ಮನೋರಂಜನೆ

ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಹುನ್ನೂರು ಐಬಿ: ಹಿನ್ನೀರ ಪ್ರದೇಶದಲ್ಲಿ ಚಿತ್ರೀಕರಣಕ್ಕೆ ಕಡ್ಡಾಯ

Pinterest LinkedIn Tumblr

dam-fiಮಾತೆತ್ತಿದರೆ ಸಾಕು, ಹಾಡು ಹಾಗೂ ಇನ್ನಿತರ ದೃಶ್ಯಗಳಿಗೆ ಫಾರಿನ್​ಗೆ ಹೋಗಿಬಂದಿರುವುದಾಗಿ ಹೇಳಿಕೊಳ್ಳುತ್ತಾರೆ ಕನ್ನಡ ಚಿತ್ರರಂಗದ ಮಂದಿ. ಅಲ್ಲಿಗಿಂತ ನಮ್ಮಲ್ಲೇ ಸಹಜ ಸುಂದರ, ಸೊಗಸುಭರಿತ, ರುದ್ರರಮಣೀಯ ಸ್ಥಳಗಳಿವೆ. ಅವು ಚಿತ್ರಕರ್ವಿುಗಳ ಕಣ್ಣಿಗೆ ಬಿದ್ದಿರುವುದಿಲ್ಲ ಅಥವಾ ನೋಡುವ ಗೋಜಿಗೆ ಹೋಗಿರುವುದಿಲ್ಲ. ಹಾಗೆ ಕಣ್ಣಿಗೆ ಬೀಳದೇ, ಕಂಡರೂ ಬಾರದೇ ಇರುವಂತಹ ತಾಣಗಳನ್ನು ಗುರುತಿಸಿ ತೋರಿಸುವ ವಿನೂತನ ಪ್ರಯತ್ನ ‘ಸ್ಪಾಟ್’.. ಕ್ಯಾಮರಾ.. ಆಕ್ಷನ್!!

ರಾಜ್ಯದಲ್ಲಿ ಸರ್ಕಾರಿ ಅತಿಥಿ ಗೃಹಗಳು ಅಥವಾ ನಿರೀಕ್ಷಣಾ ಮಂದಿರಗಳು (ಐಬಿ) ಬೇಕಾದಷ್ಟಿವೆ. ಈಗೀಗ ಸ್ಟಾರ್ ಹೋಟೆಲ್​ಗಳ ತರಹ ಅತಿಥಿ ಗೃಹಗಳು ತಲೆ ಎತ್ತುತ್ತಿವೆಯಾದರೂ ಹಳೇ ಕಾಲದ ಕೆಲವನ್ನು ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಹಾಗೆಯೇ ಮುಂದುವರಿಸಿಕೊಂಡು ಹೋಗಲಾಗುತ್ತಿದೆ. ಅಂಥ ನಿರೀಕ್ಷಣಾ ಗೃಹಗಳಲ್ಲಿ ಒಂದು, ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಹುನ್ನೂರು ಐಬಿ.

ಗುಡ್ಡದ ಎತ್ತರದಲ್ಲಿ ಈ ಐಬಿ ಇದೆ ಎನ್ನುವುದು ಒಂದು ವಿಶೇಷವಾದರೆ, ಗುಡ್ಡದ ಬಹುಭಾಗ ನೀರಿನಿಂದ ಆವೃತವಾಗಿದೆ ಎಂಬುದು ಇನ್ನೊಂದು ವಿಶೇಷ. ಘಟಪ್ರಭಾ ನದಿಗೆ ಹಿಡಕಲ್ ಬಳಿ ಕಟ್ಟಿರುವ ಜಲಾಶಯದ ಹಿನ್ನೀರ ಪ್ರದೇಶದಲ್ಲಿ ಈ ಐಬಿ ಇದೆ.

ಭಾರಿ ಮಳೆ ಬಂದು ಜಲಾಶಯ ತುಂಬಿದರೆ ಇಲ್ಲಿ ತಂಗುವುದು ಅಥವಾ ಇಲ್ಲಿಂದ ಹೊರಜಗತ್ತನ್ನು ನೋಡುವುದೇ ರುದ್ರರಮಣೀಯ ಅನುಭವ. ಜಲಾಶಯ ತುಂಬಿದಾಗ ಗುಂಡಿಗೆ ಗಟ್ಟಿ ಮಾಡಿಕೊಂಡೇ ಬರುವುದೊಳಿತು!

