ರಾಜ್ಕೋಟ್,ಅ.19: ಭಾರತ ಇಲ್ಲಿ ನಡೆದ ಮೂರನೆ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕ ವಿರುದ್ಧ 18 ರನ್ಗಳ ಸೋಲು ಅನುಭವಿಸಿದೆ.
ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಕ್ರೀಡಾಂಗಣದಲ್ಲಿ ರವಿವಾರ ನಡೆದ ಪಂದ್ಯದಲ್ಲಿ ಆರಂಭಿಕ ದಾಂಡಿಗ ಕ್ವಿಂಟನ್ ಡಿ ಕಾಕ್ ಶತಕ ಮತ್ತು ವೇಗಿ ಮಾರ್ನೆ ಮೊರ್ಕೆಲ್ 39ಕ್ಕೆ 4ವಿಕೆಟ್(10-1-39-4) ಕಬಳಿಸಿ ಆಫ್ರಿಕ ತಂಡದ ಗೆಲುವಿಗೆ ನೆರವಾದರು. ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಗೆಲುವಿಗೆ 271 ರನ್ಗಳ ಸವಾಲನ್ನು ಪಡೆದ ಭಾರತ ಮಾರ್ಕೆಲ್ ದಾಳಿಗೆ ಸಿಲುಕಿ ನಿಗದಿತ 50 ಓವರ್ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 252 ರನ್ ಗಳಿಸಿತು.ಇದರೊಂದಿಗೆ ಐದು ಏಕದಿನ ಸರಣಿಯಲ್ಲಿ ಆಫ್ರಿಕ 2-1 ಮುನ್ನಡೆ ಸಾಧಿಸಿತು.
ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕ ತಂಡಕ್ಕೆ ಡಿ ಕಾಕ್ ಸ್ಪರ್ಧಾತ್ಮಕ ಸವಾಲನ್ನು ಸೇರಿಸಲು ನೆರವಾದರು. ಭಾರತಕ್ಕೆ ಗೆಲ್ಲಲು ಅವಕಾಶ ಇದ್ದರೂ ಆಫ್ರಿಕದ ಬೌಲರ್ಗಳು ಸಂಘಟಿತ ಪ್ರಯತ್ನದ ಮೂಲಕ ಭಾರತಕ್ಕೆ ಗೆಲುವು ನಿರಾಕರಿಸಿದರು. ಭಾರತ ಮೊದಲ ವಿಕೆಟ್ಗೆ 10.4 ಓವರ್ಗಳಲ್ಲಿ 41 ರನ್ ಸೇರಿಸಿತ್ತು. ದಕ್ಷಿಣ ಆಫ್ರಿಕದ ಬೌಲರ್ಗಳ ದಾಳಿಯ ಮುಂದೆ ಭಾರತದ ದಾಂಡಿಗರು ರನ್ ಗಳಿಸಲು ಪರದಾಡಿದರು. ಶಿಖರ್ ಧವನ್ 29 ಎಸೆತಗಳಲ್ಲಿ 2 ಬೌಂಡರಿಗಳ ಸಹಾಯದಿಂದ 13 ರನ್ ಗಳಿಸಿ ನಿರ್ಗಮಿಸಿದರು. ಆದರೆ ರೋಹಿತ್ ಶರ್ಮ ಎಂದಿನಂತೆ ಎಚ್ಚರಿಕೆಯಿಂದ ಆಟವಾಡಿ ಅಮೂಲ್ಯ 65 ರನ್ (74ಎ, 7ಬೌ,2ಸಿ) ಕೊಡುಗೆ ನೀಡಿದರು.
