ಮುಂಬೈ, ಅ.4: ಹಿರಿಯ ವಕೀಲ ಶಶಾಂಕ್ ಮನೋಹರ್ ಬಿಸಿಸಿಐ ಅಧ್ಯಕ್ಷರಾಗಿ ಎರಡನೆ ಬಾರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇದರೊಂದಿಗೆ ಕ್ರಿಕೆಟ್ ಆಡಳಿತದಲ್ಲಿ ಎನ್.ಶ್ರೀನಿವಾಸನ್ ಅವರ ಯುಗಾಂತ್ಯಗೊಂಡಿದೆ.
ಬಿಸಿಸಿಐನ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಅಂತಿಮ ದಿನವಾಗಿದ್ದ ಶನಿವಾರ ಶಶಾಂಕ್ ಮನೋಹರ್ ಮಾತ್ರ ಏಕೈಕ ಅಭ್ಯರ್ಥಿಯಾಗಿ ಕಾಣಿಸಿಕೊಂಡಿದ್ದರು. ರವಿವಾರ ಬಿಸಿಸಿಐನ ವಿಶೇಷ ಮಹಾಸಭೆಯಲ್ಲಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.
ಶಶಾಂಕ್ ಮನೋಹರ್ ಬಿಸಿಸಿಐನ 36ನೆ ಅಧ್ಯಕ್ಷರು. ಎರಡನೆ ಬಾರಿ ಅಧ್ಯಕ್ಷರಾಗಿರುವ ಶಶಾಂಕ್ ಮನೋಹರ್ ಈ ಹಿಂದೆ 2008ರಿಂದ 2011ರ ತನಕ ಬಿಸಿಸಿಐ ಅಧ್ಯಕರಾಗಿ ಸೇವೆ ಸಲ್ಲಿಸಿದ್ದರು. ಜಗಮೋಹನ್ ದಾಲ್ಮಿಯ ನಿಧನದ ಹಿನ್ನೆಲೆಯಲ್ಲಿ ಬಿಸಿಸಿಐ ಅಧ್ಯಕ್ಷ ಸ್ಥಾನ ತೆರವಾಗಿತ್ತು. 2013ರ ಐಪಿಎಲ್ ಆವೃತ್ತಿಯಲ್ಲಿ ನಡೆದಿರುವ ಹಗರಣದಲ್ಲಿ ಶ್ರೀನಿವಾಸನ್ ಅಳಿಯ ಗುರುನಾಥ್ ಮೇಯಪ್ಪನ್ ಸಿಲುಕಿಕೊಂಡ ಹಿನ್ನೆಲೆಯಲ್ಲಿ ಎನ್.ಶ್ರೀನಿವಾಸನ್ ಅಧ್ಯಕ್ಷ ಸ್ಥಾನ ಕಳೆದುಕೊಂಡಿದ್ದರು. ಕಳೆದ ಮಾರ್ಚ್ನಲ್ಲಿ ನಡೆದ ಚುನಾವಣೆಯಲ್ಲಿ ಜಗಮೋಹನ್ ದಾಲ್ಮಿಯ ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಆದರೆ ಅವರಿಗೆ ಅಧ್ಯಕ್ಷರಾಗಿ ಏಳು ತಿಂಗಳಷ್ಟೇ ಸೇವೆ ಸಲ್ಲಿಸಲು ಸಾಧ್ಯವಾಗಿತ್ತು.
