ರಾಷ್ಟ್ರೀಯ

ಮೊಬೈಲ್‌ ಕರೆ ಕಡಿತಗೊಂಡರೆ ಹಣ ವಾಪಸ್‌!

Pinterest LinkedIn Tumblr

call-drops-ಪ್ರತಿ ಕಾಲ್‌ ಡ್ರಾಪ್‌ಗೆ ಟೆಲಿಕಾಂ ಕಂಪನಿಗಳು ಪರಿಹಾರ ನೀಡಬೇಕು: ಸರ್ಕಾರಕ್ಕೆ ಟ್ರಾಯ್‌ ಶಿಫಾರಸು , ಛೆ…! ಇದೇನಪ್ಪಾ ಮಾತನಾಡುತ್ತಿರುವಾಗಲೇ ಕರೆ ಕಟ್ಟಾಯಿತಲ್ಲ. ಅನಾವಶ್ಯಕ ಹಣ ಖರ್ಚು. ಇನ್ನೊಂದು ಕರೆ ಮಾಡಬೇಕಾಗಿ ಬಂತಲ್ಲ. ಈ ಸಮಸ್ಯೆಗೆ ಎಂದು ಅಂತ್ಯ ಬೀಳುತ್ತೋ ಎಂದು ಇನ್ನುಮುಂದೆ ಗೊಣಗಬೇಕಾಗಿಲ್ಲ. ನಿಮ್ಮ ಕರೆ ಅರ್ಧದಲ್ಲೇ ಕಡಿತವಾದರೆ ದೂರಸಂಪರ್ಕ ಕಂಪನಿಗಳೇ ಪರಿಹಾರ ನೀಡುವ ದಿನಗಳು ದೂರವಿಲ್ಲ. ಕಾಲ್‌ ಡ್ರಾಪ್‌ (ಕರೆ ಕಡಿತ)ಕ್ಕೆ ದೂರವಾಣಿ ಕಂಪನಿಗಳೇ ಕಾರಣವಾಗಿದ್ದು, ಪ್ರತಿ ಕರೆ ಕಡಿತಕ್ಕೂ ಗ್ರಾಹಕರಿಗೆ ಪರಿಹಾರ ನೀಡಬೇಕು ಮತ್ತು ಸಮರ್ಪಕ ಸೇವೆ ನೀಡದ ಕಂಪನಿಗಳಿಗೆ ದಂಡ ವಿಧಿಸಬೇಕು ಎಂದು ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ಸರ್ಕಾರಕ್ಕೆ ಶಿಫಾರಸು ಮಾಡಿದೆ. ಇದರ ಬೆನ್ನಲ್ಲೇ ಟೆಲಿಕಾಂ ಕಂಪನಿಗಳು ಮತ್ತು ಸರ್ಕಾರದ ಮಧ್ಯೆ ನಾಕೊಡೆ ನೀ ಬಿಡೆ ಎನ್ನುವ ಸ್ಥಿತಿ ಉದ್ಭವಿಸಿದೆ. ಈ ಹಿನ್ನೆಲೆಯಲ್ಲಿ ಏನಿದು ಕಾಲ್‌ ಡ್ರಾಪ್‌? ಈ ಸಮಸ್ಯೆ ಉದ್ಭವಿಸಿದ್ದೇಕೆ? ಎಂಬ ಕುರಿತಾದ ಮಾಹಿತಿಗಳು ಇಲ್ಲಿವೆ.

ಏನಿದು ಕಾಲ್‌ ಡ್ರಾಪ್‌?