ಶರ್ಮ ಮತ್ತು ವಿರಾಟ್ ಕೊಹ್ಲಿ ಎರಡನೆ ವಿಕೆಟ್ಗೆ ಜೊತೆಯಾಟದಲ್ಲಿ 72 ರನ್ ಸೇರಿಸಿದರು. ಶರ್ಮ ಔಟಾದ ಬಳಿಕ ನಾಯಕ ಧೋನಿ ಮತ್ತು ಉಪನಾಯಕ ಕೊಹ್ಲಿ 18.4 ಓವರ್ಗಳಲ್ಲಿ 80 ರನ್ ಸೇರಿಸಿದರು. ಧೋನಿ 41.5ನೆ ಓವರ್ನಲ್ಲಿ ಔಟಾದರು. ಧೋನಿ 47 ರನ್(61ಎ, 5ಬೌ) ಗಳಿಸಿದರು. ಧೋನಿ ಕ್ರೀಸ್ನಲ್ಲಿರುವ ತನಕ ಭಾರತದ ಗೆಲುವಿನ ಕನಸು ಜೀವಂತವಾಗಿತ್ತು. ಸುರೇಶ್ ರೈನಾ ಖಾತೆ ತೆರೆಯಲಿಲ್ಲ. ರೋಹಿತ್ ಶರ್ಮ, ಕೊಹ್ಲಿ ಮತ್ತು ಧೋನಿ ದೊಡ್ಡ ಕೊಡುಗೆ ನೀಡಿದ್ದರೂ, ಸ್ಫೋಟಕ ಬ್ಯಾಟಿಂಗ್ಗೆ ಒತ್ತು ನೀಡಲಿಲ್ಲ. ಈ ಕಾರಣದಿಂದಾಗಿ ಭಾರತದ ಮಧ್ಯಮ ಸರದಿ ಒತ್ತಡಕ್ಕೆ ಸಿಲುಕಿತು. ಅರ್ಧಶತಕದ ಬರ ಎದುರಿಸುತ್ತಿದ್ದ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಟೆಸ್ಟ್ನಲ್ಲಿ ಆಡಿದಂತೆ 99 ಎಸೆತಗಳಲ್ಲಿ 5 ಬೌಂಡರಿಗಳ ನೆರವಿನಲ್ಲಿ 77 ರನ್ ಗಳಿಸಿ ಔಟಾದರು.
45.ನೆ ಓವರ್ನಲ್ಲಿ ಕೊಹ್ಲಿ ಮಾರ್ನೆ ಮೊರ್ಕೆಲ್ಗೆ ವಿಕೆಟ್ ಒಪ್ಪಿಸಿದರು. ಎರಡನೆ ಎಸೆತದಲ್ಲಿ ಅಜಿಂಕ್ಯ ರಹಾನೆ(4) ಬೇಗನೆ ಪೆವಿಲಿಯನ್ ಸೇರಿದರು. ಬಳಿಕ ಕ್ರೀಸ್ಗೆ ಆಗಮಿಸಿದ ಹರ್ಭಜನ್ ಸಿಂಗ್ ಅವರು ಮೊರ್ಕೆಲ್ಗೆ ಹ್ಯಾಟ್ರಿಕ್ ನಿರಾಕರಿಸಿದರು. ಹರ್ಭಜನ್ ಸಿಂಗ್ ಮತ್ತು ಅಕ್ಷರ್ ಪಟೇಲ್ ಬ್ಯಾಟಿಂಗ್ ಮುಂದುವರಿಸಿದರೂ ಅವರಿಗೆ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಹರ್ಭಜನ್ ಸಿಂಗ್ ಔಟಾಗದೆ 20 ರನ್ (17ಎ, 1ಬೌ) ಮತ್ತು ಅಕ್ಷರ್ ಪಟೇಲ್ ಔಟಾಗದೆ 15 ರನ್(11ಎ,1ಸಿ) ಗಳಿಸಿದರು. ಅವರು 4.4 ಓವರ್ಗಳಲ್ಲಿ 7.7 ಸರಾಸರಿಯಂತೆ 36 ರನ್ ಸೇರಿಸಿದರು. ಆದರೆ ಅಷ್ಟು ಹೊತ್ತಿಗೆ 50 ಓವರ್ಗಳು ಪೂರ್ಣಗೊಂಡಿದ್ದವು. ಅಗ್ರ ಸರದಿಯ ದಾಂಡಿಗರ ನಿಧಾನಗತಿಯ ಆಟದಿಂದಾಗಿ ತಂಡ ಗೆಲುವಿನ ದಡ ಸೇರಲಿಲ್ಲ.
