ಮನೋರಂಜನೆ

ರಿಂಗ್‌ಮಾಸ್ಟರ್ ಚಿತ್ರ: ಹಲವಾರು ಬಂಧಗಳ ಸೂತ್ರಧಾರ

Pinterest LinkedIn Tumblr

sring masterಚಿತ್ರ: ರಿಂಗ್‌ಮಾಸ್ಟರ್
ತಾರಾಗಣ:  ಅರುಣ್‌ ಸಾಗರ್, ಅನುಶ್ರೀ, ಶೃಂಗ, ಶ್ವೇತಾ ಇತರರು
ನಿರ್ದೇಶನ: ವಿಶ್ರುತ್ ನಾಯಕ್
ನಿರ್ಮಾಪಕರು: ಸತ್ಯನಾರಾಯಣ, ಬಸವರಾಜು, ನರಸಿಂಹಮೂರ್ತಿ, ಚೇತನ್

ವಿದೇಶಿ ಸಿನಿಮಾ ‘ಮಿಸ್‌ ಬಿಹೇವಿಯರ್’ನ ಸ್ಫೂರ್ತಿಯಿಂದ ರೂಪುಗೊಂಡಿದ್ದು ಕನ್ನಡದ ‘ರಿಂಗ್ ಮಾಸ್ಟರ್’ ಚಿತ್ರ. ಒಂದು ಅಪಾರ್ಟ್‌ಮೆಂಟ್. ಅಲ್ಲಿ ಮೂವರು ಸ್ನೇಹಿತರು. ಅವರ ನಡುವೆ ಆಗುಂತಕನ ಸೇರ್ಪಡೆ. ಆತ ಯಾರು? ಇವರ ನಡುವೆ ಹೇಗೆ ಬಂದ? ಏಕೆ ಬಂದ? ಅಷ್ಟಕ್ಕೂ ಈ ಅಪಾರ್ಟ್‌ಮೆಂಟ್‌ನಲ್ಲಿರುವ ಮೂವರು ಸ್ನೇಹಿತರ ಹಿನ್ನೆಲೆ ಏನು? ಹೀಗೆ ಒಂದಕ್ಕೊಂದು ಕುತೂಹಲಗಳನ್ನು ಕಥೆಯಾಗಿಸಿದ್ದಾರೆ ನಿರ್ದೇಶಕ ವಿಶ್ರುತ್ ನಾಯಕ್.

ಇತ್ತೀಚೆಗೆ ತೆರೆ ಕಂಡ ‘ಆಟಗಾರ’ ಚಿತ್ರವೂ ‘ರಿಂಗ್ ಮಾಸ್ಟರ್’ ನೋಡುವಾಗ ಕೊಂಚ ತಲೆಯೊಳಗೆ ಹಾಯ್ದುಹೋಗುತ್ತದೆ. ಅದಕ್ಕೆ ಕಾರಣ ಒಳಿತು–ಕೆಡುಕು–ಪರಿವರ್ತನೆಯ ಬಂಧ. ಸೀಮಿತ ಸಂಪನ್ಮೂಲದಲ್ಲಿ ಸಿದ್ಧಮಾದರಿಗಳನ್ನು ಬದಿಗೆ ಸರಿಸಿ ಸಾಮಾನ್ಯ ಪ್ರಯೋಗಕ್ಕೆ ಒಡ್ಡಿಕೊಂಡಿರುವ ನಿರ್ದೇಶಕರನ್ನು ಪ್ರಶಂಸಿಸಬಹುದು.

ಆದರೆ ಇಲ್ಲಿನ ಹೆಚ್ಚು ಕೌತುಕಗಳು ‘ಹೀಗಿರಬಹುದಲ್ಲವೇ’, ‘ಹೀಗಾಗಬಹುದಲ್ಲವೇ’ ಎಂದುಕೊಳ್ಳುವ ಪ್ರೇಕ್ಷಕರ ಊಹೆಗೆ ನಿಲುಕುವಂಥದ್ದೇ. ಕುತೂಹಲದಲ್ಲಿ ಬಲವಿಲ್ಲದ್ದು ‘ರಿಂಗ್ ಮಾಸ್ಟರ್’ ಶಕ್ತಿಗೆ ಹಿನ್ನಡೆ.

ಅರುಣ್ ಸಾಗರ್ ಚಿತ್ರದ ಸೂತ್ರಧಾರ. ಅವರ ವರ್ತನೆ ಸನ್ನಿವೇಶದಿಂದ ಸನ್ನಿವೇಶಕ್ಕೆ ಬದಲಾಗುತ್ತದೆ. ಇದು ಸಿನಿಮಾದ ಮಿತಿ ಮತ್ತು ಶಕ್ತಿಯೂ ಹೌದು. ಅವರ ಬದಲಾಗುವಿಕೆ ಮೆಚ್ಚುಗೆಗೆ ಅರ್ಹವಾದಂತೆ ‘ಅತಿಯಾಯಿತೇ’ ಎಂದು ಮೂಗುಮುರಿಯಲೂ ಕಾರಣವಾಗುತ್ತದೆ. ಆರಂಭದಲ್ಲಿ ಕೋಣೆಯೊಳಗೆ ಆವರಿಸುವ ತಂಬಾಕಿನ ಹೊಗೆ ಮತ್ತು ಸನ್ನಿವೇಶಗಳು ಅತಿ ಎನಿಸುತ್ತವೆ.

