ಭಾರತಕ್ಕೆ ಮಗ್ಗಲ ಮುಳ್ಳಾಗಿರುವ ಪಾಕಿಸ್ತಾನ, ಭಯೋತ್ಪಾದನೆಯನ್ನು ಹಿಂದಿನಿಂದಲೂ ಪೋಷಿಸಿಕೊಂಡು ಬರುತ್ತಿರುವುದು ಗೊತ್ತಿರುವ ಸಂಗತಿಯೇ. ಈ ಭಯೋತ್ಪಾದಕರು ಈಗ ತನ್ನ ನೆಲದ ನಾಗರಿಕರನ್ನೇ ಹತ್ಯೆ ಮಾಡುತ್ತಿದ್ದರೂ ಪಾಕಿಸ್ತಾನಕ್ಕೇನು ಬುದ್ದಿ ಬಂದಂತೆ ಕಾಣುತ್ತಿಲ್ಲ.
ಭಾರತದ ವಿರುದ್ದ ದಾಳಿ ನಡೆಸಲೆಂದೇ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್ಐ ಈ ಭಯೋತ್ಪಾದಕರಿಗೆ ಹಣಕಾಸಿನ ನೆರವು ಸೇರಿದಂತೆ ತರಬೇತಿಯನ್ನೂ ನೀಡುತ್ತಿದೆ. ಮುಂಬೈ ಮೇಲೆ ದಾಳಿ ನಡೆಸಿದ್ದ ರೂವಾರಿಗಳು ತಮ್ಮ ನೆಲದವರೇ ಎಂದು ಪಾಕಿಸ್ತಾನದ ಮಾಜಿ ಉನ್ನತಾಧಿಕಾರಿಯೊಬ್ಬರು ಬಹಿರಂಗವಾಗಿ ಹೇಳಿಕೆ ನೀಡಿದ್ದರೂ ಪಾಕಿಸ್ತಾನ ಸರ್ಕಾರ ಭಂಡತನ ಮೆರೆಯುವುದನ್ನು ಬಿಡುತ್ತಿಲ್ಲ.
ಪಾಕಿಸ್ತಾನದಲ್ಲಿ ಆನೇಕ ಭಯೋತ್ಪಾದಕ ಸಂಘಟನೆಗಳಿದ್ದರೂ ನೆರೆ ರಾಷ್ಟ್ರಗಳ ಪಾಲಿಗೆ ಕಂಟಕವಾಗಿರುವ ಪ್ರಮುಖ ಉಗ್ರ ಸಂಘಟನೆಗಳ ವಿವರ ಈಗ ಬಿಡುಗಡೆಯಾಗಿದೆ. ವಿಶ್ವದ 10 ಅಪಾಯಕಾರಿ ದೇಶಗಳ ಪಟ್ಟಿಯಲ್ಲಿ ಪಾಕಿಸ್ತಾನ ಸೇರಲು ಇದು ಒಂದು ಕಾರಣವಾಗಿದೆ. ಆ ಉಗ್ರ ಸಂಘಟನೆಗಳ ವಿವರ ಇಲ್ಲಿದೆ ನೋಡಿ.
1. ಜಮಾತ್-ಉದ್-ದಾವಾ: ಇದನ್ನು 2008 ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಎಂದೇ ಪರಿಗಣಿಸಲಾಗುವ ಹಫೀಜ್ ಸಯೀದ್ ಮುನ್ನಡೆಸುತ್ತಿದ್ದಾನೆ. ಅಮೆರಿಕಾ ಕೂಡಾ ಈ ಸಂಘಟನೆಯನ್ನು ವಿದೇಶಿ ಭಯೋತ್ಪಾದಕರ ಪಟ್ಟಿಯಲ್ಲಿ ಸೇರಿಸಿದೆ.
2. ಲಷ್ಕರ್-ಇ-ತಯ್ಯೆಬಾ: ಇದನ್ನು 1990 ರಲ್ಲಿ ಹಫೀಜ್ ಸಯೀದ್ ನೇ ಆರಂಭಿಸಿದ್ದು, ಪಾಕಿಸ್ತಾನದ ಐಎಸ್ಐ ಇದರ ಚಟುವಟಿಕೆಗಳಿಗೆ ನೇರ ಬೆಂಬಲ ನೀಡುತ್ತಿದೆ ಎನ್ನಲಾಗಿದೆ.
3. ಜೈಶ್-ಇ-ಮಹಮ್ಮದ್: ಮೌಲಾನಾ ಮಸೂದ್ ಅಜರ್ ನಿಂದ ಆರಂಭವಾಗಿರುವ ಈ ಭಯೋತ್ಪಾದಕ ಸಂಘಟನೆ ಕಾಶ್ಮೀರದಲ್ಲಿ ಆನೇಕ ವಿಧ್ವಂಸಕ ಕೃತ್ಯಗಳನ್ನು ನಡೆಸಿದೆ.
4. ಅಲ್-ಬದ್ರ್: ಅರ್ಫಿನ್ ಭಾಯ್ ಎಂಬಾತ ಇದರ ಮುಖ್ಯಸ್ಥನಾಗಿದ್ದು, ಕಾಶ್ಮೀರದಲ್ಲಿ ತನ್ನ ಕಾರ್ಯ ಚಟುವಟಿಕೆ ನಡೆಸಿದೆಯಲ್ಲದೇ ಬಾಂಗ್ಲಾ ದೇಶದಲ್ಲೂ ವಿಧ್ವಂಸಕ ಕೃತ್ತ ಎಸಗಿದೆ.
5. ಹರ್ಕತ್-ಉಲ್-ಜಿಹಾದ್-ಅಲ್-ಇಸ್ಲಾಮಿ: ‘ಹುಜಿ’ ಎಂದು ಕರೆಯಲ್ಪಡುವ ಈ ಸಂಘಟನೆಯ ಮುಖ್ಯಸ್ಥ ಇಲ್ಯಾಸ್ ಕಾಶ್ಮೀರಿಯನ್ನು ಅಮೆರಿಕಾ ಪಡೆಗಳು 2011 ರಲ್ಲಿ ಹತ್ಯೆ ಮಾಡಿದ್ದರೂ ಇದು ತನ್ನ ಕಾರ್ಯ ಚಟುವಟಿಕೆಯನ್ನು ನಿಲ್ಲಿಸಿಲ್ಲ.