ಕೆಲ ನಾಯಕ ನಟರು ಸಾಹಸ ದೃಶ್ಯಗಳ ಚಿತ್ರೀಕರಣದ ವೇಳೆ ತಮ್ಮ ಬದಲಿಗೆ ಡ್ಯೂಪ್ ಗಳನ್ನು ಬಳಸುವಂತೆ ನಿರ್ದೇಶಕರಿಗೆ ಸೂಚಿಸುವುದುಂಟು. ಮತ್ತೆ ಹಲವರು ತಾವೇ ಸ್ವತಃ ಸಾಹಸ ದೃಶ್ಯಗಳಲ್ಲಿ ಪಾಲ್ಗೊಳ್ಳುವ ಮೂಲಕ ರಿಸ್ಕ್ ತೆಗೆದುಕೊಳ್ಳುತ್ತಾರೆ.
ಈ ವರ್ಗಕ್ಕೆ ಸೇರಿದ ಖ್ಯಾತ ಬಾಲಿವುಡ್ ನಟ ಅಕ್ಷಯ್ ಕುಮಾರ್, ಸಾಹಸ ದೃಶ್ಯದ ಚಿತ್ರೀಕರಣದ ವೇಳೆ ಗಾಯಗೊಂಡಿದ್ದಾರೆ. ಸ್ವತಃ ಮಾರ್ಷಲ್ ಆರ್ಟ್ಸ್ ಪಟುವೂ ಆಗಿರುವ ಅಕ್ಷಯ್ ಕುಮಾರ್ ಮೈ ನವಿರೇಳಿಸುವ ಸಾಹಸ ಮಾಡುವ ಮೂಲಕವೇ ಅಭಿಮಾನಿಗಳ ಒಲವಿಗೆ ಪಾತ್ರವಾಗಿದ್ದಾರೆ.
ಇತ್ತೀಚೆಗೆ ಅವರು ತಮ್ಮ ಮುಂಬರುವ ‘ಸಿಂಗ್ ಈಸ್ ಬ್ಲಿಂಗ್’ ಚಿತ್ರದ ಚಿತ್ರೀಕರಣದ ವೇಳೆ ಬೆಂಕಿಯಲ್ಲಿ ಹಾರುವ ದೃಶ್ಯದ ಸಂದರ್ಭದಲ್ಲಿ ಆಕಸ್ಮಿಕವಾಗಿ ಅವರ ಕಾಲಿಗೆ ಬೆಂಕಿ ತಗುಲಿದ ಪರಿಣಾಮ ಗಾಯಗೊಂಡಿದ್ದಾರೆ. ಎಷ್ಟು ಪ್ರಮಾಣದಲ್ಲಿ ಗಾಯಗೊಂಡಿದ್ದಾರೆಂಬುದರ ಕುರಿತು ಚಿತ್ರತಂಡ ಬಾಯಿ ಬಿಟ್ಟಿಲ್ಲವಾದರೂ ಈ ಸಾಹಸ ದೃಶ್ಯದ ಫೋಟೋಗಳು ಈಗ ಬಹಿರಂಗವಾಗಿವೆ.