ಮನೋರಂಜನೆ

ದರ್ಶನ್ ರ ಮಿ. ಐರಾವತ ಚಿತ್ರವಿಮರ್ಶೆ

Pinterest LinkedIn Tumblr

AIRAWATAಹಿಂದೆ ಪೊಲೀಸ್ ವ್ಯವಸ್ಥೆ, ಸರ್ಕಾರಿ ವ್ಯವಸ್ಥೆಗಳನ್ನು ಸರಿ ಮಾಡಲು, ಹಲವಾರು ನಟರು ತೆರೆ ಮೇಲೆ ಬಂದು ಮಿಂಚಿ ಮಾಯವಾಗಿ ಹೋಗಿದ್ದಾರೆ. ಪ್ರಭಾಕರ್, ಅಂಬರೀಷ್, ದೇವರಾಜ್, ಮಾಲಾಶ್ರೀ, ಸಾಯಿಕುಮಾರ್ ಮುಂತಾದವರನ್ನು ತೆರೆಯ ಮೇಲೆ ಅವರ ಆರ್ಭಟಗಳಿಗೆ, ಪೊಲೀಸ್ ಧಿರಿಸಿಗೆ, ಪಂಚಿಂಗ್ ಡೈಲಾಗುಗಳಿಗೆ ಚಿತ್ರರಸಿಕರು ಸದಾ ನೆನಪಿನಲ್ಲಿಟ್ಟುಕೊಂಡಿದ್ದಾರೆ. ಈಗ ಅವರ ಜಾಗವನ್ನು ತುಂಬಲು ಅಥವಾ ಅವರ ಪರಂಪರೆಯನ್ನು ಮುಂದುವರೆಸಲು ಹೊಸ ಅವತಾರದಲ್ಲಿ ಬಂದಿದ್ದಾನೆ ಮಿ ಐರಾವತ. ಅವರೆಲ್ಲರಿಗಿಂತಲೂ ಕಟ್ಟುಮಸ್ತಾದ ಆಳಿವನು. ಒಂದೇ ಏದುಸಿರಿನಲ್ಲಿ ಮೈಲುಗಟ್ಟಲೆ ಡೈಲಾಗುಗಳನ್ನು ಹೊಡೆಯಬಲ್ಲವನು ಮತ್ತು ಅವರೆಲ್ಲರಿಗಿಂತಲೂ ರೌಡಿ ದೇಹಗಳ ಜೊತೆ ಚೆನ್ನಾಗಿ ಬಡಿದಾಡಬಲ್ಲವನು, ಚೆಂಡಾಡಬಲ್ಲವನು. ದರ್ಶನ್ ಅವರ ಈ ಪೊಲೀಸ್ ಅವತಾರದಲ್ಲಿ ಇನ್ನೂ ಹೆಚ್ಚೇನಾದರೂ ವಿಭಿನ್ನತೆ ಇದೆಯೇ? ಇದನ್ನು ನೋಡಿದ ಮೇಲೆ ವ್ಯವಸ್ಥೆ ತುಸುವಾದರೂ ಸರಿ ಹೋಗಬಹುದೇ?

