ಮನೋರಂಜನೆ

ಆಪ್ತಮಿತ್ರರಾದ ಸುದೀಪ್,ದರ್ಶನ್ ಚಿತ್ರ ಒಂದೇ ದಿನ ರಿಲೀಸ್?

Pinterest LinkedIn Tumblr

sudeepಸ್ಯಾಂಡಲ್’ವುಡ್’ನ ಆತ್ಮೀಯ ಗೆಳೆಯರಾದ ಕಿಚ್ಚ ಸುದೀಪ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಚಿತ್ರಗಳು ಏಕಕಾಲಕ್ಕೆ ಬಿಡುಗಡೆಯಾಗುವ ಸಾಧ್ಯತೆ ಹೆಚ್ಚಿದೆ.

ಅಭಿನಯ ಚಕ್ರವರ್ತಿ ಸುದೀಪ್ ಹಾಗೂ ಕಾಲಿವುಡ್ ನಟ ವಿಜಯ್ ಅಭಿನಯದ ತಮಿಳು ಚಿತ್ರ ಪುಲಿ ಅಕ್ಟೋಬರ್ 1ರಂದು ತೆರೆಗೆ ಬರಲು ಈಗಾಗಲೇ ಸಿದ್ಧವಾಗಿದೆ.

ಆದರೆ ಅದೇ ದಿನ ಕುಚುಕು ಗೆಳೆಯ ಚಾಲೆಂಜಿಂಗ್ ಸ್ಟಾರ್ ದರ್ಶನ್’ರ ಮಹತ್ವಾಕಾಂಕ್ಷೆಯ ಮಿ. ಐರಾವತ ಚಿತ್ರ ಕೂಡ ಬಿಡುಗೆಡೆಯಾಗುವ ಸಾಧ್ಯತೆಯಿದೆ ಎಂದು ಗಾಂಧಿನಗರ ಮೂಲಗಳು ಅಭಿಪ್ರಾಯಪಟ್ಟಿದ್ದಾರೆ.

ಅಕ್ಟೋಬರ್ 1ರಂದು ಐರಾವತ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ನಿರ್ದೇಶಕ ಎ.ಪಿ.ಅರ್ಜುನ್ ಹೇಳಿರುವುದಾಗಿ ವರದಿಯಾಗಿದೆ.  ಈ ಇಬ್ಬರೂ ಬಿಗ್ ಸ್ಟಾರ್ಸ್’ಗಳಿಗೂ ತಮ್ಮದೇಯಾದ ಬಹುದೊಡ್ಡ ಅಭಿಮಾನಿ ಬಳಗವಿದ್ದು ಎರಡು ಚಿತ್ರಗಳು ಒಂದೇ ದಿನ ಬಿಡುಗಡೆಯಾದರೆ ಬಾಕ್ಸಾಫೀಸ್’ನಲ್ಲಿ ಭಾರೀ ಪೈಪೋಟಿ ಕಾಣುವ ಸಾಧ್ಯತೆಯಿದೆ.

ಸುದೀಪ್ ಅಭಿನಯದ ಪುಲಿ ಚಿತ್ರದ ರಿಲೀಸ್ ದಿನಾಂಕ ಈಗಾಗಲೇ ಅನೌನ್ಸ್ ಆಗಿದ್ದು ಆದರೆ ದರ್ಶನ್’ರ ಐರಾವತ ಚಿತ್ರವು ಅದೇ ದಿನ ಬಿಡುಗಡೆಯಾಗುವ ಸಾಧ್ಯತೆ ಇರುವ ಕಾರಣ ಬಾಕ್ಸಾಫೀಸ್ ಕಲೆಕ್ಷನ್ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂಬುದು ಗಾಂಧಿನಗರ ಪಂಡಿತರ ಅಭಿಪ್ರಾಯ.

ಕನ್ನಡ ಚಿತ್ರರಂಗದ ಆಪ್ತಮಿತ್ರರಾದ ಕಿಚ್ಚ ಸುದೀಪ್ – ಚಾಲೆಂಜಿಂಗ್ ಸ್ಟಾರ್ ದರ್ಶನ್  ಚಿತ್ರಗಳು ಏಕಕಾಲಕ್ಕೆ ತೆರೆಕಾಣದಿರಲಿ ಎಂಬುದು ಅವರ ಅಭಿಮಾನಿಗಳ ಬಯಕೆ.

ಅಂದಹಾಗೆ ತಮಿಳು ಚಿತ್ರ ಪುಲಿಯ ವಿತರಣಾ ಹಕ್ಕನ್ನು ಕಲಾ ಸಾಮ್ರಾಟ್ ಎಸ್.ನಾರಾಯಣ್ ಪಡೆದಿದ್ದು ಚಿತ್ರ ಬಿಡುಗಡೆಯ ಬಗ್ಗೆ ಕುಚುಕು ಗೆಳೆಯರು ಯಾವ ತೀರ್ಮಾನ ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡೋಣ.
-ಕಪ್ಪು ಮೂಗುತ್ತಿ

-ಉದಯವಾಣಿ

Write A Comment