ಡಿ ಕಾಕ್ ಶತಕ
ಈ ಮೊದಲು ಆರಂಭಿಕ ಬ್ಯಾಟ್ಸ್ಮನ್ ಹಾಗೂ ವಿಕೆಟ್ ಕೀಪರ್ ಕ್ವಿಂಟನ್ ಡಿ ಕಾಕ್ ಪ್ರಸ್ತುತ ಸಾಲಿನಲ್ಲಿ ದಾಖಲಿಸಿದ ಮೊದಲ ಶತಕದ ನೆರವಿನಲ್ಲಿ ದಕ್ಷಿಣ ಆಫ್ರಿಕ ತಂಡ ನಿಗದಿತ 50 ಓವರ್ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 270 ರನ್ ಗಳಿಸಿತ್ತು.
ದಕ್ಷಿಣ ಆಫ್ರಿಕ ತಂಡಕ್ಕೆ 300ಕ್ಕೂ ಅಧಿಕ ರನ್ ದಾಖಲಿಸುವ ಗುರಿ ಹೊಂದಿತ್ತು. ಆದರೆ ಭಾರತದ ಸ್ಪಿನ್ನರ್ಗಳು ಅವರ ಬ್ಯಾಟಿಂಗ್ಗೆ ಅಡ್ಡಿಪಡಿಸಿದರು. ಈ ಕಾರಣದಿಂದಾಗಿ ಒಂದು ಹಂತದಲ್ಲಿ 40 ಓವರ್ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 210 ರನ್ ಮಾಡಿದ್ದ ದಕ್ಷಿಣ ಆಫ್ರಿಕ ತಂಡ ಮುಂದೆ 10 ಓವರ್ಗಳಲ್ಲಿ 60 ರನ್ ಸೇರಿಸಲಷ್ಟೇ ಶಕ್ತವಾಯಿತು.
ಇತ್ತೀಚಿನ ದಿನಗಳಲ್ಲಿ ಕಳಪೆ ಪ್ರದರ್ಶನ ನೀಡುತ್ತಿರುವ ಮಿಡ್ಲ್ ಆರ್ಡರ್ ಬ್ಯಾಟ್ಸ್ಮನ್ ಡೇವಿಡ್ ಮಿಲ್ಲರ್ ಅವರು ಡಿ ಕಾಕ್ ಜೊತೆ ಇನಿಂಗ್ಸ್ ಆರಂಭಿಸಿದ್ದರು. ಅವರು ಡಿ ಕಾಕ್ಗೆ ಸಾಥ್ ನೀಡಿ ಮೊದಲ ವಿಕೆಟ್ಗೆ 13.3 ಓವರ್ಗಳಲ್ಲಿ 72 ರನ್ ಸೇರಿಸಲು ನೆರವಾದರು. ಮಿಲ್ಲರ್ 41 ಎಸೆತಗಳಲ್ಲಿ 4 ಬೌಂಡರಿಗಳ ಸಹಾಯದಿಂದ 33 ರನ್ ಗಳಿಸಿ ಹರ್ಭಜನ್ ಸಿಂಗ್ಗೆ ವಿಕೆಟ್ ಒಪ್ಪಿಸಿದರು.
ಒನ್ ಡೌನ್ ಆಟಗಾರನಾಗಿ ಆಗಮಿಸಿದ ಹಾಶಿಮ್ ಅಮ್ಲ 5 ರನ್(15 ಎಸೆತ) ಗಳಿಸಿದರು. ಎಫ್ ಡು ಪ್ಲೆಸಿಸ್ 3 ವಿಕೆಟ್ಗೆ ಡಿ ಕಾಕ್ಗೆ ಉತ್ತಮ ಬೆಂಬಲ ನೀಡಿದರು.ಇವರ ಹೋರಾಟದಲ್ಲಿ 20.1 ಓವರ್ಗಳಲ್ಲಿ 5.88 ಸರಾಸರಿಯಂತೆ 118 ರನ್ ಸೇರ್ಪಡೆಗೊಂಡಿತು.
