ಕರ್ನಾಟಕ

ಮಾಗಡಿಯ ಶ್ರೀ ಸೋಮೇಶ್ವರ ದೇವಾಲಯ

Pinterest LinkedIn Tumblr

someshwara1ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರು ಕ್ರಿ.ಶ 1512ರಲ್ಲಿ ಹೀಗಿನ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನಲ್ಲಿ ಕಟ್ಟಿಸಿದ ಶ್ರೀ ಸೋಮೇಶ್ವರ ದೇವಾಲಯ ಪ್ರಮುಖ ಧಾರ್ಮಿಕ ಕೇಂದ್ರ.

ಮಾಗಡಿ ಮಾಂಡವ್ಯ ಕ್ಷೇತ್ರ.  ಮಾಂಡವ್ಯ ಮಹರ್ಷಿಗಳು ಇಲ್ಲಿ ತಪವನ್ನಾಚರಿಸಿ, ರಂಗನಾಥಸ್ವಾಮಿಯನ್ನು ಪ್ರತಿಷ್ಠಾಪಿಸಿದರು ಎಂದು ಹೇಳಲಾಗುತ್ತದೆ. ಮಾಂಡವ್ಯರು ಇದ್ದ ಈ ಕ್ಷೇತ್ರ ಮಾಂಡವ್ಯ ಕುಟಿ ಎಂದು ಕರೆಸಿಕೊಂಡಿತ್ತು. ಕಾಲಾನಂತರದಲ್ಲಿ ಮಾಂಡವ್ಯ ಕುಟಿ ಮಾಕುಟಿಯಾಗಿ ಬಳಿಕ ಜನರ ಬಾಯಲ್ಲಿ ಮಾಗುಟಿಯಾಗಿ ನಂತರ ಮಾಗಡಿಯಾಗಿದೆ ಎಂದು ಹೇಳಲಾಗುತ್ತದೆ.

11 ನೇ ಶತಮಾನದಲ್ಲೇ ಮಾಗಡಿ ಪ್ರಮುಖ ಜನವಸತಿ ಪ್ರದೇಶವಾಗಿ ರೂಪುಗೊಂಡ ಪಟ್ಟಣ. ಬೆಟ್ಟ ಗುಡ್ಡ, ಕಾನನ ಪ್ರದೇಶಗಳಿಂದ ಕೂಡಿದ್ದ ಈ ರಮ್ಯ ತಾಣ ಅಭಿವೃದ್ಧಿ ಹೊಂದಿದ್ದು ನಾಡಪ್ರಭು ಕೆಂಪೇಗೌಡರ ಕಾಲದಲ್ಲಿ. ಕೋಟೆ ಕೊತ್ತಲಗಳನ್ನೂ ಒಳಗೊಂಡ ಈ ಪಟ್ಟಣ 16ನೇ ಶತಮಾನದ ಆದಿಯಲ್ಲಿ ಕೆಂಪೇಗೌಡರ ಆಡಳಿತ ಕೇಂದ್ರವಾಗಿತ್ತು. ಸಾಮಾನ್ಯವಾಗಿ ದೇವಾಲಯಗಳು ಧಾರ್ಮಿಕ ಕೇಂದ್ರಗಳಾಗಿರುತ್ತವೆಯೇ ಹೊರತು ಆಡಳಿತ ಕೇಂದ್ರ ಆಗಿರುವುದಿಲ್ಲ. ಆದರೆ, ಮಾಗಡಿಯ ಸೋಮೇಶ್ವರ ದೇವಾಲಯ ಧಾರ್ಮಿಕ ಹಾಗೂ ಆಡಳಿತ ಕೇಂದ್ರವಾಗಿ ಮೆರೆದಿತ್ತು. ಇದಕ್ಕೆ ಸಾಕ್ಷಿಯಾಗಿ ಇಂದಿಗೂ ಇಲ್ಲಿ, ಕೆಂಪೇಗೌಡರು ದರ್ಬಾರ್ ನಡೆಸುತ್ತಿದ್ದ ಕೆಂಪೇಗೌಡ ಹಜಾರ, ನ್ಯಾಯ ತೀರ್ಮಾನ ಮಾಡುತ್ತಿದ್ದ ಮಂಟಪಗಳು ಇವೆ.

