-ಗಣೇಶ ವೈದ್ಯ
ಎಂಟು ವರ್ಷಗಳ ಅಂತರ ನಂತರ ಕಾಮನಾ ಜೇಠ್ಮಲಾನಿ ಮತ್ತೆ ಕನ್ನಡ ಚಿತ್ರರಂಗಕ್ಕೆ ಬಂದಿದ್ದಾರೆ. ಅವರ ಅಭಿನಯದ ‘ಚಂದ್ರಿಕ’ ಈಗ ಚಿತ್ರಮಂದಿರಗಳಲ್ಲಿದೆ.
ಎಂಟು ವರ್ಷಗಳ ಹಿಂದೆ ‘ಯುಗಾದಿ’ ಚಿತ್ರದಲ್ಲಿ ರವಿಚಂದ್ರನ್ ಜೊತೆ ಹೆಜ್ಜೆ ಹಾಕಿದ್ದ ಮುಂಬೈ ಬೆಡಗಿ ಕಾಮನಾ ಜೇಠ್ಮಲಾನಿ ದೊಡ್ಡ ಗ್ಯಾಪ್‌ನ ನಂತರ ಮತ್ತೆ ಕನ್ನಡಕ್ಕೆ ಬಂದಿದ್ದು ಕಳೆದ ವರ್ಷ ‘ಅಗ್ರಜ’ ಚಿತ್ರದ ಮೂಲಕ. ಅದಾದ ನಂತರ ಈ ಬಹುಭಾಷಾ ತಾರೆ ಬೇರೆಲ್ಲೂ ಹೋಗದೇ ಮತ್ತೊಂದು ಕನ್ನಡ ಚಿತ್ರವನ್ನು ಮುಗಿಸಿದ್ದಾರೆ. ಇದೀಗ ಅವರ ಅಭಿನಯದ ಮೂರನೇ ಕನ್ನಡ ಚಿತ್ರ ‘ಚಂದ್ರಿಕ’ ಇಂದು (ಸೆ.25) ತೆರೆಗೆ ಬಂದಿದೆ. ಅದೇ ಖುಷಿಯಲ್ಲಿ ಅವರು ‘ಚಂದನವನ’ದೊಂದಿಗೆ ಮಾತನಾಡಿದ್ದಾರೆ.
‘ಯುಗಾದಿ’ ಆದಮೇಲೆ ಮತ್ತೆ ಕನ್ನಡಕ್ಕೆ ಬರಲು ಬರೋಬ್ಬರಿ ಏಳು ವರ್ಷಗಳ ಅಂತರದ ಕುರಿತು– ‘ಕನ್ನಡದಲ್ಲಿ ತುಂಬಾನೇ ಅವಕಾಶಗಳು ಬಂದವು. ಆದರೆ ನನ್ನ ನಿರೀಕ್ಷೆಯಂತೆ ಒಳ್ಳೆಯ ಅವಕಾಶಗಳು ಮಾತ್ರ ಸಿಕ್ಕಿರಲಿಲ್ಲ’ ಎನ್ನುತ್ತಾರೆ. ಈ ಅವಧಿಯಲ್ಲಿ ಅವರು ತೆಲುಗು, ತಮಿಳು, ಮಲಯಾಳಂ ಚಿತ್ರಗಳಲ್ಲಿ ಗೆಲುವಿನ ರುಚಿ ಕಂಡಿದ್ದಾರೆ. ಈವರೆಗೆ ಕಾಮಿಡಿ, ರೊಮ್ಯಾಂಟಿಕ್, ಆ್ಯಕ್ಷನ್ ಚಿತ್ರಗಳ ಭಾಗವಾಗಿದ್ದ ಅವರು ಈಗ ‘ಚಂದ್ರಿಕ’ ಮೂಲಕ ಹಾರರ್ ಕಥೆಯ ಪಾತ್ರವಾಗಿ ಪ್ರೇಕ್ಷಕನನ್ನು ಹೆದರಿಸುವ ಪ್ರಯತ್ನಕ್ಕೂ ಮುಂದಾಗಿದ್ದಾರೆ.
ತೆಲುಗು, ತಮಿಳಿನಲ್ಲಿ ನಾಯಕಿಯಾಗಿ ಅವಕಾಶಗಳು ಬರುತ್ತಿದ್ದಾಗ ಕನ್ನಡದಲ್ಲಿ ಎರಡನೇ ನಾಯಕಿಯಾಗುವ ಅವಕಾಶಗಳು ಸಿಕ್ಕ ಕಾರಣ ಅಂಥ ಅವಕಾಶಗಳನ್ನು ಅವರು ನಿರಾಕರಿಸಿದ್ದಾರಂತೆ. ‘ತಮಿಳು, ತೆಲುಗಿನಲ್ಲಿ ಒಳ್ಳೆಯ ಬೇಡಿಕೆ ಇರುವಾಗ ಆ ಬೇಡಿಕೆಯನ್ನು ಕನ್ನಡದಲ್ಲಿ ಹಾಳು ಮಾಡಿಕೊಳ್ಳುವುದು ಸಾಧ್ಯವಿಲ್ಲ. ಸಾಕಷ್ಟು ಅವಕಾಶಗಳು ಇರುವಾಗ ಯಾಕೆ ರಾಜಿಯಾಗಬೇಕು?’ ಎಂಬುದು ಅವರ ಪ್ರಶ್ನೆ. ಹಾಗೆಂದು ನಾಯಕಿ ಪಾತ್ರವನ್ನು ಮಾತ್ರ ಮಾಡಬೇಕು ಎನ್ನುವ ಹಟವೂ ಅವರಿಗಿಲ್ಲ. ಜನ ಗುರ್ತಿಸುವಂಥ ಪಾತ್ರ ಮಾಡುವುದು ಮುಖ್ಯ ಎಂಬುದು ಅವರ ಅನಿಸಿಕೆ.
ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ‘ಚಂದ್ರಿಕಾ’ದಲ್ಲಿ ಕಾಮನಾ ಕಥಕ್ ನೃತ್ಯಗಾರ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಅವರ ಹೆಸರೇ ಚಂದ್ರಿಕಾ. ತಾನು, ತನ್ನ ಕುಟುಂಬ ಮತ್ತು ತನ್ನ ಡಾನ್ಸ್ ಲೋಕದಲ್ಲಿ ಮುಳುಗಿರುವ ನಾಯಕಿಯ ಬಾಳಲ್ಲಿ ನಾಯಕನ ಪ್ರವೇಶವಾದ ನಂತರ ಏನೆಲ್ಲ ಬದಲಾವಣೆಯಾಗುತ್ತದೆ ಎಂಬುದು ಚಿತ್ರದ ಕಥೆ. ಮುಖ್ಯ ಪಾತ್ರವಾದರೂ ಕಾಮನಾ ಕಾಣಿಸಿಕೊಳ್ಳುವುದು ದ್ವಿತೀಯಾರ್ಧದಲ್ಲಿ. ಆದರೆ ಕಥೆ ಸುತ್ತುವುದು ಮಾತ್ರ ಈ ಹೆಸರಿನ ಸುತ್ತಲೇ. ಮತ್ತೊಬ್ಬ ನಾಯಕಿ ಶ್ರೀಮುಖಿ ಇಡೀ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಾರಾದರೂ ತಮ್ಮದು ಗುರ್ತಿಸಿಕೊಳ್ಳುವಂಥ ಪಾತ್ರ ಎಂಬ ಸಮಾಧಾನ ಕಾಮನಾ ಅವರದು.
ಇತ್ತೀಚೆಗೆ ಹಾರರ್ ಥ್ರಿಲ್ಲರ್ ಸಿನಿಮಾಗಳು ಹೆಚ್ಚೆಚ್ಚು ಬರುತ್ತಿವೆ, ಗೆಲ್ಲುತ್ತಿವೆ ಎಂಬ ಕಾರಣಕ್ಕಾಗಿ ಅವರು ಈ ಚಿತ್ರವನ್ನು ಒಪ್ಪಿಕೊಂಡಿಲ್ಲ. ಚಿತ್ರತಂಡ, ನಿರ್ದೇಶಕ, ಕಥೆ– ಇಂಥ ಅಂಶಗಳ ಆಧಾರದ ಮೇಲೆ ಅವರು ಚಿತ್ರವನ್ನು ಒಪ್ಪಿಕೊಂಡಿದ್ದು.
ನಾಲ್ಕು ಭಾಷೆಗಳ ಭಾಗವಾಗಿರುವ ಕಾಮನಾ, ಬೇರೆ ಬೇರೆ ಭಾಷೆಯ ಚಿತ್ರೋದ್ಯಮದಲ್ಲಿ ಸಾಕಷ್ಟು ಭಿನ್ನತೆಯನ್ನು ಕಂಡವರು. ಅವರ ಪ್ರಕಾರ ದಕ್ಷಿಣ ಭಾರತದ ಸಿನಿಮಾ ಮಂದಿ ಸಾಕಷ್ಟು ಕ್ರಿಯಾಶೀಲರು. ನಿಗದಿತ ಸಮಯದಲ್ಲಿ ಸಿನಿಮಾ ಮುಗಿಸುತ್ತಾರೆ ಎಂಬ ಅಂಶವನ್ನು ಅವರು ಬಹುವಾಗಿ ಮೆಚ್ಚುತ್ತಾರೆ. ಬಾಲ್ಯದ ಕೆಲ ವರ್ಷಗಳನ್ನು ಬೆಂಗಳೂರಲ್ಲಿ ಕಳೆದ ಅವರಿಗೆ ಈ ನಗರವೆಂದರೆ ಅಚ್ಚುಮೆಚ್ಚು. ‘ಕನ್ನಡದಲ್ಲಿ ಮೂರು ಚಿತ್ರಗಳನ್ನು ಮಾಡಿದ್ದೇನೆ.
