‘ಸಿಂಪಲ್ಲಾಗ್ ಒಂದ್ಲವ್ಸ್ಟೋರಿ’ಯಂಥ ಸೂಪರ್ ಹಿಟ್ ಚಿತ್ರ ಕೊಟ್ಟಿದ್ದ ಸುನಿ ಮತ್ತು ರಕ್ಷಿತ್ ಶೆಟ್ಟಿ ಜೋಡಿ ‘ಉಳಿದವರು ಕಂಡಂತೆ’ ಬಳಿಕ ನೀನೊಂದು ತೀರ- ನಾನೊಂದು ತೀರ ಎಂಬಂತಾಗಿಬಿಟ್ಟಿದೆ. ‘ನಾವು ಪರಸ್ಪರ ಚೆನ್ನಾಗಿದ್ದೇವೆ’ ಎಂದು ಇಬ್ಬರೂ ಹೇಳಿಕೊಂಡಿದ್ದರೂ ಒಂದು ಅಂತರ ನಿರ್ವಣವಾಗಿರುವುದು ನಿಜ ಎಂಬುದನ್ನು ಗಾಂಧಿನಗರದಲ್ಲಿ ಓಡಾಡುವ ಯಾರು ಬೇಕಾದರೂ ಹೇಳಬಲ್ಲರು. ‘ಉಳಿದವರು…’ ಬಳಿಕ ಸುನಿ ‘ಬಹುಪರಾಕ್’ ಮಾಡಿ ಮುಗ್ಗರಿಸಿದರೆ, ರಕ್ಷಿತ್ ನಟನಾಗಿ ಏಳುಬೀಳುಗಳ ಮಧ್ಯೆಯೂ ಬೇಡಿಕೆ ಉಳಿಸಿಕೊಂಡು ಪ್ರಯೋಗಾತ್ಮಕ ಚಿತ್ರಗಳಲ್ಲಿ ತಮ್ಮನ್ನು ಒಡ್ಡಿಕೊಂಡಿದ್ದಾರೆ.
ಈಗ್ಯಾಕೆ ಹಳೇ ಕಥೆ? ‘ಸಿಂಪಲ್ಲಾಗ್ ಇನ್ನೊಂದ್ ಲವ್ಸ್ಟೋರಿ’! ಸುನಿ ಸದ್ದಿಲ್ಲದೇ ಮುಗಿಸಿರುವ ಈ ಸಿನಿಮಾದಲ್ಲಿ ನವನಟ ಪ್ರವೀಣ್ ನಾಯಕ. ಆದರೆ ಲೆಕ್ಕಾಚಾರದ ಪ್ರಕಾರ, ರಕ್ಷಿತ್ ಶೆಟ್ಟಿ ಅವರೇ ಮುಖ್ಯ ಪಾತ್ರ ನಿಭಾಯಿಸಬೇಕಿತ್ತಲ್ಲವೇ? ಇದಕ್ಕೆ ಕೇಳಲಾಗಿ, ‘ಸುನಿ ಮನಸ್ಸಲ್ಲಿ ಆ ಚಿತ್ರಕ್ಕೆ ಹೊಸಬರೇ ಬೇಕು ಅಂತೆನಿಸಿರಬಹುದು. ಅದೂ ಅಲ್ಲದೇ ನಾನು ಸಹ 2-3 ಪ್ರೊಜೆಕ್ಟ್ಗಳಲ್ಲಿ ಮಗ್ನನಾಗಿದ್ದೆ. ‘ಸಿಂಪಲ್ಲಾಗ್ ಇನ್ನೊಂದ್ ಲವ್ಸ್ಟೋರಿ’ಯಲ್ಲಿ ನಟಿಸೋಕೆ ನನ್ನನ್ನು ಕೇಳಲಿಲ್ಲ ಅನ್ನೋದು ನಿಜ’ ಎನ್ನುತ್ತಾರೆ ರಕ್ಷಿತ್. ಹಾಗಂತ, ಇಬ್ಬರ ನಡುವಿನ ಭಿನ್ನಾಭಿಪ್ರಾಯ ಇನ್ನೂ ಜೀವಂತವಾಗಿದೆ ಎಂದುಕೊಳ್ಳಬೇಕಿಲ್ಲ. ‘ಸಿಂಪಲ್ಲಾಗ್ ಮತ್ತೊಂದ್ ಲವ್ಸ್ಟೋರಿ ಮಾಡುವಾಗ ನಾವು ಒಂದಾಗಬಹುದು ಬಿಡಿ’ ಎಂದು ನಗುತ್ತಾರವರು! ರಕ್ಷಿತ್ ಅಭಿನಯದ ‘ರಿಕ್ಕಿ’ ಮತ್ತು ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರಗಳ ಮುಗಿದಿದೆ. ‘ಅವನೇ ಶ್ರೀಮನ್ನಾರಾಯಣ’ ಮುಗಿಯುತ್ತಿದ್ದಂತೆ ಮತ್ತೆ ನಿರ್ದೇಶನಕ್ಕಿಳಿಯಲಿದ್ದಾರೆ. ಸುದೀಪ್ ನಾಯಕತ್ವದಲ್ಲಿ ‘ಥಗ್ಸ್ ಆಫ್ ಮಾಲ್ಗುಡಿ’ ಚಿತ್ರ ಕೈಗೆತ್ತಿಕೊಳ್ಳಲಿರುವ ರಕ್ಷಿತ್, ಆ ಚಿತ್ರವನ್ನು ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ತಯಾರಿಸುವ ಇರಾದೆ ಹೊಂದಿದ್ದಾರೆ.