ಭಾರತ ವಿರುದ್ಧದ ಕಳೆದ ಎರಡು ಏಕದಿನ ಪಂದ್ಯಗಳಲ್ಲಿ ಅರ್ಧಶತಕಗಳನ್ನು ದಾಖಲಿಸಿದ್ದ ಪ್ಲೆಸಿಸ್ ಮೂರನೆ ಬಾರಿ ಅರ್ಧಶತಕ ದಾಖಲಿಸಿ ತಂಡದ ಸ್ಕೋರ್ನ್ನು ದ್ವಿಶತಕದ ಗಡಿ ದಾಟಿಸಲು ನೆರವಾದರು. ಪ್ಲೆಸಿಸ್ 63 ಎಸೆತಗಳಲ್ಲಿ 6 ಬೌಂಡರಿಗಳ ಸಹಾಯದಿಂದ 60 ರನ್ ಸಿಡಿಸಿದರು.
ಡಿ ಕಾಕ್ 38.4ನೆ ಓವರ್ನಲ್ಲಿ ಮೋಹಿತ್ ಶರ್ಮ ಎಸೆತದಲ್ಲಿ ಚೆಂಡನ್ನು ಬೌಂಡರಿ ಗೆರೆ ದಾಟಿಸುವ ಮೂಲಕ ಶತಕ ತಲುಪಿದರು. 50ನೆ ಏಕದಿನ ಪಂದ್ಯವನ್ನಾಡುತ್ತಿರುವ ಡಿ ಕಾಕ್ 114 ಎಸೆತಗಳಲ್ಲಿ 11 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ ಶತಕ ಪೂರ್ಣಗೊಳಿಸಿದರು. ಇದು ಅವರ ಏಳನೆ ಏಕದಿನ ಶತಕ ಮತ್ತು ಭಾರತದ ವಿರುದ್ಧ ಆಡಿರುವ 7 ಇನಿಂಗ್ಸ್ಗಳಲ್ಲಿ 4ನೆ ಶತಕ ಆಗಿದೆ.
ಡಿ ಕಾಕ್ 118 ಎಸೆತಗಳಲ್ಲಿ 11 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 103 ರನ್ ಗಳಿಸಿದರು. 40ನೆ ಓವರ್ನ ಕೊನೆಯ ಎಸೆತದಲ್ಲಿ ನಾಯಕ ಡಿವಿಲಿಯರ್ಸ್ ಕಳಿಸಿದ ಚೆಂಡನ್ನು ಕ್ಯಾಚ್ ತೆದುಕೊಳ್ಳಲು ಧವನ್ ವಿಫಲರಾದರು. ಆದರೆ ಧೋನಿ ಜೊತೆ ಸೇರಿಕೊಂಡು ಡಿ ಕಾಕ್ನ್ನು ರನೌಟ್ ಮಾಡುವಲ್ಲಿ ಯಶಸ್ವಿಯಾದರು.
ಡಿವಿಲಿಯರ್ಸ್ 4 ರನ್, ಬೆಹರ್ದೀನ್ ಔಟಾಗದೆ 33, ಡುಮಿನಿ 14 ಮತ್ತು ಡೇಲ್ ಸ್ಟೇಯ್ನ್ 12 ರನ್ ಗಳಿಸಿದರು.
ಭಾರತದ ಪರ ಮೋಹಿತ್ ಶರ್ಮ 62ಕ್ಕೆ 2, ಹರ್ಭಜನ್ ಸಿಂಗ್, ಅಕ್ಷರ್ ಪಟೇಲ್ ಮತ್ತು ಅಮಿತ್ ಮಿಶ್ರಾ ತಲಾ 1 ವಿಕೆಟ್ ಪಡೆದರು.