ಐಪಿಎಸ್ ತೇರ್ಗಡೆಯಾಗಿ ಆಗ ತಾನೆ ಕರ್ನಾಟಕದಲ್ಲಿ ಎಸಿಪಿ ಆಗಿ ನೇಮಕವಾಗಿರುವ ಐರಾವತ(ದರ್ಶನ್) ಖಡಕ್ ಅಧಿಕಾರಿ. ಅನ್ಯಾಯ ಕಂಡಲ್ಲಿ ನುಗ್ಗಿ ಬ್ಯಾಡ್ ಬಾಯ್ಸ್ ಮತ್ತು ರೌಡಿಗಳಲ್ಲಿ ನಡುಕ ಹುಟ್ಟಿಸುತ್ತಾನೆ. ಕಾಲೇಜು, ಶಾಲೆ, ಆಸ್ಪತ್ರೆ, ಅಗ್ನಿಶ್ಯಾಮಕ ದಳ ಹೀಗೆ ಎಲ್ಲೆಂದರಲ್ಲಿ ದಕ್ಷತೆಯ, ಒಳ್ಳೆತನದ ಬಗ್ಗೆ ಉದ್ದುದ್ದದ ಭಾಷಣ ಮಾಡುತ್ತಾನೆ. ಆದುದರಿಂದ ಭೂಗತ ದೊರೆ ಪ್ರತಾಪ್ ಕಾಳೆಯ (ಪ್ರಕಾಶ್ ರಾಜ್) ದ್ವೇಷ ಕಟ್ಟಿಕೊಳ್ಳುತ್ತಾನೆ. ಅವನೊಂದಿಗೆ ಹಾದಿ ಬೀದಿಯಲ್ಲಿ, ಪೋಲಿಸ್ ಠಾಣೆಯಲ್ಲಿ ಕೋಳಿ ಕಾಳಗಗಳನ್ನು ನಡೆಸುತ್ತಿರುತ್ತಾನೆ. ಈ ಕಾಳೆ ಬೆಂಬಲಕ್ಕೆ ಬರುವ ಪೊಲೀಸ್ ಕಮಿಷನರ್ ಗೆ (ಅವಿನಾಶ್) ಕೂಡ ಉದ್ದುದ್ದ ಭಾಷಣ ನೀಡುತ್ತಾನೆ. ಕಮಿಷನರ್ ಅವರೇ ಹೀಗಿರುವಾಗ ಸುಲಭವೇ? ಐರಾವತನ ಹಿನ್ನಲೆ ಕೆದಕುತ್ತಾರೆ. ಆಗ ಐದೂವರೆ ತಿಂಗಳು ಮತ್ತು ೨೨ ದಿನಗಳ ನಂತರ ಐರಾವತ ನಕಲಿ ಐಪಿಎಸ್ ಅಧಿಕಾರಿ ಎಂದು ತಿಳಿದುಬರುತ್ತದೆ. ಅವನನ್ನು ಬಂಧಿಸಲಾದರು, ಅಭಿಮಾನಿ ಜನರು ಬೀದಿಗಿಳಿದು ಪ್ರತಿಭಟಿಸುವುದರಿಂದ, ಒತ್ತಡಕ್ಕೆ ಮಣಿಯುವ ಸರ್ಕಾರ, ದೊಡ್ಡದೊಂದು ಮೈದಾನದಲ್ಲಿ ಜನತಾ ನ್ಯಾಯಾಲಯದಲ್ಲಿ ವಿಚಾರಣೆ ಮಾಡಲು ಅನುಮತಿ ನೀಡುತ್ತದೆ. ನಾಲ್ಕೈದು ಜನರ ಬೆಂಬಲದ ಮಾತಿನಿಂದಾಗಿ ಅತಿ ಸಣ್ಣ ಶಿಕ್ಷೆಗೆ ಒಳಗಾಗುವ ಐರಾವತ ಒಂದು ತಿಂಗಳ ಜೈಲು ಶಿಕ್ಷೆ ಮುಗಿಸಿ ಹೊರಬರುತ್ತಾನೆ. ಐರಾವತ ನಕಲಿ ಐಪಿಎಸ್ ಅಧಿಕಾರಿಯಾಗಲು ಇದ್ದ ಬಲವಾದ ಕಾರಣ ಏನು? ಜೈಲಿನಿಂದ ಹೊರಬಂದ ಮೇಲೆ ಐರಾವತ ಏನೇನು ಮಾಡಿಯಾನು?

