ಮನೋರಂಜನೆ

ಅತೃಪ್ತ ದೆವ್ವವೊಂದರ ಅಬ್ಬರದ ಆತ್ಮಕತೆ; ಚಂದ್ರಿಕ

Pinterest LinkedIn Tumblr

chandrikaಹಾರರ್‌ ಸಿನಿಮಾಗಳ ಮೂಲ ಹಿಂದಿನ ಜನ್ಮದಲ್ಲಿರುತ್ತದೆ. ಬದುಕಿದ್ದಾಗ ತನ್ನಗಾದ ಅನ್ಯಾಯಕ್ಕೆ ಸೇಡು ತೀರಿಸಿಕೊಳ್ಳೋದೇ ಅತೃಪ್ತ ಆತ್ಮದ ಪರಮ ಉದ್ದೇಶ ಎಂಬುದು ಇತ್ತೀಚೆಗೆ ಬಂದ ಅನೇಕ ಸಿನಿಮಾಗಳ ಮೂಲಕ ಸಾಬೀತಾಗಿದೆ ಕೂಡಾ. ಜೊತೆಗೆ
ಮಬ್ಬುಗತ್ತಲು, ಕಿಟಕಿ, ಬಾಗಿಲಿನ ಕೀರಲು ಸದ್ದು, ಬಿಳಿ ಸೀರೆ … ಇಷ್ಟಿದ್ದರೆ ಒಂದು ಹಾರರ್‌ ಸಿನಿಮಾ ಮಾಡಿ ಮುಗಿಸೋದು ದೊಡ್ಡ ವಿಷಯವಲ್ಲ ಎಂದು ಭಾವಿಸುವವರೇ ಹೆಚ್ಚು. “ಚಂದ್ರಿಕ’ ಚಿತ್ರ ಈ ಕೆಟಗರಿಗೆ ಸೇರಿಯೂ ಸೇರದ ಚಿತ್ರ. ಏಕೆಂದರೆ ಇಲ್ಲಿ ಬರೀ ದೆವ್ವದ ಆಟವಷ್ಟೇ ಅಲ್ಲ, ಅದರಾಚೆಗೂ ಒಂದಷ್ಟು  ವಿಷಯಗಳನ್ನು ಹೇಳುವ ಮೂಲಕ ಅತ್ತ ಕಡೆ ಪೂರ್ತಿಹಾರರ್‌ ಸಿನಿಮಾವೂ ಆಗದೇ ಇತ್ತ ಕಡೆ ಫ್ಯಾಮಿಲಿ ಡ್ರಾಮಾವೂ ಆಗದೇ ಅತೃಪ್ತ ಆತ್ಮದಂತೆ “ಚಂದ್ರಿಕ’ ಚಿತ್ರದ್ದು ತ್ರಿಶಂಕು ಸ್ಥಿತಿ. ನಿರ್ದೇಶಕ ಯೋಗೇಶ್‌ ಪ್ರೇಕ್ಷಕರನ್ನು ಬೆಚ್ಚಿಬೀಳಿಸಲು ಹರಸಾಹಸ ಪಟ್ಟಿದ್ದಾರೆ.

