ಮುಂಬಯಿ: “ದೇಶದಲ್ಲಿ ತೀವ್ರ ಮಟ್ಟದ ಅಸಹಿಷ್ಣುತೆ ಇದೆ’ ಎಂಬ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ತೀವ್ರ ಟೀಕೆ, ಖಂಡನೆಗೆ ಗುರಿಯಾಗಿರುವ ಬಾಲಿವುಡ್ ಸೂಪರ್ಹಿಟ್ ನಟ ಶಾರುಖ್ ಖಾನ್ ಅವರ ಭದ್ರತೆಯನ್ನು ಮುಂಬಯಿ ಪೊಲೀಸರು ಬಿಗಿಗೊಳಿಸಿದ್ದಾರೆ.
“ನಾವು ನಟ ಶಾರುಖ್ ಖಾನ್ ಅವರ ಭದ್ರತೆಯನ್ನು ಹೆಚ್ಚಿಸಿದ್ದೇವೆ. ಈಗಾಗಲೇ ಕೆಲ ದಿನಗಳ ಹಿಂದೆ ಅವರಿಗೆ ಭದ್ರತೆಯನ್ನು ನೀಡಲಾಗಿತ್ತು. ಅದನ್ನೀಗ ಇನ್ನಷ್ಟು ಬಿಗಿಗೊಳಿಸಿದ್ದೇವೆ’ ಎಂದು ಡೆಪ್ಯುಟಿ ಪೊಲೀಸ್ ಕಮಿಶನರ್ ಸತ್ಯನಾರಾಯಣ ಚೌಧರಿ ತಿಳಿಸಿದ್ದಾರೆ.
“ಬಾಲಿವುಡ್ ನಟ ಶಾರುಖ್ ಖಾನ್ ಭಾರತದಲ್ಲಿ ವಾಸವಾಗಿದ್ದರೂ ಅವರ ಹೃದಯ ಪಾಕಿಸ್ಥಾನದಲ್ಲಿದೆ’ಎಂದು ಬಿಜೆಪಿ ನಾಯಕ ಕೈಲಾವ್ ವಿಜಯವರ್ಗೀಯ ಅವರು ಶಾರುಖ್ ಹೇಳಿಕೆಯನ್ನು ಖಂಡಿಸಿ ಟೀಕಿಸಿದ್ದರು. ಆದರೆ ಆ ಬಳಿಕ ಅವರು ತಮ್ಮ ಈ ವಿವಾದಾತ್ಮಕ ಹೇಳಿಕೆಯನ್ನು ಹಿಂಪಡೆದಿದ್ದರು.
ಅದಾದ ಬಳಿಕ ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್ ಅವರು “ಪಾಕಿಸ್ಥಾನದ ಉಗ್ರ ಸಂಘಟನೆ ಜಮಾತ್ ಉದ್ ದಾವಾ ಸ್ಥಾಪಕ ಹಾಫೀಜ್ ಸಯೀದ್ಗೂ ಶಾರುಖ್ ಖಾನ್ಗೂ ಯಾವುದೇ ವ್ಯತ್ಯಾಸವೇ ಇಲ್ಲ; ಇಬ್ಬರೂ ಒಂದೇ ಬಗೆಯಲ್ಲಿ ಮಾತನಾಡುತ್ತಾರೆ. ಆದುದರಿಂದ ಶಾರುಖ್ ಖಾನ್ ಪಾಕಿಸ್ಥಾನಕ್ಕೆ ಹೋಗಿ ನೆಲಸುವುದು ಉತ್ತಮ’ ಎಂದು ಹೇಳಿದ್ದರು.
ಇದಕ್ಕೆ ತೀರ ವ್ಯತಿರಿಕ್ತವೆಂಬಂತೆ ಶಿವಸೇನೆಯು “ಶಾರುಖ್ ಖಾನ್ ಒಬ್ಬ ಮುಸ್ಲಿಂ ಎನ್ನುವ ಕಾರಣಕ್ಕೆ ಅವರನ್ನು ಗುರಿ ಇರಿಸಿ ಟೀಕಿಸಬಾರದು. ಶಾರುಖ್ ಆಗಲೀ ಭಾರತದ ಮುಸ್ಲಿಂ ಅಲ್ಪಸಂಖ್ಯಾಕರಾಗಲೀ ಸಹಿಷ್ಣುಗಳಾಗಿದ್ದಾರೆ’ ಎಂದು ಹೇಳಿತ್ತು.
-ಉದಯವಾಣಿ