ಇನ್ನೊಬ್ಬ ವ್ಯಕ್ತಿಯ ಜತೆ ಮಾತನಾಡುವುದಕ್ಕಿಂತ ಮುನ್ನವೇ ತಾಂತ್ರಿಕ ಕಾರಣದಿಂದಾಗಿ ಕರೆ ಕಟ್ಟಾಗುವುದು ಅಥವಾ ಮಾತುಕತೆಯ ಮಧ್ಯದಲ್ಲಿ ಕರೆ ಏಕಾಏಕಿ ಕಡಿತಗೊಂಡರೆ ಅದು ಕಾಲ್‌ ಡ್ರಾಪ್‌ ಎನಿಸಿಕೊಳ್ಳುತ್ತದೆ. ಟ್ರಾಯ್‌ನ ನಿಯಮವಾಳಿಯ ಪ್ರಕಾರ ಕರೆ ಕಡಿತ ಮಿತಿ ಶೇ.2ನ್ನು ಮೀರುವಂತಿಲ್ಲ. ಆದರೆ, ಕಳೆದ ಒಂದು ವರ್ಷದಲ್ಲಿ ಕಾಲ್‌ ಡ್ರಾಪ್‌ ಸಮಸ್ಯೆ ದುಪ್ಪಟ್ಟಾಗಿದೆ. ಟ್ರಾಯ್‌ ಅನುಮತಿ ನೀಡಿರುವುದಕ್ಕಿಂತ ನಾಲ್ಕುಪಟ್ಟು ಅಧಿಕ ಕರೆಗಳು ಕಡಿತಗೊಳ್ಳುತ್ತಿವೆ. ಅದರಲ್ಲೂ ಕಾಲ್‌ ಡ್ರಾಪ್‌ ಸಮಸ್ಯೆ ದೆಹಲಿ, ಮುಂಬೈ ನಂತಹ ನಗರ ಪ್ರದೇಶಗಳಲ್ಲೇ ಹೆಚ್ಚು. ಆದರೆ, ಕಡಿತಗೊಂಡ ಕರೆಗಳಿಗೂ ಟೆಲಿಕಾಂ ಕಂಪನಿಗಳು ಗ್ರಾಹಕರಿಂದಲೇ ಶುಲ್ಕ ಪಡೆದುಕೊಳ್ಳುತ್ತಿವೆ.

ಕಾಲ್‌ ಡ್ರಾಪ್‌ ಸಮಸ್ಯೆ ಉದ್ಭವಿಸಿದ್ದೇಕೆ?

ಕಾಲ್‌ ಡ್ರಾಪ್‌ ಸಮಸ್ಯೆಯಿಂದ ರೋಸಿ ಹೋಗಿರುವ ಗ್ರಾಹಕರು “ಸೇವೆಗೆ ತಕ್ಕನಾದ ಬೆಲೆಯನ್ನು ನೀಡುತ್ತಿರುವಾಗ ನಮಗೆ ಗುಣಮಟ್ಟದ ಸೇವೆಗಳನ್ನು ನಿರಾಕರಿಸುತ್ತಿರುವುದೇಕೆ?’ ಎಂಬ ಪ್ರಶ್ನೆಯನ್ನು ಎತ್ತಿದ್ದರು. ಈ ಹಿನ್ನೆಲೆಯಲ್ಲಿ ಟ್ರಾಯ್‌ ಕಳೆದ ಜೂನ್‌- ಜುಲೈನಲ್ಲಿ ತಪಾಸಣಾ ಅಭಿಯಾನವನ್ನು ನಡೆಸಿತ್ತು. ಮುಂಬೈ ಮತ್ತು ದೆಹಲಿಯಲ್ಲಿ ನಡೆಸಿದ ತಪಾಸಣೆಯ ವೇಳೆ, ಬಹುತೇಕ ದೂರವಾಣಿ ಕಂಪನಿಗಳ ಕರೆಗಳು ನಿಗದಿತ (ಶೇ.2)ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕಡಿತಗೊಂಡಿರುವುದು ಕಂಡು ಬಂದಿದೆ. ದೆಹಲಿಯಲ್ಲಿ ಶೇ. 17ರಷ್ಟು ಕರೆ ಕಡಿಗಳು ಉಂಟಾಗುತ್ತಿವೆ ಎಂಬ ಅಚ್ಚರಿಯ ಅಂಶವನ್ನು ಕೂಡ ಟ್ರಾಯ್‌ ಪತ್ತೆಹಚ್ಚಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ 2ಜಿ ನೆಟ್‌ವರ್ಕ್‌ಗಳಲ್ಲಿ ಎರಡುಪಟ್ಟು ಕರೆ ಕಡಿತಗಳು ಉಂಟಾಗುತ್ತಿವೆ. ಅಲ್ಲದೇ 3ಜಿ ನೆಟ್‌ವರ್ಕ್‌ನಲ್ಲಿ ಶೇ. 65ರಷ್ಟು ಕರೆ ಕಡಿತ ಸಂಭವಿಸುತ್ತಿದೆ ಎಂಬುದನ್ನು ಟ್ರಾಯ್‌ ಕಂಡುಕೊಂಡಿದೆ.

