ಮನೋರಂಜನೆ

ಜಯ ನಿರಾಕರಿಸಿದ ಅರುಣ್ ಕಾರ್ತಿಕ್: ಕರ್ನಾಟಕ-ಅಸ್ಸಾಂ ‘ಎ’ ಗುಂಪಿನ ರಣಜಿ ಪಂದ್ಯ

Pinterest LinkedIn Tumblr

2arun-kartkikಗುವಾಹಟಿ, ಅ.4: ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕೆಬಿ ಅರುಣ್ ಕಾರ್ತಿಕ್ ಅಜೇಯ 115 ಮತ್ತು ನಾಯಕ ಗೋಕುಲ್ ಶರ್ಮ ಅರ್ಧಶತಕ ಸಹಾಯದಿಂದ ಅಸ್ಸಾಂ ತಂಡ ಇಲ್ಲಿ ನಡೆದ ಕರ್ನಾಟಕ ವಿರುದ್ಧದ ರಣಜಿ ಟ್ರೋಫಿ ‘ಎ’ ಗುಂಪಿನ ಪಂದ್ಯವನ್ನು ಡ್ರಾಗೊಳಿಸುವಲ್ಲಿ ಯಶಸ್ವಿಯಾಗಿದೆ.
ಪಂದ್ಯದ ಮೂರನೆ ದಿನದಾಟದಂತ್ಯಕ್ಕೆ ಎರಡನೆ ಇನಿಂಗ್ಸ್‌ನಲ್ಲಿ 11.1 ಓವರ್‌ಗಳಲ್ಲಿ 1 ವಿಕೆಟ್ ನಷ್ಟದಲ್ಲಿ 30 ರನ್ ಗಳಿಸಿದ್ದ ಅಸ್ಸಾಂ ತಂಡ ಅಂತಿಮ ದಿನ ಆಟ ಮುಂದುವರಿಸಿ ಕರ್ನಾಟಕ ತಂಡದ ಗೆಲುವಿನ ಆಸೆಯನ್ನು ಮಣ್ಣುಗೂಡಿಸಿತು.
ಕರ್ನಾಟಕದ 10 ಮಂದಿ ಬೌಲರ್‌ಗಳು ದಾಳಿ ನಡೆಸಿದ್ದರೂ, ಅಸ್ಸಾಂ ತಂಡದ ನಾಲ್ವರು ದಾಂಡಿಗರನಷ್ಟೇ ಕೊನೆಯ ದಿನದಾಟದ ವೇಳೆ ಪೆವಿಲಿಯನ್‌ಗಟ್ಟಲು ಶಕ್ತವಾಯಿತು.
ಮೂರನೆ ದಿನದ ಆಟ ನಿಂತಾಗ ಔಟಾಗದೆ 21 ರನ್ ಗಳಿಸಿದ್ದ ಆರಂಭಿಕ ದಾಂಡಿಗ ಪ್ರೀತಮ್ ದಾಸ್ ಆಟ ಮುಂದುವರಿಸಿ ಈ ಮೊತ್ತಕ್ಕೆ 5 ರನ್ ಸೇರಿಸಿ ವಿನಯ್ ಕುಮಾರ್‌ಗೆ ವಿಕೆಟ್ ಒಪ್ಪಿಸಿದರು. ಅಮಿತ್ ವರ್ಮ(0) ಖಾತೆ ತೆರೆಯದೆ ನಿರ್ಗಮಿಸಿದಾಗ ಕರ್ಣಾಟಕ ತಂಡದ ಆಟಗಾರರು ಗೆಲುವಿನ ಕನಸು ಕಂಡಿದ್ದರು. ಆದರೆ ನಾಯಕ ಗೋಕುಲ್ ಶರ್ಮ ಮತ್ತು ವಿಕೆಟ್ ಕೀಪರ್ ಅರುಣ್ ಕಾರ್ತಿಕ್ ಜೊತೆಯಾಗಿ ತಂಡವನ್ನು ಆಧರಿಸಿದರು. ನಾಲ್ಕನೆ ವಿಕೆಟ್‌ಗೆ 112 ರನ್ ಸೇರಿಸಿದರು.

