ಸ್ಯಾಂಡಲ್ವುಡ್ನ ಬಹು ನಿರೀಕ್ಷೆಯ ಚಿತ್ರ ಉಪ್ಪಿ-2. ಸೂಪರ್ ಸ್ಟಾರ್ ಉಪೇಂದ್ರ ಏನೇ ಮಾಡಿದರೂ ಅದು ಡಿಫರೆಂಟ್ಆಗಿರುತ್ತದೆ ಎನ್ನುವುದಕ್ಕೆ ಇತ್ತೀಚೆಗೆ ಆವರ ಹೋಮ್ ಪ್ರೊಡಕ್ಷನ್ಸ್ನಿಂದ ನಿರ್ಮಾಣವಾಗಿರುವ ‘ ಉಪ್ಪಿ-2’ ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭವೇ ಸಾಕ್ಷಿ. ಬೆಂಗಳೂರು ನಗರದಿಂದ ಸುಮಾರು 30 ಕಿ.ಮೀ. ದೂರದಲ್ಲಿರುವ ದೊಡ್ಡಾಲದ ಮರ ಸಮೀಪದ ‘ಉಪ್ಪಿರೆಸಾರ್ಟ್’ನಲ್ಲಿ ಅದ್ಧೂರಿ ಸಮಾರಂಭದ ಮಧ್ಯೆ ಈ ಚಿತ್ರದ ಧ್ವನಿಸುರುಳಿ ಲೋಕಾರ್ಪಣೆ ನಡೆಯಿತು. ಉಪೇಂದ್ರ
ಚಿತ್ರದಲ್ಲಿ ವಿವಿಧ ಗೆಟಪ್ಗಳ ಮೂಲಕ ಅಭಿಮಾನಿಗಳನ್ನು ಹುಚ್ಚೆಬ್ಬಿಸಿದ್ದ ನಟ ಉಪೇಂದ್ರ ಎರಡು ದಶಕಗಳ ನಂತರ ‘ಉಪ್ಪಿ-2’ ಚಿತ್ರವನ್ನು ನಿರ್ಮಿಸಿದ್ದಾರೆ. ಆರಂಭದಿಂದಲೂ ಹಲವಾರು ಗೆಟಪ್ಗಳ ಮೂಲಕ ಆವರು ಕುತೂಹಲವನ್ನು ಇಮ್ಮಡಿಗೊಳಿಸುತ್ತಿದ್ದು, ಚಿತ್ರದ ಒಳಗೇನಿರುತ್ತದೆ ಕಥೆ ಹೇಗಿದೆ ಎಂಬ ಸುಳಿವನ್ನು ಇದುವರೆಗೂ ಬಿಟ್ಟುಕೊಟ್ಟಿಲ್ಲ. ಕೇವಲ ಚಿತ್ರ-ವಿಚಿತ್ರ ಛಾಯಾಚಿತ್ರಗಳ ಮೂಲಕವೇ ಚಿತ್ರಪ್ರೇಮಿಗಳ ಗಮನವನ್ನು ಸೆಳೆಯುತ್ತಿದ್ದಾರೆ. ಪತ್ನಿ ಹಾಗೂ ಚಿತ್ರದ ನಿರ್ಮಾಪಕಿ ಶ್ರೀಮತಿ ಪ್ರಿಯಾಂಕ ಉಪೇಂದ್ರ ವಿನೂತನ ಫ್ಯಾಷನ್ ಷೋ ಏರ್ಪಡಿಸಿ ಉಪೇಂದ್ರ ಈವರೆಗೆ ಹಾಕಿದ ಗೆಟಪ್ಗಳನ್ನೆಲ್ಲ ಅದರಲ್ಲಿ ತೋರಿಸಿದರು.
