ಮನೋರಂಜನೆ

ಇಂದು ದಕ್ಷಿಣ ಆಫ್ರಿಕ ವಿರುದ್ಧ ಎರಡನೆ ಟ್ವೆಂಟಿ-20 ಪಂದ್ಯ: ಆಟಕ್ಕೆ ಮಳೆಯ ಭೀತಿ: ತಿರುಗೇಟು ನೀಡಲು ಟೀಮ್ ಇಂಡಿಯಾ ಚಿತ್ತ

Pinterest LinkedIn Tumblr

1spotrsಕಟಕ್, ಆ.4: ಮೊದಲ ಟ್ವೆಂಟಿ-20 ಪಂದ್ಯದಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕ ವಿರುದ್ಧ ಸೋಲು ಅನುಭವಿಸಿರುವ ಟೀಮ್ ಇಂಡಿಯಾ ಸೋಮವಾರ ಇಲ್ಲಿ ನಡೆಯಲಿರುವ ಎರಡನೆ ಟ್ವೆಂಟಿ-20 ಪಂದ್ಯದಲ್ಲಿ ತಿರುಗೇಟು ನೀಡುವ ತಯಾರಿ ನಡೆಸಿದೆ.

ಭಾರತ ಮೂರು ಪಂದ್ಯಗಳ ಸರಣಿಯನ್ನು ಗೆಲ್ಲಬೇಕಾದರೆ ಮುಂದಿನ ಎರಡು ಪಂದ್ಯಗಳಲ್ಲೂ ಗೆಲ್ಲಬೇಕಾದ ಒತ್ತಡಕ್ಕೆ ಸಿಲುಕಿದೆ. ಧರ್ಮಶಾಲಾದಲ್ಲಿ ಅ.2ರಂದು ನಡೆದ ಮೊದಲ ಟ್ವೆಂಟಿ-20 ಪಂದ್ಯದಲ್ಲಿ ಭಾರತ ಸೋಲು ಅನುಭವಿಸಿತ್ತು. ದಕ್ಷಿಣ ಆಫ್ರಿಕ ವಿರುದ್ಧ ಭಾರತ ದೊಡ್ಡ ಮೊತ್ತದ ಸವಾಲನ್ನು ವಿಧಿಸಿದ್ದರೂ, ದಕ್ಷಿಣ ಆಫ್ರಿಕ ಆಟಗಾರರು ಈ ಸವಾಲನ್ನು ದಿಟ್ಟವಾಗಿ ಎದುರಿಸಿ ಗೆಲುವಿನೊಂದಿಗೆ ಸರಣಿ ಆರಂಭಿಸಿದ್ದರು.
ಭಾರತದ ಬೌಲಿಂಗ್ ವೈಫಲ್ಯ ಸೋಲಿಗೆ ಕಾರಣವಾಗಿತ್ತು. ಭಾರತದ ಸೀಮಿತ ಓವರ್‌ಗಳ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮೂರು ತಿಂಗಳ ವಿಶ್ರಾಂತಿ ಬಳಿಕ ಕ್ರಿಕೆಟ್ ತಂಡವನ್ನು ಸೇರಿಕೊಂಡಿದ್ದಾರೆ. ಆದರೆ ಅವರಿಗ ಮೊದಲ ಪಂದ್ಯದಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಕಟಕ್‌ನಲ್ಲಿ ನಡೆಯಲಿರುವ ಎರಡನೆ ಪಂದ್ಯದಲ್ಲಿ ಅವರು ಒತ್ತಡಕ್ಕೆ ಸಿಲುಕಿದ್ದಾರೆ.
ಕಟಕ್‌ನಲ್ಲಿ ನಡೆಯಲಿರುವ ಎರಡನೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದೆ. ಕಳೆದ ಕೆಲವು ದಿನಗಳಿಂದ ಇಲ್ಲಿ ಮಳೆಯಾಗುತ್ತಿದ್ದು, ಸೋಮವಾರ ಮತ್ತೆ ಮಳೆ ಕಾಣಿಸಿಕೊಂಡರೆ ಪಂದ್ಯ ರದ್ದಾಗುವ ಸಾಧ್ಯತೆ ಇದೆ.
ಮೊದಲ ಪಂದ್ಯದಲ್ಲಿ ರೋಹಿತ್ ಶರ್ಮ ಚೊಚ್ಚಲ ಶತಕ (106)ದಾಖಲಿಸಿದ್ದರು. ಅವರ ಶತಕ ಮತ್ತು ವಿರಾಟ್ ಕೊಹ್ಲಿ ನೀಡಿದ 43 ರನ್ ಕೊಡುಗೆ ನೆರವಿನಲ್ಲಿ ಭಾರತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 199 ರನ್ ಮಾಡಿತ್ತು.