ಟ್ರಾಯ್‌ನ ಪ್ರಸ್ತಾವನೆಯಲ್ಲಿ ಏನಿದೆ?

ಟ್ರಾಯ್‌ ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಯ ಪ್ರಕಾರ 5 ಸೆಕೆಂಡ್‌ಗಿಂತ ಮುನ್ನ ಕಡಿತಗೊಳ್ಳುವ ಕರೆಗಳಿಗೆ ಯಾವುದೇ ಶುಲ್ಕವನ್ನು ವಿಧಿಸಬಾರದು. ಒಂದು ವೇಳೆ 5 ಸೆಕೆಂಡ್‌ಗಳ ಬಳಿಕ ಕರೆಗಳು ಕಡಿತಗೊಂಡರೆ ಕಡೆಯ ನಿಮಿಷಕ್ಕೆ ಗ್ರಾಹಕರಿಗೆ ಶುಲ್ಕ ಪಡೆಯುವಂತಿಲ್ಲ. ಅಲ್ಲದೇ ಕಡಿತಗೊಂಡ ಕರೆಗಳಿಗೆ ಕಂಪನಿಗಳು ಪರಿಹಾರವನ್ನು ನೀಡಬೇಕು.

ಯಾವ ರೀತಿಯ ಪರಿಹಾರಬೇಕು ನೀವೇ ತಿಳಿಸಿ!

ಈ ಪ್ರಸ್ತಾವನೆಯನ್ನು ಯಾವರೀತಿಯಲ್ಲಿ ಜಾರಿಗೊಳಿಸಬೇಕು ಎಂಬ ಬಗ್ಗೆ ಟ್ರಾಯ್‌ ಜನರಿಂದಲೇ ಅಭಿಪ್ರಾಯ ಸಂಗ್ರಹಿಸುತ್ತಿದೆ. ಇದರಲ್ಲಿ ಎರಡು ರೀತಿಯ ಪರಿಹಾರಗಳನ್ನು ಟ್ರಾಯ್‌ ಸೂಚಿಸಿದೆ. ಕಡಿತಗೊಂಡ ಕರೆಗಳಿಗೆ ನಿಮಿಷ ಅಥವಾ ಸೆಕೆಂಡ್‌ಗಳ ಲೆಕ್ಕದಲ್ಲಿ ಮಾತನಾಡುವ ಸಮಯ (ಟಾಕ್‌ ಟೈಮ್‌)ವನ್ನು ನೀಡಬೇಕೆ? ಅಥವಾ ಕಡಿತಗೊಂಡ ಕರೆಗಳಿಗೆ ಹಣದ ರೂಪದಲ್ಲಿ ನಷ್ಟವನ್ನು ತುಂಬಿಕೊಡಬೇಕೆ ಎಂಬ ಕುರಿತ ಅಭಿಪ್ರಾಯ ಸಲ್ಲಿವಂತೆ ಹೇಳಿದೆ. ಗ್ರಾಹಕರು ನೀಡುವ ಅಭಿಪ್ರಾಯಗಳನ್ನು ಸೆ. 28ರವರೆಗೂ ಸ್ವೀಕರಿಸುವುದಾಗಿ ಹೇಳಿದೆ.

ಮೊಬೈಲ್‌ ಕಂಪನಿಗಳ ಆರೋಪವೇನು?

