ಶಹಜಹಾನ್‌ಪುರ್(ಉತ್ತರ ಪ್ರದೇಶ): ಪ್ರೀತಿಸಿದ್ದ ಸೋದರಿಯ ತಲೆ ಕತ್ತರಿಸಿ, ಆಕೆಯ ರುಂಡವನ್ನು ಗ್ರಾಮದಲ್ಲಿ ಮೆರವಣಿಗೆ ಮಾಡಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಶಹಜಹಾನ್‌ಪುರದಲ್ಲಿ ನಡೆದಿದೆ.
ಸೋದರಿ ಫೂಲ್ ಜಹಾನ್ (17) ರುಂಡದೊಂದಿಗೆ ತಲೆಮರೆಸಿಕೊಂಡಿರುವ ಸೋದರರನ್ನು ಗುಲ್ ಹಸನ್ (25) ಹಾಗೂ ನನ್ಹೆ(20) ಎಂದು ಗುರುತಿಸಲಾಗಿದೆ.
‘ಹುಡುಗನ ಮನೆ ಹೊರಗೆ ಸೋಮವಾರ ಮಧ್ಯಾಹ್ನ ಫೂಲ್ ಜಹಾನ್‌ನನ್ನು ಕಂಡ ಸೋದರರು, ಆಕೆಯನ್ನು ಗ್ರಾಮದ ಕೇಂದ್ರ ಭಾಗಕ್ಕೆ ಎಳೆದು ತಂದು ಮನಸೋಇಚ್ಛೆ ಥಳಿಸಿ ಶಿರಚ್ಛೇದ ಮಾಡಿದ್ದರು. ಗ್ರಾಮದಿಂದ ಪರಾರಿಯಾಗುವ ಮೊದಲು ರಕ್ತಸಿಕ್ತ ರುಂಡವನ್ನು ಹಿಡಿದು ಇಡೀ ಗ್ರಾಮದಲ್ಲಿ ಸುಮಾರು ಒಂದು ತಾಸು ಅಡ್ಡಾಡಿದ್ದರು,’ ಎಂದು ಪೊಲೀಸರು ತಿಳಿಸಿದ್ದಾರೆ.
‘ನೋಡಿ ನಾವು ನಮ್ಮ ಸೋದರಿಯ ತಲೆ ತೆಗೆದಿದ್ದೇವೆ, ಪ್ರೀತಿಸಿದ ತಪ್ಪಿಗೆ ಅವಳಿಗೆ ಶಿಕ್ಷೆ ನೀಡಿದ್ದೇವೆ’ ಎಂದು ಗ್ರಾಮದಲ್ಲಿ ಅಡ್ಡಾಡುವಾಗ ಸೋದರರು ಅಬ್ಬರಿಸಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.
ಸಂಬಂಧಿಯನ್ನು ಪ್ರೀತಿಸಿದ್ದ ಫೂಲ್ ಜಹಾನ್ ಆತನನ್ನೇ ಮದುವೆ ಆಗುವ ಇಂಗಿತ ವ್ಯಕ್ತಪಡಿಸಿದ್ದಳು. ಅದಕ್ಕೆ ಸೋದರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಕೊಲೆಯಾದ ಹಿಂದಿನ ರಾತ್ರಿ ಹುಡುಗನ ಮನೆಯಲ್ಲೇ ಸೋದರಿ ಮಲಗಿದ್ದಳು ಎಂಬ ವಿಷಯ ತಿಳಿದು ಸಿಟ್ಟಿಗೆದ್ದ ಸೋದರರು ಈ ಕೃತ್ಯ ಎಸಗಿದ್ದಾರೆ ಎಂದು ಹೇಳಲಾಗಿದೆ.
8 ಸೋದರರಿಗೆ ಫೂಲ್ ಜಹಾನ್ ಒಬ್ಬಳೇ ಸೋದರಿ. 6 ಮಂದಿ ಸೋದರರು ದಿಲ್ಲಿಯಲ್ಲಿ ನೆಲೆಸಿದ್ದಾರೆ.