ಮಹತ್ವಾಕಾಂಕ್ಷೆ, ಕಠಿಣ ಪರಿಶ್ರಮ, ಬದ್ಧತೆ, ಅರ್ಪಣಾ ಮನೋಭಾವ, ಹೊಸತನದೆಡೆಗಿನ ತುಡಿತ, ಸೌಜನ್ಯ, ವಿನಯ… ಇಂಥ ಹತ್ತು ಹಲವು ಪದಗಳೇ ಜೀವ ಪಡೆದಂತೆ ಬಾಳಿದವರು ಶಂಕರ್ನಾಗ್. 36 ವರ್ಷಗಳ ಕಿರು ವಯಸ್ಸಿನಲ್ಲಿ ಅವರು ಮಾಡಿದ ಮೋಡಿ ಎಂಥದ್ದು ಎಂಬುದಕ್ಕೆ ಈಗಲೂ ಎಲ್ಲೆಡೆ ಉಕ್ಕುವ ಅಭಿಮಾನಕ್ಕಿಂತ ಬೇರೆ ಸಾಕ್ಷಿ ಬೇಕಿಲ್ಲ. ರಂಗಭೂಮಿ, ಕಿರುತೆರೆ, ಸಿನಿಮಾ ಕ್ಷೇತ್ರಗಳಲ್ಲಿ ವಿಶಿಷ್ಟ ಛಾಪು ಒತ್ತಿದ ಶಂಕರ್ನಾಗ್, ಸಾಮಾಜಿಕ ಅಭಿವೃದ್ಧಿ ನಿಟ್ಟಿನಲ್ಲೂ ದೊಡ್ಡ ಕನಸುಗಳನ್ನು ಕಂಡವರು. ಬೆಂಗಳೂರಿನಲ್ಲಿ ಮೆಟ್ರೋ ರೈಲು ಬರಬೇಕು ಎಂಬುದರ ಬಗ್ಗೆ ಧ್ವನಿ ಹೊರಡಿಸಿದವರಲ್ಲಿ ಮುಂಚೂಣಿಯಲ್ಲಿದ್ದವರು. ಅಂಥ ಅನನ್ಯ ಸಾಧಕ ಭೌತಿಕವಾಗಿ ಕಣ್ಮರೆಯಾಗಿ ಇಂದಿಗೆ ಸರಿಯಾಗಿ 25 ವರ್ಷ!
ಸೆ. 30, 1990ರಂದು ‘ಜೋಕುಮಾರಸ್ವಾಮಿ’ ಚಿತ್ರೀಕರಣಕ್ಕೆಂದು ಬಾಗಲಕೋಟೆ ಜಿಲ್ಲೆಯ ಲೋಕಾಪುರಕ್ಕೆ ಹೊರಟಿದ್ದಾಗ ದಾವಣಗೆರೆ ಹೊರವಲಯದಲ್ಲಿರುವ ಅನಗೋಡು ಗ್ರಾಮದ ಬಳಿ ಶಂಕರ್ನಾಗ್ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಯಿತು. ಅಪ್ಪಟ ಪ್ರತಿಭಾವಂತನ ಆಕಸ್ಮಿಕ ನಿಧನಕ್ಕೆ ಚಿತ್ರರಂಗ ಮಾತ್ರವಲ್ಲದೇ, ಹಲವು ಕ್ಷೇತ್ರಗಳ ಸಾಧಕರು ಕಂಬನಿಗರೆದಿದ್ದರು. ಆಗಿನ ಎಲ್ಲರ ಮಾತುಗಳ ಸಾರವಿಷ್ಟೇ, ‘ಇಷ್ಟು ಕಡಿಮೆ ಅವಧಿಯಲ್ಲೇ ಇಷ್ಟು ಸಾಧನೆಯ ಶಿಖರ ಏರಿದರು ಶಂಕರ್. ಇನ್ನು ಪರಿಪೂರ್ಣವಾಗಿ ಬದುಕಿದ್ದಿದ್ದರೆ?’ ಹೌದು, ಈ ಸಾಧ್ಯತೆಯ ಅಚ್ಚರಿಬೆರೆತ ಅಭಿಪ್ರಾಯ ಈಗಲೂ ವ್ಯಕ್ತವಾಗುತ್ತದೆ ಎಂಬುದೇ ‘ಆಟೋ ರಾಜ’ನ ಹಿರಿಮೆ.
ವ್ಯಕ್ತಿಯೊಬ್ಬನ ಅಸಲಿ ಆಯಸ್ಸು ನಿರ್ಧಾರ ಆಗುವುದು, ನಿಧನದ ಬಳಿಕ ಆತ ಹೇಗೆ ಜನಮನದಲ್ಲಿ ನೆನಪಾಗಿ ಉಳಿದಿದ್ದಾನೆ ಎನ್ನುವುದರ ಆಧಾರದ ಮೇಲೆ.
ಹಾಗೆ ನೋಡುವಾಗ ಶಂಕರ್ನಾಗ್ ಈಗಲೂ ಯಾವ ಸ್ಟಾರ್ಗೂ ಕಮ್ಮಿಯಿಲ್ಲದಂತೆ ಎಲ್ಲೆಂದರಲ್ಲಿ ಕಾಣಸಿಗುವ ಅಂದದ ಮುಖ. ಸಾವಿರಾರು ಆಟೋಗಳಲ್ಲಿ ಆ ಮುಖ ರಾರಾಜಿಸುತ್ತದೆ, ಹಲವು ಸರ್ಕಲ್ಗಳಲ್ಲಿ ಶಂಕರ್ ಪುತ್ಥಳಿ ಮುಗುಳ್ನಗುತ್ತದೆ, ಹೊಸ ಪ್ರಯೋಗವನ್ನು ನೆಚ್ಚಿಕೊಂಡು ನಿರ್ದೇಶನದ ಕನಸುಗಳನ್ನು ಹೊತ್ತ ಯುವ ನಿರ್ದೇಶಕರಿಗೆ ಶಂಕರ್ ಸಿನಿಮಾಗಳು ಆಕರವಾಗುತ್ತವೆ. ಇದು ಕೊನೆಮೊದಲಿಲ್ಲದ ಅಪರೂಪದ ನಂಟೇ ಸರಿ!
ಕಲೆಯನ್ನು ಒಂದು ಆದರ್ಶವಾಗಿ ಪರಿಗಣಿಸುವವರಿಗೆ ಶಂಕರ್ನಾಗ್ ಸಾಧನೆಯ ಮೆಲುಕು ಅತ್ಯಗತ್ಯ. ಗಿರೀಶ್ ಕಾರ್ನಾಡ್ ನಿರ್ದೇಶನದಡಿ 1978ರಲ್ಲಿ ಮೂಡಿಬಂದ ‘ಒಂದಾನೊಂದು ಕಾಲದಲ್ಲಿ’ ಚಿತ್ರ ಶಂಕರ್ ಬದುಕಿಗೆ ಗಟ್ಟಿ ಅಡಿಪಾಯ ಹಾಕಿಕೊಟ್ಟಿತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು, ಪ್ರಶಸ್ತಿಗಳನ್ನು ತಂದುಕೊಟ್ಟಿತು. ‘ಸೀತಾರಾಮು’, ‘ಮೂಗನ ಸೇಡು’, ‘ಆಟೋ ರಾಜ’, ‘ಹೊಸ ಜೀವನ’, ‘ಸಾಂಗ್ಲಿಯಾನ’ ಚಿತ್ರಗಳಲ್ಲಿ ನಾಯಕನಾಗಿ ಮಿಂಚಿದ್ದರೂ ಅವರ ತುಡಿತವಿದ್ದುದು ನಿರ್ದೇಶನದಲ್ಲಿ. ‘ಮಿಂಚಿನ ಓಟ’, ‘ಜನ್ಮ ಜನ್ಮದ ಅನುಬಂಧ’, ‘ಗೀತಾ’, ‘ನೋಡಿ ಸ್ವಾಮಿ ನಾವಿರೋದು ಹೀಗೆ’, ‘ಆಕ್ಸಿಡೆಂಟ್’, ‘ಒಂದು ಮುತ್ತಿನ ಕಥೆ’ ಚಿತ್ರಗಳಲ್ಲಿ ಶಂಕರ್ ದಿಗ್ದರ್ಶನದ ಶಕ್ತಿ-ಯುಕ್ತಿ ಸೆರೆಯಾಗಿದೆ. ಕಿರುತೆರೆಗಾಗಿ ಕಟ್ಟಿಕೊಟ್ಟ ‘ಮಾಲ್ಗುಡಿ ಡೇಸ್’, ‘ಸ್ವಾಮಿ’ ಕ್ಲಾಸಿಕ್ ಎನಿಸಿವೆ. ರಾಜಕಾರಣಕ್ಕೆ ಧುಮುಕಿ, ಸಂಕೇತ್ ಸ್ಟೂಡಿಯೋ ಮೂಲಕ ಸಿನಿಕರ್ವಿುಗಳಿಗೆ ಆಧುನಿಕ ತಂತ್ರಜ್ಞಾನ ಸಿಗುವಂತೆ ಶ್ರಮಿಸಿದ ಶಂಕರ್ನಾಗ್, ನಂದಿಬೆಟ್ಟಕ್ಕೆ ರೋಪ್ ವೇ ಹಾಕುವ ಕನಸನ್ನೂ ಕಂಡಿದ್ದರು!!
