ಮನೋರಂಜನೆ

ಶಾರ್ಪ್‌ಶೂಟರ್‌: ನಿಗಿನಿಗಿ ಪ್ರೇಮಕೆಂಡ, ದಿಗಿದಿಗಿ ಆಕ್ಷನ್ ಕುಂಡ

Pinterest LinkedIn Tumblr

_MG_4155ದಿಗಂತ್‌ ಹಾಗು ಸಂಗೀತಾ ಅಭಿನಯದ “ಶಾರ್ಪ್‌ಶೂಟರ್‌’ ಚಿತ್ರ ಬಿಡುಗಡೆಗೆ ರೆಡಿಯಾಗಿದೆ. ಡಿಸೆಂಬರ್‌ 11 ರಂದು ರಾಜ್ಯಾದ್ಯಂತ ಚಿತ್ರ ತೆರೆಕಾಣುತ್ತಿದೆ. ಈ ಚಿತ್ರದ ಮೂಲಕ ಗೌಸ್‌ಪೀರ್‌ ನಿರ್ದೇಶಕರಾಗುತ್ತಿದ್ದಾರೆ. ಹಾಗೆ ನೋಡಿದರೆ, ಗೌಸ್‌ಪೀರ್‌ ಈ ಹಿಂದೆಯೇ ನಿರ್ದೇಶಕರಾಗಬೇಕಿತ್ತು. ಆದರೆ, ಅವರನ್ನು ಎಲ್ಲರೂ ಗೀತಸಾಹಿತಿಯನ್ನಾಗಿಸಿದರು. ಅವರು ಇಂಡಸ್ಟ್ರಿಗೆ ಬಂದಿದ್ದೇ, ನಿರ್ದೇಶಕ ಆಗಬೇಕು ಅಂತ. ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಲು ಬಂದ ಅವರು, ಹಾಡು ಬರೆಯುವ ಮೂಲಕ ಸುದ್ದಿಯಾದರು. ಈಗ “ಶಾರ್ಪ್‌ಶೂಟರ್‌’ ಮೂಲಕ ಟೋಪಿ ತೊಟ್ಟಿದ್ದಾರೆ. ಈ ಚಿತ್ರವನ್ನು ಎಸ್‌.ಬಿ.ಎಂಟರ್‌ಟೈನರ್‌ ಬ್ಯಾನರ್‌ನಡಿ ಟಿ.ಸಿ.ಬಾಲುಸುಬ್ರಹ್ಮಣ್ಯಂ ಹಾಗು ಶ್ರೀನಿವಾಸ್‌ ಪಿ.ಬಿ. ಅವರು ನಿರ್ಮಿಸಿದ್ದಾರೆ. ವಿಶೇಷವೆಂದರೆ, ದಿಗಂತ್‌ಗೆ “ಶಾರ್ಪ್‌ಶೂಟರ್‌’ 25 ನೇ ಚಿತ್ರ. ಇದೊಂದು ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್‌ ಸಿನಿಮಾ ಎನ್ನುವ ನಿರ್ದೇಶಕ ಗೌಸ್‌ಪೀರ್‌ ತಮ್ಮ ಚೊಚ್ಚಲ ಚಿತ್ರದ ಕುರಿತು ಮಾತನಾಡಿದ್ದಾರೆ.

