ಗ್ಲಾಮರ್ ಜತೆಜತೆಗೆ ಅಭಿನಯಕ್ಕೂ ಸಮಾನ ಪ್ರಾಮುಖ್ಯತೆ ನೀಡಿದ ಹೆಗ್ಗಳಿಕೆ ಐಶ್ವರ್ಯಾ ರೈ ಬಚ್ಚನ್ ಅವರದು. ತಾಯಿಯ ಪಟ್ಟ ಅಲಂಕರಿಸಿರುವ ಅವರಿಂದ ಇನ್ನುಮುಂದೆ ಗ್ಲಾಮರ್ ಪಾತ್ರಗಳನ್ನು ಅಭಿಮಾನಿಗಳು ನಿರೀಕ್ಷಿಸುವಂತಿಲ್ಲ. ಯಾಕೆ? ಮುಂದೆ ಓದಿ-
ವಯೋಸಹಜ ಪಾತ್ರಗಳತ್ತ ಗಮನಹರಿಸಿರುವ ಐಶೂ, ಇದೇ ವಾರ ತೆರೆಕಾಣಲಿರುವ (ಅ. 9) ‘ಜಝ್ಬಾ’ ಚಿತ್ರದಲ್ಲಿ ಹೆಣ್ಣುಮಗುವಿನ ತಾಯಿಯಾಗಿ ದರ್ಶನ ಕೊಡಲಿದ್ದಾರೆ. ಅಪಹರಣಕ್ಕೀಡಾದ ಮಗಳನ್ನು ಬಿಡಿಸಿಕೊಳ್ಳಲು ನ್ಯಾಯಾಲಯದಲ್ಲಿ ವಿಲನ್ಗಳ ಪರ ವಾದಿಸುವ ವಕೀಲೆಯ ಪಾತ್ರ ಅವರದಂತೆ! ಈಗಾಗಲೇ ಟ್ರೇಲರ್ ಬಿಡುಗಡೆಯಾಗಿದ್ದು, ವೀಕ್ಷಕರ ಕುತೂಹಲ ಇಮ್ಮಡಿಗೊಳಿಸಿದೆ.
ಮುಂದಿನ ಚಿತ್ರಗಳಲ್ಲೂ ಇಂಥ ಡಿ’ಗ್ಲಾಮರ್ ಪಾತ್ರಗಳನ್ನೇ ಐಶೂ ಆಯ್ಕೆ ಮಾಡಿಕೊಳ್ಳಲಿದ್ದಾರಂತೆ. ಕರಣ್ ಜೋಹರ್ ನಿರ್ದೇಶಿಸಲಿರುವ ‘ಏ ದಿಲ್ ಹೈ ಮುಷ್ಕಿಲ್’ ಚಿತ್ರದಲ್ಲೂ ಅವರು ಬಣ್ಣ ಹಚ್ಚುತ್ತಿದ್ದಾರೆ. ಆದರೆ ಅದು ಯಾವ ಬಗೆಯ ಪಾತ್ರ ಎಂಬ ಬಗ್ಗೆ ಚಿತ್ರತಂಡದಿಂದ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಸದ್ಯ ಐಶೂ ಗ್ಲಾಮರ್ ಪಾತ್ರಕ್ಕೆ ಅಂಟಿಕೊಳ್ಳುವುದಿಲ್ಲ ಎಂಬ ನಿಲುವು ತಾಳಿರುವುದರಿಂದ ಅಲ್ಲಿಯೂ ಡಿ’ಗ್ಲಾಮರ್ ಪಾತ್ರವೇ ಇರಬಹುದೇ ಎಂಬುದು ಸಿನಿಮಂದಿಯ ಅಂದಾಜು.