ಶ್ರೀ ಭ್ರಮರಾಂಬಿಕಾ ಸಮೇತ ಶ್ರೀ ಸೋಮೇಶ್ವರ ದೇವಾಲಯವನ್ನು ಕೆಂಪೇಗೌಡರು ಕಟ್ಟಿಸಿದರು. ಕೆಂಪೇಗೌಡರ ಮನೆದೇವರು ಕಾಲ ಭೈರವೇಶ್ವರ. ಹೀಗಾಗಿ ಅವರ ತಾಯಿ ತಾವು ಕಂಚಿ ಹಾಗೂ ಕಾಶೀಯಾತ್ರೆಗೆ ಹೋಗಬೇಕು ಕಾಶಿ ವಿಶ್ವೇಶ್ವರನ ದರ್ಶನ ಮಾಡಬೇಕು ಎಂದು ಬಯಸುತ್ತಾರೆ.  ಹಿಂದೆ ಕಾಶಿಗೆ ಹೋದವರು ಹಿಂತಿರುಗಿ ಬರುತ್ತಾರೆ ಎಂಬ ಖಾತ್ರಿ ಇರಲಿಲ್ಲ. ಹೀಗಾಗಿ ವೃದ್ಧ ತಾಯಿಯನ್ನು ಕಾಶಿಗೆ ಕಳುಹಿಸಲು ಒಪ್ಪದ ಕೆಂಪೇಗೌಡರು ಋಷಿ, ಮುನಿ, ಪಂಡಿತರು ಹಾಗೂ ವಿದ್ವಾಂಸರೊಂದಿಗೆ ಚರ್ಚಿಸಿ, ತಾಯಿಗೆ ಕಾಶೀಯಾತ್ರೆಯ ಪುಣ್ಯ ದೊರಕಿಸಲು ಮಾಗಡಿಯ ಪುಟ್ಟ ಬೆಟ್ಟವೊಂದರ ಮೇಲೆ ಈ ದೇವಾಲಯ ನಿರ್ಮಿಸಿ, ಕಾಶಿಯಿಂದಲೇ ಸಾಲಿಗ್ರಾಮ ಲಿಂಗ ತರಿಸಿ ಪ್ರತಿಷ್ಠಾಪಿಸಿದರಂತೆ.

ಹೀಗಾಗಿ ಇದು ಶಿವಸಾಲಿಗ್ರಾಮವಾಗಿದ್ದು, ಪೀಠದಲ್ಲಿ ಮೃತೃಂಜಯ ಚಕ್ರವಿದೆ, ಇಲ್ಲಿ ದೇವರಿಗೆ ಮಾಡಿದ ಅಭಿಷೇಕದ ತೀರ್ಥ ಹಾಗೂ ಪ್ರಸಾದವನ್ನು ಸ್ವೀಕರಿಸಿದಲ್ಲಿ ಅಕಾಲಮೃತ್ಯು, ಅಪಮೃತ್ಯು ತಪ್ಪುವುದಲ್ಲದೆ, ವಾಣಿಜ್ಯ, ವ್ಯಾಪಾರ, ಕಾರ್ಯ ಸ್ಥಳದಲ್ಲಿ ಉತ್ತರೋತ್ತರ ಅಭಿವೃದ್ಧಿ ಆಗುತ್ತದೆ ಮಿಗಿಲಾಗಿ ಕಾಲಸರ್ಪದೋಷ, ಜಲಕಂಟಕ, ಮಾಟ ಮಂತ್ರದ ದುಷ್ಟ ಪ್ರಭಾವ ನಿವಾರಣೆಯಾಗುತ್ತದೆ ಎಂಬುದು ಭಕ್ತರ ನಂಬಿಕೆ. ಅಭಿಷೇಕದ ನಂತರ ಅಲಂಕಾರದಲ್ಲಿ ಶಿವಲಿಂಗದ ಸೌಂದರ್ಯ ನೂರ್ಮಡಿಗೊಳ್ಳುತ್ತದೆ. ಇನ್ನು ದೇವಾಲಯದ ಒಳ ಆವರಣದಲ್ಲಿ ಗಣೇಶನ ವಿಗ್ರಹವಿದೆ. ಕಲ್ಲಿನ ಕಂಬಗಳಲ್ಲಿ ಗಣೇಶನ ಶಿಲ್ಪಗಳಿವೆ. ಗರ್ಭಗೃಹದಲ್ಲಿರುವ ದೇವರ ಹಿಂದೆ ಹಾಕಲಾಗಿರುವ ಕನ್ನಡಿಯ ಹಿಂದಿರುವ ಬಿತ್ತಿಯಲ್ಲಿ ಈ ದೇವಾಲಯದ ಇತಿಹಾಸವನ್ನು ಕೆತ್ತಲಾಗಿದೆ 500 ವರ್ಷಗಳ ಹಿಂದೆ ನಿರ್ಮಿಸಿದ ಈ ದೇವಾಲಯದಲ್ಲಿ ಅದ್ಭುತವಾದ ಶಕ್ತಿ ಇದೆ.

