ಮನೋರಂಜನೆ

ಜೆಕೆಎಸ್ ನಿರ್ದೇಶನದ ‘ಅಲೋನ್’ ಸೀಡಿ ಬಿಡುಗಡೆ

Pinterest LinkedIn Tumblr

aloneಜೆಕೆಎಸ್ ನಿರ್ದೇಶನದ ‘ಅಲೋನ್’ ಚಿತ್ರ ಈಚೆಗಷ್ಟೇ ಒಂದೇ ಸುದ್ದಿಗೋಷ್ಠಿಯಲ್ಲಿ ಹಾಡುಗಳ ಸೀಡಿ ಬಿಡುಗಡೆ ಮಾಡುವ ಜೊತೆಗೆ ಸಿನಿಮಾ ಬಿಡುಗಡೆಯ ವಿಚಾರವನ್ನೂ ಹಂಚಿಕೊಂಡಿತು. ನಟ ಶ್ರೀನಗರ ಕಿಟ್ಟಿ ಹಾಡುಗಳ ಸೀಡಿ ಬಿಡುಗಡೆ ಮಾಡಿ ಚಿತ್ರಕ್ಕೆ ಶುಭಕೋರಿದರು. ಚೆನ್ನೈನ ‘ಟ್ರೆಂಡ್ ಮ್ಯೂಸಿಕ್’ ಹಾಡುಗಳ ಹಕ್ಕು ಖರೀದಿಸಿದೆ. ಕನ್ನಡ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ನಿರ್ಮಾಣವಾಗಿದ್ದು ಅಕ್ಟೋಬರ್ 2ರಂದು ಚಿತ್ರ ತೆರೆಕಾಣಲಿದೆ.

ಪ್ರಯಾಣದಲ್ಲಿ ‘ಅಲೋನ್’ ಕಥೆ ಅನಾವರಣಗೊಳ್ಳುತ್ತ ಸಾಗುತ್ತದೆ. ಬೆಂಗಳೂರಿನಿಂದ ಮಂಗಳೂರಿನವರೆಗೆ ಚಿತ್ರಕಥೆ ಸಾಗುತ್ತದೆ. ಏಕಾಂಗಿಯಾಗಿರಲು ಬಯಸುವ ಹುಡುಗಿಯೊಬ್ಬಳು ತನ್ನ ನೋವು, ತಲ್ಲಣಗಳನ್ನು ಹೇಗೆ ದಾಟಿ ಬರುತ್ತಾಳೆ ಎಂಬುದನ್ನು ಕಾಣಬಹುದು. ‘ಈ ಪಯಣದಲ್ಲಿ ಪ್ರತಿ ಸನ್ನಿವೇಶವೂ ತನ್ನೊಳಗೆ ರೋಚಕತೆಯನ್ನು ಹಿಡಿದುಟ್ಟುಕೊಳ್ಳುತ್ತ ಕೊನೆಯ ದೃಶ್ಯದವರೆಗೂ ಪ್ರೇಕ್ಷಕನಿಗೆ ಮನರಂಜನೆ ನೀಡಲಿದೆ’ ಎಂಬುದು ನಿರ್ದೇಶಕರ ಅಂಬೋಣ.

‘ಹಾಡುಗಳಿರಬೇಕು ಎಂಬ ಕಾರಣಕ್ಕೆ ಹಾಡುಗಳನ್ನು ಸೇರಿಸಿಲ್ಲ. ಅವು ಕಥೆಗೆ ಸೂಕ್ತವಾಗಿ ಮೂಡಿಬಂದಿವೆ’ ಎಂದರು ನಾಯಕಿ ನಿಕಿಶಾ ಪಟೇಲ್. ನಾಯಕ ವಸಿಷ್ಠ ಮೊದಲ ಬಾರಿ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದು, ತಮ್ಮ ವೃತ್ತಿ ಜೀವನದಲ್ಲಿ ಈ ಚಿತ್ರ ಮೈಲಿಗಲ್ಲು ಎಂದು ಹೇಳಿಕೊಂಡಿದ್ದಾರೆ. ಚಾರ್ಮಾಡಿ ಘಾಟ್‌ನ ದೃಶ್ಯವನ್ನು ಹೆಲಿಕ್ಯಾಮ್ ಬಳಸಿ ಚಿತ್ರೀಕರಿಸಲಾಗಿದೆ. ಗೋವಾ, ಮಂಗಳೂರು ಬೀಚ್‌ಗಳಲ್ಲಿ ಸೆಟ್ ಹಾಕಿ ಹಾಡುಗಳನ್ನು ಸೆರೆಹಿಡಿಯಲಾಗಿದೆ.

ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಸುಜಿತ್ ಶೆಟ್ಟಿ ಸಂಗೀತ ಸಂಯೋಜಿಸಿದ್ದಾರೆ. ಶಿವು ಜಮಖಂಡಿ ಮತ್ತು ಹೃದಯಶಿವ ಸಾಹಿತ್ಯ ಒದಗಿಸಿದ್ದಾರೆ. ಹದಿನೆಂಟು ವರ್ಷಗಳ ಬಳಿಕ ಸಿಮ್ರನ್ ಮತ್ತೆ ಪೊಲೀಸ್ ಪೋಷಾಕಿನಲ್ಲಿ ಅಬ್ಬರಿಸಲಿದ್ದಾರೆ. ಜೆನ್ನಿಫರ್, ಬುಲೆಟ್‌ ಪ್ರಕಾಶ್, ತಬಲ ನಾಣಿ ತಾರಾಬಳಗದಲ್ಲಿ ಇದ್ದಾರೆ. ಎಲ್.ಅನಂತ್ ಮತ್ತು ರಾಮಲಿಂಗಯ್ಯ ಸಿನಿಮಾಕ್ಕೆ ಹಣ ಹೂಡಿದ್ದಾರೆ.

Write A Comment