ಸಾಗರ: ಏನಾದರೂ ತಪ್ಪು ಮಾಡಿದಾಗ ಏಯ್ ಕತ್ತೆ ಎಂದು ಕರೆದು ಹೀಯಾಳಿಸುವುದು ಸಾಮಾನ್ಯ ಸಂಗತಿ. ಕತ್ತೆ ಎಂದರೆ ದಡ್ಡತನದ ಸಂಕೇತ ಎಂದೂ ಹೇಳಲಾಗುತ್ತದೆ. ಆದರೆ ಈಗ ಕತ್ತೆ ಹಾಲಿಗೂ ಸಖತ್ ಡಿಮ್ಯಾಂಡ್ ಇದೆ ಎಂದರೆ ನೀವು ನಂಬಲೇಬೇಕು.
ಕತ್ತೆ ಹಾಲು ಕುಡಿದರೆ ಬುದ್ದಿಜಾಸ್ತಿ ಬರುತ್ತದೆ ಎಂಬ ನಂಬಿಕೆ ಸಾಮಾನ್ಯ ಗ್ರಾಮಾಂತರ ಪ್ರದೇಶದಲ್ಲಿ ಪ್ರಚಲಿತದಲ್ಲಿದೆ. ಇದನ್ನೇ ಬಳಸಿಕೊಂಡು ಕತ್ತೆ ಹಾಲು ಮಾರಿ ಭರ್ಜರಿ ಹಣ ಸಂಪಾದಿಸುತ್ತಿರುವ ವರದಿ ಇಲ್ಲಿದೆ. ಸಾಗರ ತಾಲ್ಲೂಕಿನ ಆನಂದಪುರ ಹೋಬಳಿಯಲ್ಲಿ ಕೋಲಾರದಿಂದ ಕೆಲವರು ಕತ್ತೆ ಹಾಲಿನಿಂದ ದಿನಕ್ಕೆ ಸಾವಿರಾರು ರೂ. ಗಳಿಸುತ್ತಿದ್ದಾರೆ. ಒಂದಷ್ಟು ತಂಡಗಳು ಹೆಣ್ಣು ಕತ್ತೆಗಳೊಂದಿಗೆ ಇಲ್ಲಿಗೆ ಆಗಮಿಸಿದ್ದು, ಮಕ್ಕಳಿಗೆ ಹಾಲು ಕುಡಿಸುವ ಒಂದು ವಳಲೆಯಷ್ಟು ಕತ್ತೆ ಹಾಲಿಗೆ 50 ರೂ ನಿಗದಿ ಮಾಡಿದ್ದಾರೆ.
ಕತ್ತೆ ಹಾಲು ಕುಡಿದರೆ ಬುದ್ದಿ ಹೆಚ್ಚುತ್ತದೆ. ಹಂದಿಜ್ವರ ಮುಂತಾದ ರೋಗಗಳು ಬರುವುದಿಲ್ಲ. ಮಾತ್ರವಲ್ಲ, ಕಫ, ಕೆಮ್ಮು ಅಸ್ತಮಾ ಸೇರಿದಂತೆ ಹಲವು ರೋಗಗಳಿಗೆ ಇದು ರಾಮಬಾಣ. ಪಾರ್ಶ್ವವಾಯು ಪೀಡಿತರು ಇದನ್ನು ಕುಡಿದರೆ ಶಕ್ತಿ ಬರುತ್ತದೆ ಎಂದೆಲ್ಲಾ ಕತ್ತೆ ಹಾಲು ಮಾರುವವರು ನಂಬಿಸುತ್ತಿದ್ದು, ಇದನ್ನೇ ನಂಬಿದ ಜನ ಮುಗಿಬಿದ್ದು ಕತ್ತೆ ಹಾಲು ಕುಡಿಯಲು ಮುಂದಾಗಿದ್ದಾರೆ.