ಸಂಗೀತ ನಿರ್ದೇಶಕ ಗುರುಕಿರಣ್ ಅವರ ಮ್ಯೂಸಿಕಲ್ ನೈಟ್ ಚಿತ್ರದ ಹಾಡುಗಳಿಗೆ ಕಲಾವಿದರ ನೃತ್ಯ ಪ್ರದರ್ಶನ ಹಾಗೂ ಹಿರಿಯ ನಟ ಕಾಶಿನಾಥ್ ಮತ್ತು ರಮೇಶ್ ಅರವಿಂದ್ ಅವರ ಪರ್ಫಾರ್ಮೆನ್ಸ್ ಈ ಸಮಾರಂಭದ ಹೈಲೈಟ್ಸ್.
ಚಿತ್ರದಲ್ಲಿನ 5 ಹಾಡುಗಳನ್ನು ರಾಜ್ಯದ ಪ್ರಮುಖ ದಿನ ಪತ್ರಿಕೆಗಳ ಸಂಪಾದಕರ ಕೈಯಲ್ಲಿ ಬಿಡುಗಡೆ ಮಾಡಿಸಿ ವಿಶೇಷ ಪ್ರಚಾರ ಗಿಟ್ಟಿಸಿದರು. ಕೊನೇ ಹಾಡನ್ನು ನಿರ್ಮಾಪಕಿ ಪ್ರಿಯಾಂಕ ಉಪೇಂದ್ರ ಲೋಕಾರ್ಪಣೆ ಮಾಡಿದರು. ‘ನಿರೀಕ್ಷೆ ಆರೋಗ್ಯಕ್ಕೆ ಹಾನಿಕಾರಕ, ಇವನ್ಯಾರೋ ಡಿಫರೆಂಟ್ ಉಪ್ಪಿಟ್ಟು’ ಈ ಸ್ಲೋಗನ್ ಇರುವ ಬ್ಯಾನರ್ಗಳು ಅತಿಥಿಗಳ ಗಮನ ಸೆಳೆದವು.
ಆಸ್ಟ್ರೇಲಿಯಾ ಬೆಡಗಿ ಕ್ರಿಸ್ಟಿನಾ ಉಪೇಂದ್ರಗೆ ನಾಯಕಿಯಾಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದೇ ದಿನ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಉಪೇಂದ್ರ ಅವರ ಅಭಿಮಾನಿಗಳೇ ಸಮಾರಂಭ ಏರ್ಪಡಿಸಿ ಧ್ವನಿಸುರುಳಿ ಬಿಡುಗಡೆಗೊಳಿಸಿ ಅಭಿಮಾನ ಮೆರೆದಿದ್ದಾರೆ.
ಈ ಚಿತ್ರದ ಹಾಡೊಂದರಲ್ಲಿ ಸ್ಯಾಂಡಲ್ವುಡ್ನ ಸ್ಟಾರ್ಗಳನ್ನು ಕುರಿತಾಗಿ ಉಲ್ಲೇಖಿಸಿರುವುದು ಬಹುತೇಕರಲ್ಲಿ ಅಸಮಾಧಾನ ತಂದಿದೆ. ಇದಕ್ಕೆ ಉತ್ತರವನ್ನು ಉಪೇಂದ್ರ ಅವರೇ ಈಗ ನೀಡಬೇಕಿದೆ.
ಉಪ್ಪಿ ಕಮಾಲ್ ಪ್ರತಿ ಚಿತ್ರದಿಂದಲೂ ನಡೆಯುತ್ತಲೇ ಬಂದಿದೆ. ಅದೇ ರೀತಿ ಉಪ್ಪಿ-2 ಕೂಡ ಹಲವಾರು ವಿಶೇಷಗಳನ್ನೊಳಗೊಂಡಿದೆ. ಇದಕ್ಕೆಲ್ಲಾ ತಕ್ಕ ಉತ್ತರವನ್ನು ಅತಿ ಶೀಘ್ರದಲ್ಲೇ ಬೆಳ್ಳಿಪರದೆ ಮೇಲೆ ನೀಡಲು ತಯಾರಿ ನಡೆ ಸುತ್ತಿದ್ದಾರೆ ಎನ್ನಬಹುದು.