ಹಾಗಂತ ಅದು ಪ್ರೇಕ್ಷಕರ ಮೇಲೆ ಪರಿಣಾಮ ಬೀರಿದೆಯೇ ಎಂದರೆ ಅದಕ್ಕೆ ಉತ್ತರಿಸೋದು ಕಷ್ಟ. ಏಕೆಂದರೆ ಪ್ರೇಕ್ಷಕ ಈ ಹಿಂದೆಯೇ ಇಂತಹ ಕಥೆಗಳಿಗೆ ಬೆಚ್ಚಿ ಬಿದ್ದಿದ್ದಾನೆ. ಮತ್ತೆ ಅಂತಹುದೇ ಕಥೆ ಕೊಟ್ಟರೆ ಆತನಿಗೆ ಅದು ಕಾಮಿಡಿಯಾಗಿ ಕಾಣುತ್ತದೆ. ನಿಮಗೆ “ಚಂದ್ರಿಕ’ ಚಿತ್ರ ನೋಡುತ್ತಿದ್ದಂತೆ ತಟ್ಟನೆ ನೆನಪಾಗೋದು “ಆಪ್ತರಕ್ಷಕ’ ಚಿತ್ರ. ಆತ್ಮದ ಜೊತೆಗಿನ ನಾಯಕನ ಸಂಭಾಷಣೆ, ಈ ಮನೆಯಲ್ಲಿ ಏನೋ ಸಮಸ್ಯೆ ಇದೆ ಎನ್ನುವ ಡೈಲಾಗ್‌ ಎಲ್ಲವೂ ತೀರಾ ಹೊಸದು ಎನಿಸುವುದಿಲ್ಲ. ಪೆಂಟಿಂಗ್‌, ನೃತ್ಯ, ಕೊನೆಗೆ ಸನ್ನಿವೇಶದ ಮರುಸೃಷ್ಟಿ … ಇಂತಹ ದೃಶ್ಯಗಳು “ಚಂದ್ರಿಕ’ದ ಜೀವಾಳ. ಆದರೆ, ಇಲ್ಲಿ ಹೊಸತು ಮತ್ತು ವಿಶೇಷವಾಗಿ ಏನಿದೆ ಎಂದರೆ ಉತ್ತರಿಸೋದು ಕಷ್ಟ. ಚಿತ್ರಕಲಾವಿದನೊಬ್ಬ ಹಿಂದೆ ತನ್ನ ಗುರು  ವಾಸವಾಗಿದ್ದ ಬಂಗಲೆ ಖರೀದಿ ಮಾಡಿ ಅದರಲ್ಲಿ ತನ್ನ ಪತ್ನಿ ಜೊತೆ ವಾಸಿಸುತ್ತಾನೆ. ಅಲ್ಲಿಂದ ದೆವ್ವದ ಕಾಟ ಆರಂಭ. ಪದೇ ಪದೇ ಆತನ ಪತ್ನಿಯ ಮೇಲೆ ಆತ್ಮವೊಂದು ಬಂದು ಎಲ್ಲರನ್ನು ಬೆಚ್ಚಿಬೀಳಿಸುತ್ತಿರುತ್ತದೆ.

ಅದರಲ್ಲೂ ಆ ಚಿತ್ರ ಕಲಾವಿದನನ್ನು ಸಾಯಿಸಲು ಹೊಂಚು ಹಾಕುವ ಮೂಲಕ ಚಿತ್ರಕಲಾವಿದನಿಗೆ ಸಂಕಷ್ಟ ಎದುರಾಗುತ್ತದೆ. ಅಷ್ಟಕ್ಕೂ ಆತನ ಪತ್ನಿಯ ಮೈಹೊಕ್ಕಿರುವ ಆ ಆತ್ಮ ಯಾರದು, ಯಾಕಾಗಿ ಆತನ ವಿರುದ್ಧ ಸೇಡು ತೀರಿಸಲು ಮುಂದಾಗುತ್ತದೆ ಎಂದು ಹುಡುಕುತ್ತಾ ಹೋದರೆ ಒಂದು ಫ್ಲ್ಯಾಶ್‌ಬ್ಯಾಕ್‌ ದೃಶ್ಯ ತೆರೆದುಕೊಳ್ಳುತ್ತದೆ. ಮತ್ತೆ ಅಲ್ಲಿಂದ ಇಲ್ಲಿಗೆ ಲಿಂಕ್‌ … ಇದು “ಚಂದ್ರಿಕ’ ಚಿತ್ರದ ಒಟ್ಟು ಕಥೆ. ಮೊದಲೇ ಹೇಳಿದಂತೆ ಚಿತ್ರದ ಕಥೆ ತೀರಾ ಹೊಸದೇನು ಅಲ್ಲ. ಮೊದಲರ್ಧದಲ್ಲಿ ನಿಮಗೆ ದೆವ್ವದ ಕಾಟ ಕಡಿಮೆ ಇದ್ದು, ಇಂಟರ್‌ವಲ್‌ ನಂತರ ದೆವ್ವದ ಹಾರಾಟ-ಚೀರಾಟ ಜೋರಾಗುತ್ತಾ ಹೋಗುತ್ತದೆ. ಹಾರಾಟ ಸ್ವಲ್ಪ ಅತಿಯೆನಿಸುವ ಹೊತ್ತಿಗೆ ರೊಮ್ಯಾಂಟಿಕ್‌ ಹಾಡುಗಳು ಪ್ರತ್ಯಕ್ಷ. ಇಲ್ಲಿ ಸಲ್ಮಾನ್‌ ಖಾನ್‌ ರೇಂಜ್‌ಗೆ ಶರ್ಟ್‌ ಬಿಚ್ಚಿ ಸ್ಟೈಲಿಶ್‌ ಆಗಿ ಕಾಣಿಸಿಕೊಂಡ ಜೆಕೆ (ಜಯಕಾರ್ತಿಕ್‌) ಸಿಗುತ್ತಾರೆ.