200 ರನ್ ಸವಾಲನ್ನು ಪಡೆದ ದಕ್ಷಿಣ ಆಫ್ರಿಕ ತಂಡ ಭಾರತದ ದುರ್ಬಲ ಬೌಲಿಂಗ್‌ನ ಪ್ರಯೋಜನ ಪಡೆದುಕೊಂಡು ಗೆಲುವಿನ ನಗೆ ಬೀರಿತು. ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಹೊರತುಪಡಿಸಿದರೆ ತಂಡದ ಸಹ ಬೌಲರ್‌ಗಳು ದುಬಾರಿ ರನ್ ಬಿಟ್ಟುಕೊಟ್ಟರು. ಹಾಶಿಂ ಅಮ್ಲ(36) ಮತ್ತು ಎಬಿ ಡಿವಿಲಿಯರ್ಸ್‌(51) ಮೊದಲ ವಿಕೆಟ್‌ಗೆ 7.4 ಓವರ್‌ಗಳಲ್ಲಿ 77 ರನ್‌ಗಳ ಕೊಡುಗೆ ನೀಡಿದರು. ಮೂರನೆ ವಿಕೆಟ್‌ಗೆ ಡುಮಿನಿ(68) ಮತ್ತು ಫರ್ಹಾನ್ ಬೆಹರ್ದೀನ್ (32) ಮುರಿಯದ ಜೊತೆಯಾಟದಲ್ಲಿ 9.1 ಓವರ್‌ಗಳಲ್ಲಿ 11.45 ರನ್ ಸರಾಸರಿಯಂತೆ 105 ರನ್‌ಗಳ ಕೊಡುಗೆ ನೀಡಿದರು. ಇನ್ನೂ ಎರಡು ಎಸೆತಗಳು ಬಾಕಿ ಉಳಿದಿರುವಾಗಲೇ ದಕ್ಷಿಣ ಆಫ್ರಿಕ ಗೆಲುವಿನ ದಡ ತಲುಪಿತು.
16ನೆ ಓವರ್‌ನಲ್ಲಿ ಅಕ್ಷರ್ ಪಟೇಲ್ ಓವರ್‌ನಲ್ಲಿ ಡುಮಿನಿ ಸತತ ಮೂರು ಸಿಕ್ಸರ್ ಸಿಡಿಸಿದರು. ಆ ಓವರ್‌ನಲ್ಲಿ 22 ರನ್ ಬಿಟ್ಟುಕೊಟ್ಟರು. ಇದು ಆಫ್ರಿಕದ ಗೆಲುವಿಗೆ ನೆರವಾಯಿತು. ಕಳೆದ ಶ್ರೀಲಂಕಾ ಸರಣಿಯಲ್ಲಿ 15 ವಿಕೆಟ್ ಸಂಪಾದಿಸಿದ್ದ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾರನ್ನು ನಾಯಕ ಧೋನಿ ದಾಳಿಗಿಳಿಸಲಿಲ್ಲ. ಅವರ ಬದಲಿಗೆ ಅಕ್ಷರ್ ಪಟೇಲ್‌ರನ್ನು ದಾಳಿಗಿಳಿಸಿ ಕೈಸುಟ್ಟುಕೊಂಡರು. ಒಂದು ವೇಳೆ ಮಿಶ್ರಾ ಆಡಿದ್ದರೆ ಅವರು ಅಶ್ವಿನ್‌ಗೆ ಉತ್ತಮ ಬೆಂಬಲ ನೀಡುತ್ತಿದ್ದರು. ಆದರೆ ಧೋನಿ ಲೆಕ್ಕಾಚಾರ ತಲೆಕೆಳಗಾಯಿತು.
ರವಿಚಂದ್ರನ್ ಅಶ್ವಿನ್ ಉತ್ತಮವಾಗಿ ದಾಳಿ ನಡೆಸಿದರು. ಎಬಿ ಡಿವಿಲಿಯರ್ಸ್‌ ಅರ್ಧಶತಕ ದಾಖಲಿಸಿದ್ದರು, ಅಶ್ವಿನ್ ದಾಳಿಯ ಮುಂದೆ ರನ್ ಗಳಿಸಲು ಪರದಾಡಿದ್ದರು. ಅವರು 51 ರನ್ ಗಳಿಸಿ ಅಶ್ವಿನ್ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್‌ಗೆ ವಾಪಸಾದರು.
ಡಿ ವಿಲಿಯರ್ಸ್‌ ನಿರ್ಗಮನದ ಬಳಿಕ ಡುಮಿನಿ ಮತ್ತು ಬೆಹರ್ದೀನ್ ಭಾರತದ ಬೌಲರ್‌ಗಳ ಬೆವರಿಳಿಸಿದರು. ಅಕ್ಷರ್ ಪಟೇಲ್ ಒಂದೇ ಓವರ್‌ನಲ್ಲಿ 22 ರನ್ ಬಿಟ್ಟುಕೊಟ್ಟು ತಂಡದ ಸೋಲಿಗೆ ಕಾರಣರಾದರು.

