ಬೆಂಗಳೂರು: ಪರ ಭಾಷಾ ಚಿತ್ರಗಳನ್ನು ಕನ್ನಡದಲ್ಲಿ ಡಬ್ಬಿಂಗ್ ಮಾಡಿ ಬಿಡುಗಡೆ ಮಾಡಬಾರದೆಂದು ಪ್ರತಿಭಟನೆಗಳು ನಡೆಯುತ್ತಿರುವ ಮಧ್ಯೆಯೇ ಎರಡು ಬಿಗ್ ಬಜೆಟ್ ಚಿತ್ರಗಳ ಡಬ್ಬಿಂಗ್ ಕಾರ್ಯ ಸದ್ದಿಲ್ಲದೇ ನಡೆಯುತ್ತಿದೆ ಎಂಬ ಮಾಹಿತಿ ಹೊರ ಬಿದ್ದಿದೆ.
ತಮಿಳಿನ ಖ್ಯಾತ ನಟ ವಿಜಯ್ ನಟಿಸಿರುವ ‘ಪುಲಿ’ ಹಾಗೂ ಅನುಷ್ಕಾ ಶೆಟ್ಟಿ ಅಭಿನಯದ ‘ರಾಣಿ ರುದ್ರಮ್ಮ ದೇವಿ’ ಚಿತ್ರದ ಡಬ್ಬಿಂಗ್ ಹೈದರಾಬಾದ್ ನಲ್ಲಿ ನಡೆಯುತ್ತಿದೆ ಎಂದು ಹೇಳಲಾಗಿದ್ದು, ಈ ಎರಡು ಬಿಗ್ ಬಜೆಟ್ ಚಿತ್ರಗಳು ಸೆಪ್ಟೆಂಬರ್ ನಲ್ಲಿ ಕರ್ನಾಟಕದಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ. ಡಬ್ಬಿಂಗ್ ಪರವಿರುವವರು ಪ್ರತ್ಯೇಕ ವಾಣಿಜ್ಯ ಮಂಡಳಿ ಸ್ಥಾಪಿಸಿಕೊಂಡಿದ್ದು, ಅದರ ಅಧ್ಯಕ್ಷ ಕೃಷ್ಣೇಗೌಡರು ಸಹ ಡಬ್ಬಿಂಗ್ ನಡೆಯುತ್ತಿರುವ ವಿಷಯವನ್ನು ಖಚಿತಪಡಿಸಿದ್ದಾರೆ.
ಈ ಎರಡು ಚಿತ್ರಗಳ ವಿತರಣೆಯನ್ನು ಕರ್ನಾಟಕದಲ್ಲಿ ಪಡೆದುಕೊಂಡಿರುವ ವಿತರಕರೇ ಕನ್ನಡದಲ್ಲಿ ಡಬ್ ಮಾಡಿ ಚಿತ್ರ ಬಿಡುಗಡೆ ಮಾಡಲಿದ್ದಾರೆಂದು ಹೇಳಲಾಗಿದ್ದು, ಈ ಮೂಲಕ ಕನ್ನಡದಲ್ಲಿ ಡಬ್ಬಿಂಗ್ ಚಿತ್ರಗಳ ಬಿಡುಗಡೆಗೆ ನಾಂದಿ ಹಾಡಲಿದ್ದಾರೆ. ವಿಜಯ್ ಅಭಿನಯದ ‘ಪುಲಿ’ ಚಿತ್ರದಲ್ಲಿ ಕಿಚ್ಚ ಸುದೀಪ್ ನಟಿಸಿದ್ದರೆ, ‘ರಾಣಿ ರುದ್ರಮ್ಮ ದೇವಿ’ ಯಲ್ಲಿ ಕನ್ನಡತಿ ಅನುಷ್ಕಾ ಶೆಟ್ಟಿ ನಟಿಸಿರುವುದು ವಿಶೇಷ.