ಶಿವಮೊಗ್ಗ: ‘ಬಾಹುಬಲಿ’, ‘ಭಜರಂಗಿ ಬಾಯಿಜಾನ್’ ನಂತಹ ಬಹುಕೋಟಿ ವೆಚ್ಚದ ಪರಭಾಷಾ ಚಿತ್ರಗಳ ನಡುವೆಯೂ ಪ್ರೇಕ್ಷಕರ ಮನಗೆದ್ದಿರುವ ‘ರಂಗಿತರಂಗ’ ಚಿತ್ರ ಈಗ ಅಮೆರಿಕಾಕ್ಕೂ ಲಗ್ಗೆ ಇಡಲಿದೆ. ಅಗಸ್ಟ್ 13 ರಂದು ಅಲ್ಲಿನ 40 ಸೆಂಟರ್ ಗಳಲ್ಲಿ ‘ರಂಗಿತರಂಗ’ ಬಿಡುಗಡೆಯಾಗಲಿದೆ.
ಅಷ್ಟೇ ಅಲ್ಲದೇ ಆಸ್ಟ್ರೇಲಿಯಾ, ಸಿಂಗಪೂರ, ಮಲೇಷಿಯಾ, ಯುಕೆ ಸೇರಿದಂತೆ ಹಲವು ದೇಶಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಇಂದು ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಚಿತ್ರದ ನಿರ್ದೇಶಕ ಅನುಪ್ ಭಂಡಾರಿ, ಈಗಾಗಲೇ ಪ್ರೇಕ್ಷಕರ ಮನಸ್ಸಿನಲ್ಲಿ ತರಂಗಗಳನ್ನೆಬ್ಬಿಸಿ ಮುದ ನೀಡುತ್ತಿದ್ದು ಯಶಸ್ವಿಯತ್ತ ಸಾಗುತ್ತಿದೆ. ‘ರಂಗಿತರಂಗ’ ಚಿತ್ರ ಒಂದು ಹೊಸತನದ ಅನುಭವ ನೀಡುತ್ತಿದ್ದು, ಒಳ್ಳೆಯ ಕನ್ನಡ ಚಿತ್ರವನ್ನು ಕೊಟ್ಟರೆ ಪ್ರೇಕ್ಷಕರು ಸ್ವೀಕರಿಸಿಯೇ ಸ್ವೀಕರಿಸುತ್ತಾರೆ ಎಂಬುದನ್ನು ‘ರಂಗಿತರಂಗ’ ಸಾಬೀತು ಮಾಡಿದೆ ಎಂದರು.
ಬಿಡುಗಡೆಯಾದಾಗ ಪರಭಾಷೆಯ ಚಿತ್ರಗಳ ಸವಾಲು ಎದುರಿಸಬೇಕಾಯಿತು. ಆದರೆ ಯಾರು ಕೈಬಿಟ್ಟರೂ ಪ್ರೇಕ್ಷಕ ನಮ್ಮನ್ನು ಕೈಬಿಡುವುದಿಲ್ಲ. ಚಿತ್ರದ ಬಗ್ಗೆ ಬಾಯಿಂದ ಬಾಯಿಗೆ ಹರಡಿ ಯಶಸ್ವಿಯತ್ತ ಮುನ್ನುಗ್ಗುತ್ತಿದೆ. ‘ರಂಗಿತರಂಗ’ ಹಲವು ಹೊಸತುಗಳನ್ನು ಹೊಂದಿದೆ. ಮೊದಲನೆಯದಾಗಿ ಇಡೀ ಚಿತ್ರತಂಡವೇ ಹೊಸಬರಿಂದ ಕೂಡಿದೆ. ನಟ-ನಟಿಯರಿಂದ ಹಿಡಿದು ಸಂಕಲನದವರೆಗೆ ಇಲ್ಲಿ ಎಲ್ಲರೂ ಹೊಸಬರು. ಇದೇ ಪ್ರಥಮ ಬಾರಿಗೆ ಹಾಲಿವುಡ್ ನ ಸಿನೆಮಾಟೋಗ್ರಾಫರ್ ಲ್ಯಾನ್ಸ್ ಕ್ಯಾಪ್ಲೆನ್ ಮತ್ತು ವಿಲಿಯಂ ಡೇವಿಡ್ ಅವರು ಛಾಂಯಾಗ್ರಹಣ ನೀಡಿದ್ದಾರೆ. ಲಂಡನ್ ನಲ್ಲಿ ಸಾಂಗ್ ಮಾಸ್ಟರಿಂಗ್ ಆಗಿರುವ ಕನ್ನಡದ ಮೊದಲ ಚಿತ್ರವಿದು. ಉತ್ತಮ ಸಂಗೀತವಿದೆ. ಅಚ್ಚ ಕನ್ನಡದ ಪದಗಳ ಸಾಹಿತ್ಯವಿದೆ. ಒಂದು ಸಾಮೂಹಿಕ ಒಳ್ಳೆಯ ತಂಡವಿದ್ದರೆ ಒಳ್ಳೆಯ ಚಿತ್ರ ಬರಲು ಸಾಧ್ಯ ಎನ್ನುವುದನ್ನು ಈ ಚಿತ್ರ ತೋರಿಸಿದೆ. ಇಡೀ ಕುಟುಂಬ ಒಟ್ಟಿಗೆ ಕುಳಿತು ನೋಡಬಹುದಾದ ಚಿತ್ರವಿದು ಎಂದರು.
ಚಿತ್ರದ ನಾಯಕ ನಿರೂಪ್, ನಾಯಕಿಯರಾದ ರಾಧಿಕಾ ಚೇತನ್, ಆವಂತಿಕ ಶೆಟ್ಟಿ ಮಾತನಾಡಿ, ಇದು ನಮ್ಮ ಮೊದಲ ಚಿತ್ರವಾದರೂ ಪಾತ್ರಗಳ ಬಗ್ಗೆ ಹೆಮ್ಮೆ ಇದೆ. ಎಲ್ಲ ಕಡೆ ಗೆಲುವು ಕಾಣುತ್ತಿರುವುದು ನಮ್ಮ ಮುಂದಿನ ಚಿತ್ರಗಳಿಗೆ ಸ್ಪೂರ್ತಿಯಾಗಲಿದೆ. ಕೊಟ್ಟ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡ ತೃಪ್ತಿ ಇದೆ ಎಂದರು.