60.3 ಓವರ್‌ಗಳಲ್ಲಿ ತಂಡದ ಸ್ಕೋರ್ 172ಕ್ಕೆ ತಲುಪಿದಾಗ ಸುಚಿತ್ ಎಸೆತದಲ್ಲಿ ನಾಯಕ ಗೋಕುಲ್ ಶರ್ಮ (55) ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು.ಬಳಿಕ ತಾರ್‌ಜಿಂದರ್ ಸಿಂಗ್ ಕ್ರೀಸ್‌ಗೆ ಆಗಮಿಸಿದ್ದರೂ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ 15 ರನ್ ಗಳಿಸಿ ಶ್ರೇಯಸ್ ಗೋಪಾಲ್ ಎಸೆತದಲ್ಲಿ ಎಲ್‌ಬಿಡಬ್ಲು ಬಲೆಗೆ ಬಿದ್ದರು.ಆರನೆ ವಿಕೆಟ್‌ಗೆ ಕಾರ್ತಿಕ್ ಮತ್ತು ಸೈಯದ್ ಮುಹಮ್ಮದ್ ಮುರಿಯದ ಜೊತೆಯಾಟದಲ್ಲಿ 58 ರನ್ ಸೇರಿಸಿದರು. ಕಾರ್ತಿಕ್ 42ನೆ ಪ್ರಥಮ ದರ್ಜೆ ಪಂದ್ಯದಲ್ಲಿ ಆರನೆ ಶತಕ ದಾಖಲಿಸಿದರು. ಅವರು 115 ರನ್(344 ನಿ, 258ಎ, 15ಬೌ,3ಸಿ) ಮತ್ತು ಮುಹಮ್ಮದ್ ಔಟಾಗದೆ 21 ರನ್ ಗಳಿಸಿದರು. ಸಂಕ್ಷಿಪ್ತ ಸ್ಕೋರ್ ವಿವರ
ಕರ್ನಾಟಕ ಮೊದಲ ಇನಿಂಗ್ಸ್ 187
ಅಸ್ಸಾಂ ಮೊದಲ ಇನಿಂಗ್ಸ್ 194
ಕರ್ನಾಟಕ ಎರಡನೆ ಇನಿಂಗ್ಸ್ 394/8
ಅಸ್ಸಾಂ ಎರಡನೆ ಇನಿಂಗ್ಸ್ 102 ಓವರ್‌ಗಳಲ್ಲಿ 259/5(ಅರುಣ್ ಕಾರ್ತಿಕ್ ಔಟಾಗದೆ 115, ಗೋಕುಲ್ ಶರ್ಮ 55, ಎಸ್.ಮುಹಮ್ಮದ್ ಔಟಾಗದೆ 21; ವಿನಯ್ ಕುಮಾರ್ 41ಕ್ಕೆ 2, ಜೆ.ಸುಚಿತ್ 60ಕ್ಕೆ 2).

ರಣಜಿ ಪಂದ್ಯಗಳ ಫಲಿತಾಂಶ
*ವಿಝಿಯಾನಗರಂ: ಆಂಧ್ರ ಹಾಗೂ ಮುಂಬೈ ಪಂದ್ಯ -ಡ್ರಾ
*ಗುವಾಹಟಿ: ಕರ್ನಾಟಕ ಮತ್ತು ಅಸ್ಸಾಂ ಪಂದ್ಯ -ಡ್ರಾ
*ಪೊರ್‌ವೊರಿಮ್: ಹೈದರಾಬಾದ್ ಮತ್ತು ಗೋವಾ ಪಂದ್ಯ -ಡ್ರಾ
*ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಹಾಗೂ ಕೇರಳ ಪಂದ್ಯ -ಡ್ರಾ
*ಪುಣೆ: ಮಹಾರಾಷ್ಟ್ರ ಮತ್ತು ಹರ್ಯಾಣ ಪಂದ್ಯ -ಡ್ರಾ
*ಮೊಹಾಲಿ: ರೈಲ್ವೇಸ್ ವಿರುದ್ಧ ಪಂಜಾಬ್‌ಗೆ ಇನಿಂಗ್ಸ್ ಹಾಗೂ 126 ರನ್ ಜಯ.
*ಜೈಪುರ: ರಾಜಸ್ಥಾನ ಮತ್ತು ದಿಲ್ಲಿ ಪಂದ್ಯ-ಡ್ರಾ
*ರಾಜ್‌ಕೋಟ್: ತ್ರಿಪುರ ವಿರುದ್ಧ ಸೌರಾಷ್ಟ್ರಕ್ಕೆ ಇನಿಂಗ್ಸ್ ಮತ್ತು 118 ರನ್ ಜಯ.
*ದಿಲ್ಲಿ: ಜಾರ್ಖಂಡ್ ವಿರುದ್ಧ ಸರ್ವಿಸಸ್‌ಗೆ 9 ವಿಕೆಟ್ ಜಯ.
*ಚೆನ್ನೈ: ಬರೋಡ ವಿರುದ್ಧ ತಮಿಳುನಾಡಿಗೆ 7 ವಿಕೆಟ್ ಜಯ
*ಮೊರದಾಬಾದ್: ಉತ್ತರ ಪ್ರದೇಶ ಮತ್ತು ಬರೋಡ ಪಂದ್ಯ-ಡ್ರಾ
*ನಾಗ್ಪುರ: ವಿದರ್ಭ ಮತ್ತು ಒಡಿಶಾ ಪಂದ್ಯ-ಡ್ರಾ.

Write A Comment