ಇನ್ನೂ ಹೆಚ್ಚೆಚ್ಚು ಚಿತ್ರಗಳನ್ನು ಮಾಡುವ ಆಸೆಯಿದೆ. ಆ ಮೂಲಕ ಇಲ್ಲಿನ ಚಿತ್ರೋದ್ಯಮದ ಬಗ್ಗೆ ತಿಳಿದುಕೊಳ್ಳುತ್ತೇನೆ, ಕನ್ನಡವನ್ನೂ ಕಲಿಯುತ್ತೇನೆ’ ಎನ್ನುತ್ತಾರೆ. ಈಗ ಐದು ತಿಂಗಳ ಗರ್ಭಿಣಿಯಾಗಿರುವ ಅವರು ‘ಚಂದ್ರಿಕಾ’ ನಂತರ ಒಂದಷ್ಟು ಕಾಲ ಬಿಡುವು ತೆಗೆದುಕೊಂಡಿದ್ದಾರೆ. ಆರು ತಿಂಗಳ ಮಾತೃತ್ವದ ರಜೆಯ ನಂತರ ಮತ್ತೆ ಚಿತ್ರರಂಗಕ್ಕೆ ಮರಳುತ್ತೇನೆ ಎನ್ನುತ್ತಾರೆ.
ಶ್! ಇದೋ ‘ಚಂದ್ರಿಕಾ’…
ಈ ವಾರ ತೆರೆಗೆ ಬಂದ ಚಿತ್ರಗಳಲ್ಲಿ ‘ಚಂದ್ರಿಕಾ’ ಕೂಡ ಒಂದು. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗಿರುವ ಹಾರರ್ ಚಿತ್ರ ‘ಚಂದ್ರಿಕಾ’ ಇಂದು ಬಿಡುಗಡೆಯಾಗಿದೆ. ಮೊದಲ ಬಾರಿ ನಿರ್ದೇಶನ ಮಾಡಿರುವ ಯೋಗೀಶ್ ಮುನಿಸಿದ್ದಪ್ಪ, ‘ಆಪ್ತಮಿತ್ರ ನಂತರದ ಅತಿದೊಡ್ಡ ಹಾರರ್ ಚಿತ್ರ ನಮ್ಮದು’ ಎಂದು ಹೇಳಿಕೊಂಡಿದ್ದಾರೆ.
‘ಅಶ್ವಿನಿ ನಕ್ಷತ್ರ’ ಧಾರಾವಾಹಿಯ ಜಯರಾಮ್ ಕಾರ್ತಿಕ್ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಈ ಚಿತ್ರದಲ್ಲಿ ಕಾಮನಾ ಜೇಠ್ಮಲಾನಿ ಮತ್ತು ಶ್ರೀಮುಖಿ ನಾಯಕಿಯರು. ಕಾಮನಾ ಇಲ್ಲಿ ಚಂದ್ರಿಕಾ ಪಾತ್ರದಲ್ಲಿದ್ದರೆ, ಕಾರ್ತಿಕ್ ಕಲಾವಿದನ ಪಾತ್ರಕ್ಕೆ ಬಣ್ಣಹಚ್ಚಿದ್ದಾರೆ. ತಮ್ಮ ಗುರುವಿಗೆ ಕಾಣಿಕೆಯಾಗಿ ಒಂದು ಬೃಹತ್ ಕಲಾತ್ಮಕ ಮನೆಯನ್ನು ಖರೀದಿಸಿ ಅಲ್ಲಿ ಕುಟುಂಬದೊಂದಿಗೆ ವಾಸಿಸಲು ಆರಂಭಿಸಿದ ನಂತರ ಆ ಮನೆಯಲ್ಲಿ ಏನೆಲ್ಲ ನಡೆಯುತ್ತದೆ ಎಂಬ ಅಂಶದ ಸುತ್ತ ಕಥೆ ಹೆಣೆಯಲಾಗಿದೆ.
ಗಿರೀಶ್ ಕಾರ್ನಾಡ್ ಗುರುವಿನ ಪಾತ್ರ ನಿರ್ವಹಿಸಿದ್ದಾರೆ. ಚಿಕ್ಕಣ್ಣ , ನರೇಂದ್ರ ಬಾಬು, ಚಂದ್ರಕಲಾ ಮೋಹನ್, ಉದಯ್ ಇತರರು ತಾರಾಗಣದಲ್ಲಿದ್ದಾರೆ. ವಿ. ಆಶಾ ನಿರ್ಮಿಸಿರುವ ಈ ಚಿತ್ರಕ್ಕೆ ನಾಲ್ಕು ಹಾಡುಗಳಿಗೆ ಗುಣವಂತ್ ಸಂಗೀತವಿದೆ. ಕೆ.ರಾಜೇಂದ್ರ ಬಾಬು ಕ್ಯಾಮೆರಾ ಜವಾಬ್ದಾರಿ ನಿರ್ವಹಿಸಿದ್ದಾರೆ. ಮಡಿಕೇರಿ, ಸಕಲೇಶಪುರ, ಮೈಸೂರು ಮತ್ತು ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಸಲಾಗಿದೆ.