ಹೇಳಿಕೇಳಿ ಇದು ಫೇಸ್ ಬುಕ್, ಟ್ವಿಟ್ವಿರ್ ಜಮಾನ. ನಮ್ಮೊಳಗೇ ಯಾರಾದ್ರೂ ಫೇಸ್ ಬುಕ್ ಅಕೌಂಟು ಹೊಂದಿಲ್ಲ ಅಂದ್ರೆ ಆತ ಪಕ್ಕಾ `ಇಂಟರ್ನೆಟ್ ಲೋಕದ ಅಸ್ಪೃಶ್ಯ’. ದಿನದಲ್ಲಿ ಹತ್ತಾರು ಹೇಳಿಕೆಗಳನ್ನು ಕೊಟ್ಟು, ಸಾಲದಷ್ಟು ಸೆಲ್ಫಿಗಳನ್ನು ತೂರಿಸುವ ಸೆಲೆಬ್ರಿಟಿಗಳಲ್ಲೇ ಸೋಷಿಯಲ್ ಮೀಡಿಯಾ ಖಾತೆ ಹೊಂದಿಲ್ಲ ಅಂದ್ರೆ ನಂಬಲು ಯಾರೂ ತಯಾರಿಲ್ಲ. ಸಾಮಾಜಿಕ ಜಾಲತಾಣ ಸೆಲೆಬ್ರಿಟಿಗಳಿಗೊಂದು ಸ್ಪ್ರಿಂಗ್ ಮೆಟ್ಟಿಲಿದ್ದಂತೆ. ಅಲ್ಲಿ ಕಾಲಿಟ್ಟ ಕೂಡಲೇ ಅವರ ಮೇಲಿನ ಪ್ರಚಾರ ಇನ್ನೂ ಎತ್ತರಕ್ಕೇರುತ್ತದೆ. ಟ್ವೀಟು-ಕಾಮೆಂಟು ಇಲ್ಲದಿದ್ದರೆ ಅವರ ಬದುಕಿನಲ್ಲಿ ಏನೂ ಟೇಸ್ಟಿರಲ್ಲ.
ಆದರೆ ಸೆಲೆಬ್ರಿಟಿಗಳಲ್ಲೇ ಸೋಷಿಯಲ್ ಮೀಡಿಯಾ ಸನ್ಯಾಸಿಗಳಿದ್ದಾರೆ. ಅವರೇನು ಹೆಬ್ಬೆಟ್ಟಲ್ಲ. ಓದಿಕೊಂಡವರೇ. ಆದರೆ, ಬಿಟ್ಟಿ ಪ್ರಚಾರಕ್ಕಾಗಿ -ಫೇಸ್ ಬುಕ್ಕಿಗೆ ಬಂದು ಬಾಯಿಬಿಡೋದಿಲ್ಲ. ಟ್ವಿಟ್ಟರಿಗೆ ಕಾಲಿಟ್ಟು 140 ಅಕ್ಷರ ಟೈಪಿಸಲೂ ಅವರಿಗೆ ಇಷ್ಟ ಇಲ್ಲ. ಅಭಿಮಾನಿಗಳು ಸೇರಿ ಇವರ ಮೇಲೆ ಪುಟ ರಚಿಸಿದ್ದರೂ, ಖಾಸಗಿ ಖಾತೆ ಇಟ್ಟುಕೊಂಡವರಲ್ಲ.
ಐಶ್ವರ್ಯಾ ರೈ ಅಂಥವರಲ್ಲೊಬ್ಬಳು. ಭಾರತ ಸೇರಿದಂತೆ ಜಗತ್ತಿನಾದ್ಯಂತ ಕೋಟ್ಯಂತರ ಅಭಿಮಾನಿಗಳು ಈಕೆಗಿದ್ದಾರೆ. ರೈಗೆ ಈ ಜಾಲತಾಣಗಳ ಪ್ರಚಾರ ತೀರಾ ಕಿರಿಕಿರಿಯಂತೆ. ಯಾರು ಯಾವಾಗ ಇಲ್ಲಿ ಕಾಲೆಳೀತಾರೆ, ಅಟ್ಟಕ್ಕೇರಿಸುತ್ತಾರೆ ಎಂಬುದರ ಬಗ್ಗೆ ಈಕೆಗೆ ದೊಡ್ಡ ಭಯವಂತೆ. ಅಮಿತಾಭ್ ಒಮ್ಮೆ ಹೇಳಿದರೂ, ಖಾತೆ ತೆರೆಯಲು ಮನಸ್ಸು ಮಾಡಿಲ್ಲ ಐಶ್ವರ್ಯಾ. ಕರೀನಾ ಕಪೂರ್, ಖಾನ್ ಬಳಿಯೂ ಸೋಷಿಯಲ್ ಮೀಡಿಯಾ ಖಾತೆಯಿಲ್ಲ. ಟ್ವಿಟ್ಟರ್ ಖಾತೆ ತೆರೆದಿದ್ದರೂ ಯಾವುದೋ ಅಹಿತ ಘಟನೆ ಈಕೆಯನ್ನು ಅಲ್ಲಿಂದ ಕಾಲ್ತೆರೆಯುವಂತೆ ಮಾಡಿತಂತೆ. ಅಲ್ಲಿಗದು ಕ್ಲೋಸ್.