ಮನೋರಂಜನೆ

ನಾನು ಅವನಲ್ಲ.. ಅವಳು; ದೂರ ಉಳಿದವರ ಸಮೀಪ ದರ್ಶನ

Pinterest LinkedIn Tumblr

Nanu-avanalla-avanuಊರು, ಕೇರಿ, ಜಾತಿ, ಧರ್ಮ, ರಾಷ್ಟ್ರೀಯತೆ, ರಾಜಕೀಯ ಪ್ರಾಶಸ್ತ್ಯ. -ಎಲ್ಲದರಲ್ಲೂ ಇರುವ ಸ್ವಾತಂತ್ರ್ಯ ಲಿಂಗದ ವಿಚಾರದಲ್ಲಿ ಇಲ್ಲ. ಜಗತ್ತು ಒಪ್ಪಿಕೊಂಡ ಲಿಂಗ ಎರಡು- ಗಂಡು, ಹೆಣ್ಣು. ಅದರ ಹೊರತಾಗಿ ಇರುವ ಮಧ್ಯಮ ಲಿಂಗಿಯನ್ನು ಕಾನೂನಾದರೂ ಕಡೆಗೆ ಒಪ್ಪಿಕೊಳ್ಳಬಹುದು, ಆದರೆ ಸಮಾಜ ಒಪ್ಪಿಕೊಳ್ಳುವ ಕ್ರಿಯೆ ನಿಧಾನ.

ಹೆಣ್ಣಂತೆ ಇರೋ ಗಂಡು, ಗಂಡಂತೆ ಇರೋ ಹೆಣ್ಣು ತಮ್ಮ ಗಡಿಯನ್ನು ಮೀರಿ ತನಗ್ಯಾವ ಲಿಂಗ ಬೇಕೋ ಅದನ್ನು ಆಯ್ದುಕೊಳ್ಳುವ ಸ್ವಾತಂತ್ರ್ಯ, ಸಂಗ್ರಾಮದಂತೆ. ಹೀಗೆ ತ್ರಿಶಂಕು ಸ್ಥಿತಿಯಲ್ಲೇ ಇರುವವರ, ದ್ವಂದ್ವಗಳೇನು, ಹತ್ತಿರ ಹೋಗಲೇ ಹಿಂಜರಿಯುವ ಅವರ ಒಳಜಗತ್ತು ನಮಗೆ ಗೊತ್ತಾಗುವುದು ಹೇಗೆ?

ಹೀಗೆ ನಮ್ಮ ಬರಿಕಣ್ಣಿಗೆ ಕಾಣದ ಮತ್ತೂಂದು ಜಗತ್ತಿನ ಅಸಂಖ್ಯ ಜೀವಗಳ ತಳಮಳದ ಪ್ರತಿನಿಧಿ ವಿದ್ಯಾ. ಮಾದೇಶನಾಗಿ ಹುಟ್ಟಿದ ಆತ, ವಿದ್ಯಾ ಹೆಸರಲ್ಲಿ ಆಕೆ ಆಗುವ ಕತೆಯಾಗಿ “ನಾನು ಅವನಲ್ಲ.. ಅವಳು’ ತೆರೆಕಂಡಿದೆ. “ಕೊನೇ ಪಕ್ಷ ಮನೆಗೆ ಗಂಡಸಾದ್ರೂ ಆಗ್ತಿಯಾ ಅಂದ್ಕೊಂಡಿದ್ದೆ.. ನೀನು ಅದೂ ಆಗಿಲ್ವಲ್ಲೋ’ ಅಂತ ಅಪ್ಪ ಹಲುಬುತ್ತಾನೆ; ಸೀರೆ ಉಟ್ಟು, ಬಳೆ ತೊಟ್ಟು ಹೆಣ್ಣಾಗುವ ಪುಟ್ಟ ಹುಡುಗನನ್ನು ನೋಡಿ ಅಮ್ಮ ಬೆಚ್ಚುತ್ತಾಳೆ; ಗಂಡಸಂತೆ ನಡೆಯೋ ಅಂತ ಊರು ಛೇಡಿಸುತ್ತದೆ; ನಿಮ್ಮಗ ಯಾಕೆ ಹಂಗಿದ್ದಾನೆ ಅಂತ ದೊಡ್ಮನುಷ್ಯರು ಪ್ರಶ್ನೆ ಮಾಡುತ್ತಾರೆ. ಬೆಳೆಯುತ್ತಾ ಬೆಳೆಯುತ್ತಾ ಮಾದೇಶನೊಳಗಿನ ಅವಳು ಜಾಗೃತಳಾಗುತ್ತಿದ್ದಾಳೆ, ಜಗತ್ತು ಇನ್ನೂ
ಜಾಗೃತಗೊಂಡಿಲ್ಲ.