***
ಖಡಕ್ ಕರೀನಾ
ಕೆಲ ನಟಿಮಣಿಯರಿಗೆ ಮದುವೆಯಾಗುತ್ತಿದ್ದಂತೆ ಅವಕಾಶಗಳ ಬರ ಕಾಡತೊಡಗುತ್ತದೆ. ಆದರೆ ಕರೀನಾ ಕಪೂರ್ ಖಾನ್ ವಿಷಯದಲ್ಲಿ ಹೀಗೆ ಹೇಳಲಿಕ್ಕಾಗುವುದಿಲ್ಲ. ಯಾಕೆಂದರೆ, ಸೈಫ್ ಅಲಿ ಖಾನ್ ಅವರನ್ನು ವಿವಾಹವಾದ ಮೇಲೂ ‘ಸಿಂಘಂ ರಿಟರ್ನ್ಸ್’, ‘ಬಜರಂಗಿ ಭಾಯಿಜಾನ್’ ತರಹದ ಸೂಪರ್ ಹಿಟ್ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ ಕರೀನಾ. ಚಿತ್ರರಂಗದವರ ಸ್ನೇಹಕ್ಕೆ ಕಟ್ಟುಬಿದ್ದು ಐಟಂ ಸಾಂಗ್ಗಳಲ್ಲಿ ಹೆಜ್ಜೆ ಹಾಕಿದರೂ ಅಲ್ಲೊಂದು ಮಡಿವಂತಿಕೆ ಕಾಯ್ದುಕೊಂಡೇ ಬರುತ್ತಿದ್ದಾರೆ. ಮುಜುಗರ ಉಂಟುಮಾಡುವಂಥ ಗ್ಲಾಮರ್ ದೃಶ್ಯಗಳಲ್ಲಿ ಅವರು ನಟಿಸುತ್ತಿಲ್ಲ. ಈ ಮಾತಿಗೆ ಲೇಟೆಸ್ಟ್ ಉದಾಹರಣೆ; ‘ಕಿ ಆಂಡ್ ಕಾ’!
ಆರ್. ಬಾಲ್ಕಿ ನಿರ್ದೇಶನದ ಈ ಲೇಟೆಸ್ಟ್ ಚಿತ್ರದಲ್ಲಿ ಕರೀನಾ ಮತ್ತು ಅರ್ಜುನ್ ಕಪೂರ್ ಸತಿ-ಪತಿ. ಚಿತ್ರಕಥೆಯ ಪ್ರಕಾರ, ಇಬ್ಬರ ನಡುವೆ ಹಲವಾರು ಹಾಟ್ ದೃಶ್ಯಗಳಿದ್ದವಂತೆ. ಆದರೆ ‘ಬೆಬೋ’, ಕಿಸ್ಸಿಂಗ್ ಸೀನ್ಗಳನ್ನು ಮಾಡುವುದಿಲ್ಲ ಎಂದು ಈ ಮೊದಲೇ ನಿರ್ಧಾರ ಮಾಡಿರುವುದರಿಂದಾಗಿ ಬಾಲ್ಕಿಗೆ ಸಂಕಷ್ಟ ಎದುರಾಗಿದೆ. ‘ಇದ್ಯಾಕೋ ಆಗುವ ಕೆಲಸವಲ್ಲ’ ಎಂದರಿತ ಅವರು ಚಿತ್ರಕಥೆಯಲ್ಲಿ ಕೊಂಚ ಬದಲಾವಣೆ ಮಾಡಿದ್ದಾರಂತೆ. ಅಲ್ಲಿಗೆ, ಕರೀನಾ-ಅರ್ಜುನ್ ನಡುವಿನ ಪ್ರಣಯ ದೃಶ್ಯಗಳಿಗೆ ಬ್ರೇಕ್ ಬಿದ್ದಿದೆ! ಸದ್ಯ ಚಿತ್ರೀಕರಣ ಬಿರುಸಿನಿಂದ ಸಾಗಿದ್ದು, 2016ರ ಪ್ರಾರಂಭಕ್ಕೆ ಚಿತ್ರ ತೆರೆಗೆ ತರುವ ಗುರಿ ನಿರ್ದೇಶಕರದು.