ಕಲ್ಪನೆ ಎಂಬುದೇ ಮನುಷ್ಯನಲ್ಲಿ ಸತ್ತು ಹೋದರೆ ಏನಾಗಬಹುದು? ತರ್ಕ ಬೇಡ ಬಿಡಿ, ಸಾಮಾನ್ಯ ರೂಢಿ ಏನೆಂಬುದೇ ತಿಳಿಯದೆ ಹೋದರೆ ಏನಾಗಬಹುದು? ಬಹುಷಃ ಇಂತಹ ಕಥೆ ಹುಟ್ಟಬಹುದು. ಕಲ್ಪನೆ, ತರ್ಕ, ಸಾಮಾನ್ಯ ರೂಢಿ ಇವುಗಳನ್ನೆಲ್ಲ ಗಾಳಿಗೆ ತೂರಿ, ಕಥಾನಾಯಕ ದರ್ಶನ್ ಅವರನ್ನು ವೈಭವೀಕರಿಸಿ ಐರಾವತನನ್ನಾಗಿಸಲು ನಿರ್ದೇಶಕ ಅರ್ಜುನ್ ಉರುಳುಸೇವೆ ಮಾಡಿದ್ದಾರೆ. ಐಪಿಎಸ್ ಅಧಿಕಾರಿಯ ನೇಮಕಕ್ಕೆ ಕೇಂದ್ರ ಸರ್ಕಾರದ ಆದೇಶವನ್ನು ನಕಲಿ ಮಾಡಿ ಫ್ಯಾಕ್ಸ್ ಕಳುಹಿಸುವುದು ಅಷ್ಟು ಸುಲಭವೇ? ಸರ್ಕಾರಕ್ಕೆ ಮೋಸ ಮಾಡಿದ ಆರೋಪಿಯ ವಿಚಾರಣೆಗೆ ಮೈದಾನದಲ್ಲಿ ಜನರ ಮಾತು ಕೇಳಿ ನ್ಯಾಯಾಧೀಶನೊಬ್ಬ ಶಿಕ್ಷೆಯನ್ನು ಕಡಿಮೆ ಮಾಡಲು ಸಾಧ್ಯವೇ? ಇಂತಹ ತರ್ಕವನ್ನು ಬಿಟ್ಟುಬಿಡೋಣ. ಒಬ್ಬ ಭೂಗತನ ವರ್ತನೆ ಹೇಗಿರುತ್ತದೆ, ಒಬ್ಬ ಪೊಲೀಸ್ ಅಧಿಕಾರಿಯ ಕಾರ್ಯಪರತೆ ಹೇಗಿರುತ್ತದೆ ಎಂಬುದರ ಸಣ್ಣ ಅಧ್ಯಯನವಾದರೂ ಬೇಡವೇ? ಹೀಗೆ ಅತಿಗಳಿಂದಲೇ ತುಂಬಿದ ಸಿನೆಮಾದ ಮೊದಲಾರ್ಧದಲ್ಲಿ ನಾಯಕ ನಟ ಕಂಡಕಂಡವರಿಗೆ ಹೊಡೆಯುವ, ಕಂಡಕಂಡಲ್ಲಿ ಬೋಧನೆ ಮಾಡುವುದು, ರೌಡಿಯ ಜೊತೆ ವಾಗ್ಯುದ್ಧ ನಡೆಸುವ ಘಟನೆಗಳು ಬಿಟ್ಟರೆ ಏನೇನೂ ಇಲ್ಲ! ಮಧ್ಯಂತರದಲ್ಲಿ ಸಿಗುವ ಒಂದು ಟ್ವಿಸ್ಟ್ ಜನರಿಗೆ ಕುತೂಹಲಕ್ಕಿಂತ ನಗೆಪಾಟಲಿಗೆ ನೂಕುತ್ತದೆ. ದ್ವಿತೀಯಾರ್ಧದಲ್ಲಿ ಐರಾವತನ ಪೂರ್ವಾಶ್ರಮದ ಕಥೆ ಹೇಳುವಾಗ ಅವನ ಕುಟುಂಬದಲ್ಲಿ ನಡೆದಿರುವ ಒಂದು ರೇಪಿನ ಬಗ್ಗೆ ಪೊಲೀಸರಿಗೆ ದೂರು ನೀಡಲು ಹೋದಾಗ, ಪೊಲೀಸರ ವರ್ತನೆಯನ್ನು