ನೂತನ ಅಧ್ಯಕ್ಷ ಶಶಾಂಕ್ ಮನೋಹರ್ಗೆ ಪೂರ್ವ ವಲಯದ 6 ಕ್ರಿಕೆಟ್ ಸಂಸ್ಥೆಗಳು ಬೆಂಬಲ ನೀಡಿತ್ತು. ಮನೋಹರ್ ಪುತ್ರ ತನ್ನ ಅವಿಶೇಕ್ ಕುಟುಂಬದ ಕ್ರಿಕೆಟ್ ಸಂಸ್ಥೆ ನ್ಯಾಶನಲ್ ಕ್ರಿಕೆಟ್ ಕ್ಲಬ್ (ಎನ್ಸಿಸಿ) ಅಧ್ಯಕ್ಷ. ಅವರು ಶಶಾಂಕ್ ಮನೋಹರ್ಗೆ ಸೂಚಕರು. ಮಾಜಿ ಅಧ್ಯಕ್ಷ ಎನ್.ಶ್ರೀನಿವಾಸನ್ ಎಸ್ಜಿಎಂನಲ್ಲಿ ಭಾಗವಹಿಸಲಿಲ್ಲ. ಆದರೆ ಅವರ ತಮಿಳುನಾಡು ಕ್ರಿಕೆಟ್ ಸಂಸ್ಥೆಯನ್ನು ಪಿ.ಎಸ್.ರಾಮನ್ ಪ್ರತಿನಿಧಿಸಿದ್ದರು.
ನೂತನ ಅಧ್ಯಕ್ಷ ಶಶಾಂಕ್ ಬಗ್ಗೆ ಒಂದಿಷ್ಟು….
58ರ ಹರೆಯದ ಶಶಾಂಕ್ ಮನೋಹರ್ ಎರಡನೆ ಬಾರಿ ಬಿಸಿಸಿಐ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಕಠಿಣ ನಿಲುವಿನ ಆಡಳಿತಗಾರ ಎನಿಸಿಕೊಂಡಿರುವ ಶಶಾಂಕ್ ಮನೋಹರ್ಗೆ ಅನಿರೀಕ್ಷಿತವಾಗಿ ಎರಡನೆ ಬಾರಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದೆ.
ಮನೋಹರ್ ಈ ಹಿಂದೆ 2008-09 ಮತ್ತು 2010-11 ಈ ಅವಧಿಯಲ್ಲಿ ಬಿಸಿಸಿಐ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಬಿಸಿಸಿಐನಲ್ಲಿ ಶಶಾಂಕ್ ಮನೋಹರ್ ಪ್ರಭಾವಿ ವ್ಯಕ್ತಿ.
ಶಶಾಂಕ್ ಮನೋಹರ್ ಅವರು ಲಲಿತ್ ಮೋದಿಯನ್ನು 2010ರ ಐಪಿಎಲ್ ಫೈನಲ್ ಮುಗಿದ ಬೆನ್ನಲ್ಲೇ ಐಪಿಎಲ್ ಆಯುಕ್ತ ಹುದ್ದೆಯಿಂದ ಹೊರದಬ್ಬಿದ್ದರು.
ಶಶಾಂಕ್ ತಂದೆ ವಿ.ಆರ್. ಮನೋಹರ್ ಮಹಾರಾಷ್ಟ್ರದ ಅಡ್ವೊಕೇಟ್ ಜನರಲ್ ಆಗಿ ಸೇವೆ ಸಲ್ಲಿಸಿದ್ದರು. 2008ರಲ್ಲಿ ‘ಮಂಕಿಗೇಟ್’ ಪ್ರಕರಣದಲ್ಲಿ ಹರ್ಭಜನ್ ಸಿಂಗ್ ಸಿಲುಕಿಕೊಂಡಾಗ ಈ ಪ್ರಕರಣವನ್ನು ವಿ.ಆರ್. ಮನೋಹರ್ ಬಗೆ ಹರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಸೆಲ್ಪೋನ್ ಉಪಯೋಗಿಸುವ ಅಥವಾ ವಾಚ್ ಧರಿಸುವ ಅಭ್ಯಾಸದಿಂದ ಶಶಾಂಕ್ ದೂರ. 2007ರ ತನಕ ಅವರು ಪಾಸ್ಪೋರ್ಸ್ ಮಾಡಿಸಿಕೊಂಡಿರಲಿಲ್ಲ. 2008ರಲ್ಲಿ ದುಬೈನಲ್ಲಿ ನಡೆದ ಐಸಿಸಿ ಸಭೆಯಲ್ಲಿ ಭಾಗವಹಿಸುವುದಕ್ಕಾಗಿ ಅವರು ಅನಿವಾರ್ಯವಾಗಿ ಪಾಸ್ಪೋರ್ಟ್ ಮಾಡಿಸಿಕೊಂಡರು. ಅಷ್ಟರ ತನಕ ಅವರು ವಿದೇಶಿ ಯಾತ್ರೆ ಕೈಗೊಂಡಿರಲಿಲ್ಲ.