ಕಥೆಯನ್ನು ಕೆದಕಿದರೆ ಪದರ ಪದರಗಳೇ ತೆರೆದುಕೊಳ್ಳುತ್ತದೆ. ಲಿವಿಂಗ್ ರಿಲೇಷನ್‌, ದಾರಿ ತಪ್ಪಿ ದುಶ್ಚಟಕ್ಕೆ ದಾಸರಾಗಿರುವ, ಸಂಸ್ಕೃತಿ–ಸಂಸ್ಕಾರಗಳಿಗೆ ವಿರುದ್ಧವಾಗಿರುವ ಕಾಲೇಜು ಯುವಕ–ಯುವತಿಯರು, ಪೋಷಕರ ಜವಾಬ್ದಾರಿಗಳನ್ನು ‘ರಿಂಗ್ ಮಾಸ್ಟರ್’ ತೋರಿಸುತ್ತಾನೆ. ಕೆಡುಕಿನ ನಾಶಕ್ಕೆ ಎಲ್ಲಾ ಕಾಲದಲ್ಲೂ ಒಳಿತು ಇದ್ದೇ ಇದೆ. ಕೆಟ್ಟ ಮನುಷ್ಯ ಸಾವಿಗೆ ಹೇಗೆ ಭಯಗೊಳ್ಳುತ್ತಾನೆ, ಭಯ ಮನುಷ್ಯನ ಪ್ರಜ್ಞೆಯನ್ನು ಹೇಗೆಲ್ಲ ಎಚ್ಚರಗೊಳಿಸಿ ಸರಿದಾರಿಯಲ್ಲಿ ನಡೆಸುತ್ತದೆ ಎನ್ನುವ ಸಂದೇಶವನ್ನು ಹಲವು ತರ್ಕಗಳಲ್ಲಿ ಹೇಳಿ ‘ರಿಂಗ್ ಮಾಸ್ಟರ್’ ನಿರ್ಗಮಿಸುತ್ತಾನೆ.

ಇಷ್ಟೆಲ್ಲ ಹೇಳುವಾಗ ಹೆಣ್ಣಿನ ಉಡುಗೆ–ತೊಡುಗೆ, ಮತ್ತು ಸಂಸ್ಕೃತಿ–ಸಂಸ್ಕಾರಗಳ ಬಗ್ಗೆ ಬರುವ ‘ಸನಾತನ’ ಮಾತುಗಳು ಚಿತ್ರಕಥೆಗೆ ಔಚಿತ್ಯವಿತ್ತೇ? ಎನ್ನುವ ಪ್ರಶ್ನೆಗೆ ಕಾರಣವಾಗುತ್ತದೆ. ‘ಬೆಂಕಿಪಟ್ಣ’ ಚಿತ್ರದ ನಂತರ ಅರುಣ್ ಸಾಗರ್ ಮತ್ತು ಅನುಶ್ರೀ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

ಚಿತ್ರದ ಮತ್ತೊಂದು ಜೋಡಿ ಶ್ವೇತಾ ಮತ್ತು ಶೃಂಗ ಅವರದು. ನಾಲ್ಕು ಪಾತ್ರಗಳಿಗೂ ಪ್ರಾಮುಖ್ಯವಿದೆ. ರವಿ ಬಸ್ರೂರು ಸಂಗೀತ ನೀಡಿರುವ ‘ಬಿಸಿ ಉಸಿರ ಬಯಕೆಯನ್ನು ನೀಗೆಯಾ…’, ‘ಮೋಹದ ಮೀರಿ ನಿಲುವಂಗೆ, ದೇಹವೆಂಬುದು ನಿಲುವಂಗಿ, ಭಕ್ತಿ ಲಿಂಗನ ಸಂಘದಲ್ಲಿ ಸಕಲವು ಸರಸಂಗಿ…’ ಇಷ್ಟವಾಗುತ್ತದೆ. ಸಿನಿಟೆಕ್ ಸೂರಿ ತಮಗೆ ಲಭ್ಯವಾಗಿರುವ ಸೀಮಿತ ಪ್ರದೇಶದಲ್ಲಿಯೇ ಕ್ಯಾಮೆರಾ ಕೋನಗಳನ್ನು ಅಚ್ಚುಕಟ್ಟಾಗಿ ಹೊಂದಿಸಿದ್ದಾರೆ.

Write A Comment