“ಶಾರ್ಪ್‌ಶೂಟರ್‌’ ಒಂದು ಪಕ್ಕಾ ಮನರಂಜನೆಯ ಚಿತ್ರ. ಹಾಗಾಗಿ ಇಲ್ಲಿ ಹಾಸ್ಯದ ಸನ್ನಿವೇಶಗಳೇ ಹೆಚ್ಚು. ದಿಗಂತ್‌ ಕೈಯಲ್ಲಿ ಗನ್‌ ಹಿಡಿದಿದ್ದಾರೆ. ಎಲ್ಲರಿಗೂ ದಿಗಂತ್‌ ಆ್ಯಕ್ಷನ್‌ ಮಾಡ್ತಾರಾ ಎಂಬ ಅನುಮಾನವಿದೆ. “ಶಾರ್ಪ್‌ಶೂಟರ್‌’ ಆ ಆನುಮಾನಗಳನ್ನೆಲ್ಲಾ ದೂರ ಮಾಡುವುದು ಗ್ಯಾರಂಟಿ. ದಿಗಂತ್‌ ಇಲ್ಲಿ ಪಕ್ಕಾ ಆ್ಯಕ್ಷನ್‌ ಹೀರೋ ಆಗಿ ಹೊರಹೊಮ್ಮುತ್ತಾರೆ. ಅಷ್ಟರಮಟ್ಟಿಗೆ ಅವರು ಆ್ಯಕ್ಷನ್‌ ಮಾಡಿದ್ದಾರೆ. ಅವರೊಬ್ಬ ಒಳ್ಳೆಯ ಸ್ಟಂಟ್‌ಮ್ಯಾನ್‌ ಎಂಬುದು ಗೊತ್ತಿರಲಿಲ್ಲ. ನಾನೂ ಆ್ಯಕ್ಷನ್‌ ಮಾಡ್ತೀನಿ, ಮಾಡ್ರಪ್ಪಾ ಅಂತ ಹೇಳುತ್ತಿದ್ದರು. ರಿಸ್ಕಿ ಸ್ಟಂಟ್ಸ್‌ಗಳನ್ನು ಸಂಯೋಜನೆ ಮಾಡಿದ ಫೈಟ್‌ ಮಾಸ್ಟರ್ಗೆ ನಿಜಕ್ಕೂ ದಿಗಂತ್‌ ಅಷ್ಟೊಂದು ಅದ್ಭುತವಾಗಿ ಆ್ಯಕ್ಷನ್‌ ಮಾಡ್ತಾರಾ ಅನ್ನೋ ಅಚ್ಚರಿಯಾಯ್ತು. ಸೆಟ್‌ನಲ್ಲಿರೋ ಎಲ್ಲರಿಗೂ ದಿಗಂತ್‌ ಆ್ಯಕ್ಷನ್‌ ಇಷ್ಟವಾಯಿತು. ಇನ್ನು, ಕಂಪ್ಲೀಟ್ಲಿ ಇದು ಫ್ಯಾಮಿಲಿ ಎಂಟರ್‌ಟೈನರ್‌ ಸಿನಿಮಾ. ಇಲ್ಲಿ ಲವ್ವು, ನೋವು, ನಗು ಎಲ್ಲವೂ ಮೇಳೈಸಿದೆ. ಎರಡು ಗಂಟೆಗಳ ಕಾಲ ನಗಿಸೋದಷ್ಟೇ ಕಲಾವಿದರ ಕೆಲಸ. ಡಿಫ‌ರೆಂಟ್‌ ಆ್ಯಕ್ಷನ್‌ನೊಂದಿಗೆ ಎಮೋಷನಲ್‌, ಲವ್‌, ರಿವೇಂಜ್‌ ಹಾಗು ಎಲ್ಲಕ್ಕಿಂತಲೂ ಹೆಚ್ಚಾಗಿ ಸಿನಿಮಾದುದ್ದಕ್ಕೂ ಹಾಸ್ಯವೇ ತುಂಬಿಕೊಂಡಿದೆ. ಭರಪೂರ ಮನರಂಜನೆ ನೀಡೋಕೆ ದೊಡ್ಡ ತಾರಾಬಳಗದ ದಂಡೇ ಇದೆ. ಹಿರಿಯ ನಟಿ ಲಕ್ಷ್ಮೀ, ಸುಧಾರಾಣಿ, ಸರ್ದಾರ್‌ ಸತ್ಯ, ಮಿತ್ರ, ಸತ್ಯಜಿತ್‌, ಭಜರಂಗಿ ಲೋಕಿ ಇತರರು ನಟಿಸಿದ್ದಾರೆ.

ಇದುವರೆಗೆ ಸಿನಿಮಾದ ಟ್ರೇಲರ್‌ ನೊಡಿದವರೆಲ್ಲರೂ ಖುಷಿಗೊಂಡಿದ್ದಾರೆ. ಪ್ರೋಮೋಗೆ ಯೂಟ್ಯೂಬ್‌ನಲ್ಲಿ ಸಿಕ್ಕಾಪಟ್ಟೆ ಲೈಕ್ಸ್‌ ಕೂಡ ಬಂದಿದೆ. ರವಿಚಂದ್ರನ್‌ ಎಂಬ ತಂತ್ರಜ್ಞ ಸಿನಿಮಾಗೆ ಅದ್ಭುತ ಟ್ರೇಲರ್‌, ಟೀಸರ್‌ ರೆಡಿಮಾಡಿಕೊಟ್ಟಿದ್ದಾರೆ. ಅದನ್ನು ನೋಡಿದ ಪ್ರತಿಯೊಬ್ಬರಿಗೂ ಸಿನಿಮಾ ಮೇಲೆ ಹೆಚ್ಚು ನಿರೀಕ್ಷೆ ಬಂದಿದೆ.