ಮಂಡಳಿ ವರ್ಚಸ್ಸನ್ನು ಮರಳಿ ಗಳಿಸುವ ಪಣ: ಶಶಾಂಕ್ ಮನೋಹರ್
ಹೊಸದಿಲ್ಲಿ, ಅ.4: ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬಿಸಿಸಿಐ ನೂತನ ಅಧ್ಯಕ್ಷರಾಗಿ ಶಶಾಂಕ್ ಮನೋಹರ್ ಆಯ್ಕೆಯಾಗಿದ್ದು, ಮಂಡಳಿಯ ವರ್ಚಸ್ಸನ್ನು ಪುನಃಸ್ಥಾಪಿಸುವ ಪಣತೊಟ್ಟಿದ್ದಾರೆ.
ಮೊಬೈಲ್ ಫೋನ್ ಹಿಡಿಯದ ಅಥವಾ ಕೈಗೆ ವಾಚ್ ಕಟ್ಟದ ಅತಿ ಸರಳ ವ್ಯಕ್ತಿಯಾಗಿರುವ ಮನೋಹರ್ ಜಗನ್ಮೋಹನ್ ಸ್ಥಾನ ತುಂಬಲು ಅರ್ಹ ವ್ಯಕ್ತಿ ಎಂಬ ಮಾತುಗಳು ಕ್ರಿಕೆಟ್ ವಲಯದಿಂದಲೇ ಕೇಳಿಬರುತ್ತಿದೆ.
2008ರಿಂದ 2011ರವರೆಗೆ ಬಿಸಿಸಿಐ ಮುಖ್ಯಸ್ಥನಾಗಿ ಸೇವೆ ಸಲ್ಲಿಸಿರುವ ಮನೋಹರ್, ಅತ್ಯಂತ ದಕ್ಷತೆಯಿಂದಲೇ ತನ್ನ ಕರ್ತವ್ಯವನ್ನು ನಿಭಾಯಿಸಿದ್ದರು. ಆದರೆ ರಾಜಕೀಯ ಪುಢಾರಿಗಳು, ಕೈಗಾರಿಕೋದ್ಯಮಿಗಳು ಬಿಸಿಸಿಐಯ ಕಾರ್ಯ-ಕಲಾಪದಲ್ಲಿ ಮೂಗು ತೂರಿಸುತ್ತಿದ್ದುದ್ದರಿಂದ ಕೊಂಚ ಸವಾಲನ್ನು ಅವರು ಎದುರಿಸಬೇಕಾಗಿ ಬಂದಿತ್ತು ಎನ್ನುವುದು ಸುಳ್ಳಲ್ಲ. ‘‘ಮಂಡಳಿಯನ್ನು ಸ್ವಚ್ಛಗೊಳಿಸಲು ಹಾಗೂ ಕ್ರಿಕೆಟ್ನ್ನು ಪ್ರೀತಿಸುವ ಅಭಿಮಾನಿಗಳ ನಂಬಿಕೆ ಅಳಿಯದಂತೆ ಕಾಪಾಡಲು ಪ್ರಥಮ ಆದ್ಯತೆ ನೀಡುತ್ತೇನೆ’’ ಎಂದು ಮನೋಹರ್ ಹೇಳಿದರು. ಮನೋಹರ್ ಅಧ್ಯಕ್ಷನಾಗಿ ಆಯ್ಕೆಯಾಗಿರುವುದರಿಂದ ಐಸಿಸಿ ಚೇರ್ಮಾನ್ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಎನ್.ಶ್ರೀನಿವಾಸನ್ರಿಗೆ ತೀವ್ರ ಹಿನ್ನಡೆಯಾಗಿದೆ.