ಕಾಲ್‌ ಡ್ರಾಪ್‌ ವಿಷಯ ಇದೀಗ ಟೆಲಿಕಾಂ ಕಂಪನಿಗಳು ಮತ್ತು ಸರ್ಕಾರದ ಮಧ್ಯೆ ತಿಕ್ಕಾಟಕ್ಕೆ ಕಾರಣವಾಗಿದೆ. ತಮಗೆ ಉತ್ತಮ ಸೇವೆ ಒದಗಿಸಲು ಅಗತ್ಯವಿರುವ ತರಂಗಾಂತರ (ಸ್ಪೆಕ್ಟ್ರಂ)ವನ್ನು ಬಳಸಿಕೊಳ್ಳಲು ಅನುಮತಿ ನೀಡಲಾಗಿಲ್ಲ. ಈ ಕಾರಣಕ್ಕಾಗಿ ಹೆಚ್ಚು ಹೆಚ್ಚು ಮೊಬೈಲ್‌ ಟವರ್‌ಗಳನ್ನು ಅಳವಡಿಸಬೇಕಾಗುತ್ತಿದೆ ಎಂದು ಟೆಲಿಕಾಂ ಕಂಪನಿಗಳು ಆರೋಪಿಸಿವೆ. ದಿನದಿಂದ ದಿನಕ್ಕೆ ಮೊಬೈಲ್‌ ಫೋನ್‌ ಬಳಕೆದಾರರ ಸಂಖ್ಯೆ ನಗರಗಳಲ್ಲಿ ಹೆಚ್ಚುತ್ತಲೇ ಇದೆ. ಇದು ನೆಟ್‌ವರ್ಕ್‌ ದಟ್ಟಣೆಗೆ ಕಾರಣವಾಗುತ್ತಿದೆ ಎಂದು ಟೆಲಿಕಾಂ ಕಂಪನಿಗಳು ಆರೋಪಿಸುತ್ತಿವೆ.

ಕಳೆದ 7 ತಿಂಗಳಿನಲ್ಲಿ 70,000 ಮೊಬೈಲ್‌ ಟವರ್‌ಗಳನ್ನು ಭಾರತದೆಲ್ಲೆಡೆ ಅಳವಡಿಸಲಾಗಿದೆ. ಅಲ್ಲದೆ, ಕಾಲ್‌ ಡ್ರಾಪ್‌ ಸಮಸ್ಯೆಯ ನಿವಾರಣೆಗಾಗಿ ಮುಂದಿನ 2 ವರ್ಷಗಳಲ್ಲಿ 1 ಲಕ್ಷ ಮೊಬೈಲ್‌ ಟವರ್‌ಗಳನ್ನು ಅಳವಡಿಸಲು ಉದ್ದೇಶಿಸಲಾಗಿದೆ. ಮೊಬೈಲ್‌ ಟವರ್‌ ನಿರ್ಮಾಣದ ವೆಚ್ಚ ಮತ್ತು ಬಾಡಿಗೆಯನ್ನು ಟೆಲಿಕಾಂ ಕಂಪನಿಗಳೇ ಭರಿಸಲಿದೆ ಎಂದು ದೂರವಾಣಿ ನಿರ್ವಾಹಕರ ಸಂಘಟನೆ ಹೇಳಿದೆ. ಸರ್ಕಾರಿ ಕಟ್ಟಡಗಳ ಮೇಲೆ ಮೊಬೈಲ್‌ ಟವರ್‌ಗಳನ್ನು ಅಳವಡಿಸಲು ಮತ್ತು ರಕ್ಷಣಾ ಇಲಾಖೆಯ ಜಮೀನಿನಲ್ಲಿ ಉಚಿತವಾಗಿ ಮೊಬೈಲ್‌ ಟವರ್‌ಗಳನ್ನು ಅಳವಡಿಸಲು ಅನುಮತಿ ನೀಡಬೇಕು ಎಂದು ಕೋರಿಕೆ ಮುಂದಿಟ್ಟಿದೆ.

ಸರ್ಕಾರ ಹೇಳುತ್ತಿರುವುದೇನು?