ಅಗತ್ಯಕ್ಕಿಂತಲೂ ಕೆಟ್ಟದಾಗಿ ಚಿತ್ರಿಸಿ, ಹೀರೋ ಸುತ್ತ ಅತಿರಂಜಿತ ಕಥೆ ಕಟ್ಟಲು ನಡೆಸಿರುವ ಪ್ರಯತ್ನ ಪಿಚ್ಚೆನಿಸುತ್ತದೆ. ನಟ ದರ್ಶನ್ ಮತ್ತು ಪ್ರಕಾಶ್ ರಾಜ್ ಅವರ ಏರು ಧ್ವನಿಯ ಸಂಭಾಷಣೆ ಅವರ ಅಭಿಮಾನಿಗಳನ್ನು ಉನ್ಮಾದಕ್ಕೆ ತಳ್ಳಿ ಶಿಳ್ಳೆ, ಚಪ್ಪಾಳೆಗಳನ್ನು ಗಿಟ್ಟಿಸಿಕೊಂಡರೂ, ಅದರಿಂದಾಚೆಗೆ ಚಿಂತಿಸಿದಾಗ ಕಿರುಚಾಟ-ಅಬ್ಬರ ಎನಿಸುತ್ತದೆ. ಪ್ರಕಾಶ್ ರಾಜ್ ತಮ್ಮ ಎಂದಿನ ಅಬ್ಬರದ ನಟನೆಯನ್ನು ಮೊಳಗಿಸಿದ್ದಾರೆ. ಜೊತೆಗೆ ಕಿರಿಕಿರಿಯುಂಟುಮಾಡಲು ಸಾಧುಕೋಕಿಲಾ ಜೊತೆಯಾಗಿದ್ದಾರೆ. ನಾಯಕ ನಟಿ ಊರ್ವಶಿ ರೌಟೇಲಾ ಅವರು ಒಂದೆರಡು ಬಾರಿ ಕಾಣಿಸಿಕೊಳ್ಳುತ್ತಾರೆ. ಸ್ವಾತಂತ್ರ್ಯ ಹೋರಾಟಗಾರ ಮುದುಕನ ಪಾತ್ರದಲ್ಲಿ ಅನಂತನಾಗ್ ಸಪ್ಪೆಯಾಗಿ ಕಾಣಿಸಿಕೊಂಡಿದ್ದಾರೆ. ಅಬ್ಬರದ ಹಿನ್ನಲೆ ಸಂಗೀತ, ವಿ ಹರಿಕೃಷ್ಣ ಅವರ ಸಂಗೀತದಲ್ಲಿ ಮೂಡಿ ಬಂದಿರುವ ಹಾಡುಗಳು ಸಿನೆಮಾದ ಅಬ್ಬರವನ್ನೂ, ಗೊಬ್ಬರವನ್ನೂ ಮುಂದುವರೆಸುತ್ತವೆ. ಅಲ್ಲಲ್ಲಿ ಪುನರಾವರ್ತಿತವಾಗುವ ದೃಶ್ಯಗಳು, ವಿಪರೀತವಾಗಿ ಟಿವಿ ಮಾಧ್ಯಮಗಳ ದೃಶ್ಯಗಳನ್ನು ತುರುಕಿರುವುದು ಸಿನೆಮಾವನ್ನು ಅನಗತ್ಯವಾಗಿ ಹಿಗ್ಗಿಸಿವೆ. ದೀಪು ಅವರ ಸಂಕಲನದಲ್ಲಿ ಕೊರತೆ ಎದ್ದು ಕಾಣುತ್ತದೆ. ವಿದೇಶದಲ್ಲಿ ಚಿತ್ರೀಕರಿಸಿರುವ ಕೆಲವು ಹಾಡುಗಳು ಬ್ಲರ್ ಆಗಿ ಕಾಣಿಸುವುದು ಛಾಯಾಗ್ರಹಣದಲ್ಲಿರುವ ಕೊರತೆಯನ್ನೂ ರಾಚುತ್ತದೆ. ಒಟ್ಟಿನಲ್ಲಿ ಬಿಳಿ ಆನೆಯನ್ನು ಸಾಕಲು ಹೋಗಿ ಸುಸ್ತಾಗಿ ಸೋತು ಹೈರಾಣಾಗಿದ್ದಾರೆ ನಿರ್ದೇಶಕ ಎ ಪಿ ಅರ್ಜುನ್.

