ಮನೋರಂಜನೆ

ದರ್ಶನ್ ನಟನೆಯ ಐರಾವತ ನಾಲ್ಕು ದಿನಗಳಲ್ಲಿ 14ಕೋಟಿ ಗಳಿಕೆ !

Pinterest LinkedIn Tumblr

Airavata

ಬೆಂಗಳೂರು: ಬಿಳಿ ಆನೆಯನ್ನು ಸಾಕುವುದು ದುಬಾರಿ ಎನ್ನುತ್ತದೆ ಕನ್ನಡದ ಒಂದು ನಾಣ್ನುಡಿ. ಆದರೆ ಇಂದ್ರನ ವಾಹನ ಬಿಳಿ ಆನೆ ಐರಾವತನ ಹೆಸರಿಟ್ಟು, ದರ್ಶನ್ ನಟನೆಯ ಐರಾವತ ನಿರ್ಮಿಸಿ ಬಹಳ ಖುಷಿಯಾಗಿದ್ದಾರೆ ನಿರ್ಮಾಪಕ ಸಂದೇಶ್ ನಾಗರಾಜ್.

ಎ ಪಿ ಅರ್ಜುನ್ ನಿರ್ದೇಶನದ ಈ ಸಿನೆಮಾ ರಾಜ್ಯದಾದ್ಯಂತ 3590 ತೆರೆಗಳಲ್ಲಿ ಪ್ರದರ್ಶನ ಕಾಣುತ್ತಿದ್ದು, ಮೊದಲ ನಾಲ್ಕು ದಿನಗಳಲ್ಲಿ 14 ಕೋಟಿ ಗಳಿಸಿದೆ ಎನ್ನುತ್ತಾರೆ ನಿರ್ಮಾಪಕ.

ಪ್ರತಿದಿನ ಗಳಿಕೆಯನ್ನು ತಿಳಿಸಿದ ನಿರ್ಮಾಪಕ ಸಂದೇಶ್ ನಾಗರಾಜ್ “ಗುರುವಾರ 3.5 ಕೋಟಿ, ಶುಕ್ರವಾರ 3.01 ಕೋಟಿ, ಶನಿವಾರ 2.65 ಕೋಟಿ ಮತ್ತು ಭಾನುವಾರ 3.3.ಕೋಟಿ ಗಳಿಕೆ ಕಂಡಿದೆ” ಎನ್ನುತ್ತಾರೆ. ಇದು ಥಿಯೇಟರ್ ಬಾಡಿಗೆಯನ್ನು ಒಳಗೊಂಡಂತೆ ಎಂದು ಸ್ಪಷ್ಟನೆ ನೀಡುತ್ತಾರೆ.

“ಕೆಲವು ವಿಮರ್ಶಕರು ಸಿನೆಮಾ ಬಗ್ಗೆ ಖಾರವಾದ ವಿಮರ್ಶೆ ನಿಡಿದ್ದಾರೆ, ಆದರೂ ಪ್ರೇಕ್ಷಕರು ನಮ್ಮ ಕೈಬಿಟ್ಟಿಲ್ಲ. ಈ ಗಳಿಕೆಯನ್ನು ವಿಶ್ಲೇಷಿಸಿದಾಗ ಒಂದು ವಾರಾಂತ್ಯದಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಸಿನೆಮಾ ನಮ್ಮದು” ಎಂದು ಅವರು ತಿಳಿಸುತ್ತಾರೆ.

ಸಿನೆಮಾ ಮುಂಬೈ, ಚೆನ್ನೈ ಮತ್ತು ಅಮೇರಿಕಾದಲ್ಲೂ ಅದ್ಭುತವಾಗಿ ಪ್ರದರ್ಶನ ಕಾಣುತ್ತಿದೆಯಂತೆ. “ಅಮೆರಿಕಾದಲ್ಲಿ 43ಥಿಯೇಟರ್ ಗಳಲ್ಲಿ 27 ಕಡೆ ತುಂಬಿದ ಪ್ರದರ್ಶನ ಕಾಣುತ್ತಿದ್ದು, ಇನ್ನುಳಿದ ಕಡೆ ಶೇಕಡಾ 60 ರಷ್ಟು ತುಂಬಿದೆ” ಎನ್ನುತ್ತಾರೆ ಸಂದೇಶ್.

ತಮ್ಮ ಸಿನೆಮಾ 20 ಕೋಟಿ ಕ್ಲಬ್ ಶೀಘ್ರವೇ ಸೇರಲಿದೆ ಎನ್ನುವ ಸಂದೇಶ್ “ವಿಮರ್ಶೆ ಓದಿ ಸಿನೆಮಾ ನೋಡುವವರು ಕೆಲವ 10 ಜನ. ಸಿನೆಮಾ ಬಗ್ಗೆ ವಿಮರ್ಶಕರು ಅಭಿಪ್ರಾಯ ರೂಪಿಸುತ್ತಾರೆ. ಆದರೆ ವಿಮರ್ಶೆ ಓದುವುದಕ್ಕೆ ಮೊದಲೇ ಜನ ಮುಗಿಬಿದ್ದು ಸಿನೆಮಾ ನೋಡಿದ್ದಾರೆ ಮತ್ತು ಮಾತಿನಿಂದ ಸಿನೆಮಾ ಬಗ್ಗೆ ಒಳ್ಳೆಯ ಅಭಿಪ್ರಾಯ ಹರಡಿದೆ” ಎಂಬ ಆಶಾವಾದ ವ್ಯಕ್ತ ಪಡಿಸುತ್ತಾರೆ. ಮಿ ಐರಾವತ 100 ದಿನ ಓಡುವುದು ಶತಸಿದ್ದ ಎಂಬ ಭರವಸೆ ವ್ಯಕ್ತಪಡಿಸುತ್ತಾರೆ ಸಂದೇಶ್.

Write A Comment