ಆದರೆ, ಟೆಲಿಕಾಂ ಕಂಪನಿಗಳ ಆರೋಪವನ್ನು ಒಪ್ಪಲು ಸರ್ಕಾರ ನಿರಾಕರಿಸಿದೆ. ದೂರವಾಣಿ ಕರೆಗಳ ಸೇವೆಯನ್ನು ಉತ್ತಮಗೊಳಿಸಲು ಟೆಲಿಕಾಂ ಕಂಪನಿಗಳು ಇನ್ನಷ್ಟು ಹೂಡಿಕೆ ಮಾಡುವ ಅಗತ್ಯವಿದೆ. ಅಲ್ಲದೇ ಟೆಲಿಕಾಂ ಕಂಪನಿಗಳಿಗೆ ಸಾಕಷ್ಟು ತರಂಗಾಂತರಗಳನ್ನು ಹಂಚಿಕೆ ಮಾಡಿದ್ದು, ನೆಟ್‌ವರ್ಕ್‌ನ್ನು ಮೇಲ್ದರ್ಜೆಗೆ ಏರಿಸುವುದು ಟೆಲಿಕಾಂ ಕಂಪನಿಗಳ ಜವಾಬ್ದಾರಿ ಎಂದು ಟೆಲಿಕಾಂ ಸಚಿವ ರವಿಶಂಕರ್‌ ಪ್ರಸಾದ್‌ ಸ್ಪಷ್ಟಪಡಿಸಿದ್ದಾರೆ.

ಅಲ್ಲದೇ ಮೊಬೈಲ್‌ ಟವರ್‌ಗಳನ್ನು ಅಳವಡಿಸುವುದರಿಂದ ಆರೋಗ್ಯ ಸಮಸ್ಯೆ ಉದ್ಭವಿಸುವುದಿಲ್ಲ. ಜನವಸವಸತಿ ಪ್ರದೇಶಗಳಿಂದ ಟವರ್‌ಗಳನ್ನು ತೆಗೆಯ ಕ್ರಮ ಅಸಮಂಜಸವಾದುದು ಎಂದು ಹೇಳಿದ್ದಾರೆ. ಆದರೆ, ಕಳೆದ 1 ವರ್ಷದಲ್ಲಿ 10 ಸಾವಿರ ಮೊಬೈಲ್‌ ಟವರ್‌ಗಳನ್ನು ತೆರವುಗೊಳಿಸಲಾಗಿದೆ ಎಂದು ಟೆಲಿಕಾಂ ಕಂಪನಿಗಳು ಹೇಳಿಕೊಂಡಿವೆ.

5,50,000: ದೇಶದೆಲ್ಲೆಡೆ ಅಳವಡಿಸಲಾದ ಮೊಬೈಲ್‌ ಟವರ್‌ಗಳ ಸಂಖ್ಯೆ
70,751: ಕಳೆದ 7 ತಿಂಗಳಿನಲ್ಲಿ ಅಳವಡಿಸಲಾದ ಮೊಬೈಲ್‌ ಟವರ್‌ಗಳು
1,00,000: ಮುಂದಿನ ಎರಡು ವರ್ಷದಲ್ಲಿ ಅಳವಡಿಸಬೇಕಾಗಿರುವ ಟವರ್‌ಗಳು
7000; ಕೊರತೆ ಇರುವ ಟವರ್‌ಗಳ ಸಂಖ್ಯೆ
10,000: ವಿವಿಧ ಕಾರಣಕ್ಕಾಗಿ ತೆರವುಗೊಳಿಸಲಾದ ಟವರ್‌ಗಳು
12,000 ಇಕ್ಕಟ್ಟಿನ ಪ್ರದೇಶಗಳಲ್ಲಿ ಬಳಕೆಗೆ ಸಿಗದೇ ಇರುವ ಟವರ್‌ಗಳು

ಮೊಬೈಲ್‌ ಟವರ್‌ಗಳ ಕೊರತೆಯನ್ನು ಎದುರಿಸುತ್ತಿರುವ ಪ್ರಮುಖ ನಗರಗಳು; ದೆಹಲಿ, ಛತ್ತೀಸ್‌ಗಢ, ಮುಂಬೈ, ಪಟನಾ, ಕೋಲ್ಕತಾ, ಜೈಪುರ, ಬೆಂಗಳೂರು, ಹೈದಾರಾಬಾದ್‌.
-ಉದಯವಾಣಿ

Write A Comment