ನಿರ್ದೇಶಕ ಎಸ್.ಎಸ್. ರಾಜಮೌಳಿ ‘ಬಾಹುಬಲಿ’ ಮೂಲಕ ಈಗಾಗಲೇ ಭಾರತೀಯ ಚಿತ್ರರಂಗದಲ್ಲಿ ಸಾರ್ವಕಾಲಿಕ ದಾಖಲೆ ಬರೆದಿದ್ದಾರೆ. ಅತೀ ಹೆಚ್ಚು ಬಜೆಟ್ನ ಚಿತ್ರ ನಿರ್ದೇಶಿಸಿ ಬೆರಗು ಮೂಡಿಸಿದ್ದಾರೆ. ಅಷ್ಟೇ ಅಲ್ಲ, ಈ ಚಿತ್ರ ಕೂಡ ಭಾರೀ ಪ್ರಮಾಣದಲ್ಲಿ ಹಣ ಗಳಿಕೆ ಮಾಡಿ ನಿರ್ವಪಕರಿಗೆ ಲಾಭ ತಂದುಕೊಟ್ಟಿದೆ.
ಸದ್ಯ ‘ಬಾಹುಬಲಿ 2’ ಚಿತ್ರದ ಕೆತ್ತನೆಯಲ್ಲಿ ರಾಜಮೌಳಿ ಬಿಜಿ. ಮುಂದಿನ ವರ್ಷದ ಜುಲೈ ತಿಂಗಳಲ್ಲಿ ಆ ಚಿತ್ರವನ್ನೂ ತೆರೆಗೆ ತರಬೇಕೆಂಬುದು ಅವರ ಗುರಿ. ಈ ಮಧ್ಯೆ ಟಾಲಿವುಡ್ನಿಂದ ಕೇಳಿಬರುತ್ತಿರುವ ಮಾಹಿತಿಯೊಂದು ಅಚ್ಚರಿ ಹುಟ್ಟಿಸಿದೆ. ರಾಜಮೌಳಿ ನಿರ್ದೇಶನದ ಮುಂದಿನ ಚಿತ್ರದ ಬಜೆಟ್ 1 ಸಾವಿರ ಕೋಟಿ ರೂ.ಗಳಂತೆ!!
‘ಬಾಹುಬಲಿ’ಯಂತೆ ಆ ಚಿತ್ರವನ್ನು ಅನೇಕ ಭಾಷೆಗಳಲ್ಲಿ ನಿರ್ಮಾಣ ಮಾಡುವ ಯೋಚನೆ ಚಿತ್ರತಂಡಕ್ಕಿದೆ. ಈ ಬಾರಿ ಹೆಚ್ಚುವರಿ ಎಂಬಂತೆ, ಇಂಗ್ಲಿಷ್ ಭಾಷೆಯಲ್ಲೂ ಚಿತ್ರ ತಯಾರಾಗಲಿದೆಯಂತೆ. ಅಂದ್ಹಾಗೆ, ಆ ಹೊಸ ಚಿತ್ರಕ್ಕೆ ‘ಗರುಡ’ ಅಂತ ನಾಮಕರಣ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಎಂದಿನಂತೆ, ವಿಜಯೇಂದ್ರ ಪ್ರಸಾದ್ ಅವರೇ ಚಿತ್ರಕ್ಕೆ ಕಥೆ ಒದಗಿಸಲಿದ್ದಾರೆ. ‘ಬಾಹುಬಲಿ’ಯಲ್ಲಿದ್ದಂತೆ, ಇಲ್ಲಿಯೂ ಗ್ರಾಫಿಕ್ಸ್ಗೆ ಹೆಚ್ಚಿನ ಆದ್ಯತೆ. ಈ ಬಗ್ಗೆ ರಾಜಮೌಳಿ ಆಗಲಿ, ವಿಜಯೇಂದ್ರ ಪ್ರಸಾದ್ ಅವರಾಗಲಿ ಏನೊಂದು ಮಾಹಿತಿ ಹೊರಬಿಟ್ಟಿಲ್ಲ. ‘ಬಾಹುಬಲಿ 2’ ಕೆಲಸಗಳು ಪ್ರಗತಿಯಲ್ಲಿರುವುದರಿಂದ ಹೊಸ ಚಿತ್ರ ‘ಗರುಡ’ದ ಬಗ್ಗೆ ಮಾಹಿತಿ ನೀಡುವುದು ಬೇಡ ಎಂಬ ನಿರ್ಧಾರಕ್ಕೆ ಚಿತ್ರತಂಡ ಬಂದಿರಲೂಬಹುದು.