ವರ್ಷಕ್ಕೊಂದು ಸಿನಿಮಾ ಮಾಡಿಕೊಂಡಿದ್ದ ಶಾರುಖ್ ಖಾನ್, ಈಗ ಸಿಕ್ಕಾಪಟ್ಟೆ ಬಿಜಿಯಾಗಿದ್ದಾರೆ. ಯಾವ ಪರಿ ಎಂದರೆ, ಅವರ ‘ಫ್ಯಾನ್’, ‘ರಯೀಸ್’, ‘ದಿಲ್ವಾಲೆ’ ಚಿತ್ರಗಳು ಏಕಕಾಲದಲ್ಲಿ ಚಿತ್ರೀಕರಣದಲ್ಲಿ ತೊಡಗಿಕೊಂಡಿವೆ. ಈಗ ‘ತನು ವೆಡ್ಸ್ ಮನು ರಿಟರ್ನ್ಸ್’ ಖ್ಯಾತಿಯ ಆನಂದ್ ಎಲ್. ರೈ ನಿರ್ದೇಶನದ ಹೊಸ ಚಿತ್ರಕ್ಕೂ ಹೀರೋ ಆಗಿ ಎಸ್ಆರ್ಕೆ ಬುಕ್ ಆಗಿದ್ದಾರೆ. ಅಂದ್ಹಾಗೆ, ಅವರಿಗಿಲ್ಲಿ ಇಬ್ಬರು ನಾಯಕಿಯರು; ದೀಪಿಕಾ ಪಡುಕೋಣೆ ಮತ್ತು ಆಲಿಯಾ ಭಟ್!!
‘ಜಬ್ ತಕ್ ಹೈ ಜಾನ್’ ಚಿತ್ರದಲ್ಲಿ ಶಾರುಖ್- ಕತ್ರೀನಾ ಕೈಫ್ ಜೋಡಿಯ ನಟನೆಯನ್ನು ಕಂಡಿದ್ದ ಆನಂದ್, ಈ ಚಿತ್ರಕ್ಕೂ ಅದೇ ಜೋಡಿಯನ್ನು ಮುಂದುವರೆಸುವ ಆಸೆ ಇಟ್ಟುಕೊಂಡಿದ್ದಾರಂತೆ. ಆದರೆ ಕೊನೆ ಕ್ಷಣದ ಬದಲಾವಣೆಯಲ್ಲಿ ಕ್ಯಾಟ್ ಜಾಗಕ್ಕೆ ದೀಪಿಕಾ ಬಂದಿದ್ದಾರೆ. ಅಲ್ಲಿಗೆ, ಶಾರುಖ್ ಜತೆಗೆ ದೀಪಿಕಾ ಅವರ 4ನೇ ಚಿತ್ರ ಇದಾಗಲಿದೆ. ನಿರ್ದೇಶಕರು ಕೂಡ ದೀಪಿಕಾ ಮತ್ತು ಆಲಿಯಾ ಆಯ್ಕೆಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ. ಇನ್ನು, ಸ್ವತಃ ಶಾರುಖ್ ಈ ಚಿತ್ರದ ಸಹ ನಿರ್ವಪಕರಾಗಿದ್ದು, ಎರೋಸ್ ಸಂಸ್ಥೆಯೂ ನಿರ್ವಣದಲ್ಲಿ ಕೈ ಜೋಡಿಸಿದೆ. ಸದ್ಯ ಶಾರುಖ್ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಅತ್ತ ದೀಪಿಕಾ ಅಭಿನಯದ ‘ತಮಾಷಾ’ ಮತ್ತು ‘ಬಾಜಿರಾವ್ ಮಸ್ತಾನಿ’ ಚಿತ್ರಗಳು ಮುಗಿದಿದ್ದು, ಪ್ರಚಾರ ಕಾರ್ಯಗಳಲ್ಲಿ ಅವರು ತೊಡಗಿಕೊಳ್ಳಬೇಕಿದೆ. 2-3 ಚಿತ್ರಗಳ ಚಿತ್ರೀಕರಣದಲ್ಲಿ ಆಲಿಯಾ ಬಿಜಿ ಇದ್ದಾರೆ. ಹಾಗಾಗಿ, ಈ ಚಿತ್ರ ಸೆಟ್ಟೇರುವುದು ತಡವಾಗುತ್ತದಂತೆ.