ಇಲ್ಲಿಂದಲೇ ಅಣೆಕಟ್ಟು ಕಾಣಿಸುತ್ತದೆ, ಸುತ್ತಲಿನ ಗುಡ್ಡಗಳು ಕಣ್ಣಿಗೆ ನುಣ್ಣಗೆ ಗೋಚರಿಸುತ್ತವೆ. ಮಳೆಗಾಲದಲ್ಲಿ ತುಂತುರು ಮಳೆ ಬೀಳತೊಡಗಿದರೆ ಮಡಿಕೇರಿ ವಾತಾವರಣ ನೆನಪಿಸಬಹುದು. ಹಿನ್ನೀರ ಪ್ರದೇಶಕ್ಕೆ ತಾಗಿಕೊಂಡಿರುವ ಸಣ್ಣ ಹಳ್ಳಿ, ದೇವಸ್ಥಾನಗಳನ್ನು ಇಲ್ಲಿಂದ ಕ್ಯಾಮರಾದಲ್ಲಿ ಸೆರೆಹಿಡಿಯುವುದೇ ಸೊಗಸು. ಬೆನ್ನ ಹಿಂದಿನ ಮತ್ತೊಂದು ಗುಡ್ಡದ ಮೇಲೆ ಶಿಥಿಲ ಕೋಟೆಯಿದೆ. ಇಲ್ಲಿಂದ ಮತ್ತೂ ಸುಂದರ ದೃಶ್ಯಕಾವ್ಯ ಕಾಣಸಿಗಬಹುದು. ಇನ್ನು, ಹಿನ್ನೀರ ಪ್ರದೇಶದ ಗುಡ್ಡದಗುಂಟ ಐಬಿಗೆ ಬರುವ ಸುಮಾರು ಒಂದೂವರೆ ಕಿ.ಮೀ. ಉದ್ದದ ಸಣ್ಣ ರಸ್ತೆ ಕೂಡ ಕ್ರಿಯಾಶೀಲ ನಿರ್ದೇಶಕನಿಗೆ ಹಾಗೂ ಛಾಯಾಗ್ರಾಹಕನಿಗೆ ಅದ್ಭುತ ಕಲ್ಪನೆ, ಸಂವೇದನೆಗಳನ್ನು ಸೃಜಿಸಬಹುದು. ಇಡೀ ಅಣೆಕಟ್ಟು ಪ್ರದೇಶವೇ ಒಂದು ಪಾತ್ರವೂ ಆಗಬಹುದು!

ಹೈ-ಲೈಟ್ಸ್

* ಐಬಿ ಎತ್ತರದ ಪ್ರದೇಶದಲ್ಲಿರುವುದರಿಂದ ಸುತ್ತಲಿನ ನೋಟವನ್ನು ಸೊಗಸಾಗಿ ಸೆರೆಹಿಡಿಯಬಹುದು.

* ಅನುಮತಿ ಸಿಕ್ಕರೆ ಅಣೆಕಟ್ಟೆ ಪ್ರದೇಶದ ಸಂಪೂರ್ಣ ಸೌಂದರ್ಯವನ್ನು ಅನಾವರಣಗೊಳಿಸಬಹುದು.

* ಪ್ರೀತಿ-ಪ್ರೇಮದ ಕಥಾನಕಗಳು, ಆಕ್ಷನ್ ಫ್ಲಿಕ್, ಹಾರರ್ ಫಿಲ್ಮ್ ಶೂಟಿಂಗಿಗಂತೂ ಪ್ರಶಸ್ತ ಸ್ಥಳ.

* ಸಾಹಸ ಸಿನಿಮಾ ನಿರ್ದೇಶಕರಿಗೆ ಪ್ರಿಯವಾಗಬಲ್ಲಂಥ ಕೆಲವು ಸಕ್ಕರೆ ಕಾರ್ಖಾನೆಗಳೂ ಸುತ್ತಮುತ್ತ ಇವೆ.

ಸ್ಪಾಟ್ ವಿವರ

ಎಲ್ಲಿದೆ – ಬೆಳಗಾವಿ ನಗರದಿಂದ 50 ಕಿಮೀ ದೂರದಲ್ಲಿದೆ.

ಹೀಗೆ ಹೋಗಿ…

ಬೆಳಗಾವಿಯಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಹತ್ತರಗಿವರೆಗೆ ಸಾಗಿ, ಟೋಲ್​ಗೇಟ್ ನಂತರ ಬಲಕ್ಕೆ ತಿರುಗಿ, ಏಳೆಂಟು ಕಿಮೀ ಸಾಗಿದರೆ ಐಬಿ ತಲುಪಬಹುದು.

ವಾಸ್ತವ್ಯ ವ್ಯವಸ್ಥೆ

ಐಬಿಯಲ್ಲೇ ಸ್ಟಾರ್ ಹೋಟೆಲ್ ಗುಣಮಟ್ಟದ ವಸತಿ, ಊಟದೊಂದಿಗೆ ಅತಿಥಿ ಸತ್ಕಾರ ಸೌಲಭ್ಯವಿದೆ.

ಏನೇನಿದೆ?

ಗೊಡಚಿನಮಲ್ಕಿ ಜಲಪಾತ, ಗೋಕಾಕ ಕಾಟನ್ ಮಿಲ್, ಗೋಕಾಕ್ ಫಾಲ್ಸ್, ಧುಪದಾಳ ಜಲಾಶಯ, ಘಟಪ್ರಭಾ ಪಕ್ಷಿಧಾಮದಂಥ ಆಕರ್ಷಕ ತಾಣಗಳು, ಅಪ್ಪಟ ಗ್ರಾಮೀಣ ಸೊಗಡು ಬಿಂಬಿಸುವ ಮನೆಗಳು, ಸದಾ ಹಸಿರು ತುಂಬಿರುವ ವಿಶಾಲ ಹೊಲ-ಗದ್ದೆ ತೋಟಗಳು ಅಕ್ಕಪಕ್ಕದಲ್ಲೇ ಇವೆ.

ಸೂಚನೆ: ಚಿತ್ರೀಕರಣಕ್ಕೆ ಹಿಡಕಲ್ ಡ್ಯಾಮ್ ನೀರಾವರಿ ನಿಗಮದ ಅನುಮತಿ ಪಡೆಯುವುದು ಕಡ್ಡಾಯ.

Write A Comment