ಬಿಸಿಸಿಐ ಅಧ್ಯಕ್ಷರಾಗಿದ್ದ ವೇಳೆ ಶ್ರೀನಿವಾಸನ್ ಅನುಸರಿಸುತ್ತಿದ್ದ ಕಾರ್ಯ ಶೈಲಿಯನ್ನು ಬಹಿರಂಗವಾಗಿ ಟೀಕಿಸುತ್ತಿದ್ದ ಮನೋಹರ್, ತನ್ನ ಎರಡನೆ ಅವಧಿಯಲ್ಲಿ ಹೆಚ್ಚಿನ ಪಾರದರ್ಶಕತೆಗೆ ಒತ್ತು ನೀಡುವುದಾಗಿ ಭರವಸೆ ನೀಡಿದರು.
ಬಿಸಿಸಿಐಯಲ್ಲಿ ಎಲ್ಲವೂ ಸರಿಯಿಲ್ಲ. ಇದರಲ್ಲಿ ಕೆಲವೊಂದು ಪ್ರಮಾದಗಳಿವೆ ಎಂಬು ದನ್ನು ಒಪ್ಪಿಕೊಂಡ ಮನೋಹರ್, ಎಲ್ಲವನ್ನೂ ಸರಿಪಡಿಸಲು ಶ್ರಮಿಸುವುದಾಗಿ ತಿಳಿಸಿದರು. ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಹಗರಣದಿಂದಾಗಿ ಕಪ್ಪು ಚುಕ್ಕೆಗೊಳಗಾಗಿದ್ದ ಬಿಸಿಸಿಐ, ತನ್ನನ್ನು ಸಮರ್ಥಿಸಿಕೊಳ್ಳಲು ತನ್ನ ಅಮೂಲ್ಯ ಸಮಯವನ್ನು ಸುಪ್ರೀಂ ಕೋರ್ಟ್ ನಲ್ಲಿಯೇ ಕಳೆದಿತ್ತು.
ಎಸ್ಜಿಎಂಗೆ ಶ್ರೀನಿ ಗೈರು
ಹೊಸದಿಲ್ಲಿ, ಅ.4: ಬಿಸಿಸಿಐನ ಮಾಜಿ ಅಧ್ಯಕ್ಷ ಎನ್.ಶ್ರೀನಿವಾಸನ್ ರವಿವಾರ ನಡೆದ ಬಿಸಿಸಿಐನ ವಿಶೇಷ ಸಾಮಾನ್ಯ ಸಭೆ(ಎಸ್ಜಿಎಂ)ಗೆ ಗೈರು ಹಾಜರಾಗಿದ್ದರು.
ಎನ್ ಶ್ರೀನಿವಾಸನ್ಗೆ ಶಶಾಂಕ್ ಮನೋಹರ್ ಸಲಹೆಗಾರರಾಗಿದ್ದರು. ಶ್ರೀನಿವಾಸನ್ ಅನುಪಸ್ಥಿತಿಯಲ್ಲಿ ಶಶಾಂಕ್ ಮನೋಹರ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು.
ಶ್ರೀನಿವಾಸನ್ ಅನುಪಸ್ಥಿಯಲ್ಲಿ ಅವರ ತಮಿಳುನಾಡು ಕ್ರಿಕೆಟ್ ಸಂಸ್ಥೆಯನ್ನು ಉಪಾಧ್ಯಕ್ಷ ಪಿಎಸ್ ರಾಮನ್ ಎಸ್ಜಿಎಂನ್ನು ಪ್ರತಿನಿಧಿಸಿದ್ದರು.
ಶ್ರೀನಿವಾಸನ್ ಬಿಸಿಸಿಐ ಸಭೆಯಲ್ಲಿ ಭಾಗವಹಿಸುವ ವಿಚಾರ ಇನ್ನೂ ಸುಪ್ರೀಂ ಕೋರ್ಟ್ನಲ್ಲಿ ಇತ್ಯರ್ಥಗೊಂಡಿಲ್ಲ. ಈ ಕಾರಣದಿಂದಾಗಿ ಶ್ರೀನಿವಾಸನ್ ಎಸ್ಜಿಎಂನಿಂದ ದೂರ ಉಳಿದಿದ್ದರು.