-(1)ಕೆಟವನಾಗಿರೋದು ಕೆಟ್ಟದಲ್ಲ…ಈ ಮಾತಿನೊಂದಿಗೆ ಕತೆ ಶುರುವಾಗುತ್ತದೆ. ಆತ ರಥಾವರ, ಅದು ಹೆಸರೋ, ಅಡ್ಡಹೆಸರೋ- ಗೊತ್ತಿಲ್ಲ. ಆದರೆ ಅವನನ್ನು ಎಲ್ಲರೂ ರಥ ಅಂತಲೇ ಕರೀತಾರೆ. ಸಿಎಂ ಆಗುವ ಆಸೆ ಹೊತ್ತ ಎಂಎಲ್ಲೇ ಮಣಿಕಂಠನಿಗೆ ಇವನು ಲೆಫ್ಟ್ಹ್ಯಾಂಡ್‌. ಉಸಿರೆತ್ತಿದ್ದನ್ನ ಉಸಿರು ಒತ್ತೆ ಇಟ್ಟು ಮುಗಿಸಿಕೊಡೋ ಈ ಹುಡುಗನನ್ನು ಕಂಡರೆ ರೌಡಿಸಂ ಜಗತ್ತಿಗೆ ನಡುಕ, ಸ್ನೇಹಿತರಿಗೆ ಹೆಮ್ಮೆ, ಹೆಣ್ಮಕ್ಕಳಿಗೆ ಆಕರ್ಷಣೆ.

ಆದರೂ ಕೆಟ್ಟವನಾಗಿರೋದು ಕೆಟ್ಟದ್ದು ಅಂತ ಒಂದು ದಿನ ಅವನಿಗೆ ಅರಿವಾಗುತ್ತದೆ, ಅದು ಅಂಥಿಂಥ ಅರಿವಲ್ಲ, ತನ್ನದೇ ಇಮೇಜ್‌ನಲ್ಲಿ ಸುಖವಾಗಿದ್ದವನ ಪಾಲಿಗೆ ನರಕ ದರ್ಶನದಂತೆ ಆ ಒಂದು ಘಟನೆ ನಡೆಯುತ್ತದೆ, ಅಲ್ಲಿಗೆ ಅವನ ಇಡೀ ಜೀವನಶೈಲಿಯೇ ಬದಲಾಗುತ್ತದೆ. ಆದರೆ ಕೆಟ್ಟ ಜಗತ್ತಲ್ಲಿ ಕೆಟ್ಟವನಾಗಿ ಇರುವುದು ಒಳ್ಳೆಯದೇ ಹೊರತೂ, ಒಳ್ಳೆಯವನಾಗಿ ಬದಲಾಗುವುದಲ್ಲ.

ರೌಡಿಸಂ ಕೆಟ್ಟದ್ದು ಅನ್ನುವ ನಮ್ಮ ಚಿತ್ರರಂಗದ ಅನಾದಿ ಕಾಲದ ಫಿಲಾಸಫಿಯನ್ನೇ ಬೇರೆ ಥರ ಹೇಳುವ ಪ್ರಯತ್ನವನ್ನು ನಿರ್ದೇಶಕ ಚಂದ್ರಶೇಖರ ಬಂಡಿಯಪ್ಪ ಮಾಡಿದ್ದಾರೆ. ಹಾಗಾಗಿ ಈ ಕತೆ ತುಂಬ ಹೊಸತಾಗಿ ನಮಗೆ ಇಷ್ಟವಾಗುತ್ತದೆ. ರಾಜಕೀಯ ಮಹತ್ವಾಕಾಂಕ್ಷೆಯ ಬೆಟ್ಟಕ್ಕೆ ಕಲ್ಲು ಹೊರುವ ಹುಡುಗನನ್ನ ಬಳಸಿಕೊಂಡು, ತಾನು ಮುಖ್ಯಮಂತ್ರಿ ಆಗುವ ಆಸೆ ಈಡೇರಿಸಿಕೊಳ್ಳಲು ನೋಡುತ್ತಾನೆ. ಅದು ತೆಗೆದುಕೊಳ್ಳುವ ತಿರುವನ್ನು ತುಂಬ ಚಂದದಿಂದ, ತುಂಬ ತೀವ್ರವಾಗಿ, ಹಲವು ಕಡೆ ತುಂಬ ಲೌಡ್‌ ಆಗಿ
ಹೇಳಲು ನಿರ್ದೇಶಕರು ಪ್ರಯತ್ನಪಟ್ಟಿದ್ದಾರೆ.