ಎಬಿ ಡಿವಿಲಿಯರ್ಸ್‌ ವಿಶ್ವದ ಓರ್ವ ಅಪಾಯಕಾರಿ ಬ್ಯಾಟ್ಸ್‌ಮನ್. ವೇಗದ ಬೌಲರ್‌ಗಳ ಪೈಕಿ ಭುವನೇಶ್ವರ ಕುಮಾರ್ ಮತ್ತು ಚೊಚ್ಚಲ ಪಂದ್ಯವನ್ನಾಡಿದ ಶ್ರೀನಾಥ್ ಅರವಿಂದ್‌ಗೆ ಆಫ್ರಿಕ ದಾಂಡಿಗರ ರನ್ ಹೊಳೆಯನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ.ಕೊನೆಯ ಎರಡು ಓವರ್‌ಗಳಲ್ಲಿ ದ. ಆಫ್ರಿಕ ತಂಡಕ್ಕೆ ಗೆಲ್ಲಲು 24 ರನ್ ಬೇಕಾಗಿತ್ತು. 19ನೆ ಓವರ್‌ನಲ್ಲಿ ಭುವನೇಶ್ವರ ಕುಮಾರ್ 14 ರನ್ ಮತ್ತು ಅಂತಿಮ ಓವರ್‌ನ 4 ಎಸೆತಗಳಲ್ಲಿ ಶ್ರೀನಾಥ್ ಅರವಿಂದ್ ಹತ್ತು ರನ್ ಬಿಟ್ಟುಕೊಟ್ಟರು. ಭಾರತದ ಬ್ಯಾಟಿಂಗ್ ಆರಂಭದಲ್ಲಿ ಚೆನ್ನಾಗಿದ್ದರೂ, ಬಳಿಕ ದುರ್ಬಲಗೊಂಡಿತು. ಶರ್ಮ ಮತ್ತು ಕೊಹ್ಲಿ ನಿರ್ಗಮನದ ಬಳಿಕ ಭಾರತದ ಬ್ಯಾಟಿಂಗ್ ಶಕ್ತಿ ದುರ್ಬಲಗೊಂಡಿತ್ತು. ಶರ್ಮ ಮತ್ತು ಕೊಹ್ಲಿ 3ನೆ ವಿಕೆಟ್‌ಗೆ 72 ಎಸೆತಗಳಲ್ಲಿ 138 ರನ್ ಕಾಣಿಕೆ ನೀಡಿದ್ದರು. ಇದರಿಂದಾಗಿ ಭಾರತ ಮೊತ್ತ 220 ತಲುಪುವುದನ್ನು ನಿರೀಕ್ಷಿಸಲಾಗಿತ್ತು. ಆದರೆ 2 ರನ್‌ಗಳ ಅಂತರದಲ್ಲಿ ಕೈಲ್ ಅಬಾಟ್ ಈ ಜೋಡಿಯನ್ನು ಬೇರ್ಪಡಿಸಿದರು. ಕೊನೆಯ ಐದು ಓವರ್‌ಗಳಲ್ಲಿ 41 ರನ್ ಗಳಿಸಲು ಭಾರತದ ದಾಂಡಿಗರಿಗೆ ಸಾಧ್ಯವಾಯಿತು. ಇದರಿಂದಾಗಿ ಭಾರತದ ಸ್ಕೋರ್ ಇನ್ನೂರು ತಲುಪಲಿಲ್ಲ. 199ಕ್ಕೆ ಕೊನೆಗೊಂಡಿತು. ಆರಂಭಿಕ ದಾಂಡಿಗ ಶಿಖರ್ ಧವನ್ 3 ರನ್ ಮತ್ತು ಅಂಬಟಿ ರಾಯುಡು ಖಾತೆ ತೆರೆಯದೆ ನಿರ್ಗಮಿಸಿದರು. ಎರಡನೆ ಪಂದ್ಯದಲ್ಲಿ ಬದಲಾವಣೆಯ ಬಗ್ಗೆ ನಾಯಕ ಸುಳಿವು ನೀಡಲಿಲ್ಲ. ಕೊನೆಯ ಕ್ಷಣದಲ್ಲಿ ತಂಡದಲ್ಲಿ ಬದಲಾವಣೆಯ ಸಾಧ್ಯತೆ ಇದೆ. ಭಾರತ: ಮಹೇಂದ್ರ ಸಿಂಗ್ ಧೊನಿ(ನಾಯಕ/ವಿಕೆಟ್ ಕೀಪರ್), ಶ್ರೀನಾಥ್ ಅರವಿಂದ್, ರವಿಚಂದ್ರನ್ ಅಶ್ವಿನ್, ಸ್ಟುವರ್ಟ್ ಬಿನ್ನಿ, ಶಿಖರ್ ಧವನ್, ಹರ್ಭಜನ್ ಸಿಂಗ್, ವಿರಾಟ್ ಕೊಹ್ಲಿ, ಭುವನೇಶ್ವರ ಕುಮಾರ್, ಅಮಿತ್ ಮಿಶ್ರಾ, ಅಕ್ಷರ್ ಪಟೇಲ್, ಅಜಿಂಕ್ಯ ರಹಾನೆ, ಸುರೇಶ್ ರೈನಾ, ಅಂಬಟಿ ರಾಯುಡು, ಮೊಹಿತ್ ಶರ್ಮ, ರೋಹಿತ್ ಶರ್ಮ.
ದಕ್ಷಿಣ ಆಫ್ರಿಕ: ಎಫ್‌ಡು ಪ್ಲೆಸಿಸ್(ನಾಯಕ), ಕೈಲ್ ಅಬಾಟ್, ಹಾಶಿಂ ಅಮ್ಲ, ಫರ್ಹಾನ್ ಬೆಹರ್ದೇನ್, ಕ್ವಿಂಟನ್ ಡೆ ಕಾಕ್(ವಿಕೆಟ್ ಕೀಪರ್), ಮರ್ಚೆಂಟ್ ಡಿ ಲ್ಯಾಂಗೆ, ಎಬಿ ಡಿ ವಿಲಿಯರ್ಸ್‌, ಜೆಪಿ ಡುಮಿನಿ, ಇಮ್ರಾನ್ ತಾಹಿರ್, ಎಡ್ಡೀ ಲೀ, ಡೇವಿಡ್ ಮಿಲ್ಲರ್, ಅಲ್ಬಿ ಮೊರ್ಕೆಲ್, ಕ್ರಿಸ್ ಮೊರೀಸ್, ಕಾಗಿಸೊ ರಬಾಡ, ಖಾಯ ರೊಂಡೊ.