“ಲಿವಿಂಗ್‌ ಸ್ಮೈಲಿಂಗ್‌’ ವಿದ್ಯಾ ಹೆಸರಿನ ಹೆಸರುವಾಸಿ ಮಂಗಳಮುಖೀಯ ಜೀವನವನ್ನಾಧರಿಸಿದ ಈ ಸಿನಿಮಾ, ಡಾಕ್ಯುಮೆಂಟರಿ ರೂಪದಲ್ಲಿ ಮೂಡುತ್ತಲೇ ಒಳಗೊಳಗೇ ಮನಸ್ಸನ್ನು ಗಾಢವಾಗಿ ಆವರಿಸಿಕೊಳ್ಳುವ ತಣ್ಣನೆಯ ವಿಷಾದಕಾವ್ಯವಾಗಿಯೂ ಬೆಳೆಯುತ್ತದೆ. ಸಾಮಾನ್ಯವಾಗಿ ಇಂಥ ಕೃತಿಯನ್ನ ಸಿನಿಮಾ ಆಗಿಸುವಾಗ ಅಸೂಕ್ಷ್ಮಗೊಳಿಸಲಾಗುತ್ತದೆ, ಕಾರಣ ಆ ಬಗೆಗಿನ ಅಧ್ಯಯನ ಕೊರತೆ. ಆದರೆ ನಿರ್ದೇಶಕ ಬಿ.ಎಸ್‌. ಲಿಂಗದೇವರು ಮೂಲ ಕೃತಿಯನ್ನು ಓದಿ, ಮಂಗಳ ಮುಖೀಯರ ಕತೆ ಹೆಣೆದಿಲ್ಲ. ಅವಳೊಬ್ಬಳ ಲಿಂಗಾಂತರದ ಕತೆಯನ್ನು ಆಯಾ ಪರಿಸರ, ಸನ್ನಿವೇಶ, ಸಂದರ್ಭಗಳ ಮಧ್ಯೆಯೇ ಜೀವಿಸಲು ಬಿಟ್ಟಿದ್ದಾರೆ. ಹಾಗಾಗಿ ಪುಣೆಯ ಹಿಜ್ಡಾ ಗಲ್ಲಿ, ರೈಲ್ವೇ ಸ್ಟೇಷನ್‌ನ ಭಿಕ್ಷಾಟನೆ, ಲಿಂಗ ಪರಿವರ್ತನಾ ಶಿಬಿರ, ಕತ್ತಲ ನಡುವಿರುವ ಕೊಂಪೆ, ಅವರ ಆಚರಣೆ
ನಡೆಯೋ ಸ್ಥಳಗಳಲ್ಲೇ ವಿದ್ಯಾ ಕತೆ ಯಥಾವತ್‌ ಮರುಸೃಷ್ಟಿಯಾಗುತ್ತದೆ. ಡಾಕ್ಯುಮೆಂಟರಿ ಆಗಿಸುವ ಪ್ರಾಮಾಣಿಕತೆಯ ನಡುವೇ ಮಾದೇಶನೊಬ್ಬ ವಿದ್ಯಾ ಆಗುವ ಯಾತ್ರೆಯಲ್ಲಿನ ತಳಮಳಗಳನ್ನೂ ಸಣ್ಣ ಸಣ್ಣ ಕ್ಷಣಗಳ ಮೂಲಕ ಹಿಡಿದಿಟ್ಟಿದ್ದಾರೆ.