ಐರಾವತ ಎಂಬುದು ಇಂದ್ರನನ್ನು ಹೊತ್ತು ಒಯ್ಯುವ ಐದು ತಲೆಯ ಬಿಳಿ ಆನೆ. ಅಂದರೆ ಒಂದು ಪುರಾಣ ಕಥೆಯ ಮಿಥಿಕಲ್ ಪ್ರಾಣಿ. ವಾಣಿಜ್ಯಾತ್ಮಕ ಸಿನೆಮಾಗಳು ಕೂಡ ಮಾಸ್ ಗಳಲ್ಲಿ ಇಂತಹ ಮಿಥ್ ಗಳನ್ನು ಸೃಷ್ಟಿಸುತ್ತವೆ. ಇಡೀ ಸಮಾಜವನ್ನು ಒಬ್ಬ ನಾಯಕ ಸರಿಪಡಿಸಬಲ್ಲ ಎಂಬುದೊಂದು ಆಧುನಿಕ ಮಿಥ್. ನಿಮಗೆ ಗೊತ್ತಿರಬಹುದು ಪುರಾಣಗಳು, ವಾಸ್ತವಕ್ಕಿಂತ, ಇತಿಹಾಸಕ್ಕಿಂತ ಹೆಚ್ಚು ಜನಪ್ರಿಯ ಹಾಗು ಉಳಿದಿಕೊಂಡುಬಿಡುತ್ತವೆ. ಈ ಆಧುನಿಕ ಮಿಥ್ ಗಳು ಹಾಗೆಯೇ ಮಾಸ್ ಗಳಲ್ಲಿ ಜನಪ್ರಿಯವಾಗಿ ಉಳಿದುಬಿಡುತ್ತವೆ. ಆದರೆ ಕನಿಷ್ಠ ಪಕ್ಷ ಈ ಆಧುನಿಕ ಪುರಾಣಗಳನ್ನು ಸೃಷ್ಟಿಸುವಾಗ ಸ್ವಲ್ಪ ಕಲಾತ್ಮಕವಾಗಿ, ವಾಹ್ ಎನ್ನುವ ಕಲ್ಪನೆಯೊಂದಿಗೆ ಕಥೆ ಹೆಣೆದು ಅಥವಾ ಜನಕ್ಕೆ ಉಪಯೋಗುವ ಹಾಗೆ ಸಿನೆಮಾಗಳನ್ನು ಮಾಡಿದಾಗ ಅವುಗಳ ವ್ಯಾಲಿಡಿಟಿ ಕೂಡ ವೃದ್ಧಿಯಾಗುತ್ತದೆ. ಇಲ್ಲದೆ ಹೋದರೆ ಕೆಟ್ಟ ಪುರಾಣ ಎಂದು ಜನ ನಿರ್ಲಕ್ಷ್ಯ ಮಾಡಿಬಿಡುತ್ತಾರೆ!

ಕೊನೆಗೆ: ಕನ್ನಡ ಸಿನೆಮಾಗಳ ವ್ಯಾಧಿ ಇದು. ಮತ್ತೆ ಮತ್ತೆ ಬರೆಯಲು ಬೇಸರ. ಆದರು.. ನಾಯಕನ ತಂಗಿಗೆ ಅತ್ಯಾಚಾರವಾಗಿದೆ. ಒಂದು ಕಡೆ ಅದರ ವಿರುದ್ಧ ಹೋರಾಡುತ್ತಿದ್ದಾನೆ. ಆದರೆ ಈ ನಾಯಕ ನಟ, ಇನ್ನೊಬ್ಬಳ ಬಟ್ಟೆ ಬಗ್ಗೆ ಪ್ರತಿಕ್ರಿಯಿಸಿ ಸೀರೆ ಉಟ್ಟರಷ್ಟೇ ಹೆಣ್ಣುಮಕ್ಕಳು ಚಂದ ಎಂಬ ಸಂಪ್ರದಾಯದ-ಮೂಲಭೂತವಾದಿಗಳ ಪಾಠ ಹೇಳುತ್ತಾನೆ! ಇಂತಹ ವಿರೋಧಾಭಾಸಗಳು, ಪುರುಷ ದುರಭಿಮಾನ ತುಂಬಿದ ವ್ಯಾಧಿಯನ್ನು ಕನ್ನಡ ಚಿತ್ರರಂಗ ಸರಿಪಡಿಸಿಕೊಳ್ಳಲು ಇದು ಸೂಕ್ತ ಸಮಯ!

Write A Comment