ನೀವು “ಉಗ್ರಂ’ ನೋಡಿ ದ್ದರೆ ಅದೇ ಬಗೆಯ ಟ್ರೀಟ್‌ಮೆಂಟ್‌ ಮತ್ತು ವೇಗ ಈ ಚಿತ್ರಕ್ಕೂ ಇದೆ. ಇದರಲ್ಲಿ ಕೆಲ ಅತ್ಯುತ್ತಮ ಎನ್ನುವ ಘಟ್ಟಗಳಿವೆ. ಒಂದು, ಕತೆಯಲ್ಲಿ ಮಂಗಳಮುಖೀಯರ ಜಗತ್ತಿನ ಪ್ರವೇಶ. ಒಂದು ಆ್ಯಕ್ಷನ್‌ ಕತೆ ಥ್ರಿಲ್ಲರ್‌ ಆಗುವ ಹಲವು ಸಂದರ್ಭಗಳನ್ನು ಚಿತ್ರದ ಪ್ರಥಮಾರ್ಧದಲ್ಲಿ ನಿರ್ದೇಶಕರು ತುಂಬ ಚೆನ್ನಾಗಿ ತಂದಿದ್ದಾರೆ. ಪ್ರಾರಂಭದಿಂದ ಇಂಟರ್‌ವಲ್‌ವರೆಗೆ, ಇಂಟರ್‌ವಲ್‌ನಿಂದ ಕೆಲ ನಿಮಿಷಗಳ ಕಾಲ ಆ ಕತೆ ಪಡೆದುಕೊಳ್ಳುವ ವೇಗ ಮತ್ತು ತೀವ್ರತೆ ಒಂದು ಒಂದು ಅದ್ಭುತ ಚಿತ್ರವಾಗುವ ಭರವಸೆಯನ್ನು ಬಿತ್ತುತ್ತದೆ.

ಆದರೆ ಚಿತ್ರದ ದ್ವಿತೀಯಾರ್ಧದ ಕೆಲ ಅಂಶಗಳು ಕತೆಯನ್ನು ಒಳಗಿಂದಲೇ ಶಿಥಿಲಗೊಳಿಸುವ ಪ್ರಯತ್ನ ಮಾಡುತ್ತದೆ. ಹೊಂದದ ಹಾಡು, ಬೇಡದ ಕಾಮಿಡಿ ಹಾಲನ್ನದ ಮಧ್ಯೆ ಕಲ್ಲಂತೆ ಕಾಡುತ್ತವೆ. ಆ ಭಾಗದ ದುರಸ್ತಿ ಸರಿ ಆಗಿರುತ್ತಿದ್ದರೆ ಇನ್ನೊಮ್ಮೆ “ಉಗ್ರಂ’ ಶಕೆ ಶುರುವಾಗುವ ಎಲ್ಲಾ ಅರ್ಹತೆಗಳೂ ಈ ಚಿತ್ರಕ್ಕಿತ್ತು.

ಚಿತ್ರದಲ್ಲಿ ತುಂಬ ಇಷ್ಟವಾಗುವುದು ತಣ್ಣಗೆ ಪಾತ್ರವನ್ನು ಕಟ್ಟಿಕೊಡುವ ಶ್ರೀಮುರಳಿ. “ಉಗ್ರಂ’ ಹ್ಯಾಂಗೋವರ್‌ ಇನ್ನೂ ಇರುವಂತೆ ಕಂಡರೂ ಒಂದು ರೌಡಿಸಂ ಫೀಲ್ಡ್‌ಗೆ ಅತಿಯಾಗಿ ನಿಷ್ಠನಾಗಿರುವ ಶಕ್ತಿವಂತನೊಬ್ಬನ ಮುಗªತೆಯನ್ನು ಶ್ರೀಮುರಳಿ ಅತ್ಯುತ್ತಮವಾಗಿ ಕಟ್ಟಿಕೊಡುತ್ತಾರೆ. ಆವೇಶ, ರೌದ್ರ, ಭೀಕರ ರಸಗಳನ್ನು ಮೈವೆತ್ತ ಮಹಾದೇವಿ ಪಾತ್ರದಲ್ಲಿ ಲೋಕಿ ನಿಬ್ಬೆರಗಾಗುವಂತೆ ನಟಿಸಿದ್ದಾರೆ.