,,,
ಸ್ಕೋರ್ ಪಟ್ಟಿ
ದಕ್ಷಿಣ ಆಫ್ರಿಕ 50 ಓವರ್ಗಳಲ್ಲಿ 7 ವಿಕೆಟ್ಗೆ 270
ಕ್ವಿಂಟನ್ ಡಿ ಕಾಕ್ ರನೌಟ್(ಧವನ್/ಧೋನಿ) 103
ಡೇವಿಡ್ ಮಿಲ್ಲರ್ ಸಿ ರಹಾನೆ ಬಿ ಹರ್ಭಜನ್ ಸಿಂಗ್ 33
ಹಾಶಿಮ್ ಅಮ್ಲ ಸ್ಪಂಪ್ಡ್ ಧೋನಿ ಬಿ ಮಿಶ್ರಾ 05
ಎಫ್ ಡಿ ಪ್ಲೆಸಿಸ್ ಸಿ ಕುಮಾರ್ ಬಿ ಮೋಹಿತ್ 60
ಎಬಿಡಿ ವಿಲಿಯರ್ಸ್ ಎಲ್ಬಿಡ್ಬು ಬಿ ಪಟೇಲ್ 04
ಜೆಪಿ ಡುಮಿನಿ ಸಿ ರೈನಾ ಬಿ ಮೋಹಿತ್ 14
ಬೆಹರ್ದೀನ್ ಔಟಾಗದೆ 33
ಡಿ.ಸ್ಟೆಯ್ನೆ ರನೌಟ್(ರೈನಾ/ಕುಮಾರ್) 12
ಕೆ.ರಬಾಡ ಔಟಾಗದೆ 00
ಇತರೆ 06
ವಿಕೆಟ್ ಪತನ:1-72, 2-87, 3-205, 4-210, 5-210, 6-241, 7-264.
ಬೌಲಿಂಗ್ ವಿವರ
ಬಿ.ಕುಮಾರ್ 10-1-65-0
ಮೋಹಿತ್ ಶರ್ಮ 09-0-62-2
ಹರ್ಭಜನ್ ಸಿಂಗ್ 10-0-41-1
ಅಮಿತ್ ಮಿಶ್ರಾ 10-0-38-1
ಅಕ್ಷರ್ ಪಟೇಲ್ 09-0-51-1
ಸುರೇಶ್ ರೈನಾ 02-0-13-0
ಭಾರತ 50 ಓವರ್ಗಳಲ್ಲಿ 252/6
ರೋಹಿತ್ ಶರ್ಮ ಸಿ ಮತ್ತು ಬಿ ಡುಮಿನಿ 65
ಶಿಖರ್ ಧವನ್ ಸಿ ಡಿವಿಲಿಯರ್ಸ್ ಬಿ ಮೊರ್ಕೆಲ್ 13
ವಿರಾಟ್ ಕೊಹ್ಲಿ ಸಿ ಮಿಲ್ಲರ್ ಬಿ ಮೊರ್ಕೆಲ್ 77
ಎಂಎಸ್ ಧೋನಿ ಸಿ ಸ್ಟೇಯ್ನ ಬಿ ಮೊರ್ಕೆಲ್ 47
ಸುರೇಶ್ ರೈನಾ ಸಿ ಮಿಲ್ಲರ್ ಬಿ ತಾಹಿರ್ 0
ರಹಾನೆ ಸಿ ಮಿಲ್ಲರ್ ಬಿ ಮೊರ್ಕೆಲ್ 4
ಅಕ್ಷರ್ ಪಟೇಲ್ ಔಟಾಗದೆ 15
ಹರ್ಭಜನ್ ಸಿಂಗ್ ಔಟಾಗದೆ 20
ಇತರ 11
ವಿಕೆಟ್ಪತನ: 1-41, 2-113, 3-193, 4-206, 5-216, 6-216.
ಬೌಲಿಂಗ್ ವಿವರ:
ಸ್ಟೇಯ್ನ 10-0-65-0
ರಬಾಡ 10-0-39-0
ಮೊರ್ಕೆಲ್ 10-1-39-4
ಜೆಪಿ ಡುಮಿನಿ 08-0-46-1
ತಾಹಿರ್ 10-0-51-1
ಬೆಹರ್ದೀನ್ 02-0-09-0.
ಪಂದ್ಯಶ್ರೇಷ್ಠ :ಮಾರ್ನೆ ಮೊರ್ಕೆಲ್
