ಅಂತರಾಷ್ಟ್ರೀಯ

ಆಕಾಶಕ್ಕೇ ಬೇಲಿ ಹಾಕಲು ಹೊರಟ ಮದುವಣಗಿತ್ತಿ..!

Pinterest LinkedIn Tumblr

Bar-Refaeliಹೈಫಾ: ಇಸ್ರೇಲ್ ನ ಖ್ಯಾತ ಸೂಪರ್ ಮಾಡೆಲ್  ಬಾರ್ ರೆಫೇಲಿಯ ಅದ್ಧೂರಿ ವಿವಾಹ ಅಲ್ಲಿನ ಸಾರಿಗೆ ಸಚಿವ ಮತ್ತು ನಾಗರಿಕ ವಿಮಾನಯಾನ ಪ್ರಾಧಿಕಾರ(ಸಿಎಎ) ನಡುವಣ ತಿಕ್ಕಾಟಕ್ಕೆ  ಕಾರಣವಾಗಿದೆ.

ವಿವಾಹದಂದು ಕಲ್ಯಾಣ ಮಂಟಪದ ಮೇಲಣ ಆಗಸದ ಆವರಣವನ್ನು ನೋ ಫ್ಲೈಜೋನ್ ಮಾಡಬೇಕೆಂದು ರಫೇಲಿ ಸಲ್ಲಿಸಿದ್ದ ಮನವಿಯ ಬಗ್ಗೆ ಉಂಟಾದ ಭಿನ್ನಾಭಿಪ್ರಾಯದಿಂದ ಹೈಡ್ರಾಮಾ  ಸೃಷ್ಟಿಯಾಗಿ ಕೊನೆಗೂ ನೋ ಪ್ಲೈ ಜೋನ್ ಸಿಗದೆಯೇ ಮದುವೆ ಮುಗಿಸುವಂತಾಗಿದೆ.

ಏನಿದು ತ್ರಿಕೋನ ಡ್ರಾಮಾ?

ಇದೊಂದು ಅತ್ಯಂತ ಅದ್ಧೂರಿ ವಿವಾಹವಾದ್ದರಿಂದ ಹೆಲಿಕಾಪ್ಟರ್ ಮತ್ತು ಡ್ರೋಣ್ ಬಳಸಿ ಫೋಟೋ ಹಾಗೂ ವಿಡಿಯೋ ಶೂಟ್ ಮಾಡುವ ಯೋಜನೆ ರೆಫೇಲಿ ಕಡೆಯವರಿಗಿತ್ತು. ಸುರಕ್ಷತೆ ಹಾಗೂ  ಶೂಟಿಂಗ್ ಅನುಕೂಲಕ್ಕಾಗಿ ಆ ಸ್ಥಳದಲ್ಲಿ ಏರ್ ಟ್ರಾಫಿಕ್ ಮುಕ್ತಗೊಳಿಸಿಕೊಡಬೇಕೆಂದು ಸಿಎಎಗೆ ಮನವಿ ಮಾಡಲಾಗಿತ್ತು. ಸೆಲೆಬ್ರಿಟಿಯ ಮದುವೆ ಆದ್ದರಿಂದ ಪ್ರಾಧಿಕಾರ ಈ ಮನವಿ ಪುರಸ್ಕರಿಸಿ  ನೋ ಫ್ಲೈ ಜೋನ್ ಆದೇಶ ನೀಡಿತ್ತು. ಆದರೆ ಇದಕ್ಕೆ ಪೈಲಟ್‍ಗಳ ವಿರೋಧ ವ್ಯಕ್ತವಾಯಿತು.

ಸುದ್ದಿ ತಲುಪಿದ ಕೂಡಲೇ ಸಾರಿಗೆ ಸಚಿವ ಯಿಸ್ರೇಲ್  ಕ್ಯಾಟ್ಜ್ ಕೆಂಡಾಮಂಡಲವಾದರು. ವೈಯಕ್ತಿಕ  ಸಮಾರಂಭಕ್ಕಾಗಿ ಸಾರ್ವಜನಿಕರಿಗೆ ತೊಂದರೆಯಾಗುವುದಾಗಲೀ ವೈಮಾನಿಕ ಸಂಚಾರದಲ್ಲಿ ವ್ಯತ್ಯಯವಾಗುವುದಾಗಲೀ ಆಗ ಕೂಡದು. ಈ ಕೂಡಲೇ ಆದೇಶ ರದ್ದು ಮಾಡಬೇಕೆಂದು  ಸಚಿವರು ಪ್ರಾಧಿಕಾರಕ್ಕೆ ಆದೇಶ ನೀಡಿದರು. ಪ್ರಾಧಿಕಾರದ ಅಧ್ಯಕ್ಷರಿಂದ ನಕಾರಾತ್ಮಕ ಪ್ರತಿಕ್ರಿಯೆ ಬಂದಾಗ, ಕೆಲಸದಿಂದ ಕಿತ್ತೆಸೆಯುತ್ತೇನೆಂದು ಎಚ್ಚರಿಕೆ ನೀಡಿದರು. ಆಗ ಅಧಿಕಾರಿ ಆದೇಶ  ಹಿಂಪಡೆದರು. ಮಾಮೂಲಿನಂತೆ ವಿಮಾನಗಳು ಹಾರಾಡಿದವು.

ರೆಫೇಲಿ ಗೊತ್ತೆ?

ಈಕೆ ಟೈಟಾನಿಕ್ ಹೀರೋ ಲಿಯೋನಾರ್ಡೋ ಡಿ ಕ್ಯಾಪ್ರಿಯೋನ ಮಾಜಿ ಪ್ರೇಯಸಿ. 2013ರಲ್ಲಿ ಇಸ್ರೇಲ್  ಶ್ರೀಮಂತ ಮಾಡೆಲ್ ಖ್ಯಾತಿ ಗಳಿಸಿದಾಕೆ. 2003 ರಲ್ಲಿ ಕಡ್ಡಾಯ ಮಿಲಿಟರಿ ಸೇವೆಯಿಂದ ಹೊರಬಂದು ವಿವಾದಕ್ಕೂ ಕಾರಣವಾಗಿದ್ದ ಈಕೆ, ಜಾಹೀರಾತೊಂದಕ್ಕೆ ರು.100ಕೋಟಿ ಪಡೆದು ದಾಖಲೆ ಮಾಡಿದ್ದಳು. 30ರ ಹರೆಯದ ಈಕೆ ಇದೀಗ ಇಸ್ರೇಲಿನ ಕೋಟ್ಯಧೀಶ ಅದೀ ಎಜ್ರಾರನ್ನು  ವರಿಸಿದ್ದಾಳೆ.

Write A Comment