ಮಿಂಚಂತೆ ಬರುವ, ಮಿಂಚಂತೇ ಮಾಯವಾಗುವ ಮತ್ತು ಇರುವಷ್ಟು ಹೊತ್ತು ಮಿಂಚು ಸಂಚಾರದಂತಿರೋ ಲೋಕಿ ಕತೆಯನ್ನು ಹೆಚ್ಚು ನೋಡಬಲ್‌ ಆಗಿಸುತ್ತಾರೆ. ಮಣಿಕಂಠನಾಗಿ ರವಿಶಂಕರ್‌ ಉದ್ದಕ್ಕೂ ಗಾಂಭೀರ್ಯ ತರುತ್ತಾರೆ. ರಚಿತಾ ರಾಮ್‌ ಅವರು ತುಂಬ ಇಷ್ಟವಾಗುವ ಪಾತ್ರವಾದರೂ ಕತೆಯೊಳಗೆ ಅವರ ಪಾತ್ರ ಸೇರದೇ ಅತೃಪ್ತವಾಗಿ ತಿರುಗುವುದನ್ನು ನೋಡುವುದೇ ಒಂದು
ಕಷ್ಟ. ಚಿಕ್ಕಣ್ಣ ನಗಿಸುತ್ತಾ ಇಷ್ಟವಾಗಿದ್ದಾರೆ. ಸಾಧು ನಗಿಸಲು ಬಂದು ಕಷ್ಟ ನೀಡಿದ್ದಾರೆ. ಭುವನ್‌ಗೌಡ ಅವರ ಸಣ್ಣ ಸಣ್ಣ ವಿವರಗಳ ಛಾಯಾಗ್ರಹಣ, ರವಿ ಬಸ್ರೂರು ಅವರ ಮೈನವಿರೇಳಿಸುವ ಹಿನ್ನೆಲೆ ಸಂಗೀತ, ಒಟ್ಟು ವಿವರಗಳನ್ನು ಕ್ರಿಸ್‌³ ಮಾಡಿದ ಶ್ರೀಕಾಂತ್‌ ಅವರ ಸಂಕಲನ- ಕತೆಗೋಸ್ಕರ ದುಡಿದಿದೆ. ಧರ್ಮವಿಶ್‌ ಅವರ ಸಂಗೀತದಲ್ಲಿ “ಪ್ರೀತಿ ಒಂದು ಸೂಜಿದಾರ’ ಹಾಡು ನಾಟುವಂತಿದೆ.

ಒಂದು ಕತೆಯನ್ನು ದಕ್ಕಿಸಿಕೊಂಡು, ಅನುಭವವಾಗಿಸುತ್ತಾ ನಿರ್ದೇಶಕನಿಗೆ ದಾರಿ ಮಧ್ಯೆ ಕಲ್ಲುಮುಳ್ಳು ಸಿಕ್ಕರೆ ನಿರ್ದೇಶಕ ಅನುಭವಿಸೋ ಸಂಕಟಕ್ಕೆ “ರಥಾವರ’ ಒಳ್ಳೆಯ ಉದಾಹರಣೆ.

ಚಿತ್ರ:ರಥಾವರ
ನಿರ್ದೇಶಕ: ಚಂದ್ರಶೇಖರ ಬಂಡಿಯಪ್ಪ
ನಿರ್ಮಾಣ: ಧರ್ಮಶ್ರೀ ಮಂಜುನಾಥ್‌
ತಾರಾಗಣ: ಶ್ರೀಮುರಳಿ, ರಚಿತಾರಾಮ್‌, ರವಿಶಂಕರ್‌, ಲೋಕಿ,
ಉದಯ್‌, ಚಿಕ್ಕಣ್ಣ, ಸಾಧು ಕೋಕಿಲ ಮತ್ತಿತರರು.
*ವಿಕಾಸ್‌ ನೇಗಿಲೋಣಿ

-ಉದಯವಾಣಿ

Write A Comment