ಪಂದ್ಯದ ಸಮಯ: ರಾತ್ರೆ 7:00 ಗಂಟೆಗೆ

ಗರಿಷ್ಠ ಭದ್ರತೆ
ಕಟಕ್, ಅ.4: ಇಲ್ಲಿ ಸೋಮವಾರ ನಡೆಯಲಿರುವ ಭಾರತ ಮತ್ತು ದಕ್ಷಿಣ ಆಫ್ರಿಕ ತಂಡಗಳ ನಡುವಿನ ಎರಡನೆ ಟ್ವೆಂಟಿ-20 ಕ್ರಿಕೆಟ್ ಪಂದ್ಯಕ್ಕೆ ಗರಿಷ್ಠ ಭದ್ರತೆ ಒದಗಿಸಲಾಗಿದೆ.
63 ಪೊಲೀಸ್ ಪ್ಲಟೂನ್‌ಗಳು, 300 ಅಧಿಕಾರಿಗಳು, 4 ಕ್ಷಿಪ್ರ ಕಾರ್ಯಾಚರಣೆ ತಂಡ(ಕ್ಯೂಆರ್‌ಟಿ), 2 ಭಯೋತ್ಪಾದಕ ನಿಗ್ರಹ ತಂಡಗಳನ್ನು (ಎಟಿಎಸ್) ಪಂದ್ಯ ನಡೆಯಲಿರುವ ಬರಾಬತಿ ಸ್ಟೇಡಿಯಂನ ಸುತ್ತ ನಿಯೋಜಿಸಲಾಗಿದೆ.
150 ಕ್ಲೋಸ್ಡ್ ಸರ್ಕ್ಯೂಟ್ ಟಿವಿ ಕ್ಯಾಮರಾಗಳನ್ನು ಸ್ಟೇಡಿಯಂನ ಆಯಕಟ್ಟಿನ ಜಾಗಗಳಲ್ಲಿ ಅಳವಡಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಆರ್.ಪಿ.ಶರ್ಮಾ ತಿಳಿಸಿದ್ದಾರೆ.

Write A Comment