ಶಂಕರ್ನಾಗ್ ಕಣ್ಮರೆಯಾಗಿ 25 ವರ್ಷಗಳ ಬಳಿಕವೂ ಚಿರನೆನಪಾಗಿ ಉಳಿದಿದ್ದಾರೆ. ಇಂಥ ಅನನ್ಯ ಪ್ರತಿಭೆ ಬದುಕಿದ್ದಿದ್ದರೆ ನ. 9ಕ್ಕೆ 61ನೇ ವಸಂತಕ್ಕೆ ಕಾಲಿಡುತ್ತಿದ್ದರು.
****
ನೆನಪೇ ದೊಡ್ಡ ಗೌರವ
ಈಗ ಎಷ್ಟೋ ಕಲಾವಿದರು ಈ ಶುಕ್ರವಾರದಿಂದ ಮುಂದಿನ ಶುಕ್ರವಾರದ ಹೊತ್ತಿಗೆ ಮರೆತುಹೋಗುತ್ತಾರೆ. ಆದರೆ 25 ವರ್ಷಗಳ ನಂತರವೂ ಶಂಕರ್ನಾಗ್ ನೆನಪಾಗುತ್ತಾರೆ! ಒಬ್ಬ ಮನುಷ್ಯನ ಬಗ್ಗೆ ಇದಕ್ಕಿಂತ ದೊಡ್ಡ ಗೌರವ ಬೇರೊಂದಿಲ್ಲ. ‘ಕಾಯಕವೇ ಕೈಲಾಸ’ ಅಂತ ನಂಬಿ, ಶ್ರಮಜೀವಿಯಾಗಿ ಬಾಳಿ ಹಲವು ಸಾಧನೆ ಮಾಡಿದ್ದಾರೆ ಶಂಕರ್. ‘ಪುಂಡ ಪ್ರಚಂಡ’ ಚಿತ್ರದಲ್ಲಿ ನಾವು ಜತೆಯಾಗಿ ನಟಿಸಿದ್ದು, ಶೆಡ್ಯೂಲ್ ಬ್ರೇಕ್ ಆಗಿದ್ದು, ಅಪಘಾತದಲ್ಲಿ ಅಸುನೀಗಿದ್ದು, ವಾಣಿಜ್ಯ ಮಂಡಳಿಯಲ್ಲಿ ಅವರ ಅಂತಿಮದರ್ಶನ ಪಡೆದದ್ದು, ಶಂಕರ್ ಅಗಲಿಕೆಗೆ ರಾಜ್ಯದ ಜನತೆ ಶಾಕ್ ಆಗಿದ್ದು ಈಗಲೂ ಕಣ್ಣಿಗೆ ಕಟ್ಟಿದಂತಿದೆ.
| ರಮೇಶ್ ಅರವಿಂದ್ ನಟ
****
ಶ್ರೇಷ್ಠ ಮಾದರಿ
ಶಂಕರ್ನಾಗ್ ತುಂಬ ಅಪರೂಪದ ರೋಲ್ ಮಾಡೆಲ್. ಎಷ್ಟೋ ಜನ ಇರ್ತಾರೆ, ಆದರೆ ಅವರನ್ನು ರೋಲ್ ಮಾಡೆಲ್ ಅಂತ ಒಪ್ಪಿಕೊಳ್ಳೋಕೆ ಜನ ರೆಡಿ ಇರೋದಿಲ್ಲ. ತಂತ್ರಜ್ಞರಿಗೆ, ನಟರಿಗೆ, ಚಿತ್ರೋದ್ಯಮದ ಎಲ್ಲ ವಿಭಾಗಗಳಿಗೂ ಶಂಕರ್ನಾಗ್ ಒಳ್ಳೆಯ ರೋಲ್ ಮಾಡೆಲ್. ವೈಚಾರಿಕ, ಕಮರ್ಷಿಯಲ್ ದೃಷ್ಟಿಕೋನಗಳ ಅತ್ಯುತ್ತಮ ಮಿಳಿತ ಅವರಲ್ಲಿತ್ತು.
| ಯೋಗರಾಜ್ ಭಟ್ ನಿರ್ದೇಶಕ