ಮಾಗಡಿ ಶ್ರೀ ಸೋಮೇಶ್ವರ ದೇವಾಲಯ ಮಾಗಡಿಯಿಂದ ಕುಣಿಗಲ್ ಗೆ ಹೋಗುವ ಮಾರ್ಗದಲ್ಲಿ ಮುಖ್ಯರಸ್ತೆಯ ಪಕ್ಕದಲ್ಲೇ ಪುಟ್ಟ ಬೆಟ್ಟದ ಮೇಲೆ ಈ ದೇವಾಲಯದ ಬೃಹತ್ ರಾಜಗೋಪುರ ಕಾಣಿಸುತ್ತದೆ. ದೇವಾಲಯದ ಬಾಗಿಲವರೆಗೆ ವಾಹನಗಳು ಸಾಗಲು ರಸ್ತೆಯನ್ನು ನಿರ್ಮಿಸಲಾಗಿದೆ. ಪ್ರವೇಶ ದ್ವಾರದ ಕಲ್ಲಿನ ಕಂಬಗಳಲ್ಲಿ ಸುಂದರವಾದ ಕೆತ್ತನೆಗಳಿವೆ. ಒಳಗೆ ಪ್ರವೇಶಿಸುತ್ತಿದ್ದಂತೆ ಎಡ ಭಾಗದಲ್ಲಿ ಯಾಗಶಾಲೆ ಕಾಣಿಸುತ್ತದೆ. ಇಲ್ಲಿ ನಿತ್ಯ ಹೋಮ ಹವನ ನಡೆಯುತ್ತಿದ್ದು, ವರ್ಷದ 365 ದಿನವೂ ಇಲ್ಲಿ ಶುದ್ಧ ನೀರಿನ ಪೂರೈಕೆಗೆ ವ್ಯವಸ್ಥೆ ಮಾಡಲಾಗಿದೆ. ಪಕ್ಕದಲ್ಲಿಯೇ ಪುರಾತನವಾದ ಬಾವಿಯಿದೆ. ದೇಗುಲದ ಪ್ರಧಾನ ಪ್ರವೇಶ ದ್ವಾರದ ಪಕ್ಕದಲ್ಲಿ ನಾಡಪ್ರಭು ಕೆಂಪೇಗೌಡರು ನ್ಯಾಯ ತೀರ್ಮಾನ ಮಾಡುತ್ತಿದ್ದ ಮಂಟಪ ಇದೆ. ದೇಗುಲದ ಹಿಂಭಾಗದಲ್ಲಿ ಕೂಡ ಒಂದು ಪ್ರವೇಶ ದ್ವಾರವಿದ್ದು, ಇದಕ್ಕೆ ಬೃಹತ್ ರಾಜಗೋಪುರ ನಿರ್ಮಿಸಲಾಗಿದೆ. ಹಾಗೇ ಪ್ರದಕ್ಷಿಣೆ ಹಾಕುತ್ತಾ ಸಾಗಿದರೆ ರಥೋತ್ಸವಕ್ಕಾಗಿಯೇ ನಿರ್ಮಿಸಿರುವ ಮರದ ರಥವನ್ನು ನೋಡಿ ಮುಂದೆ ಬಂದರೆ ದೇಗುಲದ ಮುಂಭಾಗದಲ್ಲಿ ಕೆಂಪೇಗೌಡರು ಆಡಳಿತ, ದರ್ಬಾರು ನಡೆಸುತ್ತಿದ್ದ ಕೆಂಪೇಗೌಡರ ಹಜಾರ ಇದೆ. ದೇಗುಲವನ್ನೊಮ್ಮೆ ಸುತ್ತು ಹಾಕಿ ಪ್ರಧಾನ ದೇವಾಲಯ ಪ್ರವೇಶಿಸಿದರೆ  ಗರ್ಭಗೃಹದ ಮುಂದಿನ ಹಜಾರದಲ್ಲಿ ಸುಂದರವಾದ ನಂದಿಯ ವಿಗ್ರಹ ಗಮನ ಸೆಳೆಯುತ್ತದೆ.

ಪ್ರಶಾಂತ ವಾತಾವರಣದಲ್ಲಿರುವ ಹಾಗೂ ಮಹಿಮಾನ್ವಿತವಾದ ಈ ದೇವಾಲಯ ನೋಡಲೇಬೇಕಾದ ಸ್ಥಳ. ಕಾರ್ತೀಕ ಮಾಸ ಹಾಗೂ ಸೋಮವಾರಗಳಂದು ಇಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ಭಾನುವಾರ ಹಾಗೂ ರಜಾ ದಿನಗಳಂದು ಇಲ್ಲಿಗೆ ಹೆಚ್ಚನ ಭಕ್ತರು ಆಗಮಿಸುತ್ತಾರೆ.

ಮಾರ್ಗ
ಬೆಂಗಳೂರಿನಿಂದ ಸುಮಾರು 40 ಕಿ.ಮೀ ದೂರದಲ್ಲಿ ಮಾಗಡಿ ಇದೆ. ಮಾಗಡಿಯಿಂದ ಕುಣಿಗಲ್ ಗೆ ಹೋಗುವ ಮುಖ್ಯರಸ್ತೆಯ ಪಕ್ಕದಲ್ಲೇ ಪುಟ್ಟ ಬೆಟ್ಟದ ಮೇಲೆ ದೇವಾಲಯವಿದೆ. ಬೆಂಗಳೂರಿನಿಂದ ಮಾಗಡಿಗೆ ಹಾಗೂ ಕುಣಿಗಲ್ ಗೆ ಹಲವು ಸರ್ಕಾರಿ ಹಾಗೂ ಖಾಸಗಿ ಬಸ್ ಗಳು ಸಂಚಾರಿಸುತ್ತವೆ.

– ವಿಶ್ವನಾಥ್. ಎಸ್

Write A Comment