ಉದಾಹರಣೆಗೆ ಮಾದೇಶನಿಗೆ ತನ್ನ ಬಾಲ್ಯಸ್ನೇಹಿತನ ಮೇಲೆ ಮೂಡುವ ಅನುರಾಗ ಮತ್ತು ಅದನ್ನು ಅವರು ಸೂಕ್ಷ್ಮವಾಗಿ ದೃಶ್ಯವಾಗಿಸುವ ರೀತಿ. ಇಲ್ಲಿನ ಪಾತ್ರಗಳು, ಸನ್ನಿವೇಶಗಳು ಆ ಸಮುದಾಯದ ಪ್ರತಿಯೊಬ್ಬರಿಗೂ ಹೇಗೆ ಸಂಬಂಧಪಡುತ್ತವೋ ಹಾಗೇ ಪ್ರೇಕ್ಷಕರಿಗೆ ಅದು ಮಾನವೀಯವಾಗಿ ಸಂಬಂಧಪಟ್ಟ ಕತೆಯಾಗುತ್ತಾ ಹೋಗುತ್ತದೆ. ಲಿಂಗದೇವರು ಶ್ರದ್ಧೆ, ಪ್ರೀತಿಯಿಂದ ಹೆಣೆದ
ಈ ಕತೆಯನ್ನು ಸಾರ್ಥಕವಾಗಿ ತೆರೆಯ ಮೇಲೆ ತಂದವರು ಛಾಯಾಗ್ರಾಹಕ ಅಶೋಕ್‌ ವಿ ರಾಮನ್‌. ಸಂಗೀತ ನಿರ್ದೇಶಕ ಅನೂಪ್‌ ಸೀಳಿನ್‌ ಇದನ್ನು ಒಂದು ವಿಷಾದದಂತೆ ಕಟ್ಟದೇ, ತೀವ್ರ ಜೀವನಪ್ರೀತಿಯುಳ್ಳ ತೃತೀಯಲಿಂಗಿಯ ಸಾಹಸಗಾಥೆಯಾಗಿಸಿಬಿಡುತ್ತಾರೆ. ಅರಸು ಅಂತಾರೆ ಅವರ ಸಾಹಿತ್ಯ, ಮಧ್ಯೆ ಮಧ್ಯೆ ಬಳಸಿದ ಹಾಡುಗಳು, ನೃತ್ಯ, ಒಟ್ಟಾರೆ ಚಿತ್ರಕ್ಕಿರುವ ವೇಗ- ಇವೆಲ್ಲಾ ಖನ್ನತೆಯ ಕತೆ ಆಗುವ ಅಪಾಯದಿಂದ ತಪ್ಪಿಸುತ್ತವೆ.

ಇದೆಲ್ಲಾ ಮೀರಿ ಪಾತ್ರದಿಂದ “ಸಂಚಾರಿ’ ವಿಜಯ್‌ ನಿಮ್ಮ ಮುಂದೆ ವಿದ್ಯಾ ಆಗುತ್ತಾರೆ, ಅಕ್ಷರಶಃ. ಒಬ್ಬ ನಟ ಪಾತ್ರಕ್ಕಾಗಿ ನಿಜವಾಗಿ ಹೇಗೆ ದುಡಿಯಬಲ್ಲ ಅನ್ನುವುದನ್ನು ಈ ಚಿತ್ರ ನೋಡಿ ನಾವು ಕಲಿಯಬೇಕು. ಹುಡುಗನೊಬ್ಬ ಹೆಣ್ಣಾಗುವಾಗಿನ ಪರಿವರ್ತನಾ ಹಂತಗಳನ್ನು ಸ್ವತಃ ಪ್ರಬುದ್ಧವಾಗಿ, ಸೂಕ್ಷ್ಮವಾಗಿ, ಅತಿಗೊಳಸದೇ, ತೀರಾ ಸಟಲ್‌ ಮಾಡದೇ ಸಮರ್ಥವಾಗಿ ಕಟ್ಟಿಕೊಟ್ಟಿದ್ದಾರೆ. ಉಳಿದಂತೆ ಹಲವು ಮಂಗಳ ಮುಖೀಯರೂ ಆಯಾ ಪಾತ್ರವನ್ನು ನಿರ್ವಹಿ ಸಿ, ಕತೆಯನ್ನು ಅಥೆಂಟಿಕ್‌ ಆಗಿಸಿದ್ದಾರೆ.

-ಒಂದು ಸಿನಿಮಾ, ಯಾವುದೇ ಜೀವನದ ಮರುಸೃಷ್ಟಿಯೂ ಆಗಬಹುದು ಅನ್ನುವುದಕ್ಕೆ ಒಳ್ಳೆ ಉದಾಹರಣೆಯಾಗಿ ಇದಕ್ಕಿಂತ ಬೇರಾವುದನ್ನು ಕೊಡುವುದಕ್ಕೆ ಸಾಧ್ಯ?

*ಚಿತ್ರ: ನಾನು ಅವನಲ್ಲ.. ಅವಳು
*ನಿರ್ಮಾಣ: ರವಿ ಗರಣಿ
* ನಿರ್ದೇಶನ: ಬಿ.ಎಸ್‌. ಲಿಂಗದೇವರು
*ತಾರಾಗಣ: ಸಂಚಾರಿ ವಿಜಯ್‌, ಶೈಲಶ್ರೀ, ಸುಂದರ್‌, ಭೂಪಾಲ, ಸುಮಿತ್ರಾ ಮತ್ತಿತರರು.
*ವಿಕಾಸ್‌ ನೇಗಿಲೋಣಿ
-ಉದಯವಾಣಿ

Write A Comment