ಮುಖ್ಯವಾಗಿ ಈ ಚಿತ್ರಕ್ಕೊಂದು ಫೋಕಸ್‌ ಇಲ್ಲ. ಹಾರರ್‌ ಸಿನಿಮಾಕ್ಕಿರಬೇಕಾದ μàಲ್‌ ಈ ಸಿನಿಮಾದಲ್ಲಿ ಇರುತ್ತಿದ್ದರೆ ಚಿತ್ರ ಪರಿಣಾಮಕಾರಿಯಾಗಿರುತಿತ್ತು. ಅತ್ತ ಕಡೆ ನವದಂಪತಿಗಳ ಪ್ರೇಮ-ಸಲ್ಲಾಪ, ಹಾಡು -ಪಾಡು, ಮಧ್ಯೆ ಚಿಕ್ಕಣ್ಣನ ಕಾಮಿಡಿ … ಹೀಗೆ ಎಲ್ಲವನ್ನು ಒಂದೇ ತಟ್ಟೆಯಲ್ಲಿಟ್ಟುಕೊಟ್ಟಿದ್ದಾರೆ. ಅದರಲ್ಲಿ ಹಾರರ್‌ ಅಂಶ ಸ್ವಲ್ಪ ಹೆಚ್ಚಿದೆ. ಆಯ್ಕೆ ನಿಮ್ಮದು. ನಾಯಕ ಜಯ ಕಾರ್ತಿಕ್‌ಗೆ ಇಲ್ಲಿ ಹೇಳಿಕೊಳ್ಳು ವಂತಹ ಪಾತ್ರ ಏನಿಲ್ಲ. ಕಾಟ ಕೊಡುವ ಆತ್ಮದಿಂದ ಬಚಾ ವಾಗುವ ಪಾತ್ರದಲ್ಲಿ ಕಾಣಿಸಿಕೊಂಡ ಅವರು ಹೆಚ್ಚೇನು ಗಮನಸೆಳೆಯೋದಿಲ್ಲ. ಶ್ರೀಮುಖೀಯ ಹಾರಾಟ-ಚೀರಾಟ ಬಲು ಜೋರು. ಆ ಹಾರಾಟದಲ್ಲೂ ಅವರ ಮೇಕಪ್‌ ಮಾಸಿಲ್ಲ ಅನ್ನೋದು ಖುಷಿಯ ವಿಚಾರ. ಕಾಮ್ನಾ ಜೇಠ್ಮಲಾನಿ ಹಾಗೆ ಬಂದು ಹೀಗೆ ಹೋಗುತ್ತಾರೆ. ಗಿರೀಶ್‌ ಕಾರ್ನಾಡ್‌ ಗುರುವಾಗಿ ಗಮನಸೆಳೆಯುತ್ತಾರೆ. ನೆ.ಲ.ನರೇಂದ್ರ ಬಾಬು ಇಲ್ಲಿ ಮಂತ್ರವಾದಿ. ಚಿಕ್ಕಣ್ಣ ಕಾಮಿಡಿಯೂ ಇದೆ.

*ಚಿತ್ರ:ಚಂದ್ರಿಕ
*ನಿರ್ದೇಶನ :ಯೋಗೇಶ್‌
*ನಿರ್ಮಾಣ: ವಿ.ಆಶಾ
*ತಾರಾಗಣ: ಜಯಕಾರ್ತಿಕ್‌, ಶ್ರೀಮುಖೀ, ಕಾಮ್ನಾ, ಗಿರೀಶ್‌ ಕಾರ್ನಾಡ್‌ ಮತ್ತಿತರರು.
*ರವಿಪ್ರಕಾಶ್‌ ರೈ
-ಉದಯವಾಣಿ

Write A Comment