ದಿಗಂತ್‌ ಚಿತ್ರಕ್ಕಾಗಿ ಸಿಕ್ಸ್‌ಪ್ಯಾಕ್‌ ಮಾಡಿಕೊಂಡಿದ್ದಾರೆ. ಅದು ಕ್ಲೈಮ್ಯಾಕ್ಸ್‌ ಸೀನ್‌ನಲ್ಲಿ ಎಕ್ಸ್‌ಪೋಸ್‌ ಆಗಲಿದೆ. ದಿಗಂತ್‌ ಹೀಗೂ ಇರ್ತಾರಾ? ಅನ್ನೋ ಪ್ರಶ್ನೆ “ಶಾರ್ಪ್‌ಶೂಟರ್‌’ನಲ್ಲಿ ಖಂಡಿತ ಬರುತ್ತೆ ಎನ್ನುತ್ತಾರೆ ನಿರ್ದೇಶಕ ಗೌಸ್‌ಪೀರ್‌.

ಇನ್ನು, ಚಿತ್ರಕ್ಕೆ ಮುಂಬೈ ಬೆಡಗಿ ಸಂಗೀತಾ ನಾಯಕಿ. ಇವರಿಗಿದು ಮೊದಲ ಚಿತ್ರ. ಆದರೆ, ಅವರ ಅಭಿನಯ ನೋಡಿದವರಿಗೆ ಇದು ಮೊದಲ ಸಿನಿಮಾ ಅನಿಸುವುದಿಲ್ಲ. ಅಷ್ಟರಮಟ್ಟಿಗೆ ಅವರು ಪಾತ್ರಕ್ಕೆ ಜೀವ ತುಂಬಿದಾದರೆ. ಸಿನಿಮಾ ಶುರುವಾಗುವ ಮುನ್ನ, ಒಂದೂವರೆ ತಿಂಗಳು ವರ್ಕ್‌ಶಾಪ್‌ ಮಾಡಿಸಲಾಗಿತ್ತು. ಇಡೀ ಸ್ಕ್ರಿಪ್ಟ್ ಅನ್ನೇ ಸಂಗೀತಾ ಬಾಯಿಪಾಠ ಮಾಡಿಕೊಂಡಿದ್ದರು. ಅವರ ಇಂಟ್ರಡಕ್ಷನ್‌ ಸೀನ್‌ನಲ್ಲಿ ಒಂದುವರೆ ಪೇಜ್‌ ಡೈಲಾಗ್‌ ಇತ್ತು. ಅದನ್ನು ಎಲ್ಲೂ ಎಡವದೆ ಒಂದೇ ಟೇಕ್‌ನಲ್ಲಿ ಹೇಳಿದ್ದು ವಿಶೇಷ.
ಇನ್ನು, ನಮ್ಮನ್ನು ಅಗಲಿದ ಸಂಗೀತ ನಿರ್ದೇಶಕ ಶಿವಸಂತೋಷ್‌ ಅವರು ಇಲ್ಲಿ ಐದು ಒಳ್ಳೆಯ ಹಾಡುಗಳನ್ನು ಕೊಟ್ಟಿದ್ದಾರೆ. ಎರಡು ಡುಯೆಟ್‌ ಹಾಗು ಒಂದು ಐಟಂ ಹಾಡಿಗೆ ನಾನು ಗೀತೆರಚನೆ ಮಾಡಿದ್ದೇನೆ. ಉಳಿದಂತೆ ಚಿಕ್ಕಣ್ಣ ಒಂದು ಹಾಡು ಬರೆದು, ಹಾಡಿದ್ದಾರೆ. ಆ ಹಾಡಿಗೆ ದಿಗಂತ್‌ ಕೂಡ ದನಿಯಾಗಿದ್ದಾರೆ. ಶ್ರೀಧರ್‌ ಶಿಕಾರಿಪುರ ಎಂಬ ಹೊಸ ಪ್ರತಿಭೆ ಕೂಡ ಒಂದು ಹಾಡನ್ನು ಬರೆದಿದೆ. ಸೋನುನಿಗಂ, ಕಾರ್ತಿಕ್‌ ಶ್ರೇಯಾಘೋಷಾಲ್‌ ಹಾಡಿದ್ದಾರೆ. ಈ ಚಿತ್ರದ ಮೂಲಕ ದಾವಣಗೆರೆಯ ಹುಡುಗ ಬಕ್ಕೇಶ್‌ ಕೂಡ ಗಾಯಕರಾಗಿ ಪರಿಚಯರಾಗುತ್ತಿದ್ದಾರೆ.

ಸುಮಾರು 55 ದಿನಗಳ ಕಾಲ ಬೆಂಗಳೂರು, ಮೈಸೂರು ಸುತ್ತಮುತ್ತಲಿನ ತಾಣಗಳಲ್ಲಿ ಶೂಟಿಂಗ್‌ ಮಾಡಲಾಗಿದೆ. ಥೈಲ್ಯಾಂಡ್‌ನ‌ ಹೊಸ ತಾಣದಲ್ಲಿ ಹಾಡುಗಳನ್ನು ಚಿತ್ರೀಕರಿಸಲಾಗಿದೆ. ಅದ್ಧೂರಿ ವೆಚ್ಚ ಮಾಡಿ ಮೂರು ಸೆಟ್‌ಹಾಕಿಸಿ ಹೀರೋ ಇಂಟ್ರಡಕ್ಷನ್‌ ಸಾಂಗ್‌ ಮತ್ತು ಐಟಂ ಸಾಂಗ್‌ ಶೂಟ್‌ ಮಾಡಲಾಗಿದೆ. ಬ್ಯಾಂಕಾಕ್‌ನ ಕೋಸಿಚಾಂಗ್‌ ಎಂಬ ಅಪರೂಪದ ಸ್ಥಳದಲ್ಲಿ ಹಾಡನ್ನು ಚಿತ್ರೀಕರಿಸಿದ್ದು, ಇದುವರೆಗೆ ಯಾವ ಸಿನಿಮಾ ಕೂಡ ಅಲ್ಲಿ ಶೂಟಿಂಗ್‌ ಮಾಡಿಲ್ಲ. ನಾವು ಮಾಡಿದ ಬಳಿಕ ಈಗ ರಷ್ಯನ್‌, ತೆಲುಗು, ಹಿಂದಿ ಸಿನಿಮಾಗಳು ಚಿತ್ರೀಕರಣ ಮಾಡಿಕೊಂಡು ಬಂದಿವೆ ಎಂದು ವಿವರ ಕೊಡುತ್ತಾರೆ ಗೌಸ್‌ಪೀರ್‌. ಚಿತ್ರದ ಮತ್ತೂಂದು ಹೈಲೈಟ್‌ ಅಂದರೆ, ಅದು ಕರುಣಾಕರ್‌ ಅವರ ಕ್ಯಾಮೆರಾ ಕೈಚಳಕ. ಎಲ್ಲವನ್ನೂ ಅವರಿಲ್ಲಿ ಅದ್ಭುತವಾಗಿ ತೋರಿಸಿದ್ದಾರೆ. ದೀಪು ಕತ್ತರಿ ಪ್ರಯೋಗಿಸಿದರೆ, ಥ್ರಿಲ್ಲರ್‌ ಮಂಜು ಹಾಗು ಮಾಸ್‌ಮಾದ ಅದ್ಭುತ ಸ್ಟಂಟ್‌ ಮಾಡಿಸಿದ್ದಾರೆ. ಮುಂದಿನ ವಾರ ಚಿತ್ರ ತೆರೆಕಾಣುತ್ತಿದ್ದು, ದಿನಕರ್‌ ತೂಗುದೀಪ ಅವರು ಚಿತ್ರದ ವಿತರಣೆ ಹಕ್ಕನ್ನು ಪಡೆದುಕೊಂಡಿದ್ದಾರೆ. ಡಿಸೆಂಬರ್‌ 11 ರಂದು ರಾಜ್ಯಾದ್ಯಂತ ಸುಮಾರು 150 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ಯೋಚನೆ ಇದೆ ಅನ್ನುತ್ತಾರೆ ನಿರ್ದೇಶಕ ಗೌಸ್‌.
-